ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಿಧಾಮದಲ್ಲಿ ಸರಿಗಮ

Last Updated 15 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮರ ಗಿಡಗಳ ಮೇಲೆ ಬಣ್ಣ ಬಣ್ಣದ ಚಿತ್ತಾರ. ಇದೇನು ಹೂವುಗಳ ರಾಶಿಯೇ ಎಂದು ನೋಡುವಷ್ಟರಲ್ಲಿಯೇ ಕಿವಿಗೆ ಕೇಳಿ ಬರಲಿದೆ ಹಕ್ಕಿಗಳ ಇಂಪಾದ ಇಂಚರ, ದುಂಬಿಗಳ ಝೇಂಕಾರ, ನಡುನಡುವೆ ಕರ್...ಕರ್... ಅಪಸ್ವರ!

-ಇದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ 16 ಕಿ.ಮೀ. ದೂರದ ಬನವಾಸಿಯ ಕ್ಷೇತ್ರದ ಬಳಿ ಇರುವ ಗುಡವಿ ಪಕ್ಷಿಧಾಮದ ಚಿತ್ರಣ.

ಬೂದು, ಬಿಳಿ ಬಣ್ಣದ ಕ್ರೌಂಚ ಹಕ್ಕಿ, ಹೊಟ್ಟೆಬಾಕ ಕಡಲ ಹಕ್ಕಿ, ಕಲ್ಲುಗೊರವ, ನೀರು ಕಾಗೆ, ಕೆಂಪು ಟಿಟ್ಟಿಬಾ, ನೀರು ಬಾತುಕೋಳಿ, ಕಾಟನ್ಟೇಲ್, ಕೆನ್ನೇಲಿ ಚೌಗು ಕೋಳಿ, ಗೋವಕ್ಕಿ, ಬೆಳ್ಳಕ್ಕಿ, ಭತ್ತದ ಹಕ್ಕಿ ಅಬ್ಬಬ್ಬಾ ಒಂದೇ ಎರಡೇ... ಸಾವಿರಾರು ಪಕ್ಷಿಗಳ ಕೂಟ.

ದೇಶಿ ತಳಿಗಳಷ್ಟೇ ಅಲ್ಲ, ವಿದೇಶಿ ಸುಂದರಿಯರೂ ಇಲ್ಲಿದ್ದಾರೆ. ಆಸ್ಟ್ರೇಲಿಯಾ, ಶ್ರಿಲಂಕಾ, ಸ್ಕಾಟ್‌ಲ್ಯಾಂಡ್ ಮೊದಲಾದ ದೇಶಗಳಿಂದ ಬಂದ ಈ ಅತಿಥಿಗಳು ಪಕ್ಷಿಪ್ರಿಯರಿಗೆ ರಸದೌತಣವನ್ನೇ ಬಡಿಸುತ್ತವೆ. ಕಣ್ಣು ಹಾಯಿಸಿದಷ್ಟೂ ಇನ್ನಷ್ಟು, ಮತ್ತಷ್ಟು...

73.68 ಹೆಕ್ಟೇರ್ ವಿಸ್ತೀರ್ಣವಿದೆ ಈ ಧಾಮ. ರಾಷ್ಟ್ರದ ಟಾಪ್ 10 ಹಾಗೂ ಕರ್ನಾಟಕದ ಟಾಪ್ 5 ಪಕ್ಷಿಧಾಮದಲ್ಲಿ ಇದೂ ಸೇರಿದೆ. ಕರ್ನಾಟಕದ ಎರಡನೆಯ ದೊಡ್ಡ, ಸುಂದರ ಧಾಮ ಎಂಬ ಖ್ಯಾತಿ ಇದರದ್ದು.

1993ರ ಸಮೀಕ್ಷೆ ಪ್ರಕಾರ, ಇಲ್ಲಿ ಒಟ್ಟು 191 ಜಾತಿಯ ಪಕ್ಷಿ ಸಂಕುಲಗಳು ಪ್ರತಿ ವರ್ಷ ದೇಶ ವಿದೇಶಗಳಿಂದ ವಲಸೆ ಬರುತ್ತವೆ. 30 ಹೆಕ್ಟೇರ್ ಪ್ರದೇಶ ನೀರಿನಿಂದ ಕೂಡಿದೆ. ಇಲ್ಲಿರುವ ಕೆರೆ ಹಾಗೂ ಮರಗಳೇ ಅವುಗಳಿಗೆ ಆಶ್ರಯ.
 
ಮಳೆಗಾಲದಲ್ಲಿ ನೀರು ತುಂಬಿಕೊಂಡು ಹರಿಯುವ ಈ ಕೆರೆಯಲ್ಲಿ ಕೆಲ ಪಕ್ಷಿಗಳ ಸರಸಾಟದ ಕ್ಷಣ ನೋಡುವುದೇ ಅಂದ. 63 ಜಾತಿಯ ಪಕ್ಷಿ ಸಂಕುಲಗಳು ಜಲಾಶ್ರಿತವಾಗಿರುವ ಕಾರಣ, ಅಲ್ಲಿಯೇ ಅವುಗಳ ಸಂತಾನೋತ್ಪತ್ತಿ ನಡೆಯುತ್ತದೆ.

ಹಾದಿ ಸುಗಮವಲ್ಲ: ರಾಷ್ಟ್ರಮಟ್ಟದ ಖ್ಯಾತಿಗೆ ಒಳಗಾಗಿರುವ ಈ ಪಕ್ಷಿಧಾಮಕ್ಕೆ ಹೋಗಲು ಹರಸಾಹಸ ಮಾಡಬೇಕಾದುದು ದುರ್ದೈವ.
 
ಯಾವುದೇ ಊರುಗಳಿಂದ ಬಂದರೂ ಮುಖ್ಯ ರಸ್ತೆಯವರೆಗಿನ ದಾರಿ ಚೆನ್ನಾಗಿಯೇ ಇದೆ. ಆದರೆ, ಸೊರಬ-ಆನವಟ್ಟಿ ಮುಖ್ಯ ರಸ್ತೆಯಿಂದ ಚಿತ್ರಟ್ಟೆಹಳ್ಳಿ ಕ್ರಾಸ್ ಮೂಲಕ ಪಕ್ಷಿಧಾಮಕ್ಕೆ ಹೋಗುವ ಸುಮಾರು 7 ಕಿ.ಮೀ ರಸ್ತೆ ಹದಗೆಟ್ಟು ಹೋಗಿದೆ.

ಇದರಿಂದ ಇಲ್ಲಿ ಸರ್ಕಸ್ ಮಾಡಿಯೇ ಪಕ್ಷಿ ನೋಡಲು ಹೋಗಬೇಕಾದ ಅನಿವಾರ್ಯತೆ.
ಈ ಧಾಮದ ನಿರ್ವಹಣೆಯನ್ನು ಕಾರ್ಗಲ್ ವನ್ಯಜೀವಿ ಇಲಾಖೆಗೆ ವಹಿಸಿಕೊಡಲಾಗಿದೆ. ಆದರೆ ನಿರ್ವಹಣೆಯ ಕೊರತೆ ಎದ್ದು ಕಾಣುತ್ತದೆ. ಪಕ್ಷಿ ವೀಕ್ಷಣೆಗೆ ಮೇಲು ಗೋಪುರ ಇದ್ದರೂ ಅದು ಸಹಕಾರಿಯಾಗಿಲ್ಲ.
 
ಕೆಲವು ಪುಂಡರು ಪಕ್ಷಿಗಳನ್ನು ಬೇಟೆಯಾಡುತ್ತಿದ್ದಾರೆ ಎಂಬ ದೂರುಗಳು ಕೂಡ ಇವೆ. ಜಲವಿಹಾರ ವ್ಯವಸ್ಥೆ ಇದೆ. ಮಕ್ಕಳಿಗೆ ಆಟಿಕೆಯ ವ್ಯವಸ್ಥೆಯೂ ಇದೆ. ಆದರೆ ಇವುಗಳ ಸಮರ್ಪಕ ನಿರ್ವಹಣೆ ಇಲ್ಲ. ಇವುಗಳಿದ್ದರೂ ಪ್ರವಾಸಿಗರು ಮಜ ಅನುಭವಿಸುವಂತಿಲ್ಲ.
 
ಶುಲ್ಕಕ್ಕೆ ವಿರೋಧ: 13 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ ಇದ್ದರೂ ದೊಡ್ಡವರಿಗೆ ತಲಾ 50 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಈ ಮುಂಚೆ 15 ರೂಪಾಯಿ ಶುಲ್ಕವಿತ್ತು. ನಂತರ ಅದನ್ನು 25 ರೂಪಾಯಿಗಳಿಗೆ ಏರಿಸಲಾಗಿತ್ತು.

ಆಗಲೇ ಪ್ರವಾಸಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅದನ್ನು ಪುನಃ 15 ರೂಪಾಯಿಗಳಿಗೆ ಇಳಿಸಲಾಗಿತ್ತು. ಆದರೆ 3-4 ವರ್ಷದಿಂದ ಈಚೆಗೆ ಶುಲ್ಕವನ್ನು 50 ರೂಪಾಯಿಗೆ ಹೆಚ್ಚಿಸಲಾಗಿದೆ.

ಶುಲ್ಕ ದುಬಾರಿಯಾಗಿದೆ ಎಂಬ ಕಾರಣದಿಂದ ಈಚೆಗಷ್ಟೇ ಸಾಕಷ್ಟು ಪ್ರತಿಭಟನೆಗಳು ನಡೆದಿವೆ. ಪಕ್ಷಿಧಾಮದ ಅಭಿವೃದ್ಧಿಗೆ ಈ ಶುಲ್ಕ ಪಡೆಯಲಾಗುತ್ತಿದೆ ಎನ್ನುವುದು ಅರಣ್ಯ ಇಲಾಖೆ ಪ್ರತಿಕ್ರಿಯೆ.

ಪ್ರಕೃತಿಯ ಕೊಡುಗೆಯಾದ ಈ ಪಕ್ಷಿಧಾಮದ ಅಭಿವೃದ್ಧಿ ಮಾಡುವುದು ದೂರದ ಮಾತು. ಸರಿಯಾದ ನಿರ್ವಹಣೆ ಕೂಡ ಮಾಡದೆ, ಅರಣ್ಯ ಇಲಾಖೆ ಹಣದ ದುರುಪಯೋಗ ಮಾಡಿಕೊಳ್ಳುತ್ತಿದೆ ಎನ್ನುವುದು ಪಕ್ಷಿ ಪ್ರಿಯರ ಆರೋಪ.

ದಾರಿ ಹೀಗೆ...
ಶಿವಮೊಗ್ಗದಿಂದ ಬಂದರೆ -ಶಿಕಾರಿಪುರ-ಸೊರಬ,

ಹಾವೇರಿಯಿಂದ ಆನವಟ್ಟಿ-ತವನಂದಿ-ಗುಡವಿ,

ಉತ್ತರ ಕನ್ನಡ ಜಿಲ್ಲೆಯಿಂದ ಶಿರಸಿ-ಸಿದ್ದಾಪುರ-ಚಂದ್ರಗುತ್ತಿ, ಸಾಗರ-ಕೆಳದಿ- ಕಡಸೂರು ಮಾರ್ಗ.

ಬೆಂಗಳೂರಿನಿಂದ 274 ಕಿ.ಮೀ

ಮಂಗಳೂರಿನಿಂದ 200 ಕಿ.ಮೀ

ಹುಬ್ಬಳ್ಳಿಯಿಂದ 165 ಕಿ.ಮೀ

ಪಕ್ಷಿಧಾಮದ ಸಮಯ:ಬೆಳಿಗ್ಗೆ 6ರಿಂದ ಸಂಜೆ 6

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT