ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಪಕ್ಷಾತೀತ ಹೋರಾಟ ನಡೆಯಬೇಕಿದೆ'

ಕಳಸಾ ಬಂಡೂರಿ ನಾಲಾ ಜೋಡಣೆ
Last Updated 15 ಜುಲೈ 2013, 4:24 IST
ಅಕ್ಷರ ಗಾತ್ರ

ನವಲಗುಂದ: `ಕಳಸಾ ಬಂಡೂರಿ ನಾಲಾ ಜೋಡಣೆ ಅನುಷ್ಠಾನಕ್ಕಾಗಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಎಲ್ಲ ಜನಪ್ರತಿನಿಧಿಗಳು, ವಿವಿಧ ರೈತಪರ ಸಂಘಟನೆಗಳು, ಪಕ್ಷಾತೀತವಾಗಿ ಉಗ್ರ ಹೋರಾಟ ಮಾಡಿ ಸರಕಾರಕ್ಕೆ ಬಿಸಿ ಮುಟ್ಟಿಸಬೇಕು' ಎಂದು ಶಾಸಕ ಎನ್.ಎಚ್. ಕೋನರಡ್ಡಿ ಅಭಿಪ್ರಾಯಪಟ್ಟರು.

ಅವರು ಭಾನುವಾರ ಇಲ್ಲಿಯ ಲೋಕೋಪಯೋಗಿ ಇಲಾಖೆ  ಪ್ರವಾಸಿ ಗೃಹದಲ್ಲಿ ಏರ್ಪಡಿಸಿದ್ದ ರೈತ ಹುತಾತ್ಮ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದರು.

ಜುಲೈ 21ರಂದು ಬೆಳಿಗ್ಗೆ 11ಗಂಟೆಗೆ ಪಕ್ಷಾತೀತವಾಗಿ ರೈತ ಹುತಾತ್ಮ ದಿನವನ್ನು ನವಲಗುಂದದಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಅಂದು ಈ ಭಾಗದ ರೈತರ ಜ್ವಲಂತ ಸಮಸ್ಯೆಗಳಾದ ಕಳಸಾ ಬಂಡೂರಿ ನಾಲಾ ಜೋಡಣೆ, ಸತತ ಮೂರು ವರ್ಷ ಬರಗಾಲದಿಂದ ತತ್ತರಿಸಿರುವ ರೈತರ ಸಾಲ ಮನ್ನಾ, ಬೆಳೆವಿಮೆ ಬಿಡುಗಡೆಗೆ ಒತ್ತಾಯ, ರೈತರ ಜಮೀನುಗಳ ರಸ್ತೆ ನಿರ್ಮಾಣಕ್ಕಾಗಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಹೋರಾಟದ ರೂಪರೇಷೆಗಳನ್ನು ಸಿದ್ಧಪಡಿಸಲಾಗುವುದು. ಅಂದು ಎಲ್ಲ ರೈತರು ತೆಗೆದುಕೊಳ್ಳುವ ನಿರ್ಧಾರನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಒಂದು ವೇಳೆ ಸರಕಾರ ಸ್ಪಂದಿಸದಿದ್ದರೆ ಬಂಡಾಯದ ನೆಲದಿಂದ ಮತ್ತೊಮ್ಮೆ ಉಗ್ರ ಹೋರಾಟ ಪ್ರಾರಂಭಿಸಲಾಗುವುದು ಎಂದು ಕೋನರಡ್ಡಿ ಎಚ್ಚರಿಸಿದರು.

ರೈತ ಹುತಾತ್ಮ ದಿನಾಚರಣೆಗೆ ಅಚ್ಚುಕಟ್ಟು ಪ್ರದೇಶದ ಎಲ್ಲ ಜನಪ್ರತಿನಿಧಿಗಳು, ರೈತ ಪರ ಸಂಘಟನೆಗಳು, ಕಳಸಾ ಬಂಡೂರಿ ನಾಲಾ ಜೋಡಣೆಗಾಗಿ ಹೋರಾಟ ಮಾಡುತ್ತಿರುವ ವಿವಿಧ ಸಮಿತಿಗಳನ್ನು ಆಹ್ವಾನಿಸಿ ವಿಚಾರ ಸಂಕಿರಣ ಏರ್ಪಡಿಸಲಾಗುವುದು. ಕಾರಣ ಈ ಬೃಹತ್ ರೈತರ ಸಭೆಗೆ ಎಲ್ಲರು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಬೇಕೆಂದು ಕೋನರಡ್ಡಿ ಮನವಿ ಮಾಡಿದರು.

ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸುವ ಬಜೆಟ್‌ನಲ್ಲಿ ಈ ಭಾಗದ ರೈತರ ಸಾಲ ಮನ್ನಾ ಮಾಡಬಹುದು, ಬೆಳೆವಿಮೆ ಬಿಡುಗಡೆ ಮಾಡಬಹುದು. ಕಳಸಾ ಬಂಡೂರಿ ನಾಲಾ ಜೋಡಣೆ ಬಗ್ಗೆ ಯೋಜನೆ ರೂಪಿಸಬಹುದೆಂದು ಆಸೆ ಇಟ್ಟುಕೊಂಡಿದ್ದೇವು. ಆದರೆ ಸಿದ್ರಾಮಯ್ಯನವರು ಅಡಿಕೆ ಬೆಳೆಗಾರರ ಸಾಲ ಮನ್ನಾ ಮಾಡಿದರೆ ಹೊರತು ಈ ಭಾಗದ ರೈತರ ಸಮಸ್ಯೆಗಳಿಗೆ ಕಿಂಚಿತ್ತು ಸ್ಪಂದಿಸಿಲ್ಲವಾದ್ದರಿಂದ ಹೋರಾಟ ಅನಿವಾರ್ಯವಾಗಿದೆ. ತಮ್ಮ ಗ್ರಾಮಗಳಿಂದ ಕನಿಷ್ಠ 200 ರೈತರನ್ನು ಕರೆತರುತ್ತೇವೆ, ಪ್ರತಿಷ್ಠೆಯನ್ನು ಬದಿಗಿಟ್ಟು ಹೋರಾಟ ಮಾಡಲು ಕೈಜೋಡಿಸುತ್ತೇವೆಂದು ಶಪಥ ಮಾಡಿದರು.

ರೈತ ಸಂಘದ ಅಧ್ಯಕ್ಷ ಇಮ್ಮಣ್ಣ ಖುದ್ದಣ್ಣವರ ಅಧ್ಯಕ್ಷತೆ ವಹಿಸಿದ್ದರು. ರೈತ ಧುರೀಣರಾದ, ಬಿ.ಬಿ. ಗಂಗಾಧರಮಠ, ಕೊಟ್ರೇಶ ಶಿರೂರ, ಲೋಕನಾಥ ಹೆಬಸೂರ, ವೀರಣ್ಣ ನೀರಲಗಿ, ದ್ಯಾಮನಗೌಡ್ರ, ಪ್ರದೀಪ ಲೆಂಕನಗೌಡ್ರ, ಡಿ.ಎಂ. ಶಲವಡಿ ಮೊದಲಾದವರು ಬಯಲು ಸೀಮೆಯ ರೈತರು ಎದುರಿಸುತ್ತಿರುವ ಸಮಸ್ಯೆಗಳು, ನೀರಿನ ತೊಂದರೆ, ಕಳಸಾ ಬಂಡೂರಿ ನಾಲಾ ಜೋಡಣೆಯ ಮಹತ್ವ, ರಾಜ್ಯ ಸರಕಾರ, ಕೇಂದ್ರ ಸರಕಾರ ಹಾಗೂ ಗೋವಾ ಸರಕಾರದ ಮೇಲೆ ಒತ್ತಡ ಹೇರುವ ಕುರಿತು ಮಾತನಾಡಿದರು.

ಬಸವರಾಜ ಹರಿವಾಳದ, ದೇವೆಂದ್ರಪ್ಪ ಹಳ್ಳದ, ದೇವಪ್ಪ ರೋಣದ, ನಾಗಪ್ಪ ಸಂಗಟಿ, ಕೃಷ್ಣಾ ಪಾಟೀಲ, ಶಂಕ್ರು ತೋಟದ, ಪ್ರಕಾಶ ಶಿಗ್ಲಿ, ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT