ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟು ಬಿಡದೆ ಪ್ರತಿಭಟನೆ

Last Updated 6 ಜುಲೈ 2013, 9:44 IST
ಅಕ್ಷರ ಗಾತ್ರ

ಆನೇಕಲ್: `ತಾಲ್ಲೂಕು ಕಚೇರಿಯಲ್ಲಿ ರೈತರ ಕೆಲಸಗಳು ಸುಗಮವಾಗಿ ಆಗುತ್ತಿಲ್ಲ. ರೈತರ ಬಗ್ಗೆ ತಾತ್ಸಾರ ಧೋರಣೆ ಅನುಸರಿಸಲಾಗುತ್ತಿದೆ. ಲ್ಯಾಂಡ್ ಡೆವಲಪರ್ಸ್‌ಗಳ ಕೆಲಸ-ಕಾರ್ಯಗಳು ಮಾತ್ರ ಸುಗಮವಾಗಿ ಆಗುತ್ತವೆ' ಎಂದು ಆರೋಪಿಸಿ ಭಾರತೀಯ ಕಿಸಾನ್ ಸಂಘ, ಸೂರ್ಯೋದಯ ಸಾವಯವ ಪರಿವಾರ ಮತ್ತು ವಕೀಲರ ಸಂಘದ ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ತಾಲ್ಲೂಕು ಕಚೇರಿಯ ಸಿಬ್ಬಂದಿ ರೈತರನ್ನು ಕಡೆಗಣಿಸುತ್ತಿದ್ದಾರೆ. ಕೆಲಸ-ಕಾರ್ಯಗಳ ಬಗ್ಗೆ ಪ್ರಶ್ನಿಸಿದರೆ ಬೇಜವಾಬ್ದಾರಿಯಿಂದ ಉತ್ತರ ನೀಡುತ್ತಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಭಾರತೀಯ ಕಿಸಾನ್ ಸಂಘದ ಮುಖಂಡ ರಾಮಸ್ವಾಮಿರೆಡ್ಡಿ ಮಾತನಾಡಿ, `ಜೇಷ್ಠತಾ ಆಧಾರದ ಮೇಲೆ ರೈತರ ಅರ್ಜಿಗಳನ್ನು ಪರಿಗಣಿಸುತ್ತಿಲ್ಲ. ಐದಾರು ವರ್ಷಗಳಾದರೂ ಅರ್ಜಿ ಸಲ್ಲಿಸಿರುವ ರೈತರ ಜಮೀನುಗಳನ್ನು ಅಳತೆ ಮಾಡಿ ಸ್ಕೆಚ್ ನೀಡಿಲ್ಲ.

ರೆಕಾರ್ಡ್ ರೂಂನಲ್ಲಿ ಅಸಲಿ ದಾಖಲೆ ನಾಶಪಡಿಸಿ, ನಕಲಿ ದಾಖಲೆ ಸೃಷ್ಟಿಸುವ ಪ್ರಕರಣಗಳೂ ಸಹ ನಡೆಯುತ್ತಿವೆ. ಜೀವಜಲದ ಆಸರೆಯಾಗಿದ್ದ ತಾಲ್ಲೂಕಿನ 238 ಕೆರೆಗಳಲ್ಲಿ ಅಕ್ರಮ ಮರಳು ಫಿಲ್ಟರ್ ಧಂಧೆಗಾಗಿ 50ರಿಂದ 60 ಅಡಿ ಆಳದವರೆಗೆ ಮಣ್ಣು ತೆಗೆಯಲಾಗುತ್ತಿದೆ. ಕೆರೆಗಳಿಗೆ ಕಸ-ತ್ಯಾಜ್ಯ ಹಾಗೂ ಕಲುಷಿತ ವಸ್ತುಗಳನ್ನು ತುಂಬಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಹಸಿರು ವಲಯ, ಸರ್ಕಾರಿ ಜಮೀನು ಕೆರೆಗಳಲ್ಲಿ ಅಕ್ರಮವಾಗಿ ಬಡಾವಣೆ ನಿರ್ಮಿಸಲಾಗುತ್ತಿದೆ. ಬಡವರಿಗಾಗಿ ಮೀಸಲಾಗಿದ್ದ ನಿವೇಶನಗಳು ಭೂ ಮಾಫಿಯಾದವರ ಕೈಸೇರುತ್ತಿವೆ. ನೆಮ್ಮದಿ ಕೇಂದ್ರಗಳು ರೈತರಿಗೆ ನೆಮ್ಮದಿ ನೀಡದೆ ನಿದ್ದೆ ಕೆಡಿಸಿವೆ' ಎಂದು ಟೀಕಿಸಿದರು.

ವಕೀಲರ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಮಾತನಾಡಿ `ಅರಣ್ಯ ಒತ್ತುವರಿಯಾಗುತ್ತಿದೆ. ಜನಪ್ರತಿನಿಧಿಗಳೇ ಫಿಲ್ಟರ್ ಮರಳು ಧಂಧೆಯಲ್ಲಿ ತೊಡಗಿದ್ದಾರೆ, ಗ್ರಾನೈಟ್ ಕಾರ್ಖಾನೆಗಳು ತ್ಯಾಜ್ಯಗಳನ್ನು ತಂದು ಎಲ್ಲೆಂದರಲ್ಲಿ ಎಸೆದು ಮಾಲಿನ್ಯವುಂಟು ಮಾಡುತ್ತಿವೆ' ಎಂದು ಕಿಡಿ ಕಾರಿದರು.

ವಕೀಲ ಪ್ರಕಾಶ್ ಪಟಾಪಟ್ ಮಾತನಾಡಿ, `ತಾಲ್ಲೂಕಿನಲ್ಲಿ ಕೃಷಿ ಭೂಮಿ ಮಾಯವಾಗುತ್ತಿದೆ. ಅನಧಿಕೃತವಾಗಿ ಬಡಾವಣೆಗಳು ನಿರ್ಮಾಣವಾಗುತ್ತಿವೆ. ರೈತರ ಕೆಲಸ ಕಾರ್ಯಗಳು ತಾಲ್ಲೂಕು ಕಚೇರಿಯಲ್ಲಿ ಸುಗಮವಾಗಿ ಆಗುವಂತೆ ಅಧಿಕಾರಿಗಳು ಸಹಕಾರ ನೀಡಬೇಕು. ಇಲ್ಲವಾದಲ್ಲಿ ಮತ್ತಷ್ಟು ಹೋರಾಟಹಮ್ಮಿಕೊಳ್ಳಲಾಗುವುದು' ಎಂದರು.

ತಹಶೀಲ್ದಾರ್ ಶಿವೇಗೌಡ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದರೂ ಸಹ ಪ್ರತಿಭಟನಾಕಾರರು ಪಟ್ಟುಬಿಡದೇ ಪ್ರತಿಭಟನೆ ಮುಂದುವರಿಸಿದರು. ಶಾಸಕ ಬಿ.ಶಿವಣ್ಣ ಸ್ಥಳಕ್ಕೆ ಭೇಟಿ ನೀಡಿ ರೈತರನ್ನು ಸಮಾಧಾನಪಡಿಸಿ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದರು ಹಾಗೂ ತಾಲ್ಲೂಕು ಕಚೇರಿಯಲ್ಲಿ ರೈತ ಮುಖಂಡರ ಸಭೆ ನಡೆಸಿದ ನಂತರ ಪ್ರತಿಭಟನೆ ನಿಲ್ಲಿಸಲಾಯಿತು.

ವಕೀಲರ ಸಂಘದ ಅಧ್ಯಕ್ಷ ರಮೇಶ್, ವಕೀಲ ಡಿ.ಪಿ.ಸಂಪತ್, ರೈತ ಮುಖಂಡರಾದ ಮುನಿರೆಡ್ಡಿ, ಶಿವರಾಜ್, ರಘು, ಶಿವಕುಮಾರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT