ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಗಡೆಯಾಟ

Last Updated 23 ಜೂನ್ 2012, 19:30 IST
ಅಕ್ಷರ ಗಾತ್ರ

ಚಿತ್ರ: ಶಕುನಿ (ತಮಿಳು)

ನಿರ್ಮಾಪಕ: ಆಂಟೋನಿ ಕ್ಸೇವಿಯರ್
ನಿರ್ದೇಶಕ: ಎನ್. ಶಂಕರ್ ದಯಾಳ್
ತಾರಾಗಣ: ಕಾರ್ತಿ, ಪ್ರಣೀತಾ, ಸಂತಾನಂ, ಪ್ರಕಾಶ್ ರೈ, ಅನುಷ್ಕಾ ಶೆಟ್ಟಿ, ರೋಜಾ, ರಾಧಿಕಾ ಶರತ್‌ಕುಮಾರ್, ಕೋಟ ಶ್ರೀನಿವಾಸರಾವ್, ನಾಸೆರ್, ಕಿರಣ್ ರಾಥೋಡ್ ಮತ್ತಿತರರು.

ಅದೊಂದು ಆಟ. ಸೋಲು ಗೆಲುವಿನ ರಾಜಕೀಯ ಜೂಜಾಟ. ಇಲ್ಲಿ ಪಾತ್ರಧಾರಿಯಾಗಿದ್ದವನು ಸೂತ್ರಧಾರನಾಗುತ್ತಾನೆ. ಶಕುನಿಯಾಗಿ ಶತ್ರುವನ್ನು ಕಾಡುತ್ತಾನೆ. ಪ್ರಜಾಪ್ರಭುತ್ವ ಕಾಲದ ಮಹಾಭಾರತದ ಕತೆ ಹೇಳುತ್ತಾನೆ. ಆದರೆ ಆತನದು ರಕ್ತ ಕಾರುವ ರಣನೀತಿಯಲ್ಲ,  ಜೀವಪರವಾದ ಜನನೀತಿ. 

ಯೌವನದ ಅಲೆಯಲ್ಲಿ ತೇಲುತ್ತಿರುವ ಹುಡುಗ ಕಮಲಕಣ್ಣನ್ (ಕಾರ್ತಿ). ನಾಲ್ಕು ಜನರಿಗೆ ಅನ್ನ ಹಾಕಿ ಸಲುಹಿದ ಕುಟುಂಬದಿಂದ ಬಂದಾತ. ಊರಿನಲ್ಲಿ ದೊಡ್ಡ ಮನೆ ಇದೆ. ರೈಲ್ವೆ ಯೋಜನೆ ಆ ಮನೆಯನ್ನು ಬಲಿ ಪಡೆದಿದೆ. ಇದನ್ನು ಹೇಗಾದರೂ ತಪ್ಪಿಸುವಂತೆ ಕೇಳಿಕೊಳ್ಳಲು ಮುಖ್ಯಮಂತ್ರಿ ಭೂಪತಿಯ (ಪ್ರಕಾಶ್ ರೈ) ಬಳಿಗೆ ಧಾವಿಸುತ್ತಾನೆ. ಆಗ ಆತನಿಗೊಂದು ಸತ್ಯ ಸಂಗತಿ ತಿಳಿಯುತ್ತದೆ. ಇಡೀ ಯೋಜನೆಯ ಸೂತ್ರಧಾರ ಸ್ವತಃ ಮುಖ್ಯಮಂತ್ರಿ. ಹೇಳಿಕೇಳಿ ಆತ ದುರುಳ. ಆದರೆ ಕಮಲಕಣ್ಣನ್ ದಾಳ ಉರುಳಿಸುವುದರಲ್ಲಿ ನಿಪುಣ. ಪಗಡೆಯಾಟದಲ್ಲಿ ಜಯ ಹೇಗೆ ಅವನದಾಗುತ್ತದೆ ಎಂಬುದು ಕತೆಯ ಮಿಕ್ಕರ್ಧ. 

ಕಾರ್ತಿ ಅಭಿನಯದಲ್ಲಿ ಪರಿಶ್ರಮ ಎದ್ದು ಕಾಣುತ್ತದೆ. ಕತೆಗೆ ಪೂರಕವಾದ ನಟನೆ ಅವರದು. ಕುಣಿತ, ಹೊಡೆದಾಟದಲ್ಲೂ ಅವರು ಸೈ. ಬಿರುಗಾಳಿಯಂಥ ಕತೆಯಲ್ಲಿ ತಂಗಾಳಿಯಾಗಿ ಬರುವವರು ನಾಯಕಿ ಪ್ರಣೀತಾ. ಆದರೆ ಆ ತಂಗಾಳಿ, ಹಾಡು ಮತ್ತು ಕೆಲವು ದೃಶ್ಯಗಳಿಗಷ್ಟೇ ಸೀಮಿತ.

ಪೋಷಕ ಪಾತ್ರಗಳನ್ನು ಹೊಸ ರೀತಿಯಲ್ಲಿ ದುಡಿಸಿಕೊಂಡಿರುವ ನಿರ್ದೇಶಕರ ಜಾಣ್ಮೆ ಎದ್ದುಕಾಣುವಂತಿದೆ. ಅನುಷ್ಕಾ ಶೆಟ್ಟಿ ಪೊಲೀಸ್ ಅಧಿಕಾರಿಯಾಗಿ ಹಾಗೂ ಖಳನಾಯಕರಾಗಿಯೇ ಹೆಚ್ಚು ಗಮನ ಸೆಳೆದ ನಾಸೆರ್, ಕೋಟ ಶ್ರೀನಿವಾಸರಾವ್ ನಗೆಯುಕ್ಕಿಸುವ ಅಸಹಾಯಕ ಪಾತ್ರಗಳಲ್ಲಿ, ಭಾವುಕ ಪಾತ್ರಗಳಿಗೆ ಬಹುಪಾಲು ಮೀಸಲಾಗಿದ್ದ ರಾಧಿಕಾ ರಾಜಕಾರಣಿಯಾಗಿ, ಒಂದು ಕಾಲದ ಬೇಡಿಕೆಯ ನಾಯಕ ನಟಿ ರೋಜಾ ನಾಯಕನ ಅತ್ತೆಯಾಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಭಿನ್ನ ಪ್ರಯೋಗ. ಎಂದಿನಂತೆ ಪ್ರಕಾಶ್ ರೈ ಖಳತ್ವಕ್ಕೆ ಕಳೆ ತುಂಬಿದ್ದಾರೆ.

ರಜನಿ ಹೆಸರಲ್ಲಿ ಸಂತಾನಂ ಹಾಗೂ ಕಮಲ್ ಹೆಸರಿನಲ್ಲಿ ಕಾರ್ತಿ ಹರಿಸುವ ಹಾಸ್ಯದ ಹೊಳೆ ಪ್ರೇಕ್ಷಕರಿಗೆ ಇಷ್ಟವಾಗಬಲ್ಲದು. ರಾಜಕೀಯದ ಪ್ರಸ್ತುತ ಸ್ಥಿತಿಯನ್ನು ಅತಿರೇಕಕ್ಕೆ ಕೊಂಡೊಯ್ಯದೆ ಅಣಕವಾಡಲಾಗಿದೆ. ಭೂಪತಿಯ ಮಾತುಗಳಲ್ಲಿಯೂ ಚುರುಕಾದ ವ್ಯಂಗ್ಯವಿದೆ.

ಜಿ.ವಿ. ಪ್ರಕಾಶ್ ಕುಮಾರ್‌ರ ಹಾಡುಗಳಿಗೆ ನವಿರಾದ ಸ್ಪರ್ಶ ನೀಡಿರುವುದು ಪಿ.ಜಿ.ಮುತ್ತಯ್ಯನವರ ಛಾಯಾಗ್ರಹಣ. ಕತೆಯಲ್ಲೂ ಅವರ ಕ್ಯಾಮೆರಾ ಚಳಕ ಗೆದ್ದಿದೆ. ಕೆಲ ವಿಶೇಷ ಎಫೆಕ್ಟ್‌ಗಳ ಮೂಲಕ ಎ.ಶ್ರೀಕರ್ ಪ್ರಸಾದ್ ಅವರ ಸಂಕಲನ ಗಮನ ಸೆಳೆಯುತ್ತದೆ. ಕತೆ ಬಿರುಗಾಳಿಯೇನೋ ನಿಜ. ಆದರೆ ಅದು ಕೆಲವೊಮ್ಮೆ ಪ್ರೇಕ್ಷಕರನ್ನೂ ದಿಕ್ಕು ತಪ್ಪಿಸುವ ಬಿರುಗಾಳಿ. ದ್ವಿತೀಯಾರ್ಧದಲ್ಲಿ ನಿರೂಪಣೆ ನಿರ್ದೇಶಕರ ಹಿಡಿತ ಕಳೆದುಕೊಂಡಿದೆ. ಇಲ್ಲಿ ನಾಯಕನ ಅಸ್ತಿತ್ವ ಮರೆಯಾಗಿ ನಿರ್ದೇಶಕರ ಆಟವೇ ಆವರಿಸಿಕೊಂಡಿದೆ. ಕತೆಯ ಕೆಲವು ಗೊಂದಲಗಳನ್ನು ತಪ್ಪಿಸುವ ಅವಕಾಶವಿದ್ದರೂ ನಿರ್ದೇಶಕರ ದೃಷ್ಟಿ ಅತ್ತ ಹರಿದಿಲ್ಲ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT