ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟಿ ಪುನರ್‌ಪರಿಶೀಲನೆಗೆ ಹೆಚ್ಚಿದ ಒತ್ತಡ

Last Updated 4 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕುರಿತು ಅಸಮಾಧಾನಗೊಂಡಿರುವ ಮುಖಂಡರು ಮತ್ತೊಮ್ಮೆ `ದೆಹಲಿಗೆ ಮುತ್ತಿಗೆ' ಹಾಕಿದ್ದು, ಟಿಕೆಟ್ ಗಿಟ್ಟಿಸಲು ಅಂತಿಮ ಕ್ಷಣದ ಪ್ರಯತ್ನ ಮಾಡುತ್ತಿದ್ದಾರೆ. ಒಕ್ಕಲಿಗ, ವೀರಶೈವ, ದಲಿತ ಹಾಗೂ ಹಿಂದುಳಿದ ವರ್ಗಗಳ ನಾಯಕರು ಪಕ್ಷದ ಅಭ್ಯರ್ಥಿ ಪಟ್ಟಿ ಪುನರ್ ಪರಿಶೀಲಿಸುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ.

ಚುನಾವಣಾ ಪ್ರಚಾರ ಸಮಿತಿ ಸಹ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವೀರಶೈವ ಸಮಾಜದ ನಾಯಕರಾದ ವಿ.ಎಸ್. ಕೌಜಲಗಿ, ಅಲ್ಲಂ ವೀರಭದ್ರಪ್ಪ, ದಲಿತ ಸಮುದಾಯದ ಮೋಟಮ್ಮ, ಹಿಂದುಳಿದ ವರ್ಗಕ್ಕೆ ಸೇರಿದ  ವಿ.ಆರ್.ಸುದರ್ಶನ್, ಕೆ.ಸಿ.ಕೊಂಡಯ್ಯ, ದಿವಾಕರ ಬಾಬು ಸೇರಿದಂತೆ ಅನೇಕರು ಹೈಕಮಾಂಡ್ ನಾಯಕರನ್ನು ಪ್ರತ್ಯೇಕವಾಗಿ ಭೇಟಿ ಮಾಡುತ್ತಿದ್ದಾರೆ.

ತೀವ್ರ ಕಗ್ಗಂಟಾಗಿರುವ ಸುಮಾರು ಎರಡು ಡಜನ್ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಗೊಂದಲ ನಿವಾರಿಸಲು ಗೋವಾದ ಮಾಜಿ ಮುಖ್ಯಮಂತ್ರಿ ಲುಸಿಯಾನ್ಹೊ ಫೆಲೆರೊ, ಜಿತೇಂದ್ರ ಸಿಂಗ್ ಮತ್ತಿತರರು ಸತತ ಕಸರತ್ತು ನಡೆಸುತ್ತಿದ್ದಾರೆ. ಬುಧವಾರ ಸಭೆ ಸೇರಿದ್ದ ಫೆಲೆರೊ, ಜಿತೇಂದ್ರ ಸಿಂಗ್ ಮತ್ತಿತರರು ಗುರುವಾರವೂ ಚರ್ಚೆ ಮುಂದುವರಿಸಿದ್ದಾರೆ.

ಪಟ್ಟಿ ಬದಲಾವಣೆ; ಡಿಕೆಶಿ ಎಚ್ಚರ: `ರಾಜ್ಯದ ಎರಡನೆ ಪ್ರಬಲ ಸಮುದಾಯವಾದ ಒಕ್ಕಲಿಗರನ್ನು ಕಡೆಗಣಿಸಲಾಗುತ್ತಿದೆ' ಎಂದು ಆರೋಪಿಸಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಕಳೆದ ವಾರ ಪತ್ರ ಬರೆದಿದ್ದ ಶಿವಕುಮಾರ್ ಗುರುವಾರ ಮತ್ತೊಂದು ಪತ್ರ ನೀಡಿದ್ದಾರೆ. ಫೆಲೆರೊ, ಜಿತೇಂದ್ರ ಸಿಂಗ್ ಅವರನ್ನು ಶಿವಕುಮಾರ್ ಖುದ್ದು ಭೇಟಿ ಮಾಡಿ ಸಮಾಲೋಚಿಸಿದರು. ಕೆಲವು ಕ್ಷೇತ್ರಗಳ ಅಭ್ಯರ್ಥಿಗಳನ್ನು ಬದಲಾವಣೆ ಮಾಡದಿದ್ದರೆ ಪಕ್ಷಕ್ಕೆ ಹಿನ್ನಡೆ ಆಗಲಿದೆ ಎಂದು ಎಚ್ಚರಿಸಿದ್ದಾರೆ.

ಬಲಿಪಶು; ಸುದರ್ಶನ ಆರೋಪ: ವಿಧಾನಸಭೆಯಿಂದ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಪ್ರಕರಣ ಕುರಿತ ವಿಚಾರಣೆಗೆ ನೇಮಿಸಿದ್ದ ಸಮಿತಿಯ ಅಧ್ಯಕ್ಷರಾದ ವಿ.ಆರ್.ಸುದರ್ಶನ್, ಸೋನಿಯಾ ಆಪ್ತ ಬಳಗದಲ್ಲಿರುವ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಆಸ್ಕರ್ ಫರ್ನಾಂಡಿಸ್, ಫೆಲೆರೊ, ಜಿತೇಂದ್ರ ಸಿಂಗ್ ಅವರನ್ನು ಕಂಡು ಅಡ್ಡ ಮತದಾನ ಪ್ರಕರಣ ಕುರಿತು ವಸ್ತುನಿಷ್ಠ ವರದಿ ನೀಡಿದ್ದರಿಂದ ತಮಗೆ ಟಿಕೆಟ್ ನಿರಾಕರಿಸಿ `ಬಲಿಪಶು' ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ.

ಫೆಲೆರೊ ಮತ್ತು ಸಿಂಗ್ ಅವರಿಗೆ ಸುದರ್ಶನ್ ಅಡ್ಡ ಮತದಾನ ಪ್ರಕರಣ ಕುರಿತು ಸಲ್ಲಿಸಿದ ವರದಿ ಕುರಿತು ಮನವರಿಕೆ ಮಾಡಿದರು. `ಇಂಥ ಸಂದರ್ಭಗಳನ್ನು ನಿಭಾಯಿಸಿ ಪಕ್ಷವನ್ನು ಬಲಪಡಿಸಲು ಪಿಸಿಸಿ ಅಧ್ಯಕ್ಷರು ಮತ್ತು ಶಾಸಕಾಂಗ ಪಕ್ಷದ ನಾಯಕರ ನಡುವೆ ಸಮನ್ವಯತೆ ಇರಬೇಕು ಎಂದು ವರದಿಯಲ್ಲಿ ಹೇಳಿದ್ದೇ ತಪ್ಪಾಯಿತು' ಎಂದು ಪ್ರತಿಪಾದಿಸಿದ್ದಾರೆ. `ಅಡ್ಡ ಮತದಾನ ಪ್ರಕರಣದಲ್ಲಿ ಒಮ್ಮತದ ವರದಿ ನೀಡಲಾಗಿದೆ. ಆದರೆ, ಸಮಿತಿ ಉಳಿದೆಲ್ಲ ಸದಸ್ಯರಿಗೆ ಟಿಕೆಟ್ ನೀಡಿ ನನ್ನನ್ನು ಕಡೆಗಣಿಸಲಾಗಿದೆ. ಅಚ್ಚರಿ ಸಂಗತಿ ಎಂದರೆ ಅಡ್ಡ ಮತದಾನ ಮಾಡಿರುವ ಸಂಶಯಕ್ಕೊಳಗಾಗಿರುವ ಕೆಲವರಿಗೆ ಟಿಕೆಟ್ ನೀಡಲಾಗುತ್ತಿದೆ. ಇದ್ಯಾವ ನ್ಯಾಯ?' ಎಂದು ಅವರು ಕೇಳಿದ್ದಾರೆ. ಸುದರ್ಶನ್ ಎತ್ತಿದ ಪ್ರಶ್ನೆಗಳಿಂದ ಆಯ್ಕೆ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ತಬ್ಬಿಬ್ಬಾದರೆಂದು ಕಾಂಗ್ರೆಸ್ ಉನ್ನತ ಮೂಲಗಳು `ಪ್ರಜಾವಾಣಿ'ಗೆ ತಿಳಿಸಿವೆ.

ಹಾವೇರಿ, ಹಾಸನ ಮತ್ತು ಬೀದರ್ ಜಿಲ್ಲೆಯ ಒಬ್ಬರು, ರಾಯಚೂರು ಜಿಲ್ಲೆಯ ಇಬ್ಬರು ಶಾಸಕರ ಹೆಸರು `ಅಡ್ಡ ಮತದಾನ ಪ್ರಕರಣ'ದಲ್ಲಿ ಕೇಳಿಬರುತ್ತಿದೆ. ಕೌಜಲಗಿ, ಮಾಜಿ ಸಂಸದರಾದ ಬೆಳಗಾವಿಯ ಎ.ಕೆ. ಕೊಟ್ರಶೆಟ್ಟಿ, ಎಸ್.ಬಿ. ಸಿದ್ನಾಳ್, ಅಮರಸಿಂಹ ಪಾಟೀಲ 18 ಅಭ್ಯರ್ಥಿಗಳ ಪಟ್ಟಿಯೊಂದನ್ನು ಹೈಕಮಾಂಡ್‌ಗೆ ನೀಡಿದ್ದಾರೆ. ಈ ಪಟ್ಟಿಯಲ್ಲಿ ವೀರಶೈವ ಅಭ್ಯರ್ಥಿಗಳ ಜತೆಗೆ ಹಿಂದುಳಿದ ವರ್ಗ, ಮುಸ್ಲಿಮರು, ಮರಾಠ, ರೆಡ್ಡಿ, ಹಿಂದುಳಿದ ವರ್ಗ ಮತ್ತು ಬ್ರಾಹ್ಮಣ ಅಭ್ಯರ್ಥಿಗಳ ಹೆಸರೂ ಇವೆ.

ಖಾನಾಪುರದಿಂದ ಹಿಂದುಳಿದ ವರ್ಗದ ನಾಗರಾಜ್ ಯಾದವ್ ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದಾರೆ. ಐಪಿಎಸ್ ಅಧಿಕಾರಿ ಹೇಮಂತ ನಿಂಬಾಳ್ಕರ ಅವರ ಪತ್ನಿ ಅಂಜಲಿ ನಿಂಬಾಳ್ಕರ ಇದೇ ಕ್ಷೇತ್ರದಿಂದ ಪ್ರಯತ್ನ ನಡೆಸಿದ್ದಾರೆ. ಇವರಿಗೆ ಟಿಕೆಟ್ ಕೊಡಬಾರದೆಂದು ಯಾದವ್ ಪಕ್ಷದ ಮುಖಂಡರ ಮೇಲೆ ಒತ್ತಡ ಹೇರುತ್ತಿದ್ದಾರೆ.

ಮೋಟಮ್ಮ ಶತಪ್ರಯತ್ನ: ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಅಣ್ಣನ ಮಗ ಎಂ.ಎಸ್. ಅನಂತ ಅವರಿಗೆ ಟಿಕೆಟ್ ಕೊಡಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರೆ. ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ಮೋಟಮ್ಮ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಇದುವರೆಗೆ ಪಕ್ಷದ ಅಧ್ಯಕ್ಷರ ಭೇಟಿಗೆ ಅವಕಾಶ ಸಿಕ್ಕಿಲ್ಲ.

`ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರ ಪತಿ ಶಾಂತೇಗೌಡ ಅವರಿಗೆ ಚಿಕ್ಕಮಗಳೂರು ಕ್ಷೇತ್ರದಿಂದ ಟಿಕೆಟ್ ಕೊಡಲು ನಿರ್ಧರಿಸಲಾಗಿದೆ. ನಮ್ಮ ಅಣ್ಣನ ಮಗನಿಗೆ ಏಕೆ ಟಿಕೆಟ್ ಇಲ್ಲ. ಒಬ್ಬರಿಗೊಂದು ಮತ್ತೊಬ್ಬರಿಗೊಂದು ನೀತಿ ಏಕೆ' ಎಂದು ಮೋಟಮ್ಮ ಪ್ರಶ್ನೆ ಮಾಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಮೂಡಿಗೆರೆಯಲ್ಲಿ ಹಿಂದಿನ ಚುನಾವಣೆಯಲ್ಲಿ 8 ಸಾವಿರ ಮತಗಳ ಅಂತರದಿಂದ ಸೋತ ಚಂದ್ರಪ್ಪ ಅವರಿಗೆ ಟಿಕೆಟ್ ದೊರೆಯುವ ಸಾಧ್ಯತೆ ಇದೆ. 

ಗೊಂದಲದಲ್ಲಿ ಹೈಕಮಾಂಡ್: ರಾಜ್ಯ ಮುಖಂಡರು ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಗೊಂದಲಕ್ಕೆ ಸಿಕ್ಕಿದೆ. ಈಗಾಗಲೇ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಸ್ಥಾನ ಪಡೆದ ಅಭ್ಯರ್ಥಿಗಳ ಹಿನ್ನೆಲೆ  ಜಾಲಾಡುವ ಕೆಲಸವನ್ನು ಆಯ್ಕೆ ಸಮಿತಿ ಮುಂದುವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT