ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂದ್ಯ ಟೈ; ಸರಣಿ ಗೆದ್ದ ಇಂಗ್ಲೆಂಡ್

Last Updated 11 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಲಂಡನ್: ಟೆಸ್ಟ್ ಸರಣಿಯ ಬಳಿಕ ಏಕದಿನ ಸರಣಿಯಲ್ಲೂ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಮುಖಭಂಗ ಎದುರಾಗಿದೆ. ನಾಲ್ಕನೇ ಏಕದಿನ ಪಂದ್ಯ ಡಕ್ವರ್ಥ್ ಲೂಯಿಸ್ ನಿಯಮದಂತೆ `ಟೈ~ನಲ್ಲಿ ಅಂತ್ಯಗೊಂಡದ್ದು ಇಂಗ್ಲೆಂಡ್‌ಗೆ ವರವಾಗಿ ಪರಿಣಮಿಸಿದರೆ, ಮಹೇಂದ್ರ ಸಿಂಗ್ ದೋನಿ ಬಳಗದ ನಿರಾಸೆಗೆ ಕಾರಣವಾಯಿತು.

ಲಾರ್ಡ್ಸ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 280 ರನ್ ಪೇರಿಸಿತು. ಸುರೇಶ್ ರೈನಾ (84) ಮತ್ತು ನಾಯಕ ಮಹೇಂದ್ರ ಸಿಂಗ್ ದೋನಿ (ಔಟಾಗದೆ 78) ಅವರ ಬ್ಯಾಟಿಂಗ್ ಭಾರತದ ಉತ್ತಮ ಮೊತ್ತಕ್ಕೆ ಕಾರಣ.

ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ 48.5 ಓವರ್‌ಗಳಲ್ಲಿ 8 ವಿಕೆಟ್‌ಗೆ 270 ರನ್ ಗಳಿಸಿದ್ದ ವೇಳೆ ಮಳೆ ಸುರಿಯಿತು. ಈ ಹಂತದಲ್ಲಿ ಗೆಲುವಿಗೆ 7 ಎಸೆತಗಳಲ್ಲಿ 11 ರನ್‌ಗಳ ಅವಶ್ಯಕತೆಯಿತ್ತು. ಆ ಬಳಿಕ ಪಂದ್ಯ ಮುಂದುವರಿಯದ ಕಾರಣ ಡಕ್ವರ್ಥ್ ಲೂಯಿಸ್ ನಿಯಮ ಅಳವಡಿಸಲಾಯಿತು. ಇದರಿಂದ ಪಂದ್ಯ `ಟೈ~ನಲ್ಲಿ ಅಂತ್ಯಕಂಡಿತು.

ಈ ಮೂಲಕ ಅಲಸ್ಟರ್ ಕುಕ್ ನೇತೃತ್ವದ ತಂಡ ಐದು ಪಂದ್ಯಗಳ ಏಕದಿನ ಸರಣಿಯನ್ನು 2-0 ರಲ್ಲಿ ಗೆದ್ದುಕೊಂಡಿತು. ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದ್ದರೆ, ಎರಡು ಮತ್ತು ಮೂರನೇ ಪಂದ್ಯದಲ್ಲಿ ಇಂಗ್ಲೆಡ್ ಗೆಲುವು ಪಡೆದಿತ್ತು.

ರವಿ ಬೋಪಾರ (96, 111 ಎಸೆತ, 6 ಬೌಂ) ಮತ್ತು ಇಯಾನ್ ಬೆಲ್ (54) ಇಂಗ್ಲೆಂಡ್ ತಂಡದ ಗೆಲುವಿಗಾಗಿ ಹೋರಾಟ ನಡೆಸಿದರು. 61 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡ ಆತಿಥೇಯ ತಂಡಕ್ಕೆ ಇವರಿಬ್ಬರು ಆಸರೆಯಾದರು. ಇಂಗ್ಲೆಂಡ್ ಇನಿಂಗ್ಸ್ ವೇಳೆ ಎರಡು ಮೂರು ಸಲ ಮಳೆ ಅಡ್ಡಿಪಡಿಸಿತು. ಕೊನೆಗೂ ಪಂದ್ಯದಲ್ಲಿ ಸ್ಪಷ್ಟ ಫಲಿತಾಂಶ ಹೊರಹೊಮ್ಮಲು ಮಳೆರಾಯ ಅವಕಾಶ ನೀಡಲಿಲ್ಲ. ಭಾರತದ ಪರ ಆರ್‌ಪಿ ಸಿಂಗ್ (59ಕ್ಕೆ 3) ಯಶಸ್ವಿ ಬೌಲರ್ ಎನಿಸಿದರು.

ದೋನಿ, ರೈನಾ ಮಿಂಚು: ಮೊದಲು ಬ್ಯಾಟ್ ಮಾಡಿದ ಭಾರತ ಉತ್ತಮ ಮೊತ್ತ ಪೇರಿಸಲು ಕಾರಣರಾದದ್ದು ದೋನಿ ಹಾಗೂ ರೈನಾ. ಇವರು ಐದನೇ ವಿಕೆಟ್‌ಗೆ 23.5 ಓವರ್‌ಗಳಲ್ಲಿ 169 ರನ್ ಸೇರಿಸಿದರು. 75 ಎಸೆತಗಳನ್ನು ಎದುರಿಸಿದ ರೈನಾ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸಿದರು.

ಕಳೆದ ಪಂದ್ಯದಲ್ಲೂ ಅರ್ಧಶತಕ ಗಳಿಸಿದ್ದ ದೋನಿ ಮತ್ತೆ ತಂಡದ ನೆರವಿಗೆ ನಿಂತರು. 71 ಎಸೆತಗಳನ್ನು ಎದುರಿಸಿದ ನಾಯಕ ಆರು ಬೌಂಡರಿ ಹಾಗೂ ಮೂರು ಸಿಕ್ಸರ್ ಗಳಿಸಿದರು. ಆರಂಭದಲ್ಲಿ ನಿಧಾನವಾಗಿ ಆಡಿದ ಇವರು ಪರಿಸ್ಥಿತಿಗೆ ಹೊಂದಿಕೊಂಡ ಬಳಿಕ ಇಂಗ್ಲೆಂಡ್ ಬೌಲರ್‌ಗಳ ಮೇಲೆ ದಂಡೆತ್ತಿ ಹೋದರು.

ಕೊನೆಯ ಹತ್ತು ಓವರ್‌ಗಳಲ್ಲಿ 109 ರನ್‌ಗಳು ಬಂದವು. ಬ್ಯಾಟಿಂಗ್ ಪವರ್ ಪ್ಲೇ ಅವಧಿಯ ಐದು ಓವರ್‌ಗಳಲ್ಲಿ ಭಾರತ 58 ರನ್‌ಗಳನ್ನು ಕಲೆಹಾಕಿತು. ಈ ಹಂತದಲ್ಲಿ ದೋನಿ ಮತ್ತು ರೈನಾ ಅಬ್ಬರಿಸಿ ನಿಂತರು. ಇದಕ್ಕೂ ಮೊದಲು ಪಾರ್ಥಿವ್ ಪಟೇಲ್ (27) ಮತ್ತು ಆಜಿಂಕ್ಯ ರಹಾನೆ (38) ಮೊದಲ ವಿಕೆಟ್‌ಗೆ 65 ರನ್‌ಗಳನ್ನು ಸೇರಿಸಿ ಉತ್ತಮ ಆರಂಭ ನೀಡಿದ್ದರು. ಆದರೆ ಐದು ರನ್‌ಗಳ ಅವಧಿಯಲ್ಲಿ ಇಬ್ಬರೂ ಪೆವಿಲಿಯನ್‌ಗೆ ಮರಳಿದರು.

ಬಳಿಕ ಬಂದ ರಾಹುಲ್ ದ್ರಾವಿಡ್ (19) ಮತ್ತು ವಿರಾಟ್ ಕೊಹ್ಲಿ (16) ಆರಂಭದಲ್ಲಿ ದೊಡ್ಡ ಮೊತ್ತ ಗಳಿಸುವ ವಿಶ್ವಾಸ ಮೂಡಿಸಿದರು. ಆದರೆ ಗ್ರೇಮ್ ಸ್ವಾನ್ ಒಂದೇ ಓವರ್‌ನಲ್ಲಿ ಇಬ್ಬರನ್ನೂ ಔಟ್ ಮಾಡಿದರು. ಇದರಿಂದ ಭಾರತದ ರನ್ ವೇಗಕ್ಕೆ ಕಡಿವಾಣ ಬಿತ್ತು.

26 ನೇ ಓವರ್ ವೇಳೆಗೆ ಭಾರತ ನಾಲ್ಕು ವಿಕೆಟ್ ಕಳೆದುಕೊಂಡು 110 ರನ್ ಗಳಿಸಿ ಪರದಾಟ ನಡೆಸುತ್ತಿತ್ತು. ಈ ಹಂತದಲ್ಲಿ ಜೊತೆಯಾದ ದೋನಿ ಮತ್ತು ರೈನಾ ತಂಡವನ್ನು ಸವಾಲಿನ ಮೊತ್ತದೆಡೆಗೆ ಮುನ್ನಡೆಸಿದರು. ಇಂಗ್ಲೆಂಡ್ ಪರ ಸ್ವಾನ್ ಮತ್ತು ಬ್ರಾಡ್ ತಲಾ ಎರಡು ವಿಕೆಟ್ ಪಡೆದರು.

ಸ್ಕೋರ್ ವಿವರ
ಭಾರತ: 50 ಓವರ್‌ಗಳಲ್ಲಿ 5 ವಿಕೆಟ್‌ಗೆ 280

ಪಾರ್ಥಿವ್ ಪಟೇಲ್ ಸಿ ಬೋಪಾರ ಬಿ ಸ್ಟುವರ್ಟ್ ಬ್ರಾಡ್  27
ಆಜಿಂಕ್ಯ ರಹಾನೆ ಎಲ್‌ಬಿಡಬ್ಲ್ಯು ಬಿ ಸ್ಟುವರ್ಟ್ ಬ್ರಾಡ್  38
ರಾಹುಲ್ ದ್ರಾವಿಡ್ ಸಿ ಮತ್ತು ಬಿ ಗ್ರೇಮ್ ಸ್ವಾನ್  19
ವಿರಾಟ್ ಕೊಹ್ಲಿ ಸಿ ಕೀಸ್‌ವೆಟರ್ ಬಿ ಗ್ರೇಮ್ ಸ್ವಾನ್  16
ಸುರೇಶ್ ರೈನಾ ಸಿ ಸ್ಟೋಕ್ಸ್ ಬಿ ಸ್ಟೀವನ್ ಫಿನ್  84
ಮಹೇಂದ್ರ ಸಿಂಗ್ ದೋನಿ ಔಟಾಗದೆ  78
ರವೀಂದ್ರ ಜಡೇಜ ಔಟಾಗದೆ  00
ಇತರೆ: (ಲೆಗ್‌ಬೈ-5, ವೈಡ್-13)  18
ವಿಕೆಟ್ ಪತನ: 1-65 (ರಹಾನೆ; 13.3), 2-70 (ಪಾರ್ಥಿವ್; 15.2), 3-109 (ಕೊಹ್ಲಿ; 25.2), 4-110 (ದ್ರಾವಿಡ್; 25.5), 5-279 (ರೈನಾ; 49.4)
ಬೌಲಿಂಗ್: ಜೇಮ್ಸ ಆ್ಯಂಡರ್‌ಸನ್ 10-2-57-0, ಸ್ಟೀವನ್ ಫಿನ್ 9.4-0-54-1, ಟಿಮ್ ಬ್ರೆಸ್ನನ್ 10-1-51-0, ಸ್ಟುವರ್ಟ್ ಬ್ರಾಡ್ 9.2-0-52-2, ರವಿ ಬೋಪಾರ 2-0-12-0, ಗ್ರೇಮ್ ಸ್ವಾನ್ 9-1-49-2

ಇಂಗ್ಲೆಂಡ್: 48.5 ಓವರ್‌ಗಳಲ್ಲಿ 8 ವಿಕೆಟ್‌ಗೆ 270
ಅಲಸ್ಟರ್ ಕುಕ್ ಸಿ ಕೊಹ್ಲಿ ಬಿ ಆರ್‌ಪಿ ಸಿಂಗ್  12
ಕ್ರೆಗ್ ಕೀಸ್‌ವೆಟರ್ ಸಿ ಜಡೇಜ ಬಿ ಆರ್‌ಪಿ ಸಿಂಗ್  12
ಜೊನಾಥನ್ ಟ್ರಾಟ್ ಬಿ ಪ್ರವೀಣ್ ಕುಮಾರ್  23
ಇಯಾನ್ ಬೆಲ್ ಸಿ ತಿವಾರಿ (ಸಬ್) ಬಿ ಜಡೇಜ  54
ರವಿ ಬೋಪಾರ ಸಿ ಜಡೇಜ ಬಿ ಮುನಾಫ್ ಪಟೇಲ್  96
ಬೆನ್ ಸ್ಟೋಕ್ಸ್ ಸಿ ಮತ್ತು ಬಿ ಅಶ್ವಿನ್  07
ಟಿಮ್ ಬ್ರೆಸ್ನನ್ ಬಿ ಆರ್‌ಪಿ ಸಿಂಗ್  27
ಗ್ರೇಮ್ ಸ್ವಾನ್ ರನೌಟ್  31
ಸ್ಟೀವನ್ ಫಿನ್ ಔಟಾಗದೆ   00
ಇತರೆ: (ಲೆಗ್‌ಬೈ-5, ವೈಡ್-2, ನೋಬಾಲ್-1)  08
ವಿಕೆಟ್ ಪತನ: 1-21 (ಕೀಸ್‌ವೆಟರ್; 3.6), 2-27 (ಕುಕ್; 5.1), 3-61 (ಟ್ರಾಟ್; 12.1), 4-159 (ಬೆಲ್; 32.1), 5-173 (ಸ್ಟೋಕ್ಸ್; 35.2), 6-220 (ಬ್ರೆಸ್ನನ್; 42.1), 7-270 (ಸ್ವಾನ್; 48.4), 8-270 (ಬೋಪಾರ; 48.5)
ಬೌಲಿಂಗ್: ಪ್ರವೀಣ್ ಕುಮಾರ್ 9-0-35-1, ಆರ್‌ಪಿ ಸಿಂಗ್ 9-0-59-3, ಮುನಾಫ್ ಪಟೇಲ್ 9.5-0-54-1, ಆರ್. ಅಶ್ವಿನ್ 10-0-44-1, ರವೀಂದ್ರ ಜಡೇಜ 9-0-60-1, ಸುರೇಶ್ ರೈನಾ 2-0-13-0

ಫಲಿತಾಂಶ:
ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಪಂದ್ಯ `ಟೈ~; ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್‌ಗೆ 2-0 ರಲ್ಲಿ ಮುನ್ನಡೆ
ಪಂದ್ಯಶ್ರೇಷ್ಠ: ರವಿ ಬೋಪಾರ ಮತ್ತು ಸುರೇಶ್ ರೈನಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT