ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಗಳ ಹುರುಪು ಪ್ರಚಾರ ಚುರುಕು

Last Updated 19 ಡಿಸೆಂಬರ್ 2010, 10:10 IST
ಅಕ್ಷರ ಗಾತ್ರ


ಬೆಂಗಳೂರು: ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ  ಚುನಾವಣೆ ಸವಾಲಾಗಿ ಪರಿಣಮಿಸಿದ್ದು, ಮೂರು ಪಕ್ಷಗಳ ಘಟಾನುಘಟಿ ನಾಯಕರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ನಡೆಸಿದ್ದಾರೆ.

ಮೊದಲ ಹಂತದ ಚುನಾವಣೆಗೆ ಏಳು ದಿನ ಮಾತ್ರ ಬಾಕಿ ಉಳಿದಿದ್ದು, ಡಿಸೆಂಬರ್‌ನ ಚಳಿಯನ್ನೂ ಲೆಕ್ಕಿಸದೆ ಕಣದಲ್ಲಿರುವ ಅಭ್ಯರ್ಥಿಗಳು, ಮುಖಂಡರು, ಕಾರ್ಯಕರ್ತರು ಗ್ರಾಮೀಣ ಭಾಗದಲ್ಲಿ ಮತಯಾಚನೆಯಲ್ಲಿ ತೊಡಗಿದ್ದಾರೆ. ಸ್ಥಳೀಯವಾಗಿ ನಡೆಯುತ್ತಿರುವ ಈ ಚುನಾವಣೆ ರಾಜಕೀಯವಾಗಿ ಹೆಚ್ಚು ಮಹತ್ವ ಪಡೆದುಕೊಂಡಿರುವುದರಿಂದ ಪ್ರಚಾರ ಕಾರ್ಯ ಜೋರಾಗಿಯೇ ನಡೆದಿದೆ.

ಶನಿವಾರ ನಾಮಪತ್ರ ವಾಪಸ್ ಪಡೆಯುವ ಗಡುವು ಮುಗಿಯುತ್ತಿದ್ದಂತೆಯೇ ಕಣದಲ್ಲಿರುವ ಅಭ್ಯರ್ಥಿಗಳ ಸ್ಪಷ್ಟಚಿತ್ರಣ ಹೊರ ಬಿದ್ದಿದೆ. ಯಾವ ಯಾವ ಕ್ಷೇತ್ರಗಳಲ್ಲಿ ಎಷ್ಟು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂಬ ಮಾಹಿತಿ ಸ್ಥಳೀಯವಾಗಿ ಲಭ್ಯವಾಗಿದೆ. ಆದರೆ ಎಷ್ಟು ಮಂದಿ ನಾಮಪತ್ರಗಳನ್ನು ವಾಪಸ್ ಪಡೆದಿದ್ದಾರೆ ಎಂಬ ಒಟ್ಟಾರೆ ವಿವರ ಚುನಾವಣಾ ಆಯೋಗಕ್ಕೆ ತಲುಪುವುದು ತಡವಾಗಿದೆ.

ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಬಹುತೇಕ ಎಲ್ಲ ಕಡೆ ಕಣದಲ್ಲಿದ್ದಾರೆ. ಜೆಡಿಯು, ಬಿಎಸ್‌ಪಿ, ಕನ್ನಡ ಚಳವಳಿ ವಾಟಾಳ್ ಪಕ್ಷ, ಸಿಪಿಐ, ಸಿಪಿಎಂ ಸೇರಿದಂತೆ ಸಣ್ಣಪುಟ್ಟ ಪಕ್ಷಗಳ ಅಭ್ಯರ್ಥಿಗಳು ಕೆಲವು ಕಡೆ ಕಣದಲ್ಲಿದ್ದಾರೆ. ಇದಲ್ಲದೆ ಪಕ್ಷೇತರ ಅಭ್ಯರ್ಥಿಗಳು ಸಹ ಅದೃಷ್ಟ ಪರೀಕ್ಷೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಈ ಬಾರಿ ಕಣಕ್ಕೆ ಇಳಿದಿದ್ದಾರೆ.

12 ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ 3441 ಹಾಗೂ 15 ಜಿಲ್ಲೆಗಳ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ 11,187 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ನಾಮಪತ್ರಗಳ ಪರಿಶೀಲನೆ ನಂತರ ಜಿಲ್ಲಾ ಪಂಚಾಯಿತಿಗಳ 2733 ಹಾಗೂ ತಾಲ್ಲೂಕು ಪಂಚಾಯಿತಿಗಳ 9700 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.

30 ಜಿಲ್ಲಾ ಪಂಚಾಯಿತಿ ಮತ್ತು 176 ತಾಲ್ಲೂಕು ಪಂಚಾಯಿತಿಗಳಿಗೆ ಎರಡು ಹಂತಗಳಲ್ಲಿ ನಡೆಯುತ್ತಿರುವ ಚುನಾವಣೆ ಮೂರು ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಈ ಚುನಾವಣೆ ಅಳಿವು- ಉಳಿವಿನ ಪ್ರಶ್ನೆಯಾಗಿರುವುದರಿಂದ ಹೇಗಾದರೂ ಮಾಡಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸುವ ಮೂಲಕ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕು ಎಂಬ ಛಲದೊಂದಿಗೆ ಪ್ರಚಾರದಲ್ಲಿ ತೊಡಗಿದ್ದಾರೆ.

ಡಾ.ಜಿ.ಪರಮೇಶ್ವರ್ ಕೆಪಿಸಿಸಿ ಸಾರಥ್ಯ ವಹಿಸಿಕೊಂಡ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿರುವುದರಿಂದ ಒಂದು ರೀತಿಯಲ್ಲಿ ಅವರಿಗೂ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್‌ಗೆ ಹೊಸ ಚೈತನ್ಯವನ್ನು ತಂದುಕೊಡುವ ಹುರುಪಿನೊಂದಿಗೆ ಪರಮೇಶ್ವರ್ ಅವರು ಪ್ರಚಾರ ನಡೆಸಿದ್ದಾರೆ.

ಟಿಕೆಟ್ ಹಂಚಿಕೆಯಲ್ಲಿನ ಅಸಮಾಧಾನ, ಪಕ್ಷದಲ್ಲಿನ ಗುಂಪುಗಾರಿಕೆ, ಆತ್ಮವಿಶ್ವಾಸದ ಕೊರತೆ, ಹಣಕಾಸಿನ ಸಮಸ್ಯೆ ಇತ್ಯಾದಿಗಳಿಂದಾಗಿ ಕಾಂಗ್ರೆಸ್‌ನಲ್ಲಿ ಗೊಂದಲಗಳು ಕೇಳಿ ಬರುತ್ತಿವೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಪ್ರಚಾರ ಕಾರ್ಯವನ್ನು ಮುಗಿಸಿರುವ ಕಾಂಗ್ರೆಸ್ ಮುಖಂಡರು ಎಐಸಿಸಿ ಮಹಾ ಅಧಿವೇಶನದಲ್ಲಿ ಭಾಗವಹಿಸಲು ದೆಹಲಿಗೆ ತೆರಳಿದ್ದು, ಅಲ್ಲಿಂದ ಬಂದ ನಂತರ ಪ್ರಚಾರ ಕಾರ್ಯ ಮತ್ತಷ್ಟು ಚುರುಕುಗೊಳ್ಳುವ ನಿರೀಕ್ಷೆ ಇದೆ.

ಸರ್ಕಾರದ ಭ್ರಷ್ಟಾಚಾರ ಮತ್ತು ಯಡಿಯೂರಪ್ಪ ಕುಟುಂಬದವರು ಭಾಗಿಯಾಗಿರುವ ಹಗರಣಗಳನ್ನು ಹೊರ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜೆಡಿಎಸ್ ಸಹ ಈ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇ ಗೌಡ, ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಅವರು ಈಗಾಗಲೇ ಒಂದು ಸುತ್ತಿನ ಚುನಾವಣಾ ಪ್ರವಾಸವನ್ನು ಮುಗಿಸಿದ್ದಾರೆ.

ಹಿಂದೆ ಜನತಾ ಪರಿವಾರದಲ್ಲಿದ್ದು, ಈಗ ಬೇರೆ ಪಕ್ಷಗಳಲ್ಲಿ ಇರುವವರನ್ನು ಮರಳಿ ಜೆಡಿಎಸ್‌ಗೆ ಕರೆತರಲು ಕುಮಾರಸ್ವಾಮಿ ಗಂಭೀರ ಪ್ರಯತ್ನ ನಡೆಸಿದ್ದಾರೆ. ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷದ ಸಾಮ ರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಬೇರೆ ಪಕ್ಷಗಳ ಇನ್ನೂ ಹೆಚ್ಚಿನ ಮುಖಂಡರನ್ನು ಸೆಳೆಯುವ ಉದ್ದೇಶವನ್ನು ಅವರು ಹೊಂದಿದ್ದಾರೆ.

ರಂಗೇರುತ್ತಿರುವ ಪ್ರಚಾರ: ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರೆಲ್ಲ ರಾಜಧಾನಿ ಬಿಟ್ಟು ಹಳ್ಳಿಗಳತ್ತ ಪ್ರಚಾರಕ್ಕೆ ತೆರಳಿದ್ದಾರೆ. ಗ್ರಾಮ ಮಟ್ಟದಲ್ಲಿ ನಡೆಯುತ್ತಿರುವ ಈ ಚುನಾವಣೆ ತೀವ್ರ ಜಿದ್ದಾಜಿದ್ದಿಗೆ ಎಡೆಮಾಡಿಕೊಟ್ಟಿದ್ದು, ಕಣದಲ್ಲಿರುವ ಸ್ಥಳೀಯ ಮುಖಂಡರು ಪ್ರತಿಷ್ಠೆಯನ್ನು ಪಣಕ್ಕಿಟ್ಟು ಹೋರಾಟ ನಡೆಸುತ್ತಿದ್ದಾರೆ.

ಕಾರ್ಯಕರ್ತರಿಗೂ ಈಗ ಹಬ್ಬದ ಸಂಭ್ರಮ. ಕಳೆದ 15 ದಿನಗಳಿಂದ ಕಾರ್ಯಕರ್ತರೆಲ್ಲ ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೈತುಂಬ ಹಣವೂ ಸಿಗುತ್ತಿರುವುದರಿಂದ ಕಾರ್ಯಕರ್ತರು ಉತ್ಸಾಹದಿಂದ ಓಡಾಡುತ್ತಿದ್ದಾರೆ.

ದಿನಕ್ಕೆ ಕನಿಷ್ಠ 200ರಿಂದ 500 ರೂಪಾಯಿವರೆಗೂ ಹಣ ಗಳಿಸುತ್ತಿದ್ದಾರೆ. ಇನ್ನು 15 ದಿನಗಳ ಕಾಲ ಗ್ರಾಮ ಗಳಲ್ಲಿ ಇದೇ ರೀತಿಯ ವಾತಾವರಣ ಇರಲಿದ್ದು, ಪದೇ ಪದೇ ಚುನಾವಣೆಗಳು ಬರುವುದರಿಂದ ಮತದಾರ ರಿಗಿಂತ ಹೆಚ್ಚಾಗಿ ಕಾರ್ಯಕರ್ತರಿಗೆ, ಮಧ್ಯವರ್ತಿ ಗಳಿಗೆ ಹೆಚ್ಚಿನ ಲಾಭ ಎಂಬ ಮಾತುಗಳು ಕೇಳಿ ಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT