ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟಣ ಪಂಚಾಯಿತಿ ಕಚೇರಿಗೆ ಮುತ್ತಿಗೆ

Last Updated 21 ಜೂನ್ 2011, 8:30 IST
ಅಕ್ಷರ ಗಾತ್ರ

ಪಾಂಡವಪುರ: ಸಿದ್ದಮ್ಮ ಮಂಟಪದ ಬಳಿ ನಿರ್ಮಿಸುತ್ತಿರುವ ವಾಣಿಜ್ಯ ಮಳಿಗೆಯ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಎಸ್.ಜಗದೀಶ್ ನೇತೃತ್ವ ದಲ್ಲಿ ಸಾರ್ವಜನಿಕರು ಸೋಮವಾರ ಪಟ್ಟಣ ಪಂಚಾಯಿತಿಗೆ ಮುತ್ತಿಗೆ  ಹಾಕಿ ಪ್ರತಿಭಟನೆ ನಡೆಸಿದರು.

ಪಟ್ಟಣ ಪಂಚಾಯಿತಿ ಕಚೇರಿ ಬಳಿ ಜಮಾವಣೆಗೊಂಡು ಸಾರ್ವಜನಿಕರು ಸಿದ್ದಮ್ಮ ಮಂಟಪದ ಸ್ವತ್ತು ಗಾಣಿಗರ ಸ್ವತ್ತಲ್ಲ. ಈ ಸ್ವತ್ತು  ಸಾರ್ವಜನಿಕರಿಗೆ ಸೇರಿದ ಸ್ವತ್ತಾಗಿದೆ. ಆದರೆ, ಗಾಣಿಗರು ಇಲ್ಲಿ ಅನಧಿಕೃತವಾಗಿ ಸಂಘ ಮಾಡಿ ಕೊಂಡು ಸಿದ್ದಮ್ಮ ಮಂಟಪದ ಜಾಗ ದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸು ತ್ತಿದ್ದಾರೆ. ಹೀಗಾಗಿ ಈ ಕೂಡಲೇ ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದರು.

ಪಟ್ಟಣ ಪಂಚಾಯಿತಿ ಅಧಿಕಾರಿಗಳು ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಲು ಲೈಸೆನ್ಸ್ ನೀಡಿದ್ದಾರೆ. ಸಿದ್ದಮ್ಮ ಮಂಟಪವು ತಮ್ಮ ಸ್ವತ್ತಾಗಿದ್ದರೆ ಗಾಣಿಗರು ಸೂಕ್ತ ದಾಖಲಾತಿ ಒದಗಿಸಲಿ, ಇಲ್ಲದಿದ್ದರೆ ನನ್ನ ಸ್ವಂತ ಆಸ್ತಿಯನ್ನೇ ನಾನು ಬಿಟ್ಟುಕೊಡುತ್ತೇನೆ~ ಎಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಎಸ್. ಜಗದೀಶ್ ಸವಾಲು ಹಾಕಿದರು.

ಸಿದ್ದಮ್ಮ ಮಂಟಪದ ಬಳಿ ನಿರ್ಮಾಣವಾಗಿರುವ ವಾಣಿಜ್ಯ ಮಳಿಗೆಗೆ ರಾತ್ರೋ ರಾತ್ರಿ ಗಾಣಿಗರು ವಿದ್ಯುತ್ ಸಂಪರ್ಕ, ರೋಲಿಂಗ್ ಶೆಲ್ಟರ್ ಸೇರಿದಂತೆ ಇತರೆ ಕೆಲಸಗಳನ್ನು ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಸ್ಥಳ ಪರಿಶೀಲನೆ ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸರ್ಕಾರದ ವಿರುದ್ಧ ಜೆಡಿಎಸ್ ಪ್ರತಿಭಟನೆ
ಪಾಂಡವಪುರ: ಮುಖ್ಯಮಂತ್ರಿ ಯಡಿಯೂರಪ್ಪನವರ ಸರ್ಕಾರವನ್ನು ವಿರುದ್ಧ ಶಾಸಕ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ತಾಲ್ಲೂಕು ಜೆಡಿಎಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಐದು ದೀಪದ ವೃತ್ತದಲ್ಲಿ ಜಮಾಯಿಸಿದ ಜೆಡಿಎಸ್ ಕಾರ್ಯ ಕರ್ತರು ಮೆರವಣಿಗೆ ಹೊರಟು ಸರ್ಕಾರದ  ವಿರುದ್ಧ ಘೋಷಣೆಗಳನ್ನು ಕೂಗಿದರು. ಮೆರವಣಿಗೆ ಮಿನಿ ವಿಧಾನಸೌಧ ತಲುಪಿ ಅಲ್ಲಿ ಕೆಲ ಹೊತ್ತು ಧರಣಿ ನಡೆಸಿದರು.

ಶಾಸಕ ಸಿ.ಎಸ್.ಪುಟ್ಟರಾಜು ಮಾತ ನಾಡಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾಲದಲ್ಲಿ ಎಲ್ಲಾ ವರ್ಗದ ಬಡಜನರಿಗೆ ಜಾರಿಗೆ  ತಂದಿದ್ದ ಸಂಧ್ಯಾ ಸುರಕ್ಷಾ ಯೋಜನೆಯ ವೃದ್ಧಾಪ್ಯ ವೇತನ, ಅಂಗವಿಕಲರ ವೇತನ, ವಿಧವಾ ವೇತನದಂತಹ ಅನೇಕ ಜನಪರ ಯೋಜನೆಗಳನ್ನು ಏಕಾಏಕಿ ಈ ಸರ್ಕಾರ ರದ್ದುಪಡಿಸಿ ಬಡವರನ್ನು ಬೀದಿ ಪಾಲು ಮಾಡಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ರೈತರಿಗೆ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡಬೇಕು ಎಂದು ಬೊಗಳೆ ಬಿಡುತ್ತಿರುವ ಸರ್ಕಾರ ಕೆಟ್ಟು ಹೋದ ಟ್ರಾನ್ಸ್‌ಫಾರ‌್ಮರ್‌ಗಳನ್ನು ರಿಪೇರಿ ಮಾಡಿ ಬದಲಿ ವ್ಯವಸ್ಥೆ ಕಲ್ಪಿಸಲು ವಿಫಲವಾಗಿದೆ. ಈ ಹಿಂದೆ ಪಿಎಸ್‌ಎಸ್‌ಕೆಗೆ ಸರಬರಾಜು ಮಾಡಿದ್ದ ಪ್ರತಿ ಟನ್ ಕಬ್ಬಿಗೆ ಪ್ರೋತ್ಸಾಹ ಧನ ರೂ.60  ಬಟವಾಡೆಯಾಗದೆ ಉಳಿ ದಿದೆ. ಮತ್ತು 2010-11ನೇ ಸಾಲಿಗೆ ಸರಬರಾಜು ಮಾಡಿರುವ ಕಬ್ಬಿನ ಬಟವಾಡೆಯನ್ನು 4 ತಿಂಗಳು ಕಳೆದರೂ ನೀಡಿಲ್ಲ ಎಂದು ಅವರು ಆರೋಪಿಸಿ ದರು.

ಬಳಿಕ ಶಿರಸ್ತೇದಾರ್ ಶ್ರೀನಿವಾಸ್‌ಪ್ರಸಾದ್ ಅವರಿಗೆ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿದರು. ಜೆಡಿಎಸ್ ಮುಖಂಡರಾದ ಎಂ.ಬಿ.ಶ್ರೀನಿವಾಸ್, ರಾಮಕೃಷ್ಣೇಗೌಡ, ಎಸ್.ಎ.ಮಲ್ಲೇಶ್, ಹೊಸಕೋಟೆ ಪುಟ್ಟಣ್ಣ, ಚಿಕ್ಕಾಡೆ ವಿಜಯೇಂದ್ರ, ಗುರುಸ್ವಾಮಿ, ವಿ.ಬೆಟ್ಟ ಸ್ವಾಮಿಗೌಡ, ಕೆ.ರಾಮಚಂದ್ರು, ಹಿರೀಮರಳಿ ಚನ್ನೇಗೌಡ, ಜಿ.ಪಂ. ಸದಸ್ಯೆ ಮಂಜುಳಾ ಪರಮೇಶ್ ಇತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ
ಶ್ರೀರಂಗಪಟ್ಟಣ: ತಾಲ್ಲೂಕಿನ ನೀಲನ ಕೊಪ್ಪಲು ಹಾಗೂ ಅಲ್ಲಾಪಟ್ಟಣ ಸಂಪರ್ಕ ರಸ್ತೆಗಳು ತೀರಾ ಹದ ಗೆಟ್ಟಿದ್ದು, ದುರಸ್ತಿಗೆ ಆಗ್ರಹಿಸಿ ಎರಡೂ ಗ್ರಾಮಗಳ ಜನರು ಸೋಮವಾರ ಟಿ.ಎಂ.ಹೊಸೂರು ಕವಲು ರಸ್ತೆ ಬಳಿ ವಾಹನ ತಡೆದು ಪ್ರತಿಭಟನೆ ನಡೆಸಿದರು.

ಕರೀಘಟ್ಟ ಕಾಲುವೆ ಸೇತುವೆ ಬಳಿ ಸಾರಿಗೆ ಸಂಸ್ಥೆ ಬಸ್‌ಗಳು ಹಾಗೂ ಕಲ್ಲು ಸಾಗಿಸುವ ಲಾರಿಗಳನ್ನು ತಡೆದರು. ಸುಮಾರು ಎರಡು ತಾಸು ರಸ್ತೆತಡೆ ನಡೆಸಿದ ಪ್ರತಿಭಟನಾಕಾರರು ಸರ್ಕಾರ ಹಾಗೂ ಲೋಕೋಪಯೋಗಿ ಇಲಾಖೆ ವಿರುದ್ಧ ಘೋಷಣೆ ಕೂಗಿದರು. ನೀಲನಕೊಪ್ಪಲು ಮತ್ತು ಅಲ್ಲಾಪಟ್ಟಣ ಸಂಪರ್ಕ ರಸ್ತೆಗಳು ಇನ್ನಿಲ್ಲದಂತೆ ಹಾಳಾಗಿವೆ. ರಸ್ತೆಯುದ್ದಕ್ಕೂ ಗುಂಡಿ ಗಳು ಬಿದ್ದಿವೆ. ನಾಲೆ ನೀರು ರಸ್ತೆಗೆ ಹರಿಯುತ್ತಿದೆ. ಗುಂಡಿಗಳಲ್ಲಿ ಕೆಸರು ತುಂಬಿಕೊಂಡಿದೆ. ಬೈಕ್ ಹಾಗೂ ಬೈಸಿಕಲ್ ಸವಾರರು ಈ ಗುಂಡಿಗಳಲ್ಲಿ ಬಿದ್ದು ಗಾಯಗೊಳ್ಳುತ್ತಿದ್ದಾರೆ ಎಂದು ಗ್ರಾ.ಪಂ. ಸದಸ್ಯ ಸಿದ್ದರಾಜು, ರಾಮಕೃಷ್ಣ ದೂರಿದರು.

 ನೀಲನಕೊಪ್ಪಲು ಸುತ್ತಮುತ್ತ ಇರುವ ಕ್ವಾರಿ, ಕ್ರಷರ್‌ಗಲಿಂದ ಸೈಜು, ಜಲ್ಲಿಕಲ್ಲು ತುಂಬಿದ 10 ಚಕ್ರವುಳ್ಳ ಲಾರಿಗಳು ಈ ರಸ್ತೆಯಲ್ಲಿ ಸಂಚರಿಸು ತ್ತಿವೆ. ಭಾರಮಿತಿ ನಿಗದಿ ಪಡಿಸದ ಕಾರಣಕ್ಕೆ ರಸ್ತೆ ಹಾಳಾಗುತ್ತಿದೆ.

ಮಳೆಗಾಲದಲ್ಲಿ ಜನ ಸಂಚಾರ ಕೂಡ ಕಷ್ಟವಾಗುತ್ತಿದೆ.  ಸಾಂಕೇತಿಕ ಪ್ರತಿ ಭಟನೆ ನಡೆಸಿದ್ದು, ಕೂಗಿಗೆ ಸ್ಪಂದಿಸ ದಿದ್ದರೆ ಲೋಕೋಪಯೋಗಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು. ಸತೀಶ್, ಕಾಂತರಾಜು, ರವಿ, ಸಿದ್ದಮ್ಮ ಇತರರು ಇದ್ದರು.

ಶಾಸಕರಿಗೊಂದು, ಸಾಮಾನ್ಯರಿಗೊಂದು ನಿಯಮ
ಪಾಂಡವಪುರ: ಜೆಡಿಎಸ್ ನಿಯಮ ವನ್ನು ಉಲ್ಲಂಘಿಸಿ ಪಟ್ಟಣದ ಮಿನಿ ವಿಧಾನಸೌಧದ ಮುಂದೆ ಸೋಮ ವಾರ ಪ್ರತಿಭಟನೆ ನಡೆಸಿರುವುದಕ್ಕೆ ಟೀಕೆ ವ್ಯಕ್ತವಾಗಿದೆ.

ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆಗಳು, ಧರಣಿ, ಸಭೆಗಳನ್ನು ನಿಷೇಧಿಸಲಾಗಿದೆ. ಪ್ರತಿಭಟನೆಗಳು ಐದು ದೀಪದ ವೃತ್ತದ ಬಳಿ ಮಾತ್ರ ನಡೆಸಿ ಅಲ್ಲಿಯೇ ಮುಕ್ತಾಯ ಗೊಳಿಸಬೇಕು. ಪ್ರತಿಭಟನೆ ನಡೆಯು ವಲ್ಲಿಗೇ ತಾಲ್ಲೂಕು ಆಡಳಿತದ ಪರವಾಗಿ ಯಾರಾದರೂ ಅಧಿಕಾರಿ ಗಳು ಬಂದು  ಮನವಿ ಸ್ವೀಕರಿಸು ತ್ತಾರೆ. ಆದರೆ, ಜೆಡಿಎಸ್ ಕಾರ್ಯ ಕರ್ತರು ನಡೆಸಿದ ಪ್ರತಿಭಟನೆಗೆ ಯಾವ ನಿಯಮಗಳು ಅನ್ವಯ ವಾಗಲಿಲ್ಲ.

`ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಶಾಸಕರಿ ಗೊಂದು ನೀತಿ, ಸಾಮಾನ್ಯರು ಹಾಗೂ ಸಾರ್ವಜನಿಕ ಹೋರಾಟ ಗಳಿಗೆ ಒಂದು ನೀತಿ ಎನ್ನುವಂತೆ ನಡೆದುಕೊಳ್ಳು ತ್ತಿದ್ದಾರೆ~ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಎಸ್.ಹನುಮಯ್ಯ, ಕರವೇ ಮುಖಂಡ ಕೋ.ಪು.ಗುಣಶೇಖರ್ ಹಾಗೂ ಇತರರು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT