ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂತುಲು ಕೊಡುಗೆ ಅವಿಸ್ಮರಣೀಯ

Last Updated 5 ಆಗಸ್ಟ್ 2011, 19:10 IST
ಅಕ್ಷರ ಗಾತ್ರ

ಬೆಂಗಳೂರು: `ಚಿತ್ರ ನಿರ್ದೇಶಕ ದಿವಂಗತ ಬಿ.ಆರ್.ಪಂತುಲು ಅವರು ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿಯಾಗಿದ್ದರು. ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಅವಿಸ್ಮರಣೀಯ~ ಎಂದು ಹಿರಿಯ ಚಿತ್ರನಟಿ ಡಾ.ಬಿ.ಸರೋಜಾದೇವಿ ಹೇಳಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಹಯೋಗದೊಂದಿಗೆ ಸರಿಗಮ ಇಂಡಿಯಾ (ಆಡಿಯೊ) ಕಂಪೆನಿಯು ಗುರುವಾರ ಬಾದಾಮಿ ಹೌಸ್‌ನಲ್ಲಿ ಚಿತ್ರ ನಿರ್ದೇಶಕ ಬಿ.ಆರ್.ಪಂತಲು ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ವಿಶೇಷ ಸಿ.ಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಪಂತುಲು ನಿರ್ದೇಶನದಲ್ಲಿ ಕೆಲಸ ಮಾಡುವುದು ಎಂದರೆ ನಮಗೆ ತವರುಮನೆ ಇದ್ದ ಹಾಗಿತ್ತು. ಚಿತ್ರಕರಣದ ವೇಳೆ ಎಷ್ಟು ತಮಾಷೆ ಮಾಡುತ್ತಿದ್ದರೋ ಕೆಲಸದಲ್ಲಿ ಅಷ್ಟೇ ಶಿಸ್ತಿನಿಂದ ವರ್ತಿಸುತ್ತಿದ್ದರು. ಚಿತ್ರೀಕರಣ ಮುಗಿಯುವ ತನಕ ಕಲಾವಿದರನ್ನು ಅತ್ತಿತ್ತ ಕದಲಲು ಬಿಡುತ್ತಿರಲಿಲ್ಲ~ ಎಂದರು.

`ಚಿತ್ರರಂಗ ವೃತ್ತಿಯಲ್ಲಿ ನನಗೆ ಮರೆಯಲಾಗದ ಚಿತ್ರವೆಂದರೆ `ಕಿತ್ತೂರು ಚೆನ್ನಮ್ಮ~. ಚಿತ್ರದ ಯುದ್ಧ ಸನ್ನಿವೇಶದ ಚಿತ್ರೀಕರಣ ಕಂಚಿಯಲ್ಲಿ ನಡೆಯುತ್ತಿತ್ತು. ಅದೇ ವೇಳೆ ನಾನು ತಮಿಳಿನಲ್ಲಿ ಅಭಿನಯಿಸಿದ್ದ `ಕೈಸಾರಿ~ ಚಿತ್ರ ಶತದಿನೋತ್ಸವ ಕಾರ್ಯಕ್ರಮಕ್ಕೆ ಚೆನ್ನೈಗೆ ತೆರಳಬೇಕಿತ್ತು. ಹಾಗಾಗಿ ಚಿತ್ರೀಕರಣಕ್ಕೆ ಬರಲು ಸಾಧ್ಯವಿಲ್ಲ ಎಂದು ಪಂತುಲು ಅವರಿಗೆ ತಿಳಿಸಿದೆ. ಚಿತ್ರೀಕರಣಕ್ಕೆ ಬನ್ನಿ ಆದಷ್ಟು ಬೇಗ ನಿಮ್ಮನ್ನು ಕಳುಹಿಸಿಕೊಡುತ್ತೇನೆ ಎಂಬ ಉತ್ತರ ಅವರಿಂದ ಬಂತು~ ಎಂದು ಹೇಳಿದರು.

`ಅವರ ಮಾತಿಗೆ ಮೀರದೆ ಚಿತ್ರೀಕರಣಕ್ಕೆ ಬಂದೆ. ಇಡೀ ಯುದ್ಧದ ಚಿತ್ರೀಕರಣವನ್ನು ಮಧ್ಯಾಹ್ನದ ವೇಳೆಗೆ ಮುಕ್ತಾಯ ಮಾಡಿದರು. ಅದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ. ಹಿಡಿದ ಕೆಲಸವನ್ನು ಜಾಣ್ಮೆಯಿಂದ ಹಾಗೂ ಶಿಸ್ತಿನಿಂದ ಮುಗಿಸುವ ಸ್ವಭಾವ ಅವರಲ್ಲಿತ್ತು. ಚಿತ್ರೀಕರಣ ಮುಗಿಸಿ ಚೆನ್ನೈನ ಕಾರ್ಯಕ್ರಮದಲ್ಲಿ ಭಾಗವಹಿಸಿದೆ~ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಹಿರಿಯ ನಟಿ ಡಾ.ಭಾರತಿ ವಿಷ್ಣುವರ್ಧನ್ ಮಾತನಾಡಿ, `ಚಿತ್ರರಂಗದಲ್ಲಿ ನನಗೆ ನೆಲೆ ಕಲ್ಪಿಸಿಕೊಟ್ಟಿದ್ದು ಪಂತುಲು ಅವರು. ಅವರ ನಿರ್ದೇಶನದ `ದುಡ್ಡೇ ದೊಡ್ಡಪ್ಪ~ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದೆ. `ಎಮ್ಮೆ ತಮ್ಮಣ್ಣ~ ಚಿತ್ರದ ಹಾಡಿನ ಚಿತ್ರೀಕರಣದ ಸಂದರ್ಭ. ಬೆಳಿಗ್ಗೆ 7 ಗಂಟೆಗೆ ಚಿತ್ರೀಕರಣಕ್ಕೆ ಸಮಯ ನಿಗದಿಯಾಗಿತ್ತು.

ಬೆಳಿಗ್ಗೆ  6.45ಕ್ಕೆ ನಾನು ಚಿತ್ರೀಕರಣಕ್ಕೆ ಸಿದ್ದವಾಗಿದ್ದೆ. ಐದು ನಿಮಿಷ ಬೇಗ ಆಗಮಿಸಿದ ಪಂತುಲು ಅವರು ನನ್ನ ಮೇಕಪ್ ಗಮನಿಸಿ ನನ್ನನ್ನೇ ನಾಯಕಿಯಾಗಿ ಪ್ರಧಾನವಾಗಿಟ್ಟುಕೊಂಡು ಐತಿಹಾಸಿಕ ಚಿತ್ರ ನಿರ್ಮಾಣ ಮಾಡುವುದಾಗಿ~ ಹೇಳಿದರು ಎಂದರು.

ನಟ ಪುನೀತ್ ರಾಜ್‌ಕುಮಾರ್ ಮಾತನಾಡಿ, `ಪಂತುಲು ಅವರ `ಸ್ಕೂಲ್ ಮಾಸ್ಟರ್~ ಚಿತ್ರ ನನಗೆ ಮರೆಯಲಾಗದ ಚಿತ್ರ. ಇಂದಿನ ಯಾವುದೇ ಚಿತ್ರ ಇದಕ್ಕೆ ಸಾಟಿಯಿಲ್ಲ~ ಎಂದರು.

ದಿವಂಗತ ಬಿ.ಆರ್.ಪಂತುಲು ಅವರ ನಿರ್ಮಾಣ, ನಿರ್ದೇಶನದ 24 ಚಿತ್ರಗಳ 57 ಗೀತೆಗಳುಳ್ಳ ಮೂರು ವಿಶೇಷ ಸಿ.ಡಿ ಗಳನ್ನು ಬಿಡುಗಡೆ ಮಾಡಲಾಯಿತು. ಪಂತುಲು ಅವರ ಪುತ್ರಿ ಬಿ.ಆರ್.ವಿಜಯಲಕ್ಷ್ಮಿ, ಸರಿಗಮ ಇಂಡಿಯಾ ಕಂಪೆನಿಯ ಸಂಯೋಜಕ ಕೆ.ಪರಮೇಶ್ವರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT