ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌ನಲ್ಲಿ ಕೊಡಗಿನ ಯೋಧ ಸಾವು

Last Updated 16 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಮಡಿಕೇರಿ:  ಪಂಜಾಬ್‌ನ ಜಲಂಧರ್‌ನಲ್ಲಿ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) 65ನೇ ಬೆಟಾಲಿಯನ್‌ನ ಶಸ್ತ್ರಾಸ್ತ್ರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಕೊಡಗಿನ ಯೋಧರೊಬ್ಬರು ಆಕಸ್ಮಿಕವಾಗಿ ಎ.ಕೆ.-47ನಿಂದ ಸಿಡಿದ ಗುಂಡೇಟಿಗೆ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.

ಕಾಟಕೇರಿಯ ಮಜ್ಜೇಗೌಡನ ಪೂವಯ್ಯ ಹಾಗೂ ವೆಂಕಮ್ಮ ಎಂಬುವರ ಪುತ್ರ ಎಂ.ಪಿ. ಪದ್ಮನಾಭ (38)  ಸಾವಿಗೀಡಾಗಿರುವ ನತದೃಷ್ಟ ಯೋಧ. ಬುಧವಾರ ಬೆಳಿಗ್ಗೆ 7.30ಕ್ಕೆ ಈ ಘಟನೆ  ಸಂಭವಿಸಿದ್ದು, ಬೆಳಿಗ್ಗೆ 9 ಗಂಟೆ ವೇಳೆಗೆ ಕುಟುಂಬ ಸದಸ್ಯರಿಗೆ ಮಾಹಿತಿ ತಲುಪಿದೆ.  18 ವರ್ಷದಿಂದ ಬಿಎಸ್‌ಎಫ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪದ್ಮನಾಭ, ಪ್ರಸ್ತುತ ಜಲಂಧರ್‌ನ ಶಸ್ತ್ರಾಸ್ತ್ರ ವಿಭಾಗದಲ್ಲಿ ಮೆಕ್ಯಾನಿಕ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಬೆಳಿಗ್ಗೆ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಆಕಸ್ಮಿಕವಾಗಿ ಎ.ಕೆ-47ನಿಂದ ಸಿಡಿದ ಗುಂಡಿಗೆ ಬಲಿಯಾಗಿದ್ದಾರೆ. ಕೆಲವು ವರ್ಷಗಳಿಂದ ಪತ್ನಿ ಸುಜಾತ ಹಾಗೂ ಪುತ್ರ ಪ್ರೀತಂನೊಂದಿಗೆ ಜಲಂಧರ್‌ನಲ್ಲಿಯೇ ನೆಲೆಸಿದ್ದರು. ಇನ್ನು ಎರಡು ವರ್ಷಗಳಲ್ಲಿ ಸ್ವಯಂ ನಿವೃತ್ತಿ ಪಡೆಯುವ ಚಿಂತನೆಯಲ್ಲಿದ್ದರು.

ಕೆಲವು ತಿಂಗಳ ಹಿಂದೆಯಷ್ಟೇ ಕೊಡಗಿಗೆ ಬಂದಿದ್ದ ಪದ್ಮನಾಭ, ಮಗನ ಹೆಸರಿನಲ್ಲಿ ಕಾಟಕೇರಿಯಲ್ಲಿ ಪುಟ್ಟ ಮನೆಯೊಂದನ್ನು ನಿರ್ಮಿಸಿದ್ದರು. ಜಲಂಧರ್‌ನ ಕೇಂದ್ರೀಯ ವಿದ್ಯಾಲಯದಲ್ಲಿ ಓದುತ್ತಿರುವ ಮಗ ಪ್ರೀತಂ (7)ಗೆ ಏಪ್ರಿಲ್-ಮೇ ತಿಂಗಳಲ್ಲಿ ಬೇಸಿಗೆ ರಜೆ ಸಿಗುತ್ತಿದ್ದ ಹಿನ್ನೆಲೆಯಲ್ಲಿ ಆಗ ಹೊಸ ಮನೆಯ ಗೃಹ ಪ್ರವೇಶ ಮಾಡಲು ಕೂಡ ಪದ್ಮನಾಭ ಉದ್ದೇಶಿಸಿದ್ದರು.
ಮಗ ಸಾವಿನ ಸುದ್ದಿ ತಿಳಿದ ನಂತರ ತಂದೆ ಪೂವಯ್ಯ ಹಾಗೂ ತಾಯಿ ವೆಂಕಮ್ಮ ದುಃಖದ ಮಡುವಿನಲ್ಲಿ ಮುಳುಗಿದ್ದರು. ಪುಟ್ಟ ಊರು ಕಾಟಕೇರಿಯಲ್ಲಿ ಸ್ಮನಾಶ ಮೌನ ಆವರಿಸಿತ್ತು. ನೆರೆ-ಹೊರೆಯವರು, ಬಂಧು-ಬಳಗ ವೃದ್ಧ ಪೋಷಕರನ್ನು ಸಂತೈಸಿದರು.

ಮೃತ ಯೋಧ ಪದ್ಮನಾಭ ಅವರ ಪತ್ನಿ ಸುಜಾತ ತವರು ಮನೆ ಮಡಿಕೇರಿಯ ಅಶ್ವತ್ಥಕಟ್ಟೆ ಬಳಿಯ ದಿವಂಗತ ಚೀಯಣ್ಣ ಹಾಗೂ ಅವ್ವಣ್ಣಿ ಮನೆಯಲ್ಲೂ ಮೌನ ಮಡುಗಟ್ಟಿತ್ತು. ಅಳಿಯನ ಅಕಾಲಿಕ ಸಾವಿನ  ಸುದ್ದಿ ಕೇಳಿ ಅವ್ವಣ್ಣಿ ದುಃಖತಪ್ತರಾಗಿದ್ದರು. ಸುಜಾತ ಸಹೋದರ ಸುಜಯ್ ಕೂಡ ಕಣ್ಣೀರಿಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT