ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಗಡೆಯಾಟದಲ್ಲಿ ಒತ್ತೆಯಾದದ್ದು ಏನೇನು?

ನಲ್ದಾಣ
Last Updated 1 ಜೂನ್ 2013, 19:59 IST
ಅಕ್ಷರ ಗಾತ್ರ

ಮಹಾಭಾರತ ಹೇಳುವ ಹಾಗೆ ರಾಜರಿಗೆ ಇರುವ ಏಳು ವ್ಯಸನಗಳಲ್ಲಿ ಜೂಜೂ ಒಂದು. ಧರ್ಮರಾಯನಿಗೆ ಪಗಡೆ ಜೂಜು ಆಡುವ ವ್ಯಸನ. ಅವನ ಈ ದೌರ್ಬಲ್ಯವೇ ಕೌರವರಿಗೆ ಪಾಂಡವರನ್ನು ಗೆಲ್ಲುವ ಪ್ರಬಲ ಅಸ್ತ್ರವಾಯಿತು. ಪಗಡೆ ಜೂಜಿನಲ್ಲಿ ಒತ್ತೆಗಳನ್ನು ಕೂಗುವಾಗ ಧರ್ಮರಾಯನಿಗೆ ವಿವೇಚನೆ ಇರಲಿಲ್ಲ ಬಿಡಿ, ಪಂಪ ಮಹಾಕವಿಗೂ  ಇರಲಿಲ್ಲ!

`ವಿಕ್ರಮಾರ್ಜುನ ವಿಜಯ'ದ ಆರು ಮತ್ತು ಏಳನೇ ಆಶ್ವಾಸಗಳಲ್ಲಿ ಉರುಳುವ ದಾಳಗಳಿಗೆ, ಉರುಳಾಡುವ ವಿವೇಕಗಳಿಗೆ ಲೆಕ್ಕವಿಲ್ಲ. ಪಾಂಡವರ ಕಷ್ಟಗಳೆಲ್ಲ ಕಳೆದು ಅವರು ಇಂದ್ರಪ್ರಸ್ಥಕ್ಕೆ ಬಂದು ರಾಜಸೂಯ ಯಾಗವನ್ನೂ ಮಾಡಿ ಮುಗಿಸಿ ಸುಖವಾಗಿದ್ದರು. ಅದನ್ನು ಕಂಡು ದುರ್ಯೋಧನ, ಕರ್ಣ, ಶಕುನಿ ಮತ್ತು ದುಶ್ಶಾಸನ ಎಂಬ ದುಷ್ಟಚತುಷ್ಟಯಕ್ಕೆ ಹೊಟ್ಟೆಯಲ್ಲಿ ಕಿಚ್ಚು ಹೊತ್ತಿತು.

ದಾಳಗಳನ್ನು ಉರುಳಿಸುತ್ತಾ ಅವರನ್ನು ಉರುಳಿಸಬಹುದು ಎಂದು ಕೊನೆಗೆ ಉಪಾಯ ಹುಡುಕಿ, `ಸಂತೋಷದಿಂದ ಸ್ವಲ್ಪ ದಿನ ಒಟ್ಟಿಗೆ ಕಳೆಯೋಣ ಬನ್ನಿ' ಎಂದು ಪಾಂಡವರನ್ನು ಆಹ್ವಾನಿಸಿದರು. ಧರ್ಮರಾಯ ದಂಡುಕಟ್ಟಿಕೊಂಡು ಬಂದುಬಿಟ್ಟ. ಮೊದಲ ಕೆಲವು ದಿನ ಇಬ್ಬರೂ ಚೆಂಡಾಟವೇ ಮೊದಲಾದುವನ್ನು  ಆಡಿದರು. ನಂತರ ಪಗಡೆ ಆಡೋಣ ಎಂದ ಶಕುನಿ ಬೇರೆಯವರಿಂದ ಆಡಿಸಿದ. ಆಮೇಲೆ `ನೋಡುವುದರಲ್ಲೇನು ಬಂತು ನೀವಿಬ್ಬರೂ ಆಡಿ' ಎಂದು ದುರ್ಯೋಧನ ಮತ್ತು ಧರ್ಮರಾಯನಿಗೆ ಪ್ರಚೋದಿಸಿದ. ಧರ್ಮರಾಯ ಸಾಮಾನ್ಯವಾಗಿ ಹಿರಿಯರು ಹೇಳಿದಂತೆ ಕೇಳುವ ವಿಧೇಯ. ಆದರೆ ಇಲ್ಲಿ ಅವನು ವ್ಯಸನಕ್ಕೆ ವಿಧೇಯ.

  ಮೊದಲು ಒಂದು ಆಟಕ್ಕೆ ಸಾವಿರ ಗದ್ಯಾಣಗಳ ಪಣ, ನಂತರ ಹತ್ತು ಸಾವಿರ. ಅದರಲ್ಲಿ ಬೇಕೆಂದೇ ಸೋಲುವ `ಫಿಕ್ಸಿಂಗ್' ಬೇರೆ ಇತ್ತು! ಬರಬರುತ್ತ ಸಮಸ್ತಕುಲಧನಗಳನ್ನು ಒಡ್ಡಿದರು. ಧರ್ಮರಾಯ ಇಟ್ಟ ಒತ್ತೆ ಎಲ್ಲವನ್ನೂ ಕಳೆದುಕೊಂಡ. ಬುದ್ಧಿ ಹೇಳಬಂದ ಭೀಷ್ಮಾದಿಗಳನ್ನು `ಸುಮ್ಮನೆ ನಿಮ್ಮ ಮನೆಗೆ ಹೋಗಿ' ಅಂದ. ದುರ್ಯೋಧನ ಒತ್ತೆ ಪದಾರ್ಥಗಳನ್ನು ಎತ್ತಿ ತೋರಿಸುತ್ತ ಕೂಗಿ ಹೇಳುತ್ತ ಇದ್ದ. ಧರ್ಮರಾಯ ಆಳುತ್ತಿರುವ ತನ್ನ ರಾಜ್ಯವನ್ನೇ ಒತ್ತೆ ಇಟ್ಟಾಗ, `ನಿರ್ದಿಷ್ಟ ಕಾಲ ಹೇಳದೆ ನಿನ್ನ ರಾಜ್ಯ ಸ್ವೀಕರಿಸುವುದಿಲ್ಲ' ಎಂದುಬಿಟ್ಟ ದುರ್ಯೋಧನ. `ಹನ್ನೆರಡು ವರ್ಷ ರಾಜ್ಯಕ್ಕೆ ಕಾಲಿಡುವುದಿಲ್ಲ, ಒಂದು ವರ್ಷ ಅಜ್ಞಾತವಾಸ. ಅದರಲ್ಲಿ ಯಾರಾದರೂ ಗುರುತು ಹಿಡಿದರೆ ಮತ್ತೆ ಹನ್ನೆರಡು ವರ್ಷ' ಎಂದು ಮಹಾಧೀರನಂತೆ ಹೇಳಿದ ಧರ್ಮರಾಯ ಅದನ್ನೂ ಸೋತ. ವ್ಯಸನಿಗಳ ವರ್ತನೆಯನ್ನು ಬಹಳ ಚೆನ್ನಾಗಿ ಹೇಳುವ ಪಂಪ ಅದ್ಯಾವಾಗ ಜೂಜಿನ ಅಡ್ಡೆಗಳಲ್ಲಿ ಅಡ್ಡಾಡಿದ್ದನೋ!

ಇನ್ನುಳಿದ `ವಸ್ತು' ಅಥವಾ `ಆಸ್ತಿ' ಯಾವುದು? ದ್ರೌಪದಿ! `ವಿಕ್ರಮಾರ್ಜುನ ವಿಜಯ'ದಲ್ಲಿ ಅವಳು ಯಾರ ಹೆಂಡತಿ? ಅರ್ಜುನ ಅಥವಾ ಅರಿಕೇಸರಿಗೆ ಮಾತ್ರ ಹೆಂಡತಿ. ತಮ್ಮನ ಹೆಂಡತಿಯಾದ `ಅವಳನ್ನೂ ತನ್ನಿ' ಎಂದ ಧರ್ಮರಾಯ. ಅವನ ಸತ್ಯವಾಕ್ಯ ದುರ್ಯೋಧನನಿಗೆ ಹುಚ್ಚೇರಿಸಿತು. ಧರ್ಮರಾಯನ ತಮ್ಮನ ಹೆಂಡತಿಯನ್ನು `ಇಲ್ಲಿಗೆ ಎಳೆದು ತಾ' ಎಂದು ತನ್ನ ತಮ್ಮನನ್ನು ಕಳಿಸಿದ.  ದುಶ್ಶಾಸನ ಅವಳ ಕೂದಲು ಹಿಡಿದು ಸಭೆಗೆ ಎಳೆದು ತಂದ. ಆದರೆ ತನ್ನ ಆಶ್ರಯದಾತ ಅರಿಕೇಸರಿಯ ಹೆಂಡತಿಗೆ ತುಂಬಿದ ಸಭೆಯಲ್ಲಿ ಸೀರೆ ಬಿಚ್ಚಿಸಬಾರದು ಎಂದು ಕವಿಗೆ ತಲೆಯಲ್ಲಿ ಮಿಂಚು ಮೂಡಿತು. ಬೇರೆ ಕಡೆ ದ್ರೌಪದಿಗೆ ವಸ್ತ್ರಾಪಹರಣ, ಇಲ್ಲಿ ಆ ಕಾರಣಕ್ಕೆ ಉದಾರವಾಗಿ ಅವಳಿಗೆ ವಸ್ತ್ರರಕ್ಷಣ.

ಇನ್ನು ತಮ್ಮಂದಿರೆಂಬ ಮಹಾಪುರುಷರ ಬಗ್ಗೆ ಏನು ಹೇಳೋಣ ! ಅಣ್ಣ ದುರ್ಯೋಧನನ ಮಾತನ್ನು ತಮ್ಮ ದುಶ್ಶಾಸನ ಪಾಲಿಸಿದ. ಆ ದುಷ್ಟ ಮಾಡಿದ್ದನ್ನು ಬಾಯಿ ಮುಚ್ಚಿಕೊಂಡು ನೋಡುತ್ತ ಕುಳಿತಿರಿ ಎಂದು ಅಣ್ಣ ಧರ್ಮರಾಯ ಮಾಡಿದ ಕಣ್ಸನ್ನೆಯನ್ನು ಭೀಮ, ಅರ್ಜುನ, ನಕುಲ, ಸಹದೇವ ಎಂಬ ತಮ್ಮಂದಿರು ಪಾಲಿಸಿದರು. ಅದಕ್ಕೆ ಅವರಿಗೆ `ಮಹಾಪುರುಷರು ಹಿರಿಯರ ಆಜ್ಞೆಯನ್ನು ಮೀರುತ್ತಾರೆಯೇ?' ಎಂದು ಕವಿಯ ಶಹಭಾಷ್ ಬೇರೆ! ಕೊನೆಗೆ `ನಿನಗೆ ನೀನೇ ಗೆಳತಿ' ಎಂದು ನಂಬಿದ್ದ ದ್ರೌಪದಿಯೇ ಬಾಯಿ ಬಿಟ್ಟು ಉಗ್ರ ಪ್ರತಿಜ್ಞೆ ಮಾಡಿದಳು.

ಆಮೇಲೆ ಭೀಮ ಗರ್ಜಿಸಿದ್ದೆಲ್ಲ ಅವಳ ರಕ್ಕಸ ಗೀತೆಗೆ ಶ್ರುತಿ ಪೆಟ್ಟಿಗೆ ಊದಿಸಿದ್ದು. ದ್ರೌಪದಿಯ ಅರಿಮಾರ್ತಾಂಡ ಗಂಡ ಸಭಾತ್ಯಾಗ ಮಾಡಿದ್ದನೇ ಎಂಬುದು ಗೊತ್ತಾಗುವುದಿಲ್ಲ. ಒಟ್ಟಿನಲ್ಲಿ ಅಂದು ಪಗಡೆಯಾಟದಲ್ಲಿ ಒತ್ತೆಯಾಗಿ, ಪಣವಾಗಿ ಸೋತು ನೆಲಕಚ್ಚಿದ್ದು ರಾಜ್ಯಗೀಜ್ಯ ಮಾತ್ರವಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT