ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚೇಂದ್ರಿಯ ಶಕ್ತಿ ಗಣಕ 2018ಕ್ಕೆ!

Last Updated 25 ಡಿಸೆಂಬರ್ 2012, 20:28 IST
ಅಕ್ಷರ ಗಾತ್ರ

ಮದುವೆ ಸೀರೆಗಳನ್ನು ಕೊಂಡುಕೊಳ್ಳಲು ಹತ್ತಾರು ಅಂಗಡಿಗಳಿಗೆ ಅಲೆದು, ಗಂಟೆಗಟ್ಟಲೇ ಕಾದು ಕೂತು, ಖರೀದಿಸಿ ಮನೆಗೆ ಬಂದು `ಉಸ್ಸಪ್ಪಾ'... ಎಂದು ನಿಟ್ಟುಸಿರುವ ಬಿಡುವ ಬದಲಿಗೆ ಮನೆಯಲ್ಲೇ ಕುಳಿತು ಖರೀದಿ ವ್ಯವಹಾರ ಮುಗಿಸಿದರೆ ಹೇಗೆ?...

ಕಾಲ ಬದಲಾಗಿದೆ, ವ್ಯಾಪಾರ-ಖರೀದಿ ರೀತಿಯೂ ಬದಲಾಗಿದೆ. ಬಟ್ಟೆಗಳನ್ನು ಖರೀದಿಸಲು ಮನೆಯಿಂದ ಬಲು ದೂರದ ಅಂಗಡಿಗೇ ಹೋಗಬೇಕಿಲ್ಲ. ಬಗೆ ಬಗೆ ತಿಂಡಿ ತಿನಿಸುಗಳನ್ನು ತಿನ್ನಲೂ ಹೋಟೆಲ್ ಹುಡುಕಿಕೊಂಡೇ ಹೋಗಬೇಕಿಲ್ಲ. ಮನೆ-ಕಚೇರಿಯಲ್ಲಿ ಕಂಪ್ಯೂಟರ್ ಮುಂದೆ ಕುಳಿತೇ ಎಲ್ಲವನ್ನೂ ಇದ್ದಲ್ಲಿಗೇ ತರಿಸಿಕೊಳ್ಳಬಹುದು.

ಆನ್‌ಲೈನ್ ವ್ಯಾಪಾರಿ ತಾಣಗಳು ಈಗ ಯಾರಿಗೆ ಗೊತ್ತಿಲ್ಲ! ಕಂಪ್ಯೂಟರ್ ಮಾನಿಟರ್ ಮೇಲೆ ಬೇಕಾದ ವಸ್ತುಗಳ ಚಿತ್ರಗಳನ್ನು ನೋಡಿ ಖರೀದಿಸಬಹುದು. ಆದರೆ ಅಂಗಡಿಯಲ್ಲಿ ವಸ್ತುಗಳನ್ನು ಸ್ಪರ್ಶಿಸಿ, ಪ್ರತ್ಯಕ್ಷ ನೋಡಿ ಖರೀದಿಸಿದಂತೆ ಆಗುವುದೇ? ಎಂದು ಮೂಗುಮುರಿಯಬೇಕಿಲ್ಲ.

ತಂತ್ರಜ್ಞಾನ ಏನೆಲ್ಲವನ್ನೂ ಮಾಡಿದೆ. ಈಗ ಮಾರಾಟಕ್ಕಿರುವ ವಸ್ತ್ರಗಳ ಚಿತ್ರ ಕಂಪ್ಯೂಟರ್ ಪರದೆ ಮೇಲೆ ಕಾಣಿಸಿಕೊಂಡಾಗ ಆ ಚಿತ್ರವನ್ನು ಮುಟ್ಟಿದರೆ ಸಾಕು ನಿಜವಾದ ಬಟ್ಟೆಯನ್ನೇ ಮುಟ್ಟಿದಂತೆ ಅನುಭವವಾಗುತ್ತದೆ. ಮಾನಿಟರ್‌ನಲ್ಲಿ ಬಿಂಬಿತವಾಗುವ ತಿಂಡಿ-ತಿನಿಸಿನ ಚಿತ್ರಗಳನ್ನು ನೋಡುತ್ತಲೇ ಅವುಗಳ ವಾಸನೆಯನ್ನೂ ಅನುಭವಿಸಿ ನಮಗೆ ಬೇಕಾದ ರುಚಿಕರ ತಿನಿಸನ್ನು ಮನೆಗೇ ತರಿಸಿಕೊಳ್ಳಬಹುದು!

`ಅರೆ ಹೌದಾ! ಮೊದಲು ಇಂಥ ಹಲವು ಆಯಾಮಗಳನ್ನು ಹೊಂದಿರುವ ಕಂಪ್ಯೂಟರ್ ಖರೀದಿಸೋಣ' ಎಂದು ಈಗಲೇ ಮುಂದಾಗುವಂತಿಲ್ಲ. ಇಂಥ ವಿನೂತನ ತಂತ್ರಜ್ಞಾನ ಇರುವ ಗಣಕಯಂತ್ರ ಮಾರುಕಟ್ಟೆಗೆ ಬರಲು ಇನ್ನೂ ಐದು ವರ್ಷಗಳು ಬೇಕಿವೆ.

ವಿಶ್ವದ ಶ್ರೇಷ್ಠ ಗಣಕ ನಿರ್ಮಾತೃ ಕಂಪೆನಿ `ಐಬಿಎಂ' ಐದು ಬಗೆಯ ಸಂವೇದನೆಗಳನ್ನು ಹೊಂದಿರುವ ಕಂಪ್ಯೂಟರ್‌ಗಳು ಐದೇ ವರ್ಷದಲ್ಲಿ ಮಾರುಕಟ್ಟೆಗೆ ಬರಲಿವೆ ಎಂದು ಭವಿಷ್ಯ ನುಡಿದಿದೆ.

ಪಂಚ ಸಂವೇದನೆ ಎಂದರೆ
1. ನೋಡುವುದು
2. ಕೇಳುವುದು
3. ಸ್ಪರ್ಶ ಸಂವೇದನೆ
4. ವಾಸನಾಗ್ರಹಣ
5. ಸ್ವಾದ (ರುಚಿ ಗ್ರಹಣ)

ಇವುಗಳಲ್ಲಿ ಮೊದಲಿನೆರಡು ಅಂಶಗಳ ಕಾರ್ಯಶೈಲಿ ಹಲವು ವರ್ಷಗಳಿಂದಲೇ ನಮ್ಮ ಗಣಕಯಂತ್ರಗಳಲ್ಲಿವೆ. ಸ್ಪರ್ಶ ಸಂವೇದನೆಯ (ಟಚ್ ಸ್ಕ್ರೀನ್) ಗಣಕಯಂತ್ರಗಳೂ ಕೆಲ ತಿಂಗಳಿಂದ ಮಾರುಕಟ್ಟೆಯಲ್ಲಿವೆ.

ಆದರೆ, ಸದ್ಯ ಮಾರುಕಟ್ಟೆಯಲ್ಲಿರುವ `ಸ್ಪರ್ಶ ಪರದೆ' ಗಣಕಗಳಿಗಿಂತ ವಿಭಿನ್ನ ಶೈಲಿಯಲ್ಲಿ `ಸ್ಪರ್ಶ ಸಂವೇದನೆ' ಉಂಟು ಮಾಡುವಂತಹ ಗಣಕಯಂತ್ರಗಳನ್ನು ಅಭಿವೃದ್ಧಿಪಡಿಸುವುದು ಕಂಪೆನಿಯ ಗುರಿ.

ಅಂದರೆ, ಕಂಪ್ಯೂಟರ್ ಪರದೆ ಮೇಲೆ ಮೂಡುವ ವಸ್ತುವಿನ ಚಿತ್ರವನ್ನು ಮುಟ್ಟಿದರೆ ಸಾಕು, ನಿಜವಾದ ವಸ್ತುವನ್ನು ಮುಟ್ಟಿದಾಗ ಯಾವ ರೀತಿಯ ಸಂವೇದನೆ ನಮಗೆ ಆಗುತ್ತದೆಯೋ ಅದೇ ಬಗೆಯ ಸ್ಪರ್ಶ ಅನುಭವ ನೀಡುವಂತಹ ತಂತ್ರಜ್ಞಾನವನ್ನು ಒಳಗೊಂಡ ಗಣಕಯಂತ್ರಗಳು 2018ರ ವೇಳೆಗೆ ರೂಪುಗೊಳ್ಳಲಿವೆ ಎಂದಿದೆ `ಐಬಿಎಂ'.

ಉದಾಹರಣೆಗೆ; ಮಾನಿಟರ್ ಮೇಲೆ ಬಿಂಬಿತವಾದ ಪ್ಲಾಸ್ಟಿಕ್ ಚಿತ್ರವನ್ನು ಮುಟ್ಟಿದಾಗ ನೈಜ ಪ್ಲಾಸ್ಟಿಕ್ ಮುಟ್ಟಿದಂತೆಯೇ ಸ್ಪರ್ಶದ ಅನುಭವವಾಗುವಂತೆ ಮಾಡುವುದು, ಗಾಜಿನ ಚಿತ್ರ ಮುಟ್ಟಿದಾಗ ನಿಜವಾದ ಗಾಜನ್ನು ಮುಟ್ಟಿದಂತಹ ಸಂವೇದನೆಯೇ ಆಗುವಂತೆ ಮಾಡುವುದು `ಐದು ಆಯಾಮ'ಗಳ(5ಡಿ) ಈ ಹೊಸ ತಂತ್ರಜ್ಞಾನದ ಉದ್ದೇಶ.

ಮಾನವನ ಮಿದುಳು ಹೇಗೆ ತನ್ನ ಸುತ್ತಲಿನ ಪರಿಸರದಲ್ಲಿನ ಬಹುಬಗೆಯ ಸಂವೇದನೆಗಳನ್ನು ಗ್ರಹಿಸುತ್ತದೆಯೋ ಅದೇ ಬಗೆಯಲ್ಲಿ ಕಂಪ್ಯೂಟರ್ ಕೂಡ ಆ ಸಂವೇದನೆಗಳನ್ನು ಗ್ರಹಿಸುವಂತೆ ಮಾಡುವ (5ಡಿ) ತಂತ್ರಜ್ಞಾನವು ಸಂಶೋಧನಾ ಹಂತದಲ್ಲಿದೆ ಎಂದಿದ್ದಾರೆ `ಐಬಿಎಂ'ನ ಭಾರತ ಹಾಗೂ ದಕ್ಷಿಣ ಏಷ್ಯಾ ವಿಭಾಗದ ನಿರ್ದೇಶಕ-ಮುಖ್ಯ ತಂತ್ರಜ್ಞಾನ ಅಧಿಕಾರಿ ರಮೇಶ್ ಗೋಪಿನಾಥ್.

ಈಗಿರುವ ಕಂಪ್ಯೂಟರ್‌ಗಳಲ್ಲಿ ಧ್ವನಿ ಇದೆ. ಚಾಟ್ ಮಾಡುವುದಕ್ಕೆ, ಸಂಗೀತ ಕೇಳುವುದಕ್ಕೆ ಮಾತ್ರ ಇದು ಬಳಕೆಯಾಗುತ್ತಿದೆ. ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಸುತ್ತಲಿನ ಪರಿಸರದ ಧ್ವನಿ ತರಂಗಗಳನ್ನು ಗ್ರಹಿಸುವಂತೆ ಮಾಡುವುದು ಸಂಶೋಧಕರ ಗುರಿಯಾಗಿದೆ.

ಪ್ರತಿಧ್ವನಿಯ ಏರಿಳಿತ, ಶಬ್ದದ ಅಲೆಗಳನ್ನು ಗ್ರಹಿಸುವಂತೆ ಮಾಡುವಲ್ಲಿ ಯಶಸ್ಸು ಸಿಕ್ಕರೆ, ಮಗುವಿನ ಅಳವನ್ನೂ ಕಂಪ್ಯೂಟರ್ ಗ್ರಹಿಸಿ, ವಿಶ್ಲೇಷಿಸಿ ಸ್ಪಷ್ಟಪಡಿಸುತ್ತದೆ. ಅಂದರೆ, ಮಗು ಅಳು ಹಸಿವಿನಿಂದ ಅಳುತ್ತಿದೆಯೇ, ನಿದ್ದೆ ಬಂದಿದ್ದರಿಂದಲೋ, ಬೇಜಾರಿನಿಂದಲೋ ಎಂಬುದನ್ನು ಕಂಪ್ಯೂಟರ್ ವಿಶ್ಲೇಷಿಸಿ ಸ್ಪಷ್ಟಪಡಿಸುತ್ತದೆ ಎಂಬುದು ಗಣಕಯಂತ್ರ ತಂತ್ರಜ್ಞಾನ ಸಂಶೋಧಕರ ಲೆಕ್ಕಾಚಾರ.

ಇನ್ನು ವಾಸನೆಯ ಗ್ರಹಣ ಶಕ್ತಿ. ಇದೊಂದು ಬಗೆಯಲ್ಲಿ ವಿಶೇಷ ಶಕ್ತಿ. ಆದರೆ, ಅಪರಿಚಿತವಂತೂ ಅಲ್ಲ.
ಬೆಂಕಿ ಕಾಣಿಸಿಕೊಂಡಾಗ ಹೊರಬರುವ ಹೊಗೆಯನ್ನು ಆಘ್ರಾಣಿಸಿ ಅಪಾಯವನ್ನು ಗ್ರಹಿಸುವ, ತಕ್ಷಣವೇ ಎಚ್ಚರಿಕೆ ಗಂಟೆ(ಅಲರಾಂ) ಮೊಳಗಿಸುವ ತಂತ್ರಜ್ಞಾನ ಅಭಿವೃದ್ಧಿ ಆಗಿದೆ. ಬೃಹತ್ ಸಂಕೀರ್ಣಗಳಲ್ಲಿ ಅಳವಡಿಸಿಕೊಳ್ಳಲೂ ಆಗಿದೆ.

ಇದೇ ಬಗೆಯಲ್ಲಿ ಕಂಪ್ಯೂಟರ್‌ಗಳು ಕೂಡ ಹೊಗೆ, ಸುಗಂಧ ದ್ರವ್ಯ ಹಾಗೂ ಅಲ್ಕೋಹಾಲ್ ವಾಸನೆಗಳನ್ನು ಗ್ರಹಿಸುವ ಪ್ರತ್ಯೇಕವಾಗಿ ಗುರುತಿಸುವ (ಸದ್ಯ ವಾಹನ ಚಾಲಕರು ಮದ್ಯ ಸೇವಿಸಿದ್ದರೆ ಅವರ ದೇಹದಲ್ಲಿ ಎಷ್ಟು ಪ್ರಮಾಣದ ಆಲ್ಕೋಹಾಲ್ ಇದೆ ಎಂಬುದನ್ನು ನಿಖರವಾಗಿ ಗುರುತಿಸುವಂತಹ ಸಾಧನವನ್ನು ಭಾರತದಲ್ಲಿಯೂ ಸಂಚಾರ ಪೊಲೀಸರು ಬಳಸುತ್ತಿದ್ದಾರೆ) ತಂತ್ರಜ್ಞಾನವನ್ನು ಭಿವೃದ್ಧಿಪಡಿಲಾಗುತ್ತಿದೆ.

ಸ್ವಾದ(ರುಚಿ) ಗ್ರಹಣ ತಂತ್ರಜ್ಞಾನ ಶೋಧ ವಿಭಾಗದಲ್ಲಿ ರಾಸಾಯನಿಕಗಳದ್ದೇ ಕಾರುಬಾರು. ವಿಭಿನ್ನ ಬಗೆಯ ರಾಸಾಯನಿಕಗಳನ್ನು ಬಳಸಿ ಆ ವಾಸನೆಗಳನ್ನು ಕಂಪ್ಯೂಟರ್‌ಗಳು ಸ್ಪಷ್ಟವಾಗಿ ಗ್ರಹಿಸಿ ಗುರುತಿಸುವಂತೆ ಮಾಡುವುದೇ ಈಗ ತಂತ್ರಜ್ಞರ ಉದ್ದೇಶವಾಗಿದೆ.

ವಾಸನೆ(ಮೂಗಿನ ಕೆಲಸ), ಸ್ವಾದ(ನಾಲಿಗೆಯಲ್ಲಿನ ರುಚಿ ಗ್ರಹಣ ಗ್ರಂಥಿಗಳ ಕೆಲಸ) ಗ್ರಹಿಕೆ ಸಾಮರ್ಥ್ಯವನ್ನು ತಂತ್ರಜ್ಞಾನದ ಜತೆಗೆ ಮೇಳೈಸಿದರೆ ಆಯಿತು. ಅಲ್ಲಿಗೆ,  ಮನುಷ್ಯ ಸೇರಿದಂತೆ ವಿವಿಧ ಜೀವಿಗಳಲ್ಲಿರುವ ಐದು ಆಯಾಮಗಳ (ಪಂಚೇಂದ್ರಿಯಗಳ) ಸಾಮರ್ಥ್ಯವೂ ಗಣಕಯಂತ್ರಕ್ಕೂ ಬಂದಂತೆಯೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT