ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷ ತೊರೆದು ಪಶ್ಚಾತ್ತಾಪ ಪಡಬೇಡಿ: ಯಡಿಯೂರಪ್ಪಗೆ ಜೇಟ್ಲಿ ಕಿವಿ ಮಾತು

Last Updated 14 ಮೇ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಹಾಲಿ ಮತ್ತು ಮಾಜಿ ಮುಖ್ಯಮಂತ್ರಿ ನಡುವಿನ `ಸಮರ~ದಿಂದ ರಾಜ್ಯ ಬಿಜೆಪಿಯಲ್ಲಿ ತಲೆದೋರಿದ್ದ ಬಿಕ್ಕಟ್ಟನ್ನು ತಾತ್ಕಾಲಿಕವಾಗಿ ಶಮನಗೊಳಿಸುವಲ್ಲಿ ದೆಹಲಿ ವರಿಷ್ಠರು ಸಫಲರಾಗಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಜತೆ ದೂರವಾಣಿಯಲ್ಲಿ ಮಾತನಾಡಿದ ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ, `ಪಕ್ಷ ತೊರೆಯುವ ದುಡುಕಿನ ನಿರ್ಧಾರ ಬೇಡ. ನಿಮ್ಮ ಜತೆ ನಾವಿದ್ದೇವೆ. ಸಿಬಿಐ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ನಿಮ್ಮನ್ನು ಒಬ್ಬಂಟಿಯಾಗಲು ಬಿಡುವುದಿಲ್ಲ. ಇದು ಸುಪ್ರೀಂ ಕೋರ್ಟ್ ಆದೇಶವೇ ವಿನಾ ರಾಜಕೀಯ ತೀರ್ಮಾನವಲ್ಲ. ಈ ಕಾರಣಕ್ಕೆ ನಾವು ಬಹಿರಂಗವಾಗಿ ಏನೂ ಹೇಳುತ್ತಿಲ್ಲ~ ಎಂದು ಮನವರಿಕೆ ಮಾಡಿಕೊಟ್ಟರು.

`ನಮ್ಮ ಮಾತು ಮೀರಿ ನೀವು ಪಕ್ಷ ಬಿಡುವುದಾದರೆ ಅಭ್ಯಂತರವಿಲ್ಲ. ಎಲ್ಲ ನಿಮಗೇ ಬಿಟ್ಟಿದ್ದು. ಪಕ್ಷ ತೊರೆದು ಆಮೇಲೆ ಪಶ್ಚಾತಾಪ ಪಡುವುದಕ್ಕಿಂತ ಒಳಗಿದ್ದುಕೊಂಡೇ ಹೋರಾಡುವುದು  ಸೂಕ್ತ. ಈಗ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರನ್ನು ಬದಲಾವಣೆ ಮಾಡಿ ನಿಮ್ಮನ್ನು ಮುಖ್ಯಮಂತ್ರಿ ಮಾಡಲು ಸಾಧ್ಯವಿಲ್ಲ. ತನಿಖೆ ಮುಗಿಸಿ ಆರೋಪ ಮುಕ್ತರಾಗಿ ಹೊರಬನ್ನಿ. ಆಮೇಲೆ ನಾಯಕತ್ವ ಬಿಟ್ಟುಕೊಡೋಣ~ ಎಂದು ಕಿವಿಮಾತು ಹೇಳಿದರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ವಾರದಲ್ಲಿ ಬೆಂಗಳೂರಿಗೆ: `ನಾನು ಮತ್ತು ಧರ್ಮೇಂದ್ರ ಪ್ರಧಾನ್ ಒಂದು ವಾರದೊಳಗೆ ಬೆಂಗಳೂರಿಗೆ ಬರುತ್ತೇವೆ. ನಿಮ್ಮ ಸಮಸ್ಯೆಗಳೇನೇ ಇದ್ದರೂ ಕೂತು ಮಾತನಾಡಿ ಬಗೆಹರಿಸೋಣ~ ಎಂದು ಅರುಣ್ ಜೇಟ್ಲಿ ಮಾಜಿ ಮುಖ್ಯಮಂತ್ರಿ ಮನವೊಲಿಸಿದರು. ಜೇಟ್ಲಿ ಅವರ ಮಾತುಗಳನ್ನು ಸಂಯಮದಿಂದ ಕೇಳಿಸಿಕೊಂಡ ಯಡಿಯೂರಪ್ಪ ವರಿಷ್ಠರ ಮಾತು ನಂಬುವುದಾಗಿ ಹೇಳಿದರು ಎಂದು ಮೂಲಗಳು ಹೇಳಿವೆ.

ಸೊಪ್ಪು ಹಾಕಬೇಡಿ; ಅಡ್ವಾಣಿ ಬಣ:  ಮತ್ತೊಂದೆಡೆ ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ ಮತ್ತಿತರರು, `ಯಾವುದೇ ಕಾರಣಕ್ಕೂ ಮಾಜಿ ಮುಖ್ಯಮಂತ್ರಿ ಮತ್ತು ಅವರ ಬೆಂಬಲಿಗರ `ಬ್ಲಾಕ್‌ಮೇಲ್~ ತಂತ್ರಗಳಿಗೆ ಸೊಪ್ಪು ಹಾಕಬೇಡಿ. ಎಷ್ಟು ದಿನ ಇದನ್ನೆಲ್ಲ ಸಹಿಸಿಕೊಳ್ಳುವುದು. ಸರ್ಕಾರ ಹೋದರೂ ಪರವಾಗಿಲ್ಲ. ಅವರು ಹೋಗುವುದಾದರೆ ಪಕ್ಷದ ಬಾಗಿಲು ತೆರೆದಿದೆ. ಕರ್ನಾಟಕದಲ್ಲಿ ಏನಾಗುತ್ತೋ ಆಗಿಹೋಗಲಿ~ ಎಂಬ ವರಿಷ್ಠರ ಸಂದೇಶವನ್ನು ಯಡಿಯೂರಪ್ಪನವರಿಗೆ ತಲುಪಿಸಲಾಯಿತು~ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಹಿರಿಯ ಮುಖಂಡರಿಬ್ಬರು ಪತ್ರಕರ್ತರಿಗೆ ತಿಳಿಸಿದರು.

ಠುಸ್ಸಾದ ಬಾಂಬ್:
ಸೋಮವಾರ ಸಂಜೆ ನಾಲ್ಕು ಗಂಟೆಗೆ ಬೆಂಗಳೂರಿನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಯಾವ `ಬಾಂಬ್~ ಸಿಡಿಸುವರೋ ಎಂದು ವರಿಷ್ಠರು ತುದಿಗಾಲಲ್ಲಿ ನಿಂತಿದ್ದರು. ಈ ಬಗ್ಗೆ ಎಲ್ಲರಲ್ಲೂ ಒಂದು ರೀತಿಯ ಗೊಂದಲವಿತ್ತು. ಹೀಗಾಗಿ 4ಗಂಟೆವರೆಗೆ ಕಾಯೋಣ~ ಎಂದು ಹೇಳುತ್ತಿದ್ದರು. ಐದು ಗಂಟೆಗೆ ಪಕ್ಷ ಬಿಡುವುದಿಲ್ಲ ಎಂಬ ತೀರ್ಮಾನವನ್ನು ಯಡಿಯೂರಪ್ಪ ಪ್ರಕಟಿಸಿದಾಗ ವರಿಷ್ಠ ನಾಯಕರು ನಿರಾಳರಾದರು.

ಭಾನುವಾರ ಹೈಕಮಾಂಡ್ ಸೂಚನೆ ಮೇರೆಗೆ ಯಡಿಯೂರಪ್ಪನವರ ನಿಷ್ಠರಾದ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ವಿಧಾನ ಪರಿಷತ್ ಸದಸ್ಯ ಲೇಹರ್‌ಸಿಂಗ್ ದೆಹಲಿಗೆ ಧಾವಿಸಿದರು. ಸೋಮವಾರ ಮಧ್ಯಾಹ್ನ ಸಂಸತ್ ಭವನದಲ್ಲಿ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
 
ಶೋಭಾ ಅವರಿಂದಲೇ ಯಡಿಯೂರಪ್ಪ ಅವರಿಗೆ ದೂರವಾಣಿ ಕರೆ ಮಾಡಿಸಿ ಜೇಟ್ಲಿ ಮಾತನಾಡಿದರು. ಸಂಸದರಾದ ಸುರೇಶ್ ಅಂಗಡಿ, ಜಿ.ಎಂ. ಸಿದ್ದೇಶ್, ಆಯನೂರು ಮಂಜುನಾಥ್, ಶಿವಕುಮಾರ ಉದಾಸಿ ಒಳಗೊಂಡಂತೆ ಹಲವರು ಮಾತುಕತೆ ಸಂದರ್ಭದಲ್ಲಿ ಇದ್ದರು.

`ಸುಪ್ರೀಂಕೋರ್ಟ್ ಆದೇಶದಿಂದ ಸಂಕಷ್ಟದಲ್ಲಿರುವ ಯಡಿಯೂರಪ್ಪ ಅವರ ಬೆಂಬಲಕ್ಕೆ ಮುಖ್ಯಮಂತ್ರಿ ಮತ್ತು ಪಕ್ಷದ ವರಿಷ್ಠರು ನಿಲ್ಲಲಿಲ್ಲ. ಸದಾನಂದಗೌಡ ಮಾಜಿ ಪ್ರಧಾನಿ ಎಚ್.ಡಿ.  ದೇವೇಗೌಡರು ಮತ್ತು ಅವರ ಮಕ್ಕಳ ಜತೆಗೂಡಿ ನಮ್ಮ ನಾಯಕರ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ.
 
ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ, ಧರ್ಮಸಿಂಗ್ ಹಾಗೂ ಕುಮಾರಸ್ವಾಮಿ ಕಾಲದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತು ವಿವರಣೆ ಕೇಳಿ ಕೇಂದ್ರ ಉನ್ನತಾಧಿಕಾರ ಸಮಿತಿ ರಾಜ್ಯ ಸರ್ಕಾರಕ್ಕೆ ಬರೆದಿರುವ ಪತ್ರವನ್ನು ಉದ್ದೇಶಪೂರ್ವಕವಾಗಿ ಬಚ್ಚಿಡಲಾಗಿದೆ~ ಎಂದು ಮುಖ್ಯಮಂತ್ರಿಗಳ ವಿರೋಧಿ ಬಣ ಆರೋಪ ಮಾಡಿತು.

`ಕೆಲವು ಸಚಿವರ ವಿರುದ್ಧ ವರಿಷ್ಠರಿಗೆ ಅತ್ಯಂತ ಕೆಟ್ಟ ಪತ್ರ ಬರೆಯಲಾಗಿದೆ. ಇದು ಮುಖ್ಯಮಂತ್ರಿ ತಮ್ಮ ಸಹೊದ್ಯೋಗಿಗಳ ಮೇಲೆ ಬರೆಯಬಹುದಾದ ಪತ್ರವೇ?~ ಎಂದು ಜೇಟ್ಲಿ ಅವರನ್ನು ಪ್ರಶ್ನಿಸಿದರು. `ಈ ಬಗ್ಗೆ ಭಾನುವಾರ ರಾತ್ರಿ ಮುಖ್ಯಮಂತ್ರಿ ಜತೆ ಮಾತನಾಡಲಾಗಿದೆ. ಯಾರನ್ನೂ ಸಂಪುಟದಿಂದ ಕೈಬಿಡುವುದಿಲ್ಲ. ಆ ಬಗ್ಗೆ ಆತಂಕಪಡುವ ಅಗತ್ಯವಿಲ್ಲ~ ಎಂಬ ಭರವಸೆಯನ್ನು ಜೇಟ್ಲಿ ನೀಡಿದರು. ಇವೆಲ್ಲ ಸಣ್ಣಪುಟ್ಟ ಸಮಸ್ಯೆಗಳು ಸುಸೂತ್ರವಾಗಿ ಬಗೆಹರಿಸಿಕೊಳ್ಳಬಹುದು ಎಂದೂ ಅಭಿಪ್ರಾಯಪಟ್ಟರು ಎಂದೂ ಮೂಲಗಳು ವಿವರಿಸಿವೆ,

`ಯಡಿಯೂರಪ್ಪ ಪಕ್ಷ ತೊರೆಯುವುದಿಲ್ಲ. ಅವರ ಮುಂದೆ ಯಾವುದೇ ಆಯ್ಕೆಗಳಿಲ್ಲ. ಅಷ್ಟಕ್ಕೂ 40 ವರ್ಷ ಕಟ್ಟಿ ಬೆಳೆಸಿದ ಪಕ್ಷ ಬಿಟ್ಟು ಎಲ್ಲಿಗೆ ಹೋಗುವುದು~ ಎಂದು ಸಂಸದರೊಬ್ಬರು ಕೇಳಿದರು. ಸೋಮವಾರ ಬೆಳಿಗ್ಗೆ ಶೋಭಾ ಕರಂದ್ಲಾಜೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಅವರನ್ನು ಭೇಟಿ ಮಾಡಿದ್ದರು ಎಂಬ ಸುದ್ದಿ ಹರಡಿತ್ತು. ಈ ಸುದ್ದಿಯನ್ನು ಇಬ್ಬರೂ ನಿರಾಕರಿಸಿದರು.

ಅಹ್ಮದ್ ಪಟೇಲ್ ಸ್ಪಷ್ಟನೆ: `ನಾನೇಕೆ ಶೋಭಾ ಅವರನ್ನು ಭೇಟಿ ಮಾಡಲಿ. ಬಿಜೆಪಿ ನಾಯಕರ ಮೇಲೆ ಒತ್ತಡ ಹೇರಲು ಅವರೇ (ಯಡಿಯೂರಪ್ಪ ಬಣ) ಮಾಡುತ್ತಿರುವ ತಂತ್ರಗಳಿರಬಹುದು~ ಎಂದು ಅಹಮದ್ ಪಟೇಲ್ ಸಂಸದ್ ಭವನದ ಹೊರಗೆ ಮಾಧ್ಯಮ ಪ್ರತಿನಿಧಿಗಳಿಗೆ ಸ್ಪಷ್ಟಪಡಿಸಿದರು.

ಯಡಿಯೂರಪ್ಪ ಪಕ್ಷ ಬಿಡುವುದಿಲ್ಲ ಎಂದು ಪ್ರಕಟಿಸಿದ ಬಳಿಕವೂ ಸಂಜೆ ಸಂಸದ ಸುರೇಶ್ ಅಂಗಡಿ ಮನೆಯಲ್ಲಿ ಅವರ ಆಪ್ತರು ಸಭೆ ನಡೆಸಿದರು. ಈ ಸಭೆಯಲ್ಲಿ ಬಹುತೇಕ ಸಂಸದರು ಹಾಜರಿದ್ದರು. ಮಾಜಿ ಮುಖ್ಯಮಂತ್ರಿ ಪುತ್ರ ಬಿ.ವೈ. ವಿಜಯೇಂದ್ರ ಅವರೂ ಇದ್ದರು.

`ಶಾಸಕಾಂಗ ಪಕ್ಷದ ಸಭೆ ಕರೆಯಲು ಸೂಚಿಸುವೆ~
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬೆಂಬಲಿಗರಿಗೆ ಅನ್ಯಾಯವಾಗಿದ್ದರೆ, ಅದನ್ನು ಸರಿಪಡಿಸಲಾಗುವುದು. ಶಾಸಕಾಂಗ ಪಕ್ಷದ ಸಭೆಯನ್ನು ಶೀಘ್ರದಲ್ಲೇ ಕರೆಯುವಂತೆ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರಿಗೆ ತಿಳಿಸಲಾಗುವುದು ಎಂದು ಬಿಜೆಪಿ ರಾಜ್ಯದ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಹೇಳಿದರು.

`ಪಕ್ಷ ತೊರೆಯುವುದಿಲ್ಲ~ ಎಂದು ಯಡಿಯೂರಪ್ಪ ಸೋಮವಾರ ಸ್ಪಷ್ಟಪಡಿಸಿದ ನಂತರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಈಶ್ವರಪ್ಪ, `ಅವರು ನನ್ನ ವಿರುದ್ಧ ಆರೋಪ ಮಾಡಿರಬಹುದು. ಆದರೆ, ಅವರು ಪಕ್ಷ ತೊರೆಯದಿರುವ ನಿರ್ಧಾರ ಕೈಗೊಂಡಿರುವುದು ಸಂತೋಷ ತಂದಿದೆ~ ಎಂದರು.

`ಯಡಿಯೂರಪ್ಪ ಅವರ ನಿರ್ಧಾರ ಸ್ವಾಗತಾರ್ಹ. ರೈತ ನಾಯಕರಾಗಿ ಅವರು ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ನನ್ನ ಬಗ್ಗೆ ಅವರು ತಪ್ಪು ತಿಳಿದುಕೊಂಡಿರಬಹುದು. ಈ ಕುರಿತು ಅವರೊಂದಿಗೇ ನೇರವಾಗಿ ಮಾತುಕತೆ ನಡೆಸಿ, ಸಮಸ್ಯೆ ಪರಿಹರಿಸಿಕೊಳ್ಳುತ್ತೇನೆ. ಬಿಎಸ್‌ವೈ ನೇರ ಮಾತಿನ ಮನುಷ್ಯ, ತಮಗೆ ಅನಿಸಿದ್ದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವವರಲ್ಲ. ಅವರಿಗೆ ಅನ್ಯಾಯವಾಗಿದೆ, ಮನಸ್ಸಿಗೆ ನೋವಾಗಿದೆ~ ಎಂದು ಹೇಳಿದರು.

ಸಂಪುಟದಿಂದ ಕೈಬಿಡಲ್ಲ: ಯಡಿಯೂರಪ್ಪ ಅವರಿಗೆ ರಾಜೀನಾಮೆ ಪತ್ರಗಳನ್ನು ನೀಡಿರುವ ಎಂಟು ಮಂದಿ ಸಚಿವರಲ್ಲಿ ಯಾರೊಬ್ಬರನ್ನೂ ಸಂಪುಟದಿಂದ ಕೈಬಿಡುವುದಿಲ್ಲ ಎಂದು ಸುದ್ದಿಗಾರರಿಗೆ ಅವರು ತಿಳಿಸಿದರು.

ಬಿಕ್ಕಟ್ಟಿಗೆ ಪ್ರತಿಕ್ರಿಯೆ ಇಲ್ಲ: ಸಿ.ಎಂ ಸ್ಪಷ್ಟನೆ
ಬೆಂಗಳೂರು: `ಪಕ್ಷದಲ್ಲಿ ನಡೆಯುತ್ತಿರುವ ಯಾವುದೇ ರಾಜಕೀಯ ವಿದ್ಯಮಾನ ಕುರಿತು ನಾನು ಬಹಿರಂಗ ಹೇಳಿಕೆ ನೀಡಲಾರೆ. ರಾಜಕೀಯ ಬಿಕ್ಕಟ್ಟು ಕೊನೆಗೊಳ್ಳುವವರೆಗೆ ಈ ಕುರಿತು ಬಹಿರಂಗ ಹೇಳಿಕೆ ನೀಡುವುದು ಸಲ್ಲದು ಎಂಬುದು ನನ್ನ ಭಾವನೆ~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದರು.

`ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಮುಖಂಡರ ಜೊತೆ ಮಾತುಕತೆ ನಡೆಸುತ್ತೇನೆ~ ಎಂದರು. ವಿಧಾನ ಪರಿಷತ್ತಿನ ಚುನಾವಣೆಗೆ ಸಂಬಂಧಿಸಿದಂತೆ ಮುಖಂಡರು ಹಾಗೂ ಅಭ್ಯರ್ಥಿಗಳ ಜೊತೆ ಪಕ್ಷದ ಕಚೇರಿಯಲ್ಲಿ ಸೋಮವಾರ ಚರ್ಚಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿ, `ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸುವ ಸಂಬಂಧ ಪಕ್ಷದ ಹಿರಿಯರ ಜೊತೆ ಮಾತುಕತೆ ನಡೆಸಲಾಗಿದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT