ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರ: ಸಿಬ್ಬಂದಿ ಕೊರತೆ

Last Updated 10 ಫೆಬ್ರುವರಿ 2011, 9:25 IST
ಅಕ್ಷರ ಗಾತ್ರ

ಪಂಜ(ಬೆಳ್ಳಾರೆ): ಕಳೆದ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಉದ್ಘಾಟನೆಗೊಂಡ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇದೀಗ ವೈದ್ಯರು ಸೇರಿದಂತೆ ಅಗ್ಯತ್ಯ ಸಿಬ್ಬಂದಿ ಕೊರತೆ ಎದುರಾಗಿದೆ.

ಸುಮಾರು ರೂ. 1.17 ಕೋಟಿ ವೆಚ್ಚದಲ್ಲಿ  ಪಂಜ ಪ್ರಾಥಮಿಕ ಆರೋಗ್ಯ ಸಮುಚ್ಚಯ ನಿರ್ಮಾಣಗೊಂಡಿದೆ. ಬಹಳ ಅದ್ದೂರಿಯಿಂದ ಕಳೆದ ಅಕ್ಟೋಬರ್ ತಿಂಗಳಲ್ಲಿ  ಪ್ರಾಥಮಿಕ ಆರ್ಯೊಗ್ಯ ಕೇಂದ್ರ ಉದ್ಘಾಟನೆಗೊಂಡಿತ್ತು. ಜನಪ್ರತಿನಿಧಿಗಳು ಸುತ್ತ ಮುತ್ತಲ ಗ್ರಾಮದ ಜನರಲ್ಲಿ ಅಗತ್ಯವಿರುವ ಎಲ್ಲಾ ಸೌಲಭ್ಯ ಮತ್ತು ಸಿಬ್ಬಂದಿ ಒದಗಿಸಿ ಕೊಡುವ ಭರವಸೆ ತುಂಬಿದ್ದರು. ಆದರೆ ಭರವಸೆ ಕೇವಲ ಭರವಸೆಯಾಗಿ ಉಳಿದಿದ್ದು ಜನಪ್ರತಿನಿಧಿಗಳ ಮಾತಿಗೆ ಬೆಲೆ ಇಲ್ಲದಂತಾಗಿದೆ.

 ಇಲ್ಲಿದ್ದ ವೈದ್ಯರು ತಾಲ್ಲೂಕು ವೈದ್ಯಾಧಿಕಾರಿಯಾಗಿ ಭಡ್ತಿ ಹೊಂದಿ ಬೇರೆಡೆಗೆ ತೆರಳಿದ್ದಾರೆ. ಬಳಿಕ ವೈದ್ಯರು ಬಂದಿಲ್ಲ. ಅತ್ಯಗತ್ಯವಾಗಿ ಬೇಕಾಗಿರುವ ಶುಶ್ರೂಷಕಿಯರನ್ನು ನೇಮಕ ಮಾಡಿಲ್ಲ. ಇದೀಗ ಪ್ರಾಥಮಿಕ ಆರೋಗ್ಯ ಕೇಂದ್ರ ಜವಾಬ್ದಾರಿಯನ್ನು ತಾಲ್ಲೂಕು ವೈದ್ಯಧಿಕಾರಿ ಡಾ.ಸುಬ್ರಹ್ಮಣ್ಯ ವಹಿಸಿಕೊಂಡಿದ್ದು ಇವರು ಸೋಮವಾರ ಮತ್ತು ಗುರುವಾರ ಭೇಟಿ ನೀಡುತ್ತಿದ್ದಾರೆ. ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಯದುರಾಜ್ ಮಂಗಳವಾರ ಮತ್ತು ಶುಕ್ರವಾರ ಪಂಜ ಆಸ್ಪತ್ರೆಯಲ್ಲಿ ಲಭ್ಯವಿರುತ್ತಾರೆ.

 ವಾರದ ಏಳುದಿನಗಳಲ್ಲೂ 24 ಗಂಟೆಗಳ ಆರೋಗ್ಯ ಸೇವೆ, ಹೆರಿಗೆ ಸೌಲಭ್ಯ(ಎನ್.ಎಚ್.ಆರ್.) ಯೋಜನೆಗೆ ಸಂಬಂಧಿಸಿದಂತೆ ಮೇಲ್ದರ್ಜೆಗೇರಿದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈಗ  ಈ ಸೇವೆ ರದ್ದುಗೊಂಡಿದೆ. ಈ ಯೋಜನೆಗೆ ಎಂದು ಬಂದಿದ್ದ ಮೂವರು ಸಿಬ್ಬಂದಿ ಬೇರೆಡೆಗೆ ವರ್ಗವಣೆಗೊಂಡಿದ್ದಾರೆ. 

ಆರು ಹಾಸಿಗೆಗಳಿರುವ ಇಲ್ಲಿ ಖಾಯಂ ವೈದ್ಯರಿಲ್ಲದ ಕಾರಣ  ಹೆಚ್ಚಿನವರು ಹೆರಿಗೆಗೆ ತೆರಳುವುದಿಲ್ಲ. ಇಲ್ಲಿಗೆ ಒಬ್ಬ ಪುರುಷ ಮತ್ತು ಒಬ್ಬ ಮಹಿಳಾ ವೈದ್ಯರು ಸೇರಿದಂತೆ ಆರೋಗ್ಯ ಸಹಾಯಕಿಯರ ತುರ್ತು ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT