ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷ ಇಲ್ಲಿ ನೆಪ: ಅಭ್ಯರ್ಥಿಯದೇ ಜಪ

ಈ ಬಾರಿ `ಸ್ವಾಮಿ' ಅದೃಷ್ಟ ಖುಲಾಯಿಸುವುದೇ?
Last Updated 4 ಏಪ್ರಿಲ್ 2013, 8:23 IST
ಅಕ್ಷರ ಗಾತ್ರ

ಕೋಲಾರ: ರಾಜ್ಯದ `ಮಾವಿನ ಮಡಿಲು' ಎಂದೇ ಖ್ಯಾತವಾದ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ರಾಜಕಾರಣದ ಪ್ರಧಾನ ಪಾತ್ರ ಇಲ್ಲ. ಏನಿದ್ದರೂ, ಅದು ವ್ಯಕ್ತಿ ರಾಜಕಾರಣ ಮಾತ್ರ. ಪಕ್ಷ ಇಲ್ಲಿ ನೆಪ.

ಇಲ್ಲಿನ ಮತದಾರರು ಪಕ್ಷಕ್ಕಿಂತಲೂ ಅಭ್ಯರ್ಥಿಗಳ ಜಪ ಮಾಡುವುದೇ ಹೆಚ್ಚು. ಅದೇ ಕಾರಣದಿಂದ, ಈ `ವ್ಯಕ್ತಿ'ಗಳು ಯಾವ ಪಕ್ಷದಲ್ಲೇ ಇದ್ದರೂ, ಯಾವುದೇ ಪಕ್ಷಕ್ಕೆ ಹೋದರೂ, ಮತದಾರರ ನಿಷ್ಠೆ ವ್ಯಕ್ತಿಗಷ್ಟೇ ಸೀಮಿತವಾಗಿರುತ್ತದೆ. ಪಕ್ಷವನ್ನು ಮೀರಿದ ನೆಲೆಯಲ್ಲಿ ವ್ಯಕ್ತಿಗಳ ಪ್ರಭಾವಳಿ ಮಡಿಲನ್ನು ಆವರಿಸಿರುವುದು ಇತ್ತೀಚಿನ ಕತೆ ಅಲ್ಲ. ಹಲವು ದಶಕಗಳಿಂದಲೂ ನಡೆದು ಬಂದಿರುವ ಪರಿಪಾಠ.

1983ರಿಂದ 2008ರವರೆಗೆ ನಡೆದಿರುವ 7 ಚುನಾವಣೆಗಳಲ್ಲಿ ಒಬ್ಬರಾದ ಮೇಲೊಬ್ಬರಂತೆ ಜಿ.ಕೆ.ವೆಂಕಟಶಿವಾರೆಡ್ಡಿ (ರೆಡ್ಡಿ) ಮತ್ತು ಕೆ.ಆರ್.ರಮೇಶ್‌ಕುಮಾರ್ (ಸ್ವಾಮಿ) ಆಯ್ಕೆಯಾಗಿದ್ದಾರೆ. ಇಡೀ ಕ್ಷೇತ್ರದಲ್ಲಿ ಈ ಅವಧಿಯಲ್ಲಿ ಇವರಿಬ್ಬರ ನಡುವೆ ಮತ್ತೊಬ್ಬ ಪ್ರಬಲ ಸ್ಪರ್ಧಿ ಹುಟ್ಟಿ ಬರಲು ಸಾಧ್ಯವೇ ಆಗಿಲ್ಲ. ವಿಶೇಷ ಎಂದರೆ, ಕೆಲವು ಬಾರಿ ಈ ಇಬ್ಬರು ಪ್ರತಿನಿಧಿಸಿದ್ದ ಪಕ್ಷಗಳನ್ನು ಪರಸ್ಪರ ಬದಲಾಯಿಸಿದ್ದಾರೆ. ಪಕ್ಷ ಬದಲಾವಣೆ ಲೆಕ್ಕಿಸದೆ ಜನ ಮತ ನೀಡಿದ ಪರಿಣಾಮ ಇವರು ಆಯ್ಕೆಯಾಗಿರುವ ನಿದರ್ಶನಗಳೂ ಇವೆ.

ಕಾಂಗ್ರೆಸ್ ಮತ್ತು ಜನತಾ ಪರಿವಾರವನ್ನು ಸುತ್ತಿ ಬಂದಿರುವ ಈ ಇಬ್ಬರೂ ಪರಸ್ಪರ ಮುಖಾಮುಖಿಯಾದ ಮೊದಲ ಚುನಾವಣೆಯಲ್ಲಿ ಇದ್ದ ಸ್ಥಿತಿ ಈಗ ಪೂರ್ಣ ಬದಲಾಗಿದೆ. 1983ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಜಿ.ಕೆ.ವೆಂಕಟಶಿವಾರೆಡ್ಡಿ ಈಗ ಜೆಡಿಎಸ್‌ನ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿದ್ದಾರೆ. ಆಗ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಕೆ.ಆರ್.ರಮೇಶ್‌ಕುಮಾರ್ ನಂತರ ಜನತಾ ಪಕ್ಷ ಸೇರಿ ಗೆದ್ದಿದ್ದಾರೆ. ಈಗ ಅವರು ಕಾಂಗ್ರೆಸ್‌ನ ಪ್ರಭಾವಿ ಮುಖಂಡ ಮತ್ತು ಚುನಾವಣೆಗೆ ಅವಿರೋಧವಾಗಿ ಆಯ್ಕೆಯಾಗಿರುವ ಅಭ್ಯರ್ಥಿ.

ಈ ನಡುವೆ ರೆಡ್ಡಿ 2004ರಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ದೊರಕಲಿಲ್ಲ ಎಂದು ಮುನಿಸಿಕೊಂಡು ಬಿಜೆಪಿ ಸೇರಿ ಅಲ್ಲಿಂದ ಸ್ಪರ್ಧಿಸಿ ಸೋತರು. ಗಮನಾರ್ಹ ಸಂಗತಿ ಎಂದರೆ, ಆ ಚುನಾವಣೆಯಲ್ಲಿ ರಮೇಶ್‌ಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದರು. ಇಬ್ಬರೂ ತಾವಿದ್ದ ಪಕ್ಷಗಳನ್ನು ಅದಲು-ಬದಲು ಮಾಡಿಕೊಂಡು ಚುನಾವಣೆಯಲ್ಲಿ ಸಮರ್ಥ ಎದುರಾಳಿಗಳಾಗಿ ಸೆಣೆಸಿರುವುದು ವಿಶೇಷ. ಈ ಸೆಣೆಸಾಟ 2013ರ ಚುನಾವಣೆಯಲ್ಲೂ ಮುಂದುವರಿಯಲಿರುವುದು ಮತ್ತೊಂದು ವಿಶೇಷ.

ಕಳೆದ 7 ಚುನಾವಣೆಗಳ ಪೈಕಿ ನಾಲ್ಕರಲ್ಲಿ (1983, 1989, 1999 ಮತ್ತು 2004) ಕಾಂಗ್ರೆಸ್‌ಗೆ ಅವಕಾಶ ಸಿಕ್ಕಿದೆ. ಸತತ ಎರಡು ಬಾರಿ ಕಾಂಗ್ರೆಸ್ ಗೆದ್ದಿದೆ ಎಂಬ ದಾಖಲೆಯನ್ನು ಉಲ್ಲೇಖಿಸಬಹುದಾದರೂ, ಈ ಎರಡೂ ಬಾರಿ ತಲಾ ಒಬ್ಬರು ಗೆದ್ದಿದ್ದಾರೆ ಎಂಬುದನ್ನು ಮರೆಯುವಂತೆಯೇ ಇಲ್ಲ.

ಅಂದರೆ, ಒಮ್ಮೆ ಸ್ಪರ್ಧಿಸಿದಾಗ ಯಾವ ಪಕ್ಷವನ್ನು ಹಳಿಯುತ್ತಿದ್ದರೋ, ಮತ್ತೊಮ್ಮೆ ಅದೇ ಸ್ಪರ್ಧಿ ಅದೇ ಪಕ್ಷದಿಂದ ಸ್ಪರ್ಧಿಸಿರುವ ವಿಲಕ್ಷಣ ಸಂದರ್ಭಗಳಿವು. ಕಾಂಗ್ರೆಸ್ ಮತ್ತು ಜನತಾ ಪರಿವಾರ ಮಾತ್ರವೇ ಹೀಗೆ ಒಮ್ಮೆ ಮಿತ್ರರಂತೆ ಮತ್ತೊಮ್ಮೆ ಶತ್ರುಗಳಂತೆ ಕಾದಡಿವೆ.
ಇದು ಆರಂಭದಿಂದಲೂ ಬಹಳ ತೀವ್ರ ಸ್ವರೂಪದಲ್ಲಿದೆ ಎಂಬುದನ್ನು, 1983ರ ಚುನಾವಣೆಯಲ್ಲಿ ಇವರಿಬ್ಬರ ಸೋಲು-ಗೆಲುವಿನ ಮತಗಳ ಅಂತರ ಕೇವಲ 642 ಎಂಬ ಅಂಶವೂ ಸಮರ್ಥಿಸುತ್ತದೆ.

ಅಲ್ಲದೆ, 1989ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವೆಂಕಟಶಿವಾರೆಡ್ಡಿ 9293 ಮತಗಳ ಅಂತರದಲ್ಲಿ ರಮೇಶ್‌ಕುಮಾರ್ ಅವರನ್ನು ಸೋಲಿಸಿದ್ದರೆ. 2004ರ ಚುನಾವಣೆಯಲ್ಲಿ ಇದೇ ರಮೇಶಕುಮಾರ್  ಕಾಂಗ್ರೆಸ್ ಅಭ್ಯರ್ಥಿಯಾಗಿ 8610 ಮತಗಳ ಅಂತರದಲ್ಲಿ ರೆಡ್ಡಿಯವರನ್ನು ಸೋಲಿಸಿದ್ದಾರೆ! ಇಬ್ಬರು ಅಭ್ಯರ್ಥಿಗಳ ಸೆಣೆಸಾಟದಲ್ಲಿ ಅತ್ಯಧಿಕ ಮತಗಳ ಅಂತರ ಕಾಂಗ್ರೆಸ್‌ಗೇ ದಕ್ಕಿದೆ ಎಂಬುದು ಪಕ್ಷದ ಮುಖಂಡರ ಹೆಮ್ಮೆಯ ನುಡಿ.

ಈಗಿನ ಸ್ಥಿತಿ: ಮುಳಬಾಗಲು ದ್ವಿಸದಸ್ಯ ಕ್ಷೇತ್ರದ ಭಾಗವಾಗಿದ್ದ ಶ್ರೀನಿವಾಸಪುರ 1962ರಲ್ಲಿ ಪ್ರತ್ಯೇಕ ಕ್ಷೇತ್ರವಾದ ಬಳಿಕ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಜಿ.ನಾರಾಯಣಗೌಡ ಗೆದ್ದಿದ್ದರು. ಅಂದಿನಿಂದಲೂ ಕಾಂಗ್ರೆಸ್ ಪ್ರಬಲ ಪಕ್ಷವಾಗಿಯೇ ಮುಂದುವರಿದಿದೆ. ಹಲವು ರೂಪರೇಖೆಗಳನ್ನು ದಾಟಿ ಬಂದಿರುವ ಜನತಾ ಪರಿವಾರವೂ ಅದರ ಸಮರ್ಥ ಎದುರಾಳಿಯಾಗಿಯೇ ಗಮನ ಸೆಳೆದಿದೆ. ಇವೆರಡೂ ಪಕ್ಷಗಳ ನಡುವೆಯೇ ಇಲ್ಲಿ ತೀವ್ರ ಪೈಪೋಟಿ ಈ ಬಾರಿ ಏರ್ಪಟ್ಟಿದೆ.

ಇದಷ್ಟೇ ಅಲ್ಲದೆ, ಇಲ್ಲಿನ ಮತದಾರರ ನಂಬಿಕೆಯೊಂದು ವಿಶೇಷವಾಗಿದೆ. ಅದರೆಂದರೆ, ಒಮ್ಮೆ `ರೆಡ್ಡಿ' ಗೆದ್ದು `ಸ್ವಾಮಿ' ಸೋತರೆ, ಮತ್ತೊಮ್ಮೆ `ಸ್ವಾಮಿ' ಗೆದ್ದು  `ರೆಡ್ಡಿ' ಸೋಲುತ್ತಾರೆ. ಅವರ ಈ ನಂಬಿಕೆಗೆ ಅನುಗುಣವಾಗಿಯೇ ಇಲ್ಲಿವರೆಗಿನ ಫಲಿತಾಂಶವೂ ಕನ್ನಡಿ ಹಿಡಿಯುತ್ತದೆ. ಆ ನಂಬಿಕೆ ಪ್ರಕಾರ, ಈ ಬಾರಿ ರಮೇಶ್‌ಕುಮಾರ್ ಗೆಲ್ಲಬಹುದು ಎಂಬುದು ಹಲವರ ಅಂದಾಜು. ಹೀಗಾಗಿ ಈ ಬಾರಿ `ಸ್ವಾಮಿ ಅದೃಷ್ಟ' ಖುಲಾಯಿಸುವುದೇ ಎಂಬ ವಿಚಾರ ಕ್ಷೇತ್ರದಲ್ಲಿ ಚರ್ಚೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT