ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟಾಕಿ: ವೀಕ್ಷಕರೆ ಬಲಿಪಶು

Last Updated 24 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕೋಮಲ ಗೃಹಿಣಿ. ಎಲ್ಲರಂತೆಯೇ ದೀಪಾವಳಿ ಹಬ್ಬದಂದು ಪಟಾಕಿ ಹಚ್ಚುವ ಸಂಭ್ರಮವನ್ನು ವೀಕ್ಷಿಸುತ್ತಿದ್ದರು. ಸಿಡಿದ ಪಟಾಕಿಯ ಚೂರೊಂದು ನೇರವಾಗಿ ಆಕೆಯ ಕಣ್ಣಿನ ಒಳಕ್ಕೆ ನೇರ ಬಿತ್ತು!
 
ಒಂದೇ ಕ್ಷಣದಲ್ಲಿ ಆಕೆಯ ಕಣ್ಣ ರೆಪ್ಪೆಗಳು ಮತ್ತು ಆಕೆಯ ಕಣ್ಣ ಗುಡ್ಡೆ ಸುಟ್ಟುಹೋದವು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಕೂಡಲೇ ತುರ್ತು ನೇತ್ರ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆಕೆಯ ದೃಷ್ಟಿ ಮರಳಿತಾದರೂ ಮುಖ್ಯವಾದ ಇಂದ್ರಿಯಶಕ್ತಿಗೆ ಸಾಕಷ್ಟು ಪೆಟ್ಟು ಬಿದ್ದಿತ್ತು.

ಇದೊಂದೇ ಪ್ರಕರಣವಲ್ಲ, ಪಟಾಕಿಯಿಂದ ಹಾನಿಗೆ ಒಳಗಾಗುವವರು ಪಟಾಕಿ ಹಚ್ಚುವವರಲ್ಲ. ಶೇ 40ರಷ್ಟು ಮಂದಿ ಪಟಾಕಿ ಹೊಡೆಯುವುದನ್ನು ನೋಡುತ್ತಿರುವವರು ಅಥವಾ ಪಟಾಕಿ ಹಚ್ಚುವಾಗ ಸ್ಥಳದಲ್ಲಿರುವ ಮೂಲಕ ಅನಿರೀಕ್ಷಿತವಾಗಿ ಸಿಲುಕಿಕೊಳ್ಳುವವರು.
 
ದೀಪಾವಳಿಯ ಸಂಭ್ರಮಾಚರಣೆಯಲ್ಲಿ ಕೆಲವು ಮುಖ್ಯವಾದ ವಿಷಯಗಳನ್ನು ನಿರ್ಲಕ್ಷಿಸಿದರೆ ಅದು ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿಯಾಗಬಹುದು.

ಜೋರಾಗಿ ಸಿಡಿಯುವ ಪಟಾಕಿ ಮತ್ತು ಮೇಲಕ್ಕೆ ಹಾರುವ ರಾಕೆಟ್‌ಗಳು ನೋಡಲೇನೋ ಬಹಳ ಚೆನ್ನ. ಆದರೆ ಅವುಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ ಅತ್ಯಂತ ಅಪಾಯಕಾರಿ. ಪಟಾಕಿ ಹಚ್ಚುವಾಗ ಅದನ್ನು ವೀಕ್ಷಿಸುವವರು ಪಟಾಕಿಯಿಂದ ಸಾಕಷ್ಟು ದೂರ ಇರಬೇಕು. ಪಟಾಕಿ ಹಚ್ಚುವ ಸುತ್ತಮುತ್ತಲಿನ ಎಲ್ಲರೂ ತಮ್ಮ ಕಣ್ಣುಗಳ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಪಟಾಕಿ ಹಚ್ಚಬೇಕು.

ಮಕ್ಕಳು ಹೆಚ್ಚಾಗಿ ಪಟಾಕಿ ಸಂಬಂಧಿತ ಅಪಘಾತಗಳಿಗೆ ಒಳಗಾಗಲು ಮುಖ್ಯ ಕಾರಣ ಹಿರಿಯರು ಸರಿಯಾದ ಮೇಲ್ವಿಚಾರಣೆ ನಡೆಸದಿರುವುದು. ಪಟಾಕಿಯಿಂದ ಆಗುವ ಗಾಯಗಳು ಶಾಲಾಪೂರ್ವ ಮಕ್ಕಳಲ್ಲಿ ಹೆಚ್ಚು. ಹಲವಾರು ಪ್ರಕರಣಗಳಲ್ಲಿ ವಯಸ್ಕರೂ ಪಟಾಕಿಯ ಅಪಾಯಗಳನ್ನು ನಿರ್ಲಕ್ಷಿಸುತ್ತಾರೆ.

ದಿಢೀರ್ ಹೊತ್ತಿ ಉರಿಯುವ ಪಟಾಕಿಗಳು ಅತ್ಯಂತ ಅಪಾಯಕಾರಿ. ಪಟಾಕಿ ಹೊಡೆಯದೆ ಇರುವುದು ಸಾಧ್ಯವಿಲ್ಲ. ಹೊಸಬಗೆಯ ಪಟಾಕಿಗಳನ್ನು ಎಚ್ಚರದಿಂದ ನಿರ್ವಹಿಸಬೇಕು. ಇಲ್ಲದಿದ್ದರೆ ಒಂದು ಕ್ಷಣದ ನಿರ್ಲಕ್ಷ ದೃಷ್ಟಿಯ ಶಾಶ್ವತ ನಾಶಕ್ಕೆ ಕಾರಣವಾಗುತ್ತದೆ.

ದೀಪಾವಳಿ ದಿನಗಳಲ್ಲಿ ಪಟಾಕಿಗಳಿಂದ ಉಂಟಾಗುವ ಗಾಯಗಳು ಹೆಚ್ಚಾಗುತ್ತಿವೆ. ಏಕೆಂದರೆ ಹೊಸ ಮತ್ತು ಪರಿಚಯವಿಲ್ಲದ ಪಟಾಕಿಗಳು ಪ್ರತಿವರ್ಷ ಮಾರುಕಟ್ಟೆ ಪ್ರವೇಶಿಸುತ್ತಿವೆ. ಮಾನವ ತಪ್ಪುಗಳು ಗಂಭೀರ ಗಾಯಗಳಿಗೆ ಕಾರಣವಾಗುತ್ತವೆ.

ಬಹಳಷ್ಟು ಕಣ್ಣಿನ ಗಾಯಗಳು ದೃಷ್ಟಿಯ ಶಾಶ್ವತ ನಾಶಕ್ಕೆ ಕಾರಣವಾಗಬಹುದು ಮತ್ತು ಜೀವನಪೂರ್ತಿ ದೃಷ್ಟಿಹೀನರಾಗಿ ಮಾಡಬಹುದು. ಅಂತಹ ಗಾಯಗಳನ್ನು ತಪ್ಪಿಸಬಹುದು.

ನಿರಂತರ ಸೇವೆ
ದೀಪಾವಳಿ ಹಬ್ಬದ ಮೂರೂ ದಿನ ಶೇಷಾದ್ರಿಪುರ ರೇಲ್ವೆ ಪ್ಯಾರಲಲ್ ರಸ್ತೆಯ ಸಂಪ್ರತಿ ಕಣ್ಣಿನ ಆಸ್ಪತ್ರೆ ಮತ್ತು ಮೆಳ್ಳಗಣ್ಣು ಚಿಕಿತ್ಸಾ ಕೇಂದ್ರ (ದೂ: 2336 7544, 2336 0099, 98454 23955) ಹಾಗೂ ಯಲಹಂಕ ಉಪನಗರದ ರಂಗಲಕ್ಷ್ಮಿ ಆಸ್ಪತ್ರೆ (2846 3544, 98451 38423) ತುರ್ತು ಚಿಕಿತ್ಸೆಗೆ ದಿನದ 24 ಗಂಟೆಯೂ ತೆರೆದಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT