ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟದ ಚುಂಗು ಹಿಡಿದು

Last Updated 2 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ನಮ್ಮೂರಲ್ಲೊಂದು ಹೆಸರು. ಪರ ಊರಲ್ಲೊಂದು ಹೆಸರು. `ಗಾಳಿಪಟ~ದ ತುಂಟ ಹುಡುಗಿ ಭಾವನಾ ರಾವ್ ಸಿನಿ ಬದುಕು ಕೂಡ ಗಾಳಿಪಟದಂತೆಯೇ. ಸೂತ್ರ ಇಲ್ಲಿಯೇ ಇದೆ. ಆದರೆ ಹಾರಾಡಲು ತೆರೆದುಕೊಂಡ ಬಣ್ಣದ ಲೋಕ ಮಾತ್ರ ನೆರೆನಾಡಿನದ್ದು.

`ಗಾಳಿಪಟ~ದ ತರಲೆ ಹುಡುಗಿಯಾಗಿ ಸದ್ದು ಮಾಡಿದ ಭಾವನಾ ರಾವ್‌ಗೆ ಕನ್ನಡದಲ್ಲಿ ಮತ್ತೆ ಹೇಳಿಕೊಳ್ಳುವಂತಹ ಅವಕಾಶ ಸಿಗಲೇ ಇಲ್ಲ. ಕೋಮಲ್ ಜೊತೆಗಿನ `ವಾರೆವ್ಹಾ~ದಲ್ಲಿ ಮಾತ್ರ ಅವರು ಕಾಣಿಸಿಕೊಂಡಿದ್ದು. `ಗಗನಚುಕ್ಕಿ~, `ಹಾಲಿಡೇಸ್~ ಮುಂತಾದ ಚಿತ್ರಗಳು ಕೈಯಲ್ಲಿವೆ. ಸದ್ಯ `ಅಟ್ಟಹಾಸ~ ಚಿತ್ರ ಸುದ್ದಿಯಲ್ಲಿದೆ. ಆದರೆ ಅವರು ತಮಿಳಿನಲ್ಲಿ ತುಂಬಾ ಬಿಜಿ.

`ಅದೇಕೋ ನನಗೆ ಗೊತ್ತಿಲ್ಲ. ಕನ್ನಡದಲ್ಲಿ ಸಿಗದ ಪಾತ್ರಗಳು ತಮಿಳಿನಲ್ಲಿ ಸಿಗುತ್ತಿವೆ. ಅಲ್ಲಿ ಉತ್ತಮ ಪ್ರೋತ್ಸಾಹ ಕೂಡ ಇದೆ. ನಾನೊಬ್ಬ ಕಲಾವಿದೆ. ನನಗೆ ಭಾಷೆಯ ಹಂಗಿಲ್ಲ.

ಉತ್ತಮ ಅವಕಾಶ ಬಂದಲ್ಲಿಗೆ ಹೋಗುತ್ತೇನೆ~ ಎನ್ನುವ ಭಾವನಾ ರಾವ್‌ಗೆ ಕನ್ನಡದಲ್ಲಿ ಮತ್ತೆ ಗುರುತಿಸಿಕೊಳ್ಳುವಂತಹ ಪಾತ್ರ ಸಿಗದಿರುವುದಕ್ಕೆ ತುಸು ಬೇಸರವಿದೆ. ಆ ಬೇಸರ ತಮಿಳಿನಲ್ಲಿ ನೀಗುತ್ತಿರುವುದಕ್ಕೆ ಖುಷಿಯೂ ಇದೆ.

ಅಂದಹಾಗೆ, ಅವರು ಕನ್ನಡಿಗರಿಗೆ ಮಾತ್ರ ಭಾವನಾ ರಾವ್. ತಮಿಳಿಗರಿಗೆ `ಶಿಖಾ~. ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಂತೆ ಅವರು ತಮ್ಮ ಹೆಸರನ್ನು ಶಿಖಾ ಎಂದು ಬದಲಿಸಿಕೊಂಡರು. ಕಾರಣವಿಷ್ಟೇ, ಚಿತ್ರರಂಗದಲ್ಲಿ ಭಾವನಾ ಹೆಸರಿನ ಹಲವಾರು ನಟಿಯರಿರುವುದು. ಕನ್ನಡದಲ್ಲಿ ಕೂಡ ಹೆಸರು ಬದಲಿಸಬೇಕಿತ್ತು. ಆದರೆ ತಡವಾಯಿತು.

ನಾನು ಭಾವನಾ ರಾವ್ ಆಗಿಯೇ ಗುರುತಿಸಿಕೊಂಡೆ. ಅದಕ್ಕೆ ತಮಿಳಿನಲ್ಲಿಯೂ ಈ ಗೊಂದಲ ಉಂಟಾಗಬಾರದು ಎಂಬ ಕಾರಣಕ್ಕೆ ಮುಂಚೆಯೇ ಹೆಸರನ್ನು ಬದಲಿಸಿಕೊಂಡೆ ಎನ್ನುತ್ತಾರೆ.

 ಶಿಖಾ ಹೆಸರು ಸಂಖ್ಯಾಶಾಸ್ತ್ರದ, ಜ್ಯೋತಿಷ್ಯಶಾಸ್ತ್ರದ ನಂಬಿಕೆಗಳಿಂದ ಹುಟ್ಟಿದ್ದೇ ಎಂದು ಕೆಣಕಿದರೆ, `ಶಿಖಾ~ ಶಾರ್ಟ್ ಆ್ಯಂಡ್ ಸ್ವೀಟ್ ಆಗಿದೆ ಅದಕ್ಕೇ ನಾನೇ ಇಟ್ಟುಕೊಂಡೆ ಎಂದು ಮೆಲ್ಲನೆ ನಗುತ್ತಾರೆ.

ನನ್ನ ನಟನಾ ಸಾಮರ್ಥ್ಯವನ್ನು ತೋರಲು ಅವಕಾಶ ನೀಡುವ ಪಾತ್ರಗಳು ಕನ್ನಡದಲ್ಲಿ ಮತ್ತೆ ಸಿಗಲೇ ಇಲ್ಲ. `ಗಾಳಿಪಟ~ದ ಪಾವನಿ ತರಹದ ಪಾತ್ರಗಳೇ ಅರಸಿ ಬಂದವು. ಒಮ್ಮೆ ಒಂದು ಪಾತ್ರ ಮಾಡಿದರೆ ಅದೇ ರೀತಿಯ ಪಾತ್ರವನ್ನು ಅನುಕರಿಸುವುದು ನನ್ನಿಂದಾಗದು.

ಹೀಗಾಗಿ ಅವುಗಳನ್ನು ಒಪ್ಪಿಕೊಳ್ಳಲಿಲ್ಲ. ಬಳಿಕ ಬಂದದ್ದು ದುರ್ಬಲ ಕಥೆ ಅಥವಾ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ರೀತಿಯ ಪಾತ್ರವಿರುವ ಚಿತ್ರಗಳು. `ವಾರೆವ್ಹಾ~ ಕೂಡ ಸಂಪೂರ್ಣ ಕೋಮಲ್ ಚಿತ್ರ. ಆದರೆ ತಮಿಳಿನಲ್ಲಿ ವೈವಿಧ್ಯಮಯ ಪಾತ್ರಗಳು ಸಿಗುತ್ತಿವೆ.

`ವಿನ್‌ಮೀಂಗಲ್~, `ಪದಮ್ ಪರ್ಥು ಕಾದಲ್ ಸೊಲ್~ ಮುಂತಾದ ಚಿತ್ರಗಳಲ್ಲಿ ಪ್ರತಿಭೆ ಪ್ರದರ್ಶನಕ್ಕೆ ಉತ್ತಮ ಅವಕಾಶ ಸಿಕ್ಕಿತು ಎನ್ನುತ್ತಾರೆ. ಅವರ ಇನ್ನೆರಡು ತಮಿಳು ಚಿತ್ರಗಳು ಇದೇ ತಿಂಗಳಲ್ಲಿ ಸೆಟ್ಟೇರಲಿವೆಯಂತೆ.

ಚಿತ್ರರಂಗಕ್ಕೆ ಕಾಲಿಟ್ಟು ನಾಲ್ಕು ವರ್ಷವಾಯಿತು. ಆದರೆ ನಟಿಸಿರುವುದು ಬೆರಳಣಿಕೆಯ ಚಿತ್ರಗಳು ಮಾತ್ರ. ಕನ್ನಡ ಚಿತ್ರರಂಗದಿಂದ ಸ್ವಲ್ಪ ದೂರವಾದ ಭಾವನೆ ಅವರಲ್ಲಿ ಮೂಡಿದೆ. ಇಲ್ಲಿ ನಟಿಸಿರುವ ಪಾತ್ರಗಳಿಂದ ತೃಪ್ತಿ ಸಿಕ್ಕಿಲ್ಲ. ತಮಿಳಿನಲ್ಲಿ ಮತ್ತಷ್ಟು ಹೆಸರು ಮಾಡಿದ ನಂತರವಾದರೂ ಕನ್ನಡದಲ್ಲಿ ಒಳ್ಳೆ ಪಾತ್ರಗಳು ಸಿಗಬಹುದು ಎಂಬ ಆಶಾಭಾವ ಅವರಲ್ಲಿದೆ.

`ಅಟ್ಟಹಾಸ~ ವೀರಪ್ಪನ್ ಜೀವನವನ್ನು ಆಧರಿಸಿದ ಚಿತ್ರ. ಅದು ತಮಿಳಿನಲ್ಲಿಯೂ ಏಕಕಾಲದಲ್ಲಿ ಸಿದ್ಧಗೊಳ್ಳುತ್ತಿದೆ. ಭಾವನಾ ರಾವ್‌ಗೆ ಅದರಲ್ಲಿ ಲಂಬಾಣಿ ಹುಡುಗಿಯ ಪಾತ್ರ. ಚಿತ್ರ ಸಾಕಷ್ಟು ರಿಯಾಲಿಸ್ಟಿಕ್ ಆಗಿದೆ ಎನ್ನುವ ಭಾವನಾ ತಮ್ಮ ಪಾತ್ರಕ್ಕಾಗಿ ಅಲ್ಲಿನ ಪ್ರದೇಶಗಳಿಗೆ ಹೋಗಿ ಸ್ವತಃ ಜನ ಜೀವನದ ಅಧ್ಯಯನ ಮಾಡಿದ್ದಾರಂತೆ.

ಗ್ಲಾಮರಸ್ ಪಾತ್ರಗಳ ಬಗ್ಗೆ ನನಗೆ ತಕರಾರಿಲ್ಲ ಎನ್ನುವ ಭಾವನಾ ರಾವ್ ಮದುವೆ ಬಗ್ಗೆ ಕೇಳಿದರೆ ಮುಖ ಊದಿಸಿಕೊಳ್ಳುತ್ತಾರೆ. `ಯಾಕ್ರೀ, ನಾನು ಮುಂದೆ ನಟಿಸುವುದು ಬೇಡವೇ?~ ಎಂದು ಮರುಪ್ರಶ್ನೆ ಹಾಕುತ್ತಾರೆ. ಮದುವೆ ಎಂದರೆ ನಟಿ ವೃತ್ತಿ ಬದುಕಿಗೆ ವಿದಾಯ ಹೇಳಿದಂತೆ ಎಂಬುದು ಅವರು ನೋಡಿ ತಿಳಿದುಕೊಂಡಿರುವ ಸತ್ಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT