ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯಿತಿಗೆ ನೋಟಿಸ್, ತಪ್ಪಿದ್ದರೆ ಶಿಸ್ತಿನ ಕ್ರಮ: ಇ.ಒ

ಕುಷ್ಟಗಿ: ಬಸವ ವಸತಿ ಯೋಜನೆಯಲ್ಲಿ ಅಕ್ರಮ
Last Updated 20 ಜುಲೈ 2013, 8:09 IST
ಅಕ್ಷರ ಗಾತ್ರ

ಕುಷ್ಟಗಿ: ಬಸವ ವಸತಿ ಯೋಜನೆಗೆ ಸಂಬಂಧಿಸಿದಂತೆ 2010-11ನೇ ಸಾಲಿನ ಫಲಾನುಭವಿಗಳ ಆಯ್ಕೆಯಲ್ಲಿ ತಾಲ್ಲೂಕಿನ ಮುದೇನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ನಡೆದಿದೆ ಎಂಬ ದೂರುಗಳಿಗೆ ಸಂಬಂಧಿಸಿದಂತೆ ವರದಿ ನೀಡಲು ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಈ ಕುರಿತು ಜು. 19 ರಂದು `ಪ್ರಜಾವಾಣಿ'ಯಲ್ಲಿ ವರದಿ ಪ್ರಕಟವಾದ ನಂತರ ನೋಟಿಸ್ ನೀಡಿರುವ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ಬಿ.ಮ್ಯಾಗೇರಿ, ಕೆಲ ಫಲಾನುಭವಿಗಳನ್ನು ಅಂಗವಿಕಲರು ಮತ್ತು ವಿದುರರ ಕೋಟಾದಲ್ಲಿ ಆಯ್ಕೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ವಾರದ ಒಳಗಾಗಿ ವರದಿ ನೀಡಲು ಆದೇಶಿಸಿದ್ದಾರೆ.

ಫಲಾನುಭವಿಗಳ ಪಟ್ಟಿಯಲ್ಲಿ ಕ್ರಮ ಸಂಖ್ಯೆ 90, 93 ಮತ್ತು 100ರ ಪ್ರಕಾರ ಚಂದ್ರಶೇಖರ ಶೇಖರಪ್ಪ ಉಳ್ಳಾಗಡ್ಡಿ, ಆದಪ್ಪ ಶೇಖರಪ್ಪ ಉಳ್ಳಾಗಡ್ಡಿ ಮತ್ತು ಕನಕಪ್ಪ ಭೀಮಪ್ಪ ಕಲ್ಲೂರು ಫಲಾನುಭವಿಗಳು ಅಂಗವಿಕಲ ಹಾಗೂ ವಿದುರರು ಎಂದು ದಾಖಲೆಗಳಲ್ಲಿದೆ. ಹಾಗಾಗಿ ಫಲಾನುಭವಿಗಳ ಭಾವಚಿತ್ರ, ವೈದ್ಯರ ದೃಢೀಕರಣ ಪತ್ರ ಮತ್ತು ವಿದುರರು ಎಂದಾದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಅಭಿವೃದ್ಧಿ ಅಧಿಕಾರಿಗೆ ಸೂಚಿಸಲಾಗಿದೆ.

ಕಾರ್ಯನಿರ್ವಹಣಾಧಿಕಾರಿ ಮಾಹಿತಿ: ಈ ಕುರಿತು ವಿವರ ನೀಡಿದ ಕಾರ್ಯನಿರ್ವಹಣಾಧಿಕಾರಿ ಸಿ.ಬಿ. ಮ್ಯಾಗೇರಿ, `ಪ್ರಜಾವಾಣಿ' ವರದಿ ಮತ್ತು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ವಿವರ ನೀಡುವಂತೆ ಅಭಿವೃದ್ಧಿ ಅಧಿಕಾರಿಗೆ ನೋಟಿಸ್ ನೀಡಲಾಗಿದೆ. ಅವರು ನೀಡುವ ವರದಿಯನ್ನು ಪರಿಶೀಲಿಸಿ ದುರುಪಯೋಗವಾಗಿದ್ದರೆ ನಿಯಮಾನುಸಾರ ಶಿಸ್ತಿನ ಕ್ರಮ ಜರುಗಿಸುತ್ತೇವೆ. ಅಲ್ಲದೇ ಈ ಬಗ್ಗೆ ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮಕ್ಕೂ ಪತ್ರ ಬರೆಯಲಾಗುವುದು' ತಿಳಿಸಿದರು.

ನೋಡಲ್ ಅಧಿಕಾರಿ ಹೇಳಿಕೆ: ಈ ವಿಷಯ ಕುರಿತಂತೆ ತಮ್ಮನ್ನು ಸಂಪರ್ಕಿಸಿದಾಗ ಮಾಹಿತಿ ನೀಡಿದ ವಸತಿ ಯೋಜನೆಯ ತಾಲ್ಲೂಕಿನ ನೋಡಲ್ ಅಧಿಕಾರಿ ಕಲ್ಲೇಶ ಗುರಿಕಾರ, `ವಸತಿ ನಿಗಮದ ವೆಬ್‌ಸೈಟ್‌ನಲ್ಲಿ ಮುದೇನೂರು ಗ್ರಾಮದ ಚಂದ್ರಶೇಖರ ಉಳ್ಳಾಗಡ್ಡಿ, ಆದಪ್ಪ ಉಳ್ಳಾಗಡ್ಡಿ ಮತ್ತು ಕನಕಪ್ಪ ಕಲ್ಲೂರು ಎಂಬ ಫಲಾನುಭವಿಗಳ ಮನೆಗಳಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಯವರು ಪ್ರಗತಿ ದಾಖಲಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು. ಆದರೆ ಅವು ತಪ್ಪಾಗಿರುವ ಕಾರಣಕ್ಕೆ ಜಿಪಿಎಸ್ ಪ್ರಕ್ರಿಯೆ ತಡೆಹಿಡಿಯಲಾಗಿದೆ' ಎಂದು ಹೇಳಿದರು.

ಅಲ್ಲದೇ 2010-11ನೇ ಸಾಲಿನಲ್ಲಿ ಮುದೇನೂರು ಗ್ರಾ.ಪಂನಲ್ಲಿ 317 ಫಲಾನುಭವಿಗಳ ಗುರಿ ಹೊಂದಲಾಗಿತ್ತು. ಆದರೆ ಅವುಗಳಲ್ಲಿ ಪ್ರಗತಿ ನಮೂದಿಸದ ಕಾರಣ 56 ಫಲಾನುಭವಿಗಳ ಹೆಸರುಗಳನ್ನು ತಡೆ ಹಿಡಿಯಲಾಗಿದೆ' ಎಂದು ನೋಡಲ್ ಅಧಿಕಾರಿ ವಿವರಿಸಿದರು.

ವೆಬ್‌ಸೈಟ್ ದುರುಪಯೋಗ: ಬಸವ ವಸತಿ ಯೋಜನೆ ಮಹಿಳೆಯರಿಗೆ ಮೀಸಲಾಗಿದೆ. ವಿಶೇಷ ಪ್ರಕರಣಗಳಲ್ಲಿ ಪುರುಷರಿಗೂ ಅವಕಾಶ ನೀಡಲಾಗಿದೆ. ಹಾಗಾಗಿ ಪುರುಷ ವ್ಯಕ್ತಿಗಳಿದ್ದರೆ ಅಂಗವಿಕಲ, ವಿದುರ, ಮಾಜಿ ಸೈನಿಕ ಅಥವಾ ಹಿರಿಯ ನಾಗರಿಕ ಇವುಗಳಲ್ಲಿ ಒಂದನ್ನು ನಮೂದಿಸಿದರೆ ಮಾತ್ರ ವಸತಿ ನಿಗಮದ ವೆಬ್‌ಸೈಟ್ ಮುಂದಿನ ಪ್ರಕ್ರಿಯೆಗೆ ಸಹರಿಸುತ್ತದೆ. ಆದರೆ ಅನರ್ಹ ಪುರಷರನ್ನೂ ಯೋಜನೆಯಲ್ಲಿ ತೂರಿಸುವ ಸಲುವಾಗಿ ವಾಮಮಾರ್ಗಗಳನ್ನು ಅನುಸರಿಸುತ್ತಿರುವ ಪಂಚಾಯಿತಿಗಳು ವೆಬ್‌ಸೈಟ್‌ನ್ನೇ ದುರುಪಯೋಗ ಮಾಡಿಕೊಳ್ಳುತ್ತಿವೆ. ಅಲ್ಲದೇ ಜಿಲ್ಲೆಯ ಬಹುತೇಕ ಗ್ರಾ.ಪಂಗಳಲ್ಲಿ ಇಂಥ ಅಕ್ರಮಗಳು ನಡೆದಿವೆ' ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT