ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಿಗಳನ್ನೂ ಬಿಡದ ಮಲೇರಿಯಾ ಕಾಟ

ವಿಜ್ಞಾನ ಲೋಕದಿಂದ
Last Updated 31 ಜುಲೈ 2016, 19:30 IST
ಅಕ್ಷರ ಗಾತ್ರ

ನಮ್ಮ ವಿಶ್ವವು ಕ್ಷಿಪ್ರಗತಿಯಲ್ಲಿ ಬದಲಾವಣೆ  ಕಾಣುತ್ತಿದೆ. ಅನೇಕ ಪ್ರಭೇದಗಳ ಜೀವಿಗಳು ಹೆಚ್ಚಿನ ಅಕ್ಷಾಂಶಗಳಿಗೆ ಮತ್ತು ಹಚ್ಚೆಚ್ಚು ಎತ್ತರಕ್ಕೆ  ಚಲಿಸುತ್ತಿವೆ. ಇವು ತಮ್ಮೊಡನೆ ಹೊಸ ಹೊಸ ಸಾಂಕ್ರಾಮಿಕ ರೋಗಾಣುಗಳನ್ನೂ ಒಯ್ಯುತ್ತಿವೆ. ಸಾಮಾನ್ಯವಾಗಿ ಹವಾಮಾನ ಬದಲಾವಣೆ, ಸೊಳ್ಳೆ  ಮತ್ತಿತರ ಸಾಂಕ್ರಾಮಿಕ ರೋಗ ವಾಹಕಗಳಿಗೆ ತಳಿಸೃಷ್ಟಿ ಮಾಡಲು ಅತ್ಯುತ್ತಮ ಪರಿಸರವನ್ನು  ಒದಗಿಸುತ್ತವೆ.

ಈ ರೋಗಕಾರಕ ಜೀವಿಗಳು, ಮಾರ್ಪಾಟಾದ ಹವಾಮಾನ ಪರಿಸ್ಥಿತಿಯಲ್ಲಿ,  ಹುಲುಸಾಗಿ ಬೆಳೆಯುವುದರ ಜೊತೆಗೆ ತಾವು ಸಾಗಿಸಿದ ರೋಗಗಳನ್ನೂ ಅಭಿವೃದ್ಧಿಗೊಳಿಸುತ್ತವೆ. ಈ ವಾಹಕಗಳಿಂದ ಕಾಡಿನಲ್ಲಿರುವ ವಿವಿಧ ಪಕ್ಷಿ ಪ್ರಭೇದಗಳಿಗೆ ಅನೇಕ ರೀತಿಯ ಸೋಂಕು ತಗಲುತ್ತವೆ.

ಹಕ್ಕಿಗಳ ಪರಿಸರ ವಿಜ್ಞಾನ, ಸಾಂಕ್ರಾಮಿಕ ರೋಗ ಪ್ರಸರಣ, ಮತ್ತು ಹವಾಮಾನ ಬದಲಾವಣೆಯನ್ನು ಒಟ್ಟಾರೆಯಾಗಿ ಒಂದು  ವಿಶಾಲ ಜೀವವೈಜ್ಞಾನಿಕ ಶಾಖೆಯಾಗಿ ಅಧ್ಯಯನ ನಡೆಸುತ್ತಿರುವ ಡಾ.ಫರಾಹ್ ಇಷ್ತಿಯಾಕ್ ಅವರು ಇದನ್ನು ತಮ್ಮ ವಿನೂತನ ಸಂಶೋಧನಾ ಕ್ಷೇತ್ರವನ್ನಾಗಿ ಮಾಡಿಕೊಂಡಿದ್ದಾರೆ. 

  ಡಾ. ಇಷ್ತಿಯಾಕ್ ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ  'ವೆಲ್ಕಮ್ ಟ್ರಸ್ಟ್/ಭಾರತ ಒಕ್ಕೂಟ'ದ ಅಭ್ಯರ್ಥಿ. ಪರಿಸರ ವಿಜ್ಞಾನಿ ಮತ್ತು ಜೀವವಿಕಾಸ ತಜ್ಞರಾಗಿರುವ ಇವರು ಪಕ್ಷಿಗಳ ಸಾಂಕ್ರಾಮಿಕ ರೋಗಗಳನ್ನು ಅರ್ಥೈಸಿಕೊಳ್ಳಲು ಕ್ಷೇತ್ರ ಮತ್ತು ಪ್ರಯೋಗಾಲಯ ಆಧಾರಿತ ಆಣ್ವಿಕ (ಮಾಲೆಕ್ಯುಲರ್‌) ತಂತ್ರಗಳನ್ನು ಬಳಸುತ್ತಾರೆ. 

ತಾಪಮಾನ ಬದಲಾವಣೆ, ಕೀಟ ವಾಹಕಗಳ ಸಮುದಾಯ, ಪಕ್ಷಿಗಳ ವಲಸೆಯ ಮಾದರಿ ಮತ್ತು ಆವಾಸಸ್ಥಾನ ಬದಲಾವಣೆಗಳು ಪರಾವಲಂಬಿಗಳ ಸೋಂಕು ತಗಲುವ ಪ್ರಮಾಣವು ಅವುಗಳ ಹರಡುವಿಕೆ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ನಿರ್ಧರಿಸುವುದು ಇವರ ಸಂಶೋಧನೆಯ ಉದ್ದೇಶ. ಅದರಲ್ಲೂ,  ಮಲೇರಿಯ ಮತ್ತಿತರ ಸೋಂಕನ್ನು ಉಂಟುಮಾಡುವಂತಹ ರಕ್ತ ಪರಾವಲಂಬಿಗಳು ಕಂಡುಬರದ  ಎತ್ತರದ ಪ್ರದೇಶಗಳಲ್ಲಿ ಸೋಂಕು  ಹರಡುವಿಕೆ ಹೇಗಾಗುತ್ತದೆ ಎಂಬ  ಅಂಶಗಳತ್ತ ಗಮನ ಕೇಂದ್ರೀಕರಿಸಿದ್ದಾರೆ.  

‘ಮಲೇರಿಯಾ ಎಂದಾಕ್ಷಣ ಉಷ್ಣವಲಯದ ಜನರು ಸೊಳ್ಳೆಗಳಿಂದ ಕಚ್ಚಿಸಿಕೊಂಡು ಸೋಂಕು ಹೊಂದುವ ಚಿತ್ರಣ ಕಣ್ಣಮುಂದೆ ಬರುತ್ತದೆ.   ಹಕ್ಕಿಗಳಿಗೂ ಮಲೇರಿಯಾ ತಗಲುತ್ತದೆಯಾದರೂ, ಈ ಬಗ್ಗೆ ನಾವು  ಆಲೋಚಿಸುವುದೇ ಇಲ್ಲ’ ಎನ್ನುತ್ತಾರೆ ಡಾ.ಫರಾಹ್.

‘ಹಕ್ಕಿಗಳ ಮಲೇರಿಯ ಮತ್ತು ಮನುಷ್ಯರಿಗ ಬರುವ ಮಲೇರಿಯದ ನಡುವೆ ನಿಕಟ ಸಂಬಂಧವಿದೆ. ಆದರೆ, ಮಾನವನ ಮಲೇರಿಯಾದಂತೆ ಇದು  ಉಷ್ಣವಲಯಕ್ಕೆ ಮಾತ್ರ ಸೀಮಿತವಾದ ರೋಗವಲ್ಲ. ಇದು ಬೇರೆ ಬೇರೆ ಉಷ್ಣಾಂಶ ವಲಯದ ಹಕ್ಕಿಗಳಲ್ಲೂ ಇದು ಕಂಡುಬಂದಿದೆ’ ಎಂದು ಅವರು ತಿಳಿಸಿದರು.

ಸೋಂಕಿನ ತೀವ್ರತೆ ಮತ್ತು ಅಪಾಯದ ಮಟ್ಟವು ಆ ಪ್ರಭೇದದ ವಿಕಸನದ ಇತಿಹಾಸವನ್ನು ಅವಲಂಬಿಸಿರುತ್ತದೆ. ನಿರ್ದಿಷ್ಟ ಪ್ರಭೇದವು ವಿಕಸನದ ಹಾದಿಯಲ್ಲಿ  ಈ ಪರಾವಲಂಬಿಯ ಪ್ರಭಾವಕ್ಕೆ ಒಳಗಾಗಿರದಿದ್ದರೆ, ಈ ರೋಗದ ವಿರುದ್ಧ ಹೋರಾಡುವ ಪ್ರತಿರೋಧಕ  ಗುಣ ಬೆಳೆಸಿಕೊಂಡಿರುವುದಿಲ್ಲ. ಹಾಗಾಗಿ ಇಂತಹ ಪ್ರಭೇದಗಳಿಗೆ ಉಂಟಾದ ಸೋಂಕು ಹೆಚ್ಚು ತೀವ್ರವಾಗಿರಬಹುದು. ಇದಕ್ಕೆ  ಉತ್ತಮ ಉದಾಹರಣೆಯೆಂದರೆ ಹವಾಯಿ ದ್ವೀಪದ ಹಕ್ಕಿಗಳಲ್ಲಿ ಕಾಣಿಸಿಕೊಂಡ ಮಲೇರಿಯಾ.

ಮುಖ್ಯ ಪ್ರದೇಶಗಳಿಂದ ದೂರವೇ ಉಳಿದಿದ್ದ ಈ ದ್ವೀಪದ ಪ್ರಭೇದಗಳು ಲಕ್ಷಾಂತರ ವರ್ಷಗಳ ಪ್ರತ್ಯೇಕವಾಗಿಯೇ ವಿಕಸನ ಹೊಂದಿವೆ. ಈ ಕಾರಣದಿಂದ, ಇಲ್ಲಿರುವ ಹಲವಾರು ಸ್ಥಳೀಯ ಪ್ರಭೇದಗಳು ಭೂಮಿಯ ಮೇಲೆ ಮತ್ತೆಲ್ಲೂ ಕಂಡುಬಂದಿಲ್ಲ. ಹನಿ ಕ್ರೀಪರ್‌್ಸ್‌  ಜಾತಿಯ ಹಲವು ಪ್ರಭೇದದ ಪಕ್ಷಿಗಳು ಹವಾಯಿ ದ್ವೀಪ ಸಮುದಾಯದಲ್ಲಿ ಮಾತ್ರ ಕಂಡುಬರುತ್ತವೆ. 

ಮಾನವನ ಹಸ್ತಕ್ಷೇಪದ ಬಳಿಕ  ದ್ವೀಪದ ಹೊರಗಿನ ಹಕ್ಕಿಗಳ ಸಂಪರ್ಕಕ್ಕೆ ಬಂದ ಕಾರಣ ಈ ಸ್ಥಳೀಯ ಹಕ್ಕಿಗಳ  ಸಂಖ್ಯೆ ತೀವ್ರವಾಗಿ ಇಳಿಮುಖವಾಗಿದೆ. ಈ ವಿದ್ಯಮಾನಕ್ಕೆ ಅನೇಕ ಆಯಾಮಗಳಿವೆ. ವ್ಯವಸ್ಥೆಯ ಸೀಮಿತ ಸಂಪನ್ಮೂಲಗಳಿಗೆ ಸ್ಪರ್ಧಿಸುವ ಅನಿವಾರ್ಯತೆ ಇರುವ ಪರಿಸರ ವ್ಯವಸ್ಥೆ,  ಸ್ಥಳೀಯ ಪಕ್ಷಿಗಳ ಬೇಟೆಯಂಥ ಮಾನವನಿರ್ಮಿತ ಸಮಸ್ಯೆ, ಹೊಸ ಪರಾವಲಂಬಿಗಳ ಪರಿಚಯ ಮತ್ತು ವಿಕಸನದ ಹಾದಿಯಲ್ಲಿ ಅವುಗಳ ವಿರುದ್ಧ ರಕ್ಷಣಾ ತಂತ್ರ ಅಭಿವೃದ್ಧಿಯಾಗದೆ ಇರುವುದು ಮತ್ತು ಇದರ ಫಲವಾದ ಹರಡುವ ಸಾಂಕ್ರಾಮಿಕ ರೋಗಗಳು ಇವುಗಳಲ್ಲಿ ಪ್ರಮುಖವಾದುವು.

ಇತ್ತೀಚಿನ ಅಧ್ಯಯನಗಳ ಪ್ರಕಾರ, ಮಲೇರಿಯಾ ಸೋಂಕಿನ ಕಾರಣದಿಂದ, ಕಡಿಮೆ ಎತ್ತರದ ಪ್ರದೇಶಗಳಲ್ಲೂ ಹನಿಕ್ರೀಪರ್ ಹಕ್ಕಿಗಳ ಸಂಖ್ಯೆ ಇಳಿಮುಖವಾಗಿರುವುದು ಕಂಡುಬಂದಿದೆ. ಹವಾಮಾನದಲ್ಲಿ ಆಗುತ್ತಿರುವ ಪ್ರಮುಖ ಬದಲಾವಣೆಯೇ ಎತ್ತರದ ಪ್ರದೇಶಗಳಿಗೆ ಹೆಚ್ಚೆಚ್ಚು ಸೋಂಕು ಹರಡಲು ಕಾರಣವಾಗಿದೆ.  ಇತರ ಪಕ್ಷಿಗಳಿಗೆ ಹೋಲಿಸಿದರೆ ಸೋಂಕುಕಾರಕ ಪರಾವಲಂಬಿ ಬದುಕಲು ಸಾಧ್ಯವಿಲ್ಲದಷ್ಟು  ಎತ್ತರದಲ್ಲಿ ಜೀವಿಸುವ ಪಕ್ಷಿಗಳು ಇನ್ನೂ ಈ ಸೋಂಕಿನಿಂದ ದೂರ ಉಳಿದಿವೆ. 

ಆದರೆ, ತಾಪಮಾನ  ಮತ್ತು ಮಳೆಯ ಪದ್ಧತಿಯಲ್ಲಿ ಆಗುತ್ತಿರುವ ಬದಲಾವಣೆಗಳಿಂದಾಗಿ ಹಕ್ಕಿಗಳು ಈ ಸೋಂಕಿಗೆ ಬಲಿಯಾಗುವ ಪ್ರಕ್ರಿಯೆಯು ವೇಗ ಪಡೆದುಕೊಳ್ಳುತ್ತಿದೆ.
ಡಾ. ಫರಾಹ್   ಅವರು ಈ ಹಿಂದೆ ಹವಾಯಿ ದ್ವೀಪದಲ್ಲಿ ಸಂಶೊಧನೆ ಕೈಗೊಂಡಿದ್ದರಿಂದ ಹಿಮಾಲಯ ಶ್ರೇಣಿಯ ಇಳಿಜಾರುಗಳಲ್ಲೂ ಹಕ್ಕಿಗಳ ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ಬಗೆ ಹಾಗೂ ಅದು ವಿಕಸನ ಹೊಂದಿದ ಹೇಗೆ ಎಂಬ  ಪ್ರಶ್ನೆಗಳು ಅವರಲ್ಲಿ ಮೂಡಿದವು.   

ಹವಾಯಿ ದ್ವೀಪಗಳಿಗೆ ಹೋಲಿಸಿದರೆ ಹಿಮಾಲಯದ ಪರಿಸರ ವ್ಯವಸ್ಥೆ ಹೆಚ್ಚು ಸಂಕೀರ್ಣವಾಗಿದೆ. ಇಲ್ಲಿ ಅನೇಕ ಜಾತಿಯ ರಕ್ತ ಪರಾವಲಂಬಿಗಳಿವೆ.  ಹವಾಯಿ ದ್ವೀಪಗಳಲ್ಲಿ  ಮಲೇರಿಯಾ ಉಂಟುಮಾಡುವ 'ಪ್ಲಾಸ್ಮೋಡಿಯಂ ರೆಲಿಕ್ಟಮ್' ಎಂಬ ಏಕೈಕ ರೋಗಕಾರಕ  ಇತ್ತು. ಹಿಮಾಲಯ ಶ್ರೇಣಿಯ ಉದ್ದಕ್ಕೂ ಇರುವ ‘ಟೆರೈ’ ಬಯಲು ಪ್ರದೇಶವು, ಭಾರಿ ಪ್ರಮಾಣದಲ್ಲಿ ಮಲೇರಿಯಾ ಸೋಂಕು ತಗುಲಿದ ಕಾರಣಕ್ಕೆ ಕುಖ್ಯಾತಿ ಗಳಿಸಿತ್ತು.  1950ರ ದಶಕದಲ್ಲಿ ಡಿಡಿಟಿ ಬಳಸಿ ಮಲೇರಿಯಾವನ್ನು  ನಿಯಂತ್ರಿಸಲಾಯಿತು.

ಬಯಲು ಪ್ರದೇಶಗಳಲ್ಲಿರುವ ಜೀವಿವರ್ಗಗಳು ಮಲೇರಿಯ ಮತ್ತಿತರ  ರಕ್ತ ಪರಾವಲಂಬಿಗಳಿಗೆ ತಮ್ಮನ್ನು ಒಡ್ಡಿಕೊಂಡೇ, ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಳ್ಳುತ್ತಾ ವಿಕಸನಗೊಂಡಿರಬಹುದು. ಆದರೆ ಎತ್ತರದ ಪ್ರದೇಶದ ಜೀವಿಗಳು ತಮ್ಮ ವಿಕಸನದ ಹಾದಿಯಲ್ಲಿ  ಇಂತಹ ವಿವಿಧ ಪರಾವಲಂಬಿಗಳ ಸಂಪರ್ಕಕ್ಕೆ ಬಂದಿರುವ ಸಾಧ್ಯತೆ ವಿರಳ.

ಆದ್ದರಿಂದ, ಹವಾಯಿ ದ್ವೀಪದ ಉದಾಹರಣೆಯಂತೆಯೇ, ಇಲ್ಲೂ ವಿಭಿನ್ನ ಪರಿಸ್ಥಿತಿಗಳಿಗೆ ಒಡ್ಡಿಕೊಂಡ  ಹಾಗೂ ವಿಕಸನದ ಹಾದಿಯಲ್ಲಿ ಪರಾವಲಂಬಿಗಳಿಗೆ ಒಡ್ಡಿಕೊಂಡು ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಂಡ ಹಕ್ಕಿಗಳ ಸಂಪರ್ಕದಿಂದಾಗಿಯೇ  ಎತ್ತರದಲ್ಲಿ ಜೀವಿಸುವ ಪಕ್ಷಿಗಳಿಗೆ ಮಲೇರಿಯಾ ಕಾಣಿಸಿಕೊಂಡಿದೆ. 

ಎತ್ತರದ ಪ್ರದೇಶಗಳಲ್ಲಿ  ಜೀವಿಸುವ ಪಕ್ಷಿಗಳಲ್ಲಿ ಮಲೇರಿಯಾ ಕಾಣಿಸಿಕೊಂಡಿದ್ದು  ಕಡಿಮೆ. ಆದರೆ, ಬಯಲು ಪ್ರದೇಶಗಳಲ್ಲಿನ  ಪಕ್ಷಿಗಳು ಪರಾವಲಂಬಿಗಳ ಕಣಜದಂತೆ ಕೆಲಸ ನಿರ್ವಹಿಸುತ್ತವೆ. ಎತ್ತರದ ಪ್ರದೇಶಗಳಿಗೆ ವಲಸೆ ಹೋಗುವ ಪಕ್ಷಿಗಳು ತಮ್ಮ ಚಳಿಗಾಲದ ತಾಣ ಮತ್ತು ಸಂತಾನವೃದ್ಧಿಯ ತಾಣಗಳ ನಡುವೆ ಪರಾವಲಂಬಿಗಳನ್ನು ಸಾಗಿಸುವ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತವೆ. 

ಡಾ. ಫರಾಹ್ ಅವರ ಪ್ರಯೋಗಾಲಯದಲ್ಲಿ ಒಂದು ದಿನವನ್ನು ಕಳೆಯುವ ಆಕಾಶ ಸಿಕ್ಕರೆ, ಸೂಕ್ಷ್ಮ ಬಲೆಗಳನ್ನು ಬಳಸಿ ಹಿಮಾಲಯದ ಪಕ್ಷಿಗಳಿಗೆ  ಅಪಾಯವಾಗದಂತೆ ಅವುಗಳನ್ನು ಹಿಡಿಯುವುದು,   ಸೊಳ್ಳೆಗಳ ಜೊಲ್ಲು ಗ್ರಂಥಿಗಳನ್ನು  ಛೇದಿಸಿ ಸೂಕ್ಷ್ಮದರ್ಶಕದಲ್ಲಿ ಅವುಗಳನ್ನು ಕೂಲಂಕಷವಾಗಿ ಅಭ್ಯಸಿಸುವುದು ಅಥವಾ ವಿವಿಧ ಮಾದರಿ
'ಡಿಎನ್ಎ'ಗಳನ್ನು ಅನುಕ್ರಮಕರಣ ಯಂತ್ರದೊಳಗೆ ಹಾಯಿಸಿ ವಿಶ್ಲೇಷಿಸುವುದು - ಹೀಗೆ ಹತ್ತು ಹಲವು ಸುಧಾರಿತ ಕಾರ್ಯವಿಧಾನಗಳಿಗೆ ಸಾಕ್ಷಿಯಾಗಬಹುದು. 
 
‘ನಾನು ಹೊರಾಂಗಣದಲ್ಲಿ, ಅದರಲ್ಲೂ, ನೈಸರ್ಗಿಕ ಸ್ಥಳಗಳಲ್ಲಿ ವನ್ಯಜೀವಿಗಳೊಡನೆ ಸಮಯ ಕಳೆಯಲು  ಇಷ್ಟಪಡುತ್ತೇನೆ. ಕ್ಷೇತ್ರ ಸಂಶೋಧನಾ ಘಟಕ ಹೊಂದಿರುವುದು, ನನ್ನ ಸಂಶೋಧನೆಗೆ ಹೊಸ ಆಯಾಮ ನೀಡಲು ನೆರವಾಗಿದೆ’ ಎನ್ನುತ್ತಾರೆ ಡಾ. ಫರಾಹ್.

ವಿಶ್ವದ ಸಮೃದ್ಧ ಜೀವವೈವಿಧ್ಯ ತಾಣಗಳಲ್ಲಿ ಒಂದಾದ, ಕ್ಷಿಪ್ರಗತಿಯಲ್ಲಿ ಅರಣ್ಯನಾಶಕ್ಕೆ ಒಳಪಡುತ್ತಿರುವ ಅತ್ಯಂತ ಎತ್ತರದ ಪ್ರದೇಶದಲ್ಲಿ ಕಾಡುವಾಸಿ ಪಕ್ಷಿಗಳಲ್ಲಿ ಕಂಡುಬರುವ ಸಾಂಕ್ರಾಮಿಕ ರೋಗಕ್ಕೂ ಹವಾಮಾನ ಹಾಗೂ ಅರಣ್ಯನಾಶಕ್ಕೂ ಇರುವ ಸಂಕೀರ್ಣ  ಸಂಬಂಧದ ರಹಸ್ಯ ಕಳಚುವ ಮೊದಲ ಪ್ರಯತ್ನ  ಈ ಸಂಶೋಧನೆ.

ಮಲೇರಿಯಾ ಉಂಟುಮಾಡುವ 'ಪ್ಲಾಸ್ಮೋಡಿಯಂ'  ಜೊತೆಗೆ  ಹಿಮಾಲಯದಲ್ಲಿ ಇತರ ವಾಹಕಗಳ ಮುಖಾಂತರ ರೋಗ ಹರಡುವ ರಕ್ತ ಪರಾವಲಂಬಿಗಳಾದ 'ಹೀಮೊಪ್ರೋಟಿಯಸ್' ಮತ್ತು 'ಲ್ಯೂಕೊಸೈಟೊಝೂನ್' ಬಗ್ಗೆಯೂ   ಡಾ. ಫರಾಹ್ ಅಧ್ಯಯನ ಮಾಡುತ್ತಿದ್ದಾರೆ. ದಕ್ಷಿಣ ಏಷ್ಯಾದಲ್ಲಿ ಸಾಂಕ್ರಾಮಿಕ ರೋಗಗಳ ವಿಕಾಸ ಮತ್ತು ಪರಿಸರ ವಿಜ್ಞಾನದ ಕುರಿತ ಅನೇಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

  - ಗುಬ್ಬಿ ಲ್ಯಾಬ್ಸ್‌
(ಸಂಶೋಧನಾ ಚಟುವಟಿಕೆಗಳ ಬಗ್ಗೆ ವ್ಯವಹರಿಸುವ ಸಾಮಾಜಿಕ ಉದ್ಯಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT