ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷೇತರ ಅಭ್ಯರ್ಥಿ ಗೆಲ್ಲಿಸಲು ಬಿಜೆಪಿ ಪಣ!

ಕ್ಷೇತ್ರ ವಿಶೇಷ
Last Updated 9 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಉಡುಪಿ: ನಗರ, ಗ್ರಾಮೀಣ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಯ ಗಳಿಸಿರುವ ಬಿಜೆಪಿಯ ಸದಸ್ಯರೆಲ್ಲರೂ ಒಂದಾಗಿ ಪಕ್ಷೇತರ ಅಭ್ಯರ್ಥಿಯ ಗೆಲುವಿಗೆ ಟೊಂಕಕಟ್ಟಿ ನಿಂತಿರುವುದು ಉಡುಪಿ ಜಿಲ್ಲೆ ಕುಂದಾಪುರ ವಿಧಾನಸಭಾ ಕ್ಷೇತ್ರದ ವಿಶೇಷತೆಯಾಗಿದೆ.

ಅಭಿಮಾನಿಗಳಿಂದ `ಕರಾವಳಿಯ ವಾಜಪೇಯಿ' ಎಂದು ಕರೆಯಿಸಿಕೊಳ್ಳುವ ಕುಂದಾಪುರ ಕ್ಷೇತ್ರದ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಸಂಪುಟದಲ್ಲಿ ಸ್ಥಾನ ನೀಡುವುದಾಗಿ ಆಹ್ವಾನಿಸಿ ಕೊನೆ ಕ್ಷಣದಲ್ಲಿ ಮಂತ್ರಿಗಿರಿ ನೀಡದ ಹಿನ್ನೆಲೆಯಲ್ಲಿ ಹಾಲಾಡಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

`ಕುಂದಾಪುರ ಕ್ಷೇತ್ರದಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ಕಣಕ್ಕಿಳಿಸಿದರೂ ಬಿಜೆಪಿಯ ಬಹುತೇಕ ಕಾರ್ಯಕರ್ತರು ಹಾಲಾಡಿ ಅವರ ಪರವಾಗಿ ಕೆಲಸ ಮಾಡಲಿದ್ದಾರೆ. ವೈಯಕ್ತಿಕ ವರ್ಚಸ್ಸಿನಿಂದ ಕ್ಷೇತ್ರದ ಜನರ ಪ್ರೀತಿಗೆ ಪಾತ್ರರಾಗಿರುವ ಹಾಲಾಡಿ ಅವರ ವಿರುದ್ಧವೇ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಸೆಣಸಬೇಕಾದ ಅನಿವಾರ್ಯತೆ ಇದೆ' ಎನ್ನುತ್ತಾರೆ ಅವರ ಅಭಿಮಾನಿಗಳು.

ಕುಂದಾಪುರ ಕ್ಷೇತ್ರವ್ಯಾಪ್ತಿಯ ಎಂಟು ಮಂದಿ ತಾಲ್ಲೂಕು ಪಂಚಾಯಿತಿ ಸದಸ್ಯರು ಮತ್ತು ನಾಲ್ವರು ಜಿಲ್ಲಾ ಪಂಚಾಯಿತಿ ಸದಸ್ಯರು ಹಾಲಾಡಿ ಅವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಕುಂದಾಪುರ ನಗರಸಭೆ ಚುನಾವಣೆಯಲ್ಲಿ ಹಾಲಾಡಿ ಅವರ ಎಂಟು ಮಂದಿ ಬೆಂಬಲಿಗರು ಜಯ ಸಾಧಿಸಿದ್ದಾರೆ. ಈ ಎಲ್ಲರೂ ಹಾಲಾಡಿ ಅವರ ಪರವಾಗಿಯೇ ಚುನಾವಣಾ ಪ್ರಚಾರ ವಮಾಡಲು ನಿರ್ಧರಿಸಿದ್ದಾರೆ. ಕೆಲವರು ಬಹಿರಂಗವಾಗಿಯೇ ಇದನ್ನು ಘೋಷಿಸಿದ್ದರೆ, ಇನ್ನೂ ಕೆಲವರು ಪರೋಕ್ಷವಾಗಿ ಕೆಲಸ ಮಾಡುತ್ತಿದ್ದಾರೆ.

ಪಕ್ಷ ಮುಖ್ಯವಲ್ಲ ವ್ಯಕ್ತಿ: `ನಮಗೆ ಪಕ್ಷ ಮುಖ್ಯವಲ್ಲ ವ್ಯಕ್ತಿ ಮುಖ್ಯ. ಹಾಲಾಡಿ ಅವರ ಪ್ರಾಮಾಣಿಕತೆ, ಸಾಮಾಜಿಕ ನ್ಯಾಯದ ಕಲ್ಪನೆ ಇವುಗಳಿಂದ ಪ್ರಭಾವಿತರಾಗಿರುವುದರಿಂದ ಅವರ ಗೆಲುವಿಗೆ ಶ್ರಮಿಸುತ್ತೇವೆ' ಎಂದು ಸ್ಥಳೀಯ ಸಂಸ್ಥೆಯ ಚುನಾಯಿತ ಪ್ರತಿನಿಧಿಗಳು `ಪ್ರಜಾವಾಣಿ'ಗೆ ತಿಳಿಸಿದರು.

ಪಕ್ಷ ವಿರೋಧಿ ಚಟುವಟಿಕೆ ಮೇಲೆ ನಿಮ್ಮ ವಿರುದ್ಧ ಕ್ರಮ ಕೈಗೊಂಡರೆ ಏನು ಮಾಡುತ್ತೀರಾ ಎಂದು ಪ್ರಶ್ನಿಸಿದರೆ, `ಹಾಲಾಡಿ ಅವರನ್ನು ಬೆಂಬಲಿಸುತ್ತಿರುವ ಚುನಾಯಿತ ಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಂಡರೆ ಈ ಭಾಗದಲ್ಲಿ ಬಿಜೆಪಿ ಚುನಾಯಿತ ಪ್ರತಿನಿಧಿಗಳೆಲ್ಲರೂ ಖಾಲಿ ಆಗುತ್ತಾರೆ. ಯಾರೊಬ್ಬರೂ ಪಕ್ಷದಲ್ಲಿ ಉಳಿಯುವುದಿಲ್ಲ' ಎಂಬ ಉತ್ತರ ಬರುತ್ತದೆ.

ಹಾಲಾಡಿ ಅವರ ಚುನಾವಣಾ ಪ್ರಚಾರ ಕಚೇರಿ ಉದ್ಘಾಟನಾ ಸಮಾರಂಭದಲ್ಲಿಯೂ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ನಗರಸಭೆ ಸದಸ್ಯರು ಪಾಲ್ಗೊಂಡಿದ್ದಾರೆ.

ಕುಂದಾಪುರದಲ್ಲಿ ಕೆಲ ದಿನಗಳ ಹಿಂದೆ ನಡೆದ ಸಭೆಯೊಂದರಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಉದಯ್‌ಕುಮಾರ್ ಶೆಟ್ಟಿ, ಹಾಲಾಡಿ ಅವರ ಪರವಾಗಿ ಕೆಲಸ ಮಾಡುತ್ತಿರುವವರ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಪಕ್ಷ ವಿರೋಧಿ ಕೆಲಸ ಮಾಡುವವರು ಪಕ್ಷ ಬಿಟ್ಟು ತೊಲಗಿ ಎಂದು ಬಹಿರಂಗವಾಗಿ ಹೇಳಿದ್ದರು. ಆ ನಂತರವೂ ಯಾವುದೇ ಪರಿಣಾಮ ಆಗಿಲ್ಲ.

ಕುಂದಾಪುರದಿಂದ ಸ್ಥಳೀಯ ಮುಖಂಡ ಕಿಶೋರ್ ಕುಮಾರ್ ಅವರನ್ನು ಕಣಕ್ಕಿಳಿಸುವುದಾಗಿ ಬಿಜೆಪಿ ಘೋಷಿಸಿದೆ. ಕೊನೆಯ ಕ್ಷಣದಲ್ಲಿ ಅಭ್ಯರ್ಥಿ ಬದಲಾದರೂ ಆಶ್ಚರ್ಯವಿಲ್ಲ. ಬಿಜೆಪಿಯ ಅಧಿಕೃತ ಅಭ್ಯರ್ಥಿ ಯಾರೇ ಆದರೂ ಕಾರ್ಯಕರ್ತರನ್ನು ಹುಡುಕಿಕೊಳ್ಳಬೇಕಾದ ಪರಿಸ್ಥಿತಿ ಬಿಜೆಪಿಯದ್ದಾಗಿದೆ. ಕಾಂಗ್ರೆಸ್‌ನಿಂದ ಮಲ್ಯಾಡಿ ಶಿವರಾಮಶೆಟ್ಟಿ ಸ್ಪರ್ಧಿಸುತ್ತಿದ್ದಾರೆ. ಹಾಲಾಡಿ ಅವರಿಗೆ ಜೆಡಿಎಸ್ ಈಗಾಗಲೇ ಬೆಂಬಲ ಘೋಷಿಸಿದೆ.

ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಸತತ ಮೂರು ಬಾರಿ ಗೆಲವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧಿಸಿದ್ದಾರೆ. ಈಗ ನಾಲ್ಕನೇ ಬಾರಿ ಅವರು ಕಣದಲ್ಲಿದ್ದಾರೆ. 1998ರ ಚುನಾವಣೆಯಲ್ಲಿ  ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟಿ ಅವರ ವಿರುದ್ಧ 1,020 ಮತಗಳ ಅಂತರದ ಗೆಲುವು ದಾಖಲಿಸಿದ್ದರು.

2004ರಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ಅಶೋಕ ಕುಮಾರ್ ಹೆಗ್ಡೆ ಅವರನ್ನು 19,700 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.

2009ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ. ಜಯಪ್ರಕಾಶ ಹೆಗ್ಡೆ ಅವರನ್ನು 25,083 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು. ಪ್ರತಿ ಬಾರಿಯೂ ಅವರ ಗೆಲುವಿನ ಅಂತರ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT