ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟಣ ಸಂಪರ್ಕ ರಸ್ತೆ ಅಭಿವೃದ್ಧಿಗೆ ಕ್ರಮ

Last Updated 6 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ರಾಜ್ಯದ ಪ್ರಮುಖ ಪಟ್ಟಣಗಳನ್ನು ಸಂಪರ್ಕಿಸುವ 615.61 ಕಿ.ಮೀ. ಉದ್ದದ ರಸ್ತೆಯನ್ನು 1151.67 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿ ಇದೇ ಮಾರ್ಚ್‌ನಿಂದ ಆರಂಭವಾಗಲಿದೆ~ ಎಂದು ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಶುಕ್ರವಾರ ಇಲ್ಲಿ ತಿಳಿಸಿದರು.


`ಇದಕ್ಕೆ ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) 315 ದಶಲಕ್ಷ ಡಾಲರ್ ಆರ್ಥಿಕ ನೆರವು ನೀಡಲಿದ್ದು, ಒಂದೂವರೆಯಿಂದ ಎರಡೂವರೆ ವರ್ಷದಲ್ಲಿ ಈ ಕಾಮಗಾರಿಗಳು ಪೂರ್ಣಗೊಳ್ಳಲಿವೆ~ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

`ಒಟ್ಟು ಒಂಬತ್ತು ಪ್ಯಾಕೇಜ್‌ಗಳಿದ್ದು, ಏಳು ಸಂಸ್ಥೆಗಳಿಗೆ ಟೆಂಡರ್ ನೀಡಲಾಗಿದೆ. ಗುತ್ತಿಗೆ ಪಡೆದ ಸಂಸ್ಥೆಗಳ ಜತೆಗೂ ಸರ್ಕಾರ ಒಪ್ಪಂದ ಮಾಡಿಕೊಂಡಿದ್ದು, ಅಗತ್ಯ ಪರವಾನಗಿ ಹಾಗೂ ಅನುಮತಿಗಳನ್ನು (ಪರಿಸರ, ಗಣಿ ಇಲಾಖೆಯ ನಿರಪೇಕ್ಷಣಾ ಪತ್ರ) ಪಡೆದ ನಂತರ ಕಾಮಗಾರಿಗಳು ಆರಂಭವಾಗಲಿವೆ~ ಎಂದು ಹೇಳಿದರು.

`ಈ ರಸ್ತೆಗಳು ರಾಷ್ಟ್ರೀಯ ಹೆದ್ದಾರಿಯ ಗುಣಮಟ್ಟವನ್ನು ಹೊಂದಿರುತ್ತವೆ. ದ್ವಿಪಥದ ರಸ್ತೆಗಳ ಅಭಿವೃದ್ಧಿಗೆ ಪ್ರತಿ ಕಿ.ಮೀ.ಗೆ 2.5 ಕೋಟಿ ರೂಪಾಯಿಯನ್ನು ಗುತ್ತಿಗೆದಾರರಿಗೆ ನೀಡಲಾಗುತ್ತದೆ~ ಎಂದು ಹೇಳಿದರು.

 `ಅಭಿವೃದ್ಧಿ ನಂತರ ಈ ರಸ್ತೆಗಳಲ್ಲಿ ಸಂಚರಿಸುವ ವಾಹನಗಳಿಂದ ಬಳಕೆ ಶುಲ್ಕ ಸಂಗ್ರಹಿಸುವ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ~ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಶ್ವಬ್ಯಾಂಕ್ ನೆರವು: ವಿಶ್ವ ಬ್ಯಾಂಕ್ ನೆರವು ಪಡೆದು ಸುಮಾರು 562.77 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸುವ ಬಗ್ಗೆಯೂ ಕ್ರಮ ತೆಗೆದುಕೊಂಡಿದ್ದು, ಈ ವರ್ಷದ ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಕಾಮಗಾರಿ ಆರಂಭವಾಗಲಿದೆ. ಇದರ ಒಟ್ಟು ಅಂದಾಜು ರೂ 1522.87 ಕೋಟಿ.

ಯಾವ ರಸ್ತೆಗಳು?: ಮಳವಳ್ಳಿ- ಮದ್ದೂರು- ಹುಲಿಯೂರುದುರ್ಗ- ಕುಣಿಗಲ್- ತುಮಕೂರು- ಕೊರಟಗೆರೆ- ಮಧುಗಿರಿ- ಪಾವಗಡ (190 ಕಿ.ಮೀ- ರೂ 559 ಕೋಟಿ); ಮುಧೋಳ- ಮಹಲಿಂಗಪುರ- ಕಬ್ಬೂರು- ಚಿಕ್ಕೋಡಿ- ನಿಪ್ಪಾಣಿ (107 ಕಿ.ಮೀ, ರೂ 317 ಕೋಟಿ), ಶಿಕಾರಿಪುರ- ಅನಂತಪುರಂ, ಶಿವಮೊಗ್ಗ- ಸಾವಲಂಗ- ಶಿಕಾರಿಪುರ- ಶಿರಾಳಕೊಪ್ಪ- ತೊಗರ‌್ಸಿ- ಆವಂತಿ- ಗೊಂಡಿ- ಹಾನಗಲ್ (153 ಕಿ.ಮೀ, ರೂ 397 ಕೋಟಿ); ಮನಗೂಳಿ- ಬಸವನಬಾಗೇವಾಡಿ- ತಾಳಿಕೋಟೆ- ಹುಣಸಗಿ- ದೇವಪುರ (61 ಕಿ.ಮೀ, ರೂ 248 ಕೋಟಿ).
ಈ ರಸ್ತೆಗಳ ಅಭಿವೃದ್ಧಿಗೆ ಗುತ್ತಿಗೆದಾರರ ತಾಂತ್ರಿಕ ಬಿಡ್‌ಗಳನ್ನು ಪರಿಶೀಲಿಸಿ, ವಿಶ್ವಬ್ಯಾಂಕ್‌ಗೆ ಕಳುಹಿಸಿದ್ದು, ಇನ್ನೂ ಅನುಮತಿ ಸಿಕ್ಕಿಲ್ಲ. ಈ ಅನುಮತಿ ಸಿಕ್ಕ ನಂತರವೇ ಟೆಂಡರ್ ಕರೆದು ಅಂತಿಮಗೊಳಿಸಲಾಗುವುದು.

ಸರ್ಕಾರ ಶೇ 50ರಷ್ಟು ಹಣ ನೀಡಿದರೆ, ಗುತ್ತಿಗೆದಾರರು ಉಳಿದ ಹಣ ತೊಡಗಿಸಬೇಕಾಗಿದೆ. ಈ ಕಾರಣಕ್ಕೆ ಒಪ್ಪಂದದ ನಂತರ ಗುತ್ತಿಗೆದಾರರಿಗೆ ಹಣ ಕ್ರೋಡೀಕರಿಸಲು ಆರು ತಿಂಗಳ ಸಮಯ ನೀಡಲಾಗುವುದು. ಹೀಗಾಗಿ ಈ ಕಾಮಗಾರಿಗಳು ಆರಂಭವಾಗಲು ಸ್ವಲ್ಪ ತಡವಾಗುತ್ತದೆ ಎಂದರು.

ಶುಲ್ಕ-ರಸ್ತೆಗೆ ಕೇಂದ್ರ ಅಸ್ತು: ರಸ್ತೆ ಬಳಕೆ ಶುಲ್ಕ ಸಂಗ್ರಹಿಸುವ ಮೂರು ರಸ್ತೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಗಿಣಿಗೇರ- ಗಂಗಾವತಿ- ಸಿಂಧನೂರು (87 ಕಿ.ಮೀ, ರೂ 193 ಕೋಟಿ); ಲಿಂಗಸುಗೂರು- ಕಲ್ಮಲ- ದೇವಸುಗೂರು (102 ಕಿ.ಮೀ, ರೂ 271 ಕೋಟಿ); ಶಿವಮೊಗ್ಗ- ಹೊನ್ನಾಳಿ- ಹರಿಹರ (78 ಕಿ.ಮೀ, ರೂ 136 ಕೋಟಿ); ಈ ರಸ್ತೆಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಲಾ ಶೇ 20ರಷ್ಟು ಅನುದಾನ ನೀಡಲಿವೆ. ಬಾಕಿ ಹಣವನ್ನು ಗುತ್ತಿಗೆದಾರ ಸಂಸ್ಥೆಗಳೇ ಹೂಡಿಕೆ ಮಾಡಬೇಕು. ಆ ನಂತರ ಅವರು ರಸ್ತೆ ಬಳಕೆ ಶುಲ್ಕ ಸಂಗ್ರಹಿಸುವುದರ ಮೂಲಕ ಅದನ್ನು ವಾಪಸ್ ಪಡೆಯಬಹುದಾಗಿದೆ ಎಂದು ಉದಾಸಿ ಹೇಳಿದರು.

ಜಿಲ್ಲಾ ರಸ್ತೆ: ಸುಮಾರು 7,754 ಕಿ.ಮೀ. ಉದ್ದದ ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳನ್ನು 2,797 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಉದ್ದೇಶ ಇದ್ದು, ಇದಕ್ಕೆ ಇದೇ 9ರಂದು ಹಣಕಾಸು ಇಲಾಖೆ ಒಪ್ಪಿಗೆ ಸಿಗುವ ಸಾಧ್ಯತೆ ಇದೆ. ಈ ಕುರಿತು ಮುಖ್ಯಮಂತ್ರಿ ಜತೆಗೂ ಚರ್ಚಿಸಲಾಗುವುದು ಎಂದರು.

ರಸ್ತೆಗುಂಡಿ: ರಾಜ್ಯದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಶೇ 71ರಷ್ಟು ಆಗಿದ್ದು, ಈ ತಿಂಗಳಲ್ಲಿ ಎಲ್ಲ ಕಡೆಯೂ ಗುಂಡಿಗಳನ್ನು ಮುಚ್ಚಲಾಗುವುದು ಎಂದು ಉದಾಸಿ ಉತ್ತರಿಸಿದರು.

ಶಿರಾಡಿಘಾಟ್ ರಸ್ತೆಯಲ್ಲೂ 22 ಕಿ.ಮೀ. ಉದ್ದದ ರಸ್ತೆಯಲ್ಲಿ ಗುಂಡಿ ಮುಚ್ಚಲಾಗಿದೆ. ಇನ್ನೂ 14 ಕಿ.ಮೀ. ಬಾಕಿ ಇದ್ದು, ಅದನ್ನು 10 ದಿನದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT