ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಕದ್ಮನೆ ಕನ್ನಿಕಾ!

Last Updated 12 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕಳೆದ ವರ್ಷ ಬಿಡುಗಡೆಯಾದ ಹಿಂದಿ ಚಿತ್ರ ‘ಅಗ್ನಿಪಥ್’ನಲ್ಲಿ ಹೃತಿಕ್ ರೋಷನ್‌ಗೆ ಪುಟ್ಟ ತಂಗಿಯಾಗಿ ಕಾಣಿಸಿಕೊಂಡಿದ್ದ ಈಕೆಯ ಅಭಿನಯವನ್ನು ಕಂಡು ಬಾಲಿವುಡ್ ಬೆರಗಾಗಿತ್ತು. ಈಕೆಗೆ ಉತ್ತಮ ಭವಿಷ್ಯವಿದೆ ಎಂದು ಮಾತನಾಡಿಕೊಳ್ಳುವಾಗಲೇ ದಕ್ಷಿಣ ಭಾರತದ ಕದ ತಟ್ಟಿ ನಾಯಕಿಯ ಪಟ್ಟವನ್ನೂ ಅಲಂಕರಿಸಿ ಅದೇ ಮುಗ್ಧ ನಗು ಹರಿಸುತ್ತಿದ್ದಾರೆ ಮಾತಿನ ಮಲ್ಲಿ ಕನ್ನಿಕಾ ತಿವಾರಿ. ಬಾಲಿವುಡ್‌ ಇರಲಿ, ದಕ್ಷಿಣದ ಚಿತ್ರಗಳಿರಲಿ, ಎಲ್ಲವೂ ಪಕ್ಕದ ಮನೆಯಂತೆ ಎನ್ನುವ ಈ ಚೆಲುವೆ ‘ರಂಗನ್‌ ಸ್ಟೈಲ್‌’ ಮೂಲಕ ಕನ್ನಡದ ನೆಲಕ್ಕೂ ಕಾಲಿರಿಸಿದ್ದಾರೆ.

ಅರಳುಹುರಿದಂತೆ ಪಟಪಟನೆ ಮಾತುದುರಿಸುವ ಕನ್ನಿಕಾಗೆ, ಕ್ಯಾಮೆರಾ ಮುಂದೆ ನಿಂತಾಗ ಅಭಿನಯವೂ ಸಲೀಸು. ಕುಟುಂಬದಲ್ಲಿ ಅಭಿನಯದ ಹಿನ್ನೆಲೆಯಿಲ್ಲದಿದ್ದರೂ, ಆಕಸ್ಮಿಕವಾಗಿ ಬಣ್ಣದ ಬದುಕನ್ನು ಪ್ರವೇಶಿಸಿದ್ದರೂ, ಮೊದಲ ಚಿತ್ರದಲ್ಲೇ ಅನುಭವಿ ನಟಿಯಂತೆ ನಟಿಸಿದ ಕನ್ನಿಕಾರನ್ನು ಚಿತ್ರರಂಗ ಈಗಾಗಲೇ ಹಾಡಿಹೊಗಳಿದೆ. ‘ನಾನು ಮೂಲತಃ ಕಲಾವಿದೆಯಲ್ಲ. ಆದರೆ ಈಗ ಪ್ರಬುದ್ಧತೆ ಬೆಳೆಸಿಕೊಂಡ ನಟಿ’ ಎನ್ನುವ ಕನ್ನಿಕಾ, ತನ್ನ ಯಶಸ್ಸಿಗೆ ಬೆಟ್ಟು ಮಾಡಿ ತೋರುವುದು ‘ಅಗ್ನಿಪಥ್‌’ ಚಿತ್ರತಂಡವನ್ನು.

ವಸ್ತ್ರವಿನ್ಯಾಸಕರೊಬ್ಬರು ಕನ್ನಿಕಾರ ಛಾಯಾಚಿತ್ರ ನೋಡಿ ಆಡಿಷನ್‌ಗೆ ಬರಲು ಆಹ್ವಾನ ನೀಡಿದ್ದರಂತೆ. ‘ಅಗ್ನಿಪಥ್‌’ನಲ್ಲಿ ಹೃತಿಕ್‌ಗೆ ತಂಗಿಯಾಗಲು ಬಂದಿದ್ದವರ ಸಂಖ್ಯೆ ಬರೋಬ್ಬರಿ ಆರೂವರೆ ಸಾವಿರ. ಅವರೆಲ್ಲರ ನಡುವೆ ನಿರ್ಮಾಪಕ ಕರಣ್‌ ಜೋಹರ್‌ರನ್ನು ಸೆಳೆದದ್ದು ಈ ಮುಗ್ಧ ಮುಖದ, ಕಣ್ಣಿನಲ್ಲೇ ಮಾತನಾಡುವ ಛಾತಿಯುಳ್ಳ ಮುದ್ದು ಹುಡುಗಿ.
 

ಹೃತಿಕ್‌ ರೋಷನ್‌, ಸಂಜಯ್‌ ದತ್‌, ರಿಷಿ ಕಪೂರ್‌, ಪ್ರಿಯಾಂಕಾ ಚೋಪ್ರಾ ಮುಂತಾದ ಘಟಾನುಘಟಿಗಳ ನಡುವೆ ತಾನು ನಟಿಸಿ ಸೈ ಎನಿಸಿಕೊಳ್ಳುವುದು ಹೇಗೆ ಎಂಬ ಭಯ ಆಕೆಗಿತ್ತು. ಸಿನಿಮಾ ನೋಡುತ್ತಿದ್ದದ್ದೇ ಕಡಿಮೆ. ಬಾಲಿವುಡ್‌ನ ಒಳಗೆ ಏನೇನಿದೆ ಎಂಬುದರ ಕಲ್ಪನೆಯೂ ಇಲ್ಲ. ಏನಾದರೂ ತಪ್ಪು ಮಾಡಿದರೆ? ಎಂಬ ಹೆದರಿಕೆಯೂ ಕಾಡುತ್ತಿತ್ತು. ‘ಚಿತ್ರೀಕರಣ ಹೇಗೆ ನಡೆಯುತ್ತದೆ ಎಂಬುದನ್ನು ತಿಳಿದುಕೋ’ ಎಂದು ನಿರ್ದೇಶಕ ಕರಣ್‌ ಮಲ್ಹೋತ್ರಾ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಕರೆದಿದ್ದರಂತೆ.

ಬ್ರೇಕ್‌ ನಡುವೆ ಹೃತಿಕ್‌ ರೋಷನ್‌ ಬಳಿ ಕರೆದುಕೊಂಡು ಹೋಗಿ ‘ಈಕೆ ನಿಮ್ಮ ತಂಗಿ’ ಎಂದಾಗ ಹೃತಿಕ್‌, ‘ಹಾಯ್ ನಾನು ಹೃತಿಕ್‌ ರೋಷನ್‌’ ಎಂದು ಪರಿಚಯ ಮಾಡಿಕೊಂಡರಂತೆ. ಜಗತ್ತಿಗೇ ಗೊತ್ತಿರುವ ನಟ ತನ್ನಂತ ಚಿಕ್ಕ ಹುಡುಗಿಯ ಬಳಿ ಪರಿಚಯ ಮಾಡಿಕೊಂಡದ್ದು ನೋಡಿ ಕನ್ನಿಕಾಗೆ ಅಚ್ಚರಿಯಾಯಿತಂತೆ. ‘ಮೊದಲು ನಿನ್ನ ಸುತ್ತಲಿನ ಪರಿಸರವನ್ನು ಪ್ರೀತಿಸು, ಸಿನಿಮಾ ಸೆಟ್‌ ಅನ್ನು ಪ್ರೀತಿಸು, ಸಿನಿಮಾವನ್ನು ಪ್ರೀತಿಸು. ಒಳ್ಳೆಯ ಭವಿಷ್ಯವಿರುತ್ತದೆ’ ಎಂದು ಹೃತಿಕ್ ಹೇಳಿದ ಮಾತನ್ನು ಎಂದಿಗೂ ಮರೆಯುವುದಿಲ್ಲ ಎನ್ನುತ್ತಾರೆ ಕನ್ನಿಕಾ.

ಮೊದಲ ಶಾಟ್‌ ಎದುರಿಸಿದ್ದು ರಿಷಿ ಕಪೂರ್‌ರಂಥ ಹಿರಿಯ ನಟರ ಮುಂದೆ. ಆಗಂತೂ ಕನ್ನಿಕಾ ಅಕ್ಷರಶಃ ನಡುಗಿದ್ದರಂತೆ. ರಿಷಿ ಕಪೂರ್‌, ಹೃತಿಕ್‌, ಪ್ರಿಯಾಂಕಾ ಜೊತೆ ಇದ್ದೇನೆ ಎಂಬ ಭಾವನೆಯೇ ಬರಲಿಲ್ಲ. ಅಷ್ಟು ಡೌನ್‌ ಟು ಅರ್ಥ್‌ ಎಂದು ‘ಅಗ್ನಿಪಥ್‌’ನ ಅನುಭವವನ್ನು ತೆರೆದಿಡುತ್ತಾರೆ ಕನ್ನಿಕಾ.

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಜನಿಸಿದ ಕನ್ನಿಕಾ, ಮೊದಲು ಬಣ್ಣಹಚ್ಚಿದಾಗ ಓದುತ್ತಿದ್ದದ್ದು ಹನ್ನೊಂದನೇ ತರಗತಿ. ಆ ಚಿತ್ರದ ಅಭಿನಯ ಅವರನ್ನು ತೆಲುಗು ಚಿತ್ರರಂಗಕ್ಕೆ ಕರೆತಂದಿತು. ‘ಬಾಯ್‌ ಮೀಟ್ಸ್‌ ಗರ್ಲ್’ ಮೂಲಕ ನಾಯಕಿಯ ಸ್ಥಾನಕ್ಕೆ ಬಡ್ತಿ ಪಡೆದರು. ಆ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದ್ದಂತೆ, ಕನ್ನಡ ಚಿತ್ರರಂಗವೂ ಕೈಬೀಸಿ ಕರೆಯಿತು.

‘ರಂಗನ್‌ಸ್ಟೈಲ್‌’ನಲ್ಲಿ ಕನ್ನಿಕಾ ಶ್ರೀಮಂತ ಮನೆತನದ ಯುವತಿ. ಸುದೀಪ್‌ರಂಥ ನಟರ ಜೊತೆ ನಟಿಸುವ ಅವಕಾಶ ಇಲ್ಲಿ ದೊರೆತಿದೆ. ಲವ್‌ಸ್ಟೋರಿ ಜೊತೆ, ಡ್ರಾಮಾ ಮತ್ತು ಕಾಮಿಡಿಯೂ ಇದೆ. ಕಥೆ ತುಂಬಾ ಇಷ್ಟವಾಯಿತು ಎನ್ನುವ ಕನ್ನಿಕಾ, ಕನ್ನಡ ಕಲಿಯುವ ಉತ್ಸಾಹವನ್ನೂ ತೋರುತ್ತಾರೆ.  ‘ಎಲ್ಲರೂ ಕನ್ನಡದಲ್ಲೇ ವ್ಯವಹರಿಸುತ್ತಾರೆ, ಅದೇ ಸ್ವಲ್ಪ ಕಷ್ಟ’ ಎಂದು ನಗುತ್ತಾರೆ ಕನ್ನಿಕಾ.

ಚಿತ್ರೀಕರಣದ ಸಂದಭರ್ದಲ್ಲಿ ನೃತ್ಯ ನಿರ್ದೇಶಕ ಮುರಳಿ ‘ಗೂಗ್ಲಿ’ ಚಿತ್ರದ ಬಗ್ಗೆ ಆಗಾಗ ಹೇಳುತ್ತಿದ್ದರಂತೆ. ಚತ್ರದ ಟ್ರೇಲರ್‌ನಲ್ಲಿ ನಟ ಯಶ್‌ ಇಷ್ಟವಾದರು. ಹೀಗಾಗಿ ಬಿಡುವಾದಾಗ ಚಿತ್ರವನ್ನೂ ನೋಡಿದರಂತೆ. ಭಾಷೆ ತಿಳಿಯದಿದ್ದರೂ ಕಥೆ ಅರ್ಥಮಾಡಿಕೊಳ್ಳಬಲ್ಲೆ. ಚಿತ್ರದ ಸಂಭಾಷಣೆಗಳೂ ಕೆಲವೆಡೆ ಅರ್ಥವಾಯಿತು. ಸಿನಿಮಾ ಚೆನ್ನಾಗಿತ್ತು ಎಂದು ಅನುಭವವನ್ನು ಅವರು ಹಂಚಿಕೊಳ್ಳುತ್ತಾರೆ.

ಚಿಕ್ಕಂದಿನಲ್ಲಿ ಮುಂದೆ ಏನಾಗಬೇಕು ಎಂದು ಯಾರಾದರೂ ಕೇಳಿದಾಗ ದಿನಕ್ಕೊಂದು ಹೇಳುತ್ತಿದ್ದೆ. ಆದರೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಬಣ್ಣಹಚ್ಚಿದಾಗ ನಟಿಯಾಗಿಯೇ ಮುಂದುವರೆಯಬೇಕೆಂಬ ಆಸೆ ಹುಟ್ಟಿಕೊಂಡಿತು. ಈಗ ನಟನೆಯನ್ನು ಪೂರ್ಣಪ್ರಮಾಣದ ವೃತ್ತಿಯನ್ನಾಗಿ ಸ್ವೀಕರಿಸಿದ್ದೇನೆ ಎನ್ನುವ ಕನ್ನಿಕಾ, ಜಯಪುರ ನ್ಯಾಷನಲ್‌ ಯೂನಿವರ್ಸಿಟಿಯಲ್ಲಿ ಪದವಿ ಕಲಿಕೆ ಶುರುಮಾಡಿದ್ದಾರೆ. ದೇಶದ ಯಾವ ಮೂಲೆಯಲ್ಲಿದ್ದರೂ ಆನ್‌ಲೈನ್‌ ಮೂಲಕವೇ ಪರೀಕ್ಷೆ ಬರೆಯುವ ಅವಕಾಶ ಇರುವುದರಿಂದ ನಟನೆ ಮತ್ತು ಶಿಕ್ಷಣ ಎರಡಕ್ಕೂ ಅಡ್ಡಿಯಾಗದಂತೆ ಸಂಭಾಳಿಸಿಕೊಂಡು ಹೋಗುವುದು ಕಷ್ಟವಾಗುತ್ತಿಲ್ಲ ಎನ್ನುತ್ತಾರೆ.

ಸಂವಹನದ ಕಾರಣಕ್ಕಾಗಿ ದಕ್ಷಿಣದ ಚಿತ್ರರಂಗ ಕಷ್ಟವೆನಿಸುತ್ತಿದೆ. ಒಂದೊಂದು ಚಿತ್ರರಂಗ ಒಂದೊಂದು ಸ್ವರೂಪದ್ದು. ಆದರೆ ಇಲ್ಲಿ ಬಾಲಿವುಡ್‌ಗಿಂತಲೂ ಹೆಚ್ಚಿನ ವೃತ್ತಿಬದ್ಧತೆ ಕಾಣಬಹುದು. ಹೀಗೆ ಎರಡೂ ಬಗೆಯ ಸಿನಿಮಾ ಸಂಸ್ಕೃತಿಯನ್ನು ಚಿಕ್ಕವಯಸ್ಸಿನಲ್ಲೇ ಕಾಣುವ ಅದೃಷ್ಟವಂತೆ ನಾನು ಎನ್ನುತ್ತಾರೆ ಅವರು. ಈ ನಡುವೆ ತಮಿಳು ಚಿತ್ರವೊಂದರಲ್ಲಿಯೂ ಕನ್ನಿಕಾ ನಟಿಸಿದ್ದಾರೆ.

ತೆಲುಗು ಚಿತ್ರರಂಗದಿಂದ ಮತ್ತೊಂದು ಅವಕಾಶ ಬಂದಿದೆ. ಹಿಂದಿಯಲ್ಲಿಯೂ ಎರಡು ಚಿತ್ರಗಳನ್ನು ಅವರು ಒಪ್ಪಿಕೊಂಡಿದ್ದಾರೆ. ‘ಪಾತ್ರ, ಮತ್ತು ಕಥೆಗೆ ಮೊದಲ ಆದ್ಯತೆ. ನನ್ನ ಭವಿಷ್ಯಕ್ಕೆ ಒಳಿತು ಎನಿಸುವ ಪಾತ್ರಗಳನ್ನು ಮಾತ್ರ ಮಾಡುತ್ತೇನೆ. ಜನ ಇಷ್ಟಪಟ್ಟರೆ ಮಾತ್ರ ಅದು ಸಾರ್ಥಕವಾಗುವುದು’ ಎನ್ನುತ್ತಾರೆ ಕನ್ನಿಕಾ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT