ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂದ್ಯದ ಬಳಿಕದ ಪಾರ್ಟಿಗೆ ನಿಷೇಧ ಚಿಂತನೆ: ದಾಲ್ಮಿಯ

Last Updated 3 ಜೂನ್ 2013, 19:59 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಭಾರತದ   ಕ್ರಿಕೆಟ್‌ಗೆ ಅಂಟಿಕೊಂಡಿರುವ ಕೊಳೆಯನ್ನು ತೊಳೆಯುವುದು ನಮ್ಮ ಮೊದಲ ಗುರಿ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) `ಹಂಗಾಮಿ ಅಧ್ಯಕ್ಷ' ಜಗಮೋಹನ್ ದಾಲ್ಮಿಯ ನುಡಿದಿದ್ದಾರೆ. ಐಪಿಎಲ್ ಪಂದ್ಯಗಳ ಬಳಿಕ ನಡೆಯುವ ಪಾರ್ಟಿಗಳನ್ನು ನಿಷೇಧಿಸುವ ಮೂಲಕ ಈ ಕೆಲಸ ಮಾಡಬಹುದು ಎಂಬುದು ಅವರ ಅಭಿಪ್ರಾಯ.

ಕ್ರಿಕೆಟ್‌ನ ವಿಶ್ವಾಸಾರ್ಹತೆಯನ್ನು ಕಾಪಾಡಲು ಯಾವುದೇ ತ್ಯಾಗ ನಡೆಸಲು ಸಿದ್ಧ ಎಂದು ಅವರು ಕೋಲ್ಕತ್ತದಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಐಪಿಎಲ್ ಪಂದ್ಯಗಳ ಬಳಿಕ ನಡೆಯುವ ಪಾರ್ಟಿಗಳನ್ನು ನಿಷೇಧಿಸುವ ಬಗ್ಗೆ ಚಿಂತನೆ ನಡೆಸಿದ್ದೀರಾ ಎಂಬ ಪ್ರಶ್ನೆಗೆ, `ಹೌದು. ಅಂತಹ ಸಾಧ್ಯತೆಯೂ ಇದೆ' ಎಂದು ಉತ್ತರಿಸಿದರು.

`ಈಗ ಉಂಟಾಗಿರುವ ಬಿಕ್ಕಟ್ಟಿಗೆ ಶೀಘ್ರವಾಗಿ ಪರಿಹಾರ ಕಂಡುಕೊಳ್ಳಲು ನನ್ನ ಬಳಿ ಯಾವುದೇ ಔಷಧಿ ಇಲ್ಲ. ನಮಗೆ ಯಾವುದೇ ಮ್ಯಾಜಿಕ್ ನಡೆಸಲೂ ಸಾಧ್ಯವಿಲ್ಲ. ನಮ್ಮಿಂದಾಗುವ ಶ್ರೇಷ್ಠ ಕೆಲಸ ಮಾಡುತ್ತೇವೆ' ಎಂದು ತಿಳಿಸಿದರು.

ಸಂಜಯ್ ಜಗದಾಳೆ ಮತ್ತೆ ಬಿಸಿಸಿಐ ಕಾರ್ಯದರ್ಶಿ ಹುದ್ದೆ ಅಲಂಕರಿಸಲು ನಿರಾಕರಿಸಿದ್ದಾರೆ ಎಂದು ದಾಲ್ಮಿಯ ಹೇಳಿದರು. `ರಾಜೀನಾಮೆ ವಾಪಸ್ ಪಡೆಯುವ ಉದ್ದೇಶ ಇಲ್ಲ ಎಂಬುದನ್ನು ಜಗದಾಳೆ ಸ್ಪಷ್ಟಪಡಿಸಿದ್ದಾರೆ. ಅಜಯ್ ಶಿರ್ಕೆ ಅವರಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲ. ಅವರು ಮತ್ತೆ ಖಜಾಂಚಿ ಹುದ್ದೆ ಅಲಂಕರಿಸುವರು ಎಂಬ ವಿಶ್ವಾಸವಿದೆ. ನಾವು ಅವರ ಪ್ರತಿಕ್ರಿಯೆಗಾಗಿ ಇನ್ನೂ 24 ಗಂಟೆಗಳ ಕಾಲ ಕಾಯಲು ಸಿದ್ಧ' ಎಂದು ತಿಳಿಸಿದರು.

ಭಾನುವಾರ ನಡೆದ ಬಿಸಿಸಿಐ ಕಾರ್ಯಕಾರಿ ಸಮಿತಿ ತುರ್ತುಸಭೆಯಲ್ಲಿ ಎಲ್ಲ ಸದಸ್ಯರು ಜಗದಾಳೆ ಮತ್ತು ಶಿರ್ಕೆ ರಾಜೀವಾಮೆ ವಾಪಸ್ ಪಡೆಯಬೇಕೆಂದು ಕೋರಿದ್ದರು. ಮಾತ್ರವಲ್ಲ 24 ಗಂಟೆಗಳ ಒಳಗಾಗಿ ತಮ್ಮ ನಿರ್ಧಾರ ಪ್ರಕಟಿಸುವಂತೆ ಇಬ್ಬರಿಗೂ ತಿಳಿಸಲಾಗಿತ್ತು.

ಇಬ್ಬರೂ ನಿರ್ಧಾರ ಬದಲಿಸದಿದ್ದರೆ ಕಾರ್ಯದರ್ಶಿ ಮತ್ತು ಖಜಾಂಚಿ ಹುದ್ದೆಗೆ ಹೊಸಬರನ್ನು ನೇಮಿಸಲಾಗುವುದು ಎಂದು ದಾಲ್ಮಿಯ ನುಡಿದರು.

ಭಾನುವಾರ ನಡೆದ ಕಾರ್ಯಕಾರಿ ಸಮಿತಿ ಸಭೆಯ `ನ್ಯಾಯಸಮ್ಮತತೆ'ಯನ್ನು ಕೆಲವು ಸದಸ್ಯರು ಪ್ರಶ್ನಿಸಿದ್ದರ ಬಗ್ಗೆ ಗಮನ ಸೆಳೆದಾಗ, `ಅದು ಅವರ ವೈಯಕ್ತಿಕ ಅಭಿಪ್ರಾಯ ಮಾತ್ರ. ನಾನು ಅದನ್ನು ಒಪ್ಪುವುದಿಲ್ಲ' ಎಂದು ದಾಲ್ಮಿಯ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT