ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಾಂತರಿಗಳು ಮತ್ತೆ ಮುಖಾಮುಖಿ?

Last Updated 6 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಚಿತ್ರದುರ್ಗ: ಇವರು ಸದಾ ರಾಜಕೀಯದ ಕಡು ವೈರಿಗಳು. ಇವರಿಬ್ಬರ ಹೋರಾಟ ಎರಡು ದಶಕಗಳ ಕಾಲದ್ದು. ಮೂರು ಬಾರಿ ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ನಾಲ್ಕನೇ ಬಾರಿಗೆ ಕ್ಷೇತ್ರ ಬದಲಾದರೂ ಇವರು ಮುಖಾಮುಖಿಯಾಗುವುದು ತಪ್ಪಲಿಲ್ಲ.

ಕೆಜೆಪಿ ಜತೆ ಗುರುತಿಸಿಕೊಂಡು ಬಿಜೆಪಿಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಂ. ಚಂದ್ರಪ್ಪ ಮತ್ತು ಕಾಂಗ್ರೆಸ್‌ನ ಮಾಜಿ ಶಾಸಕ ಎಚ್. ಆಂಜನೇಯ ಅವರ ಚುನಾವಣೆಯ ಹೋರಾಟದ ಸಂಕ್ಷಿಪ್ತ ಚಿತ್ರಣವಿದು.

1994ರಿಂದ ಇಲ್ಲಿಯವರೆಗೂ ಇವರಿಬ್ಬರ ಜಟಾಪಟಿ ಮುಂದುವರಿದಿದೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಚಂದ್ರಪ್ಪ ಅವರು ಕೆಜೆಪಿಯಿಂದ ಸ್ಪರ್ಧಿಸುವುದು ಖಚಿತ. ಪ್ರತಿ ಚುನಾವಣೆಯಲ್ಲಿ ಪಕ್ಷ ಬದಲಾಯಿಸುವಲ್ಲಿಯೂ ನಿಸ್ಸಿಮರಾಗಿರುವ ಚಂದ್ರಪ್ಪ ಅವರು, ಈ ಬಾರಿಯೂ ಎಂದಿನಂತೆ ಹೊಸ ಪಕ್ಷಕ್ಕೆ ವಲಸೆ ಹೋಗಿದ್ದಾರೆ. ಇನ್ನೂ ಎಚ್. ಆಂಜನೇಯ ಅವರು ಕಾಂಗ್ರೆಸ್ ಟಿಕೆಟ್‌ನ ಪ್ರಮುಖ ಆಕಾಂಕ್ಷಿ.

ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಭರಮಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಇವರಿಬ್ಬರು 1994ರಿಂದ 1999ರವರೆಗೆ ಚುನಾವಣೆಗೆ ಸ್ಪರ್ಧಿಸಿದ್ದರು. 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆಯಿಂದ ಭರಮಸಾಗರ ಕ್ಷೇತ್ರ ರದ್ದುಗೊಂಡು ಹೊಳಲ್ಕೆರೆ ವಿಧಾನಸಭೆ ಕ್ಷೇತ್ರದಲ್ಲಿ (ಪರಿಶಿಷ್ಟ ಜಾತಿ) ಭರಮಸಾಗರ ಹೋಬಳಿ ವಿಲೀನವಾಯಿತು. ಮತ್ತೆ ಹೊಳಲ್ಕೆರೆ ಕ್ಷೇತ್ರಕ್ಕೆ ಈ ಇಬ್ಬರು ಲಗ್ಗೆ ಹಾಕಿದರು. ಮತದಾರರು ಚಂದ್ರಪ್ಪ ಅವರಿಗೆ ಮೂರು ಬಾರಿ ಹಾಗೂ ಆಂಜನೇಯ ಅವರಿಗೆ ಕೇವಲ ಒಂದು ಬಾರಿ ಬೆಂಬಲಿಸಿದ್ದಾರೆ.

1994ರಲ್ಲಿ ಆಂಜನೇಯ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರೆ ಚಂದ್ರಪ್ಪ ಜನತಾದಳದಿಂದ ಸ್ಪರ್ಧಿಸಿ ಜಯಭೇರಿ ಬಾರಿಸಿದ್ದರು. 1999ರಲ್ಲಿ ಆಂಜನೇಯ ಕಾಂಗ್ರೆಸ್‌ನಿಂದ ಹಾಗೂ ಚಂದ್ರಪ್ಪ ಜೆಡಿ(ಯು)ನಿಂದ ಸ್ಪರ್ಧಿಸಿದ್ದರು. ಈ ಮುಖಾಮುಖಿಯಲ್ಲೂ ಮತ್ತೆ ಚಂದ್ರಪ್ಪ ಗೆಲುವಿನ ಮಾಲೆ ಧರಿಸಿದ್ದರು.

2004ರ ಚುನಾವಣೆಯಲ್ಲಿ ಈ ಇಬ್ಬರೂ ಪಕ್ಷ ಬದಲಾಯಿಸಿದರು. ಚಂದ್ರಪ್ಪ ಕಾಂಗ್ರೆಸ್‌ನತ್ತ ಹೆಜ್ಜೆ ಹಾಕಿದರೆ, ಆಂಜನೇಯ ಜೆಡಿಯುನಿಂದ ಸ್ಪರ್ಧಿಸಿದ್ದರು. ಈ ಪಕ್ಷ ಬದಲಾವಣೆಯ ಲಾಭ ದೊರೆತಿದ್ದು ಆಂಜನೇಯ ಅವರಿಗೆ. ಬಿಜೆಪಿ ಜತೆ ಜೆಡಿಯು ಮೈತ್ರಿ ಮಾಡಿಕೊಂಡಿದ್ದು ಸಹ ಆಂಜನೇಯ  ಗೆಲುವಿನ ದಾರಿ ಸುಗಮವಾಗಿತ್ತು. 

2008ರಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾದ ಹೊಳಲ್ಕೆರೆ ಕ್ಷೇತ್ರದಿಂದ ಇಬ್ಬರೂ ಮತ್ತೊಮ್ಮೆ ತಮ್ಮ ಅದೃಷ್ಟ ಪಣಕ್ಕಿಟ್ಟರು. ಕಾಂಗ್ರೆಸ್‌ನಲ್ಲಿ ಉಂಟಾದ ಗೊಂದಲಗಳಿಂದ ಕೊನೇಕ್ಷಣದಲ್ಲಿ ಆಂಜನೇಯ ಅವರಿಗೆ ಟಿಕೆಟ್ ಲಭಿಸಿತು. ಬಿಜೆಪಿಯಿಂದ ಸ್ಪರ್ಧಿಸಿದ್ದ ಎಂ. ಚಂದ್ರಪ್ಪ ಸಮೀಪದ ಸ್ಪರ್ಧಿ ಕಾಂಗ್ರೆಸ್‌ನ ಎಚ್. ಆಂಜನೇಯ ಅವರ ವಿರುದ್ಧ  ಗೆಲುವು ಸಾಧಿಸಿದ್ದರು. ಬಿಜೆಪಿ ಅಲೆಯೂ ಚಂದ್ರಪ್ಪ ಅವರಿಗೆ ವರವಾಗಿತ್ತು.

ಈಗ ಐದನೇ ಬಾರಿ ಇಬ್ಬರೂ ಮುಖಾಮುಖಿಯಾಗುವ ಲಕ್ಷಣಗಳು ಗೋಚರಿಸುತ್ತವೆ. ಈ ಬಾರಿಯೂ ಚಂದ್ರಪ್ಪ ಮತ್ತೊಮ್ಮೆ ಪಕ್ಷಾಂತರ ಮಾಡಿ ಕೆಜೆಪಿಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT