ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಕದಲ್ಲೇ ಸರ್ಕಾರಿ ಜಮೀನಿದ್ದರೂ ಇಚ್ಚಾಶಕ್ತಿ ಕೊರತೆ!

Last Updated 2 ಅಕ್ಟೋಬರ್ 2012, 4:40 IST
ಅಕ್ಷರ ಗಾತ್ರ

ಜಾಗದ ಕೊರತೆಯಲ್ಲೇ ನಿರ್ಮಾಣವಾದ ಬಸ್‌ನಿಲ್ದಾಣ

ಭಾಲ್ಕಿ: ಬಸ್ ನಿಲ್ದಾಣಕ್ಕಿಂತ ಅದರ ಮುಂದಿನ ರಸ್ತೆಯ ವಿಸ್ತೀರ್ಣವೇ ಹೆಚ್ಚಾಗಿದೆ ಅಂದ್ರೆ ನೀವು ನಂಬ್ತೀರಾ? ಜನತೆಯ ಅಗತ್ಯಕ್ಕೆ ತಕ್ಕಂತೆ ನಿಲ್ದಾಣದ ವಿಸ್ತೀರ್ಣ ಮಾಡಲು ಪಕ್ಕದಲ್ಲಿಯೇ ಸರ್ಕಾರಿ ಜಮೀನಿದ್ದರೂ ಸರ್ಕಾರಕ್ಕೆ ಹಸ್ತಾಂತರಿಸಲು ಸಾಧ್ಯವಾಗುತ್ತಿಲ್ಲ ಏಕೆ?

ಭಾಲ್ಕಿ ಬಸ್ ನಿಲ್ದಾಣದ ವಿಸ್ತೀರ್ಣ 30 ಗುಂಟೆ. ಆದರೆ ಅದರ ಮುಂದಿರುವ ರಸ್ತೆಯ ವಿಸ್ತೀರ್ಣ 35 ಗುಂಟೆಗಳು ಎಂಬುದು ಸರ್ಕಾರಿ ದಾಖಲೆಗಳ ಮಾಹಿತಿ. ಈ ಅರ್ಧ ಏಕರೆ ಜಾಗದಲ್ಲಿ 1 ಕೋಟಿ 50 ಲಕ್ಷ ರೂ ಅನುದಾನದಿಂದ ನಿರ್ಮಾಣವಾಗಿರುವ ಭಾಲ್ಕಿ ಬಸ್ ನಿಲ್ದಾಣದ ಉದ್ಘಾಟನೆ ಅ.3ಕ್ಕೆ ಸಾರಿಗೆ ಸಚಿವರಿಂದ ನೆರವೇರಲಿದೆ.

ಹೆಚ್ಚುತ್ತಿರುವ ಭಾಲ್ಕಿಯ ಜನಸಂಖ್ಯೆ, ಇಲ್ಲಿಗೆ ಆಗಮಿಸುವ, ನಿರ್ಗಮಿಸುವ ವಾಹನಗಳ ಸಂಖ್ಯೆಯನ್ನು ಗಮನಿಸುವದಾದರೆ ಈ ಜಾಗ ಅತ್ಯಂತ ಕನಿಷ್ಠವಾಗಿದೆ. ಇದನ್ನು ವಿಸ್ತರಿಸುವ ಅಗತ್ಯವಿದೆ. ಈಗಿನ ನಿಲ್ದಾಣದ ಪಕ್ಕದಲ್ಲೇ 4ಗುಂಟೆ ಸರ್ಕಾರಿ ಜಾಗವಿದೆ.
 
ಅದರಲ್ಲಿ ಪಾಳುಬಿದ್ದ ಕೃಷಿ ಗೋದಾಮುಗಳಿವೆ. ಅವುಗಳನ್ನು ಸಾರಿಗೆ ಇಲಾಖೆಗೆ ಹಸ್ತಾಂತರಿಸಿದರೆ ಬಸ್‌ಗಳು ನಿರಾಯಾಸವಾಗಿ ತಿರುಗಲು ಅನುಕೂಲವಾಗುತ್ತದೆ ಎನ್ನುತ್ತಾರೆ ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಅಣದೂರೆ. ಈಗ ನಿರ್ಮಿಸಿರುವ ನಿಲ್ದಾಣಕ್ಕೆ ಕಂಪೌಂಡ್ ಕಟ್ಟಲು ಸಾದ್ಯವಿಲ್ಲದಷ್ಟು ಇಕ್ಕಟ್ಟಾಗಿದೆ. ಸುತ್ತು ಗೋಡೆ ಹಾಕದಿದ್ದರೆ ಅಪಘಾತಗಳಾಗುವ ಸಂಭವಗಳೇ ಹೆಚ್ಚು ಎನ್ನುತ್ತಾರೆ ಕರವೇ ಅಧ್ಯಕ್ಷ ಕಾರಾಮುಂಗೆ.  

ಅನಗತ್ಯ ವಿವಾದ: ಬಸ್ ನಿಲ್ದಾಣದ ಪಕ್ಕದಲ್ಲಿರುವ ಕೃಷಿ ಗೋದಾಮುಗಳಿರುವ ಜಾಗ ಕೃಷಿ ಇಲಾಖೆಗೆ ಸೇರಿದೆ ಎಂದು ಕೆಲವರು ವಾದಿಸಿದರೆ, ಅದು ಕಂದಾಯ ಇಲಾಖೆಯ ಜಾಗವಿದೆ. ಅದರಲ್ಲಿ ಅನುಮತಿ ಇಲ್ಲದೆಯೇ ಕೃಷಿ ಗೋದಾಮುಗಳು ನಿರ್ಮಾಣವಾಗಿದ್ದು, ಅವು ಕೂಡ ಶಿಥಿಲಾವಸ್ಥೆಯಲ್ಲಿವೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

ಅದೇನೆ ಇದ್ದರೂ ಸರ್ಕಾರಿ ಕೆಲಸಕ್ಕಾಗಿ ಸರ್ಕಾರಿ ಜಾಗವನ್ನು ಕೊಡಲು ತಕರಾರೇಕೆ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಇದಕ್ಕೆ ನೂತನ ಬಸ್ ನಿಲ್ದಾಣದ ಉದ್ಘಾಟನೆಗೆ ಆಗಮಿಸಲಿರುವ ರಾಜ್ಯದ ಉಪ ಮುಖ್ಯಮಂತ್ರಿ ಆರ್. ಅಶೋಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸುನಿಲ ವಲ್ಯಾಪುರೆ ಅವರು ಸ್ಪಂದಿಸುವರೆ? ಸಾರ್ವಜನಿಕರ ಸುಖಕರ ಪ್ರಯಾಣಕ್ಕೆ ಅನುಕೂಲ ಮಾಡಿಕ ಕೊಡುವರೆ?

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT