ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಟರ್ ವಿದಾಯ ಸಚಿನ್ ....?

Last Updated 2 ಡಿಸೆಂಬರ್ 2012, 20:54 IST
ಅಕ್ಷರ ಗಾತ್ರ

ಸಚಿನ್ ತೆಂಡೂಲ್ಕರ್ ನಿವೃತ್ತಿಯ ಬಗ್ಗೆ ಮಾತನಾಡುತ್ತಿರುವವರಿಗೆ ಹೊಸ ಅಸ್ತ್ರ ಲಭಿಸಿದೆ. ಅದು ರಿಕಿ ಪಾಂಟಿಂಗ್ ವಿದಾಯ. ಆದರೆ ಪಾಂಟಿಂಗ್   ವಿದಾಯ ಹೇಳಿದ್ದಾರೆ ಎಂಬ ಕಾರಣ ಸಚಿನ್ ಮೇಲೆ ಒತ್ತಡ ಹೇರುವುದು ಎಷ್ಟರಮಟ್ಟಿಗೆ ಸರಿ?

ಸಚಿನ್ ತೆಂಡೂಲ್ಕರ್ ವಿದಾಯ ಹೇಳಬೇಕೇ ಬೇಡವೇ ಎಂಬ ಚರ್ಚೆ ದಿನಕಳೆದಂತೆ ಹೊಸ ಆಯಾಮ ಪಡೆದುಕೊಳ್ಳುತ್ತಿದೆ. ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಆಟಗಾರನ ಬ್ಯಾಟ್ ಕಳೆದ ಕೆಲ ಸಮಯಗಳಿಂದ ರನ್ ಬರ ಎದುರಿಸುತ್ತಿದೆ. ಸಚಿನ್ ತಮ್ಮ 23 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಇಂತಹ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿರುವುದು ಇದೇ ಮೊದಲು.

ಇತ್ತೀಚಿನ 28 ಇನಿಂಗ್ಸ್‌ಗಳಲ್ಲಿ ಅವರಿಗೆ ಒಂದೂ ಶತಕ ಗಳಿಸಲು ಆಗಿಲ್ಲ ಎಂಬುದು ನಿಜಕ್ಕೂ ಕಳವಳ ಉಂಟುಮಾಡಿದೆ. ತಮ್ಮ ಕೊನೆಯ 10 ಇನಿಂಗ್ಸ್‌ಗಳಲ್ಲಿ ಸಚಿನ್ ಪೇರಿಸಿರುವುದು 153 ರನ್ (15.30 ಸರಾಸರಿ) ಮಾತ್ರ. ಸಚಿನ್ 2005 ರಿಂದ 2007ರ ಅವಧಿಯಲ್ಲಿ ಇದೇ ರೀತಿ ರನ್ ಬರ ಎದುರಿಸಿದ್ದರು. `ಟೆನಿಸ್ ಎಲ್ಬೋ' ಸಮಸ್ಯೆ ಕೂಡಾ ಅಂದು ಅವರಿಗೆ ಎದುರಾಗಿತ್ತು.

ಆ ಬಳಿಕ ಅವರು ಕಳಪೆ ಫಾರ್ಮ್‌ನಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಸಚಿನ್ ಅಭಿಮಾನಿಗಳಿಗೆ ಒಂದು ಪ್ರಶ್ನೆ ಕಾಡುತ್ತಿದೆ. ಈಗಿನ ಕಳಪೆ ಫಾರ್ಮ್‌ನಿಂದ ಹೊರಬಂದು ಪುಟಿದೆದ್ದು ನಿಲ್ಲುವರೇ ಅಥವಾ ತಮ್ಮ ಕ್ರಿಕೆಟ್ ಜೀವನಕ್ಕೆ ತೆರೆ ಎಳೆಯುವರೇ?

ಸಚಿನ್ ವೃತ್ತಿಜೀವನ ಕೊನೆಯ ಹಂತ ತಲುಪಿದೆ ಎಂಬುದರಲ್ಲಿ ಅನುಮಾನ ಇಲ್ಲ. ಆದರೆ ಒಬ್ಬ ಆಟಗಾರನ ವಿದಾಯದ ಬಗ್ಗೆ ಇಷ್ಟೊಂದು ಚರ್ಚೆ ನಡೆದಿರುವ ಬೇರೆ ಉದಾಹರಣೆ ಕ್ರಿಕೆಟ್ ಇತಿಹಾಸದಲ್ಲಿ ಕಂಡುಬರುವುದಿಲ್ಲ. ಇಂಗ್ಲೆಂಡ್ ವಿರುದ್ಧದ ಮೊದಲ ಎರಡೂ ಟೆಸ್ಟ್ ಪಂದ್ಯಗಳಲ್ಲಿ ವಿಫಲರಾಗಿರುವ ಸಚಿನ್ ಈಗ ಅತಿಯಾದ ಒತ್ತಡದಲ್ಲಿದ್ದಾರೆ. ಟೀಕಾಕಾರರಿಗೆ ಇದು ಒಳ್ಳೆಯ ಅವಕಾಶ ಎನಿಸಿದೆ.

ಪಾಂಟಿಂಗ್ ವಿದಾಯ ಹೇಳಿದರೆ, ಸಚಿನ್ ಹೇಳಬೇಕೇ?:
ಆಸ್ಟ್ರೇಲಿಯಾದ ವಿಶ್ವವಿಖ್ಯಾತ     ಬ್ಯಾಟ್ಸ್‌ಮನ್ ರಿಕಿ ಪಾಂಟಿಂಗ್ ಕಳೆದ ವಾರ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪ್ರಕಟಿಸಿದರು. ಈ ಬೆಳವಣಿಗೆ ಕೂಡಾ ಸಚಿನ್ ನಿವೃತ್ತಿಯಾಗಲಿ ಎಂಬ ಕೂಗಿಗೆ ಹೆಚ್ಚಿನ ಬಲ ನೀಡಿದೆ. ಆದರೆ ಪಾಂಟಿಂಗ್ ಕೈಗೊಂಡ ನಿರ್ಧಾರವನ್ನು ಸಚಿನ್ ಮೇಲೆ ಹೇರುವುದು ಸರಿಯಲ್ಲ.

ಇವರಿಬ್ಬರೂ ಭಿನ್ನವಾಗಿ ನಿಲ್ಲುವರು. ಪಾಂಟಿಂಗ್ ಮತ್ತು ಸಚಿನ್ ವಿಭಿನ್ನ ರೀತಿಯ ಸವಾಲುಗಳನ್ನು ಮೆಟ್ಟಿನಿಂತು ಕ್ರಿಕೆಟ್ ಜಗತ್ತಿನ ಉತ್ತುಂಗಕ್ಕೇರಿದವರು. ಗಳಿಸಿದ ರನ್ ಹಾಗೂ ಆಡಿದ ಪಂದ್ಯಗಳನ್ನು ನೋಡಿದಾಗ ಸಚಿನ್ ಆಸ್ಟ್ರೇಲಿಯಾದ ಆಟಗಾರನಿಗಿಂತ ಸಾಕಷ್ಟು ಎತ್ತರದಲ್ಲಿ ನಿಲ್ಲುವರು. ಆದರೆ ಕೆಲವೊಂದು ವಿಷಯಗಳಲ್ಲಿ ಪಾಂಟಿಂಗ್ ಅವರೇ ಮುಂದಿದ್ದಾರೆ. ಆದ್ದರಿಂದ ಇವರಿಬ್ಬರ ನಡುವೆ ಹೋಲಿಕೆ ನಡೆಸಿ, ಒಂದು ನಿರ್ಧಾರಕ್ಕೆ ಬರುವುದು ಕಷ್ಟ.

ನಾಯಕತ್ವದ ವಿಚಾರದಲ್ಲಿ ಪಾಂಟಿಂಗ್ ಭಾರತದ ಆಟಗಾರನಿಗಿಂತ ಸಾಕಷ್ಟು ಮುಂದಿದ್ದಾರೆ. ಒಬ್ಬ ಯಶಸ್ವಿ ನಾಯಕನಾಗಲು ಸಚಿನ್‌ಗೆ ಆಗಲಿಲ್ಲ. ಆದರೆ ಪಾಂಟಿಂಗ್ ಆಸ್ಟ್ರೇಲಿಯಾ ಮಾತ್ರವಲ್ಲ ಕ್ರಿಕೆಟ್ ಜಗತ್ತು ಕಂಡಂತಹ ಶ್ರೇಷ್ಠ ನಾಯಕರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.

ಅದೇ ರೀತಿ ಪಾಂಟಿಂಗ್ ಅವರಷ್ಟು ಟೆಸ್ಟ್‌ಗಳಲ್ಲಿ ಗೆಲುವಿನ ಸಿಹಿ ಅನುಭವಿಸುವ ಅದೃಷ್ಟವೂ ಸಚಿನ್‌ಗೆ ದೊರೆಯಲಿಲ್ಲ. `ಪಂಟರ್' ಇದುವರೆಗೆ ಆಸೀಸ್ ತಂಡದ 108 ಟೆಸ್ಟ್ ಗೆಲುವುಗಳಲ್ಲಿ ಭಾಗಿಯಾಗಿದ್ದಾರೆ. ಆದರೆ ಅವರಿಗಿಂತ 25 ರಷ್ಟು ಅಧಿಕ ಪಂದ್ಯಗಳಲ್ಲಿ ಕಾಣಿಸಿಕೊಂಡರೂ ಸಚಿನ್ ಕೇವಲ 66 ಪಂದ್ಯಗಳಲ್ಲಿ ಮಾತ್ರ ಗೆಲುವಿನ ಸಂತಸ ಅನುಭವಿಸಿದ್ದಾರೆ. ಆಸ್ಟ್ರೇಲಿಯಾ ತಂಡ ವಿಶ್ವ ಕ್ರಿಕೆಟ್‌ನಲ್ಲಿ ತನ್ನ ಆಧಿಪತ್ಯ ಸ್ಥಾಪಿಸಿದ್ದ ಅವಧಿಯಲ್ಲೇ ಆಡುವ ಅವಕಾಶ ಲಭಿಸಿದ್ದು ಪಾಂಟಿಂಗ್ ಅದೃಷ್ಟ ಎನ್ನಬೇಕು. ಇಲ್ಲದಿದ್ದರೆ ಅವರಿಂದ ಇಂತಹ ಸಾಧನೆ ಮೂಡಿಬರುತ್ತಿರಲಿಲ್ಲ.

1995 ರಲ್ಲಿ ಪಾಂಟಿಂಗ್ ಚೊಚ್ಚಲ ಟೆಸ್ಟ್‌ಆಡಿದಾಗ ಸಚಿನ್ ಆಗಲೇ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರು ವರ್ಷಗಳನ್ನು ಕಳೆದಿದ್ದರು. ಪಾಂಟಿಂಗ್ ಪದಾರ್ಪಣೆ ಮಾಡಿದ ಬಳಿಕದ ದಿನದಿಂದ ಇವರಿಬ್ಬರನ್ನು ಹೋಲಿಸಿ ನೋಡಿದಾಗ ಸಮಬಲ ಕಂಡುಬರುತ್ತದೆ.

1995ರ ಡಿಸೆಂಬರ್ 8ರ ಬಳಿಕ (ಪಾಂಟಿಂಗ್ ಪದಾರ್ಪಣೆ ಮಾಡಿದ ದಿನ) ಸಚಿನ್ 154 ಟೆಸ್ಟ್‌ಗಳನ್ನು ಆಡಿದ್ದು 13079 ರನ್ ಕಲೆಹಾಕಿದ್ದಾರೆ. ಆಸೀಸ್ ಆಟಗಾರ 167 ಟೆಸ್ಟ್‌ಗಳಿಂದ 13366 ರನ್ ಪೇರಿಸಿದ್ದಾರೆ. ಇವರಿಬ್ಬರೂ ಆಧುನಿಕ ಕ್ರಿಕೆಟ್‌ನ ಘಟಾನುಘಟಿಗಳು ಎಂಬುದು ಈ ಅಂಕಿಅಂಶದಿಂದ ತಿಳಿದುಬರುತ್ತದೆ.

ಪಾಂಟಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್‌ನ ಒತ್ತಡವನ್ನು 17 ವರ್ಷಗಳ ಕಾಲ ತಾಳಿಕೊಂಡು ತೆರೆಮರೆಗೆ ಸರಿದಿದ್ದಾರೆ. ಆದರೆ ಸಚಿನ್ 23 ವರ್ಷಗಳನ್ನು ಪೂರೈಸಿದ್ದಾರೆ. ಇದು ಭಾರತದ ಆಟಗಾರನ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಏನೆಂಬುದನ್ನು ತಿಳಿಸುತ್ತದೆ.

ಆಸೀಸ್ ಆಟಗಾರ ಒಂದು ವಿಚಾರದಲ್ಲಿ ಸಚಿನ್‌ಗಿಂತ ಭಿನ್ನವಾಗಿ ನಿಲ್ಲುವರು. ಬ್ಯಾಟ್‌ನಿಂದ ರನ್ ಬರದೇ ಇದ್ದಾಗ ಪಾಂಟಿಂಗ್ ತಮ್ಮ ದೌರ್ಬಲ್ಯವನ್ನು ಒಪ್ಪಿಕೊಳ್ಳುತ್ತಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಎರಡು ಟೆಸ್ಟ್‌ಗಳಲ್ಲಿ ವಿಫಲರಾದ ಬಳಿಕ ಪಾಂಟಿಂಗ್ `ನನ್ನ ಕಳಪೆ ಪ್ರದರ್ಶನ ಇದೇ ರೀತಿ ಮುಂದುವರಿದರೆ, ಮುಂಬರುವ ಆ್ಯಷಸ್ ಸರಣಿಗೆ ತಂಡದಲ್ಲಿ ಸ್ಥಾನ ಲಭಿಸುವುದು ಕಷ್ಟ' ಎಂದಿದ್ದರು.

ಅದೇ ರೀತಿ ನಿವೃತ್ತಿ ಪ್ರಕಟಿಸಿದ ಬಳಿಕ ಅದರ ಹಿಂದಿನ ಕಾರಣವನ್ನು ಈ ರೀತಿ ವಿವರಿಸಿದ್ದರು. `ಆಸ್ಟ್ರೇಲಿಯಾ ತಂಡದ ಆಟಗಾರ ಮತ್ತು ಬ್ಯಾಟ್ಸ್‌ಮನ್‌ನಲ್ಲಿರಬೇಕಾದಷ್ಟು ಸಾಮರ್ಥ್ಯ ತೋರಲು ನನಗೆ ಆಗುತ್ತಿಲ್ಲ. ಕಳೆದ 12-18 ತಿಂಗಳುಗಳಿಂದ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ವಿಫಲನಾಗಿದ್ದೇನೆ. ಆದ್ದರಿಂದ ಇದು ನಿವೃತ್ತಿಗೆ ಸೂಕ್ತ ಸಮಯ' ಎಂದಿದ್ದರು.

ಸಚಿನ್ ಕೂಡಾ ಕಳೆದ 12 ತಿಂಗಳುಗಳಿಂದ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಗೊಂಡಿಲ್ಲ. ಆದರೆ ಫಾರ್ಮ್ ಕಳೆದುಕೊಂಡ ಸಂದರ್ಭದಲ್ಲಿ ಸಚಿನ್ ಎಂದೂ ಮಾತನಾಡಿಲ್ಲ. `ನನಗೆ ಎಂದಿನ ಪ್ರದರ್ಶನ ನೀಡಲು ಆಗುತ್ತಿಲ್ಲ' ಎಂಬುದನ್ನು ಬಹಿರಂಗವಾಗಿ ಹೇಳಿಲ್ಲ. ಅವರು ಮಾತನಾಡದೇ ಇರುವುದು ಕೂಡಾ ನಿವೃತ್ತಿಯ ವಿಚಾರ ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.

ಸಚಿನ್, ಬ್ರಯನ್ ಲಾರಾ ಮತ್ತು ರಿಕಿ ಪಾಂಟಿಂಗ್ ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು. ಲಾರಾ ಕೆಲ ವರ್ಷಗಳ ಹಿಂದೆಯೇ ವಿದಾಯ ಹೇಳಿದ್ದರು. ಇದೀಗ ಪಾಂಟಿಂಗ್ ಕೂಡಾ ಪ್ಯಾಡ್ ಕಳಚಿದ್ದಾರೆ. ಇನ್ನು ಉಳಿದುಕೊಂಡಿರುವುದು ಸಚಿನ್ ಮಾತ್ರ. ಟೀಕಾಕಾರರ ಬಾಯಿಮುಚ್ಚಿಸಿ ಕ್ರಿಕೆಟ್‌ನಿಂದ ವಿರಮಿಸುವ ಅವಕಾಶಕ್ಕಾಗಿ ಸಚಿನ್ ಕಾಯುತ್ತಿದ್ದಾರೆ ಎಂಬುದು ಸ್ಪಷ್ಟ.

ಪಾಂಟಿಂಗ್ ನಿವೃತ್ತಿ ಹೇಳಿದ್ದಾರೆ ಎಂಬ ಏಕೈಕ ಕಾರಣಕ್ಕೆ ಸಚಿನ್ ಕೂಡಾ ವಿದಾಯ ಹೇಳಲಿ ಎಂದು ವಾದಿಸುವುದರಲ್ಲಿ ಅರ್ಥವಿಲ್ಲ. ಆದರೆ ಒಂದಂತೂ ಸತ್ಯ. ಪಾಂಟಿಂಗ್ ನಿವೃತ್ತಿ ನಿರ್ಧಾರ ಸಚಿನ್ ಮನಸ್ಸಿನ ಮೇಲೆ ತನ್ನದೇ ಆದ ಪರಿಣಾಮ ಬೀರಿದೆ. ಒತ್ತಡವನ್ನು ಇನ್ನಷ್ಟು ಹೆಚ್ಚಿಸಿದೆ.

ಇಂಗ್ಲೆಂಡ್ ವಿರುದ್ಧ ಬುಧವಾರದಿಂದ ಕೋಲ್ಕತ್ತದಲ್ಲಿ ಆರಂಭವಾಗುವ ಮೂರನೇ ಟೆಸ್ಟ್‌ನಲ್ಲಿ ರನ್ ಮಳೆ ಸುರಿಸುವ ಅನಿವಾರ್ಯತೆ ಸಚಿನ್ ಮುಂದಿದೆ. ಇನ್ನೊಂದು ವೈಫಲ್ಯ ಅವರ ಆತ್ಮವಿಶ್ವಾಸಕ್ಕೆ ಧಕ್ಕೆ ಉಂಟುಮಾಡುವುದು ಖಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT