ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯಿತಿಗಳಲ್ಲಿ ಕಳಪೆ ಸಾಧನೆ

Last Updated 8 ಜನವರಿ 2014, 6:37 IST
ಅಕ್ಷರ ಗಾತ್ರ

ಕೋಲಾರ: ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆ, ಶೌಚಾಲಯಗಳ ನಿರ್ಮಾಣ ಮತ್ತು ಆಟದ ಮೈದಾನ, ಕುರಿದೊಡ್ಡಿ ನಿರ್ಮಾಣ ಸೇರಿದಂತೆ ಇಲಾಖೆಯ 15 ಅಂಶದ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಫೆ.15ರ ಒಳಗೆ ಗುರಿ ಮುಟ್ಟದಿದ್ದರೆ ಅಧಿಕಾರಿಗಳ ವಿರುದ್ಧ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಎಚ್.ಕೆ.ಪಾಟೀಲ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಇಲಾಖೆಯ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಅಧಿಕಾರಿಗಳು ನೀಡಿದ ಮಾಹಿತಿಯಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಅಧಿಕಾರಿಗಳು ಸ್ವಯಂಸ್ಫೂರ್ತಿ ಮತ್ತು ಉತ್ಸಾಹದಿಂದ ಕೆಲಸ ಮಾಡದಿದ್ದರೆ; ಯೋಜನೆಗಳ ಲಾಭ ಜನರಿಗೆ ತಲುಪುವುದು ಸಾಧ್ಯವಿಲ್ಲ. ಹೀಗಾಗಿ ಕ್ರಮ ಕೈಗೊಳ್ಳುವ ಮುನ್ನವೇ ಎಚ್ಚೆತ್ತುಕೊಳ್ಳಿ ಎಂದು ಸೂಚಿಸಿದರು.

ಜಿಲ್ಲೆಯಲ್ಲಿ 58,472 ಶೌಚಾಲಯ ನಿರ್ಮಾಣದ ಗುರಿ ಇದ್ದರೆ, ಕೇವಲ 11.718 ಶೌಚಾಲಯಗಳನ್ನು ಮಾತ್ರ ಸ್ಥಾಪಿಸಲಾಗಿದೆ. ಇದು ಕಳಪೆ ಸಾಧನೆ ಎಂದು ಸಚಿವರು ವಿಷಾದ ವ್ಯಕ್ತಪಡಿಸಿದರು.

ಅತ್ಯಂತ ಹಿಂದುಳಿದ ಕೊಪ್ಪಳ ಜಿಲ್ಲೆಯಲ್ಲಿ 38 ಸಾವಿರ ಶೌಚಾಲಯ ನಿರ್ಮಾಣದ ಗುರಿ ನೀಡಲಾಗಿತ್ತು. ಆದರೆ ಅಲ್ಲಿನ ಜಿಲ್ಲಾ ಪಂಚಾಯಿತಿ 1 ಲಕ್ಷ ಶೌಚಾಲಯ ನಿರ್ಮಿಸುವುದಾಗಿ ಹೇಳಿತು. ಆ ಪೈಕಿ 89 ಸಾವಿರ ಮಂದಿಗೆ ಅರ್ಜಿ ವಿತರಿಸಲಾಗಿದೆ. ಪ್ರತಿ ತಾಲ್ಲೂಕು ಮತ್ತು ಹಳ್ಳಿಗಳಲ್ಲಿ ವ್ಯಾಪಕ ಪ್ರಚಾರ ನೀಡಲಾಗಿದೆ. ರಾಜಕೀಯ ಜಾಗೃತಿ, ಆರ್ಥಿಕ ಶಕ್ತಿಯೂ ಇಲ್ಲದ ಕೊಪ್ಪಳ ಜಿಲ್ಲೆಯು ಶೌಚಾಲಯ ನಿರ್ಮಾಣ­ದಲ್ಲಿ ನಿಗದಿತ ಗುರಿ ಮೀರಿ ಸಾಧನೆ ಮಾಡುವುದಾದರೆ, ಅವೆರಡೂ ವಿಷ­ಯ­ದಲ್ಲಿ ಮುಂದಿರುವ, ರಾಜ­ಧಾನಿಗೆ ಅತಿ ಸಮೀಪದಲ್ಲಿರುವ ಕೋಲಾರ ಜಿಲ್ಲೆಗೆ ಏಕೆ ಸಾಧ್ಯವಾಗುವುದಿಲ್ಲ? ಎಂದು ಪ್ರಶ್ನಿಸಿದರು.

ಇಡೀ ರಾಜ್ಯದಲ್ಲಿ 6 ಲಕ್ಷ ಶೌಚಾ–ಲಯ ನಿರ್ಮಿಸುವ ಗುರಿಯಲ್ಲಿ ಈಗಾ­ಗಲೇ 3 ಲಕ್ಷ ಶೌಚಾಲಯ ನಿರ್ಮಿಸ­ಲಾಗಿದೆ. ಗುರಿಯನ್ನು 6.80 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಸನ್ನಿವೇಶ ಹೀಗಿರುವಾಗ ಕೋಲಾರ ಜಿಲ್ಲೆಗೆ ಏಕೆ ಸಾಧ್ಯ­ವಾಗುತ್ತಿಲ್ಲ? ಇದಕ್ಕಿಂತಲೂ ಆಕರ್ಷಕ­ವಾದ ಯೋಜನೆ ಬೇಕೆ ನಿಮಗೆ? ಎಂದು ಪ್ರಶ್ನಿಸಿದರು.

ಶೌಚಾಲಯ ನಿರ್ಮಾಣ ಅನುದಾನ ಬಿಡುಗಡೆ ಮಾಡುವ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹ­ಣಾ­ಧಿ­ಕಾರಿಗಳು ಉತ್ಸಾಹ ತೋರದಿದ್ದರೆ ಏನೂ ಮಾಡಲಾಗುವುದಿಲ್ಲ. ಇದು ನಿಮ್ಮ ವಿಶೇಷ ಜವಾಬ್ದಾರಿ ಎಂದು ಹೇಳಿದರು,

ಕುಡಿಯುವ ನೀರು: ಜಿಲ್ಲೆಯಲ್ಲಿ 167 ಜನವಸತಿ ಗ್ರಾಮಗಳಲ್ಲಿ ಕಲುಷಿತ ನೀರು ದೊರಕುತ್ತಿದೆ. 67 ಗ್ರಾಮಗಳಲ್ಲಿ ಫ್ಲೋರೈಡ್ ಅಂಶವಿದೆ. 2 ಗ್ರಾಮಗಳಲ್ಲಿ ಕಬ್ಬಿಣದ ಲವಣಾಂಶವಿದೆ. 81ರಲ್ಲಿ ನೈಟ್ರೇಟ್ ಅತಿಯಾಗಿ ಇದೆ. ಈ ಎಲ್ಲ ಗ್ರಾಮಗಳಿಗೂ ಶುದ್ಧ ನೀರು ಪೂರೈಕೆ ಘಟಕಗಳನ್ನು ಸ್ಥಾಪಿಸುವಲ್ಲಿಯೂ ತ್ವರಿತಗತಿಯಲ್ಲಿ ಕೆಲಸ ನಡೆದಿಲ್ಲ. ಜಿಲ್ಲೆಯ 71 ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆಯಾಗಿರಬೇಕಾದ ಕಡೆ ಕೇವಲ 36 ಮಾತ್ರ ಸ್ಥಾಪನೆಯಾಗಿವೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಕೊಳವೆಬಾವಿಗಳ ಮರುಪೂರಣಕ್ಕೆ ವಿಶೇಷ ಯೋಜನೆಯನ್ನು ಕೂಡಲೇ ರೂಪಿಸಿ ಸರ್ಕಾರಕ್ಕೆ ಸಲ್ಲಿಸಿ. ಅಗತ್ಯ ಅನುದಾನ ಬಿಡುಗಡೆ ಮಾಡಲಾಗು­ವುದು ಎಂದು ತಿಳಿಸಿದರು.

ವಿದ್ಯುತ್‌ –ಸೂಚನೆ: ಶುದ್ಧ ಕುಡಿಯುವ ನೀರು ಘಟಕಗಳಿಗೆ ವಿದ್ಯುತ್ ಪೂರೈ­ಸುವ ವಿಚಾರದಲ್ಲಿ ಬೆಸ್ಕಾಂ ನಿರ್ಲಕ್ಷ್ಯ ಮಾಡಬಾರದು. ಪಂಚಾಯಿತಿಗಳಿಂದ ಅರ್ಜಿ ಸಲ್ಲಿಕೆಯಾಗಲಿ ಎಂದು ಕಾಯುತ್ತಾ­ ಕೂರದೆ, ಪಂಚಾಯಿತಿ­ಗಳನ್ನು ಸಂಪರ್ಕಿಸಿ ಅರ್ಜಿ ಪಡೆದು ಶೀಘ್ರ ಸಂಪರ್ಕ ನೀಡಬೇಕು ಎಂದು ಸಚಿವರು ಸೂಚಿಸಿದರು.

ಆಟದ ಮೈದಾನ: ಜಿಲ್ಲೆಯಲ್ಲಿ 928 ಆಟದ ಮೈದಾನ ನಿರ್ಮಿಸಬೇಕಿದ್ದು, ಇದುವರೆಗೆ ಕೇವಲ 49 ಮಾತ್ರ ನಿರ್ಮಾಣವಾಗಿದೆ. ಶೇ 5ರಷ್ಟು ಗುರಿ ಕೂಡ ಮುಟ್ಟದಿರುವುದು ವಿಷಾದ­ನೀಯ. ರಾಜ್ಯದಲ್ಲಿ 10 ಸಾವಿರ ಮೈದಾನದ ಗುರಿ ಪೈಕಿ 7800 ಮೈದಾನಗಳಿಗೆ ಜಾಗ ಗುರುತಿಸ­ಲಾಗಿದೆ. 2035 ಮೈದಾನಗಳನ್ನು ವಿವೇಕಾನಂದರ ಜಯಂತಿ ದಿನದಂದು ಉದ್ಘಾಟಿಸಲಾಗುವುದು. ಆದರೆ ಜಿಲ್ಲೆ­ಯಲ್ಲಿ ಅಂಥ ಸಿದ್ಧತೆಗಳೂ ನಡೆದಿಲ್ಲ ಎಂದು ವಿಷಾದಿಸಿದರು.

ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಶಾಸಕರಾದ ಕೆ.ಎಂ.ನಾರಾಯಣಸ್ವಾಮಿ, ಜಿ.ಮಂಜು­ನಾಥ್, ವೈ.ರಾಮಕ್ಕ, ಜಿಲ್ಲಾ ಪಂಚಾ­ಯಿತಿ ಅಧ್ಯಕ್ಷ ಆರ್.ನಾರಾ­ಯಣ­ಸ್ವಾಮಿ, ಉಪಾಧ್ಯಕ್ಷೆ ಅಲುವೇಲಮ್ಮ, ಜಿಲ್ಲಾಧಿಕಾರಿ ಡಿ.ಕೆ.ರವಿ ಹಾಜರಿದ್ದರು.

ಮಾಹಿತಿ ನೀಡಲು ಪರದಾಟ
ಯೋಜನೆಗಳ ಅನುಷ್ಠಾನದ ಕುರಿತು ಸಚಿವರಿಗೆ ಮಾಹಿತಿ ನೀಡಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಎಂ.ಜುಲ್ಪಿಕರ್ ಉಲ್ಲಾ, ಕಾರ್ಯಪಾಲಕ ಎಂಜಿನಿಯರ್ ದೇವರಾಜ್ ಪರದಾಡಿ ಟೀಕೆಗೆ ಗುರಿಯಾದ ಘಟನೆಯೂ ಸಭೆಯಲ್ಲಿ ನಡೆಯಿತು.

ಕುಡಿಯುವ ನೀರು ಪೂರೈಕೆಗಾಗಿ ಮಂಜೂರಾದ ₨ 37 ಕೋಟಿ ಪೈಕಿ ಕೇವಲ ₨ 18 ಕೋಟಿ ಮಾತ್ರ ಖರ್ಚಾಗಿದೆ ಏಕೆ ಎಂಬ ಸಚಿವರ ಪ್ರಶ್ನೆಗೆ ಈ ಇಬ್ಬರೂ ಸಮರ್ಪಕ ಉತ್ತರ ನೀಡಲು ಸಾಧ್ಯವಾಗಲಿಲ್ಲ. ಎಷ್ಟು ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ ಎಂಬ ಪ್ರಶ್ನೆಗೂ ಉತ್ತರ ತಕ್ಷಣ ಸಿದ್ಧವಿರಲಿಲ್ಲ.

ಈ ಸಂದರ್ಭ ಮಧ್ಯಪ್ರವೇಶಿಸಿದ ಬಂಗಾರಪೇಟೆ ಶಾಸಕ ಕೆ.ಎಂ.ನಾರಾಯಣಸ್ವಾಮಿ, ಮಾಹಿತಿ ನೀಡಲು ಹಿಂಜರಿಕೆ ಏಕೆ? ಅಥವಾ ಸಾಧನೆ ಕಳಪೆಯಾಗಿದೆ ಎಂದು ಮಾಹಿತಿ ನೀಡಿದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂಬ ಭಯವೇ ಎಂದು ದೇವರಾಜ್ ಅವರನ್ನು ಪ್ರಶ್ನಿಸಿದರು. ಹಾಗೇನೂ ಇಲ್ಲ ಎಂದು ಅಧಿಕಾರಿಗಳು ಸಬೂಬು ಹೇಳಿದರೂ, ಮಾಹಿತಿಗಾಗಿ ತಡಕಾಡುವ ಪ್ರಯತ್ನ ಸಭೆಯುದ್ದಕ್ಕೂ ನಡೆದೇ ಇತ್ತು.

ಅಧಿಕಾರಿಗಳು ಮಾಹಿತಿ ನೀಡಲು ಪರದಾಡುವುದನ್ನು ಕಂಡು ಮುಜುಗರ ಅನುಭವಿಸಿದ ಸಚಿವರು ತಮ್ಮ ಆಪ್ತ ಕಾರ್ಯದರ್ಶಿ ಮೂಲಕ ಜಿಲ್ಲೆಯ ಪ್ರಗತಿ ವಿವರದ ಆನ್‌ಲೈನ್ ಪ್ರತಿಯನ್ನು ಕೆಲವೇ ನಿಮಿಷಗಳಲ್ಲಿ ತರಿಸಿಕೊಂಡು ಪರಿಶೀಲನೆ ಮುಂದುವರಿಸಿದರು. ತಾವು ನೀಡುವ ಮಾಹಿತಿಯನ್ನಷ್ಟೇ ಆಧರಿಸಿ ಸಚಿವರು ಪ್ರಗತಿ ಪರಿಶೀಲನೆ ಮಾಡುತ್ತಾರೆ ಎಂದು ಭಾವಿಸಿದ್ದ ಅಧಿಕಾರಿಗಳು ಇದರಿಂದ ಇನ್ನಷ್ಟು ಪೇಚಿಗೆ ಸಿಲುಕಿದರು.

ಸಚಿವರು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಂದಷ್ಟೇ ಅಲ್ಲದೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಂದಲೂ ಮಾಹಿತಿಯನ್ನು ನೇರವಾಗಿ ಪಡೆದರು. ಡಿ.23ರಂದು ಕೇಂದ್ರ ಬರ ಅಧ್ಯಯನ ತಂಡದ ಮುಂದೆ ಜಿಲ್ಲೆಯ ಸ್ಥಿತಿ ಗತಿಯನ್ನು ಪರಿಣಾಮಕಾರಿಯಾಗಿ ವಿಶ್ಲೇಷಿಸಿದ್ದ ಜಿಲ್ಲಾಧಿಕಾರಿ ಡಿ.ಕೆ.ರವಿ ಈ ಸಭೆಯಲ್ಲಿ ಮೌನವಾಗಿದ್ದರು.

ಶೌಚಾಲಯ ಅನುದಾನ ಹೆಚ್ಚಳ
ನಿರ್ಮಲ ಭಾರತ ಯೋಜನೆಯಡಿ ಶೌಚಾಲಯ ನಿರ್ಮಾಣಕ್ಕೆ ಉದ್ಯೋಗಖಾತ್ರಿ ಯೋಜನೆ ಮೂಲಕ ನೀಡಲಾಗುತ್ತಿದ್ದ ಅನುದಾನವನ್ನು ಕೇಂದ್ರ ಸರ್ಕಾರ ₨ 900 ಕೋಟಿಗೆ ಹೆಚ್ಚಿಸಿ ಆದೇಶ ಹೊರಡಿಸಿದೆ ಎಂದು ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ತಿಳಿಸಿದರು.

ಈ ಮೊದಲು ನರೇಗ ಮೂಲಕ ₨ 4500  ನೀಡಲಾಗುತ್ತಿತ್ತು. ಈಗ ಆ ಮೊತ್ತ 5400 ಆಗಿದೆ. ಒಟ್ಟಾರೆ ₨ 9200 ಅನ್ನು ಫಲಾನುಭವಿಗೆ ನೀಡಲಾಗು­ತ್ತಿತ್ತು. ಈಗ ಅದು ₨ 10,100 ಆಗಿದೆ ಎಂದು ಮಾಹಿತಿ ನೀಡಿದರು.

ಮಳೆಯೇ ಇಲ್ಲ ಸಾರ್‌, ಜಲಮರುಪೂರಣ ಎಲ್ಲಿ?
ಜಿಲ್ಲೆಯಲ್ಲಿ ಎಷ್ಟು ಕೊಳವೆಬಾವಿಗಳಿಗೆ ಜಲಮರುಪೂರಣ ಮಾಡಲಾಗಿದೆ ಎಂಬ ಪ್ರಶ್ನೆಗೆ ‘ಮಳೆಯೇ ಇಲ್ಲ ಸಾರ್‌. ಜಲಮರುಪೂರಣ ಎಲ್ಲಿ?’ ಎಂದು ಪ್ರತಿಕ್ರಿಯಿಸಿದ ಶಾಸಕರು, ಜಿ.ಪಂ. ಸದಸ್ಯರ ಧೋರಣೆಗೂ ಸಚಿವ ಪಾಟೀಲ ಅತೃಪ್ತಿ ವ್ಯಕ್ತಪಡಿಸಿದರು.

ಬರುವ ಮಳೆಗಾಲದ ಹೊತ್ತಿಗೆ ಆಯ್ದ ಕೊಳವೆಬಾವಿಗಳ ಮರುಪೂರಣಕ್ಕೆ ಕ್ರಮ ಕೈಗೊಳ್ಳಬೇಕು. ಪೂರ್ಣ ಬತ್ತಿರುವ, ನೀರು ಕಡಿಮೆಯಾಗುವ ಕೊಳವೆಬಾವಿಗಳ ಮರುಪೂರಣದ ಬಗ್ಗೆ ಜಿಲ್ಲಾ ಪಂಚಾಯಿತಿ ಸದಸ್ಯರಲ್ಲಿ ಯಾರೊಬ್ಬರೂ ಗಂಭೀರ ಚಿಂತನೆ ಮಾಡಿಲ್ಲ. ಮರುಪೂರಣಕ್ಕೆ ಅನುದಾನದ ಕೊರತೆ ಇಲ್ಲ. ನೀರು ಪೂರೈಕೆ ಎಂದರೆ ಕೊಳವೆಬಾವಿ ಕೊರೆದು ನೀರು ಕೊಡೋದಷ್ಟೇ ಅಲ್ಲ. ಇರುವ ಕೊಳವೆಬಾವಿಗಳಲ್ಲಿ ನೀರು ಮತ್ತೆ ಬರುವಂತೆ ಮಾಡುವುದು ಕೂಡ ನೀರು ಪೂರೈಕೆ ಜವಾಬ್ದಾರಿಯಲ್ಲೇ ಸೇರ್ಪಡೆಗೊಂಡಿದೆ ಎಂಬುದನ್ನು ತಿಳಿಯಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT