ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಲದಮ್ಮ ; ಜಾತ್ರಾ ಸಂಭ್ರಮ

Last Updated 8 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಒಂದು ಎಸಳು ಹೂ ಪ್ರಸಾದ, ಒಂದು ನುಡಿಮುತ್ತಿನಲ್ಲೇ ಬೇಡಿದ ವರಗಳಿಗೆ ಅಭಯ ನೀಡುವ ಇಷ್ಟಸಿದ್ಧಿಪ್ರದಾಯಿನಿ, ಶಕ್ತಿದೇವತೆಯರು ಬೆಂಗಳೂರು ಸಮೀಪದ ಹಳ್ಳಿಯೊಂದರಲ್ಲಿ ನೆಲೆಸಿದ್ದಾರೆ. ಅವರ ಆಲಯವಾದರೂ ಇಂದು ಕಾಣುವ ವಿಲಾಸಿ ದೇವಾಲಯಗಳಂತಿಲ್ಲ. ಪ್ರವೇಶದ್ವಾರದಿಂದ ಗರ್ಭಗುಡಿವರೆಗೂ ತನ್ನ ಶ್ರೀಮಂತಿಕೆಯನ್ನು ಜಾಹೀರುಗೊಳಿಸುವ ಆಡಂಬರಗಳೂ ಅಲ್ಲಿಲ್ಲ! ಆದರೆ ಆ ಶಕ್ತಿಕೇಂದ್ರದ ಸಾಮರ್ಥ್ಯ, ಮಹಿಮೆ ಅಕ್ಷರಕ್ಕೆ ನಿಲುಕುವಂತಹುದಲ್ಲ.

ಬೆಂಗಳೂರು- ಮಾಗಡಿ- ಹುಲಿಯೂರುದುರ್ಗ ಹೆದ್ದಾರಿಯಲ್ಲಿ ಸಿಗುವ ಚೌಡನಕುಪ್ಪೆಯಿಂದ ಎರಡೂವರೆ ಕಿ.ಮೀ. ದೂರದಲ್ಲಿರುವ ಗಿಡದಕೆಂಚನಹಳ್ಳಿಯಲ್ಲಿ ನೆಲೆಸಿರುವ ಶ್ರೀ ಪಟ್ಲದಮ್ಮ ಕೊಲ್ಲಾಪುರದಮ್ಮನ ಕ್ಷೇತ್ರದ ಮಹಿಮೆಯೇ ಅಂತಹುದು.

ಯಾವುದೋ ಸಂಕಷ್ಟಕ್ಕೆ ಸಿಲುಕಿ ನಿರಾಶರಾದವರು ಈ ಕ್ಷೇತ್ರದಲ್ಲಿ ಮಂಗಳವಾರ, ಶುಕ್ರವಾರ, ಹುಣ್ಣಿಮೆ ಮತ್ತು ಅಮಾವಾಸ್ಯೆಗಳಂದು ಮಧ್ಯಾಹ್ನದ ಮಹಾಮಂಗಳಾರತಿ ನಂತರ ಸಂಕಲ್ಪ ಮಾಡಿಕೊಂಡು ಪಟ್ಲದಮ್ಮ-ಕೊಲ್ಲಾಪುರದಮ್ಮನ ಹೂ ಪ್ರಸಾದ ಪಡೆದು ಹೋದರೆ ನಿಗದಿತ ಕಾಲಾವಧಿಯೊಳಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಇದು ಈ ಕ್ಷೇತ್ರದ ವೈಶಿಷ್ಟ್ಯಗಳಲ್ಲಿ ಒಂದು. ಇಲ್ಲಿನ ಭಕ್ತರೊಬ್ಬರ ಮನೆಯಲ್ಲಿ ಹುತ್ತದ ರೂಪದಲ್ಲಿ ಕಾಣಿಸಿಕೊಂಡವಳು ಪಟ್ಲದಮ್ಮ.

ಹುತ್ತವನ್ನು ಪದೇಪದೇ ನಾಶಗೊಳಿಸಿದರೂ ಅಷ್ಟೇ ವೇಗವಾಗಿ ಹುತ್ತ ಬೆಳೆಯುವ ಮೂಲಕ ಮನೆಯವರಿಗೆ ದೈವೀಸಾನ್ನಿಧ್ಯವನ್ನು ಕಂಡುಕೊಳ್ಳಲು ಅನುವು ಮಾಡಿಕೊಟ್ಟಿತು. ಆಗ ಅವರೇ ಪೂಜೆಗೆ ಮುಂದಾದರು. ಹೀಗೆ ಗಿಡದಕೆಂಚನಹಳ್ಳಿ ಕ್ಷೇತ್ರದ ಬಗ್ಗೆ 600 ವರ್ಷಗಳ ಐತಿಹ್ಯಗಳಿವೆ.

ಹಳೆಯ ದೇವಿಗೆ ಹೊಸ ಸನ್ನಿಧಿ
ಗಿಡದಕೆಂಚನಹಳ್ಳಿಯಲ್ಲಿ ಈ ಕ್ಷೇತ್ರ ಆರಂಭವಾಗಿ ದಶಕವಷ್ಟೇ ಕಳೆದಿದೆ. ಹುತ್ತದ ರೂಪದಲ್ಲಿ ಕಾಣಿಸಿಕೊಂಡ ಪಟ್ಲದಮ್ಮ ಇಲ್ಲಿನ ಮೂಲದೇವರು. ಕೊಲ್ಲಾಪುರದಮ್ಮ ಕೊಲ್ಲಾಪುರದಿಂದ ಅಕ್ಕನ ಈ ಕ್ಷೇತ್ರಕ್ಕೆ ವಲಸೆ ಬಂದವಳು ಎಂದು ಹೇಳಲಾಗುತ್ತದೆ. ಗರ್ಭಗುಡಿಯಲ್ಲಿ ದೇವರ ವಿಗ್ರಹದ ಹಿಂಭಾಗದಲ್ಲಿ ಇಂದಿಗೂ ಒಂಬತ್ತು ಅಡಿ ಎತ್ತರದ ಹುತ್ತ ಇದೆ. ಪಟ್ಲದಮ್ಮನ ವಿಗ್ರಹದ ಬೆನ್ನಿಗೆ ತಾಗಿಕೊಂಡಂತೆ ಕಾಣುವ ಹುತ್ತದಲ್ಲಿ ಕೈಗಳು ಮತ್ತು ಬೆರಳುಗಳ ಆಕಾರವೂ ಸ್ಪಷ್ಟವಾಗಿ ಕಾಣುತ್ತದೆ.

ಪುಟ್ಟ ಗರ್ಭಗುಡಿ, ಅದರ ಮುಂದೆ ಮುಖಮಂಟಪ, ಅದಕ್ಕೆ ಹೊಂದಿಕೊಂಡಂತೆ ವಿಶಾಲವಾದ ಹಜಾರ- ಇವಿಷ್ಟು ಸೇರಿದರೆ ದೇವಸ್ಥಾನವಾಯಿತು. ಗರ್ಭಗುಡಿಯ ಮುಂದುವರಿದ ಭಾಗದಂತಿರುವ ಮುಖಮಂಟಪಕ್ಕೆ ಭಕ್ತರಿಗೆ ಪ್ರವೇಶವಿರುವುದು ವಿಶೇಷ.

ನಿರಾಡಂಬರ ಸುಂದರಿಯಾಗಿ, ಸರಳ ಭಕ್ತಿಗೆ ಒಲಿಯುವ ಮಾತೆ ಎಂದೇ ಗುರುತಿಸಿಕೊಂಡಿರುವ ಪಟ್ಲದಮ್ಮನ ಕ್ಷೇತ್ರದಲ್ಲಿ ಗೌಜು ಗದ್ದಲಗಳಿಲ್ಲದಿದ್ದರೂ ಪ್ರಕೃತಿಯ ತೊಟ್ಟಿಲಲ್ಲಿ ಕಂಗೊಳಿಸುವ ಬಗೆಯನ್ನು ಕಣ್ತುಂಬಿಸಿಕೊಳ್ಳುವುದೇ ಹಬ್ಬ. 

ಅಭಯ ಎರಡು ಬಗೆ
ಇಲ್ಲಿ ಮಂಗಳವಾರ ಮತ್ತು ಶುಕ್ರವಾರ ಹೂ ಪ್ರಸಾದ ಪಡೆಯುವ ಹೊತ್ತು ಒಂದು ರೀತಿಯ ಆತಂಕದ ಸನ್ನಿವೇಶ ಕಂಡುಬರುತ್ತದೆ. ಸರದಿಯಲ್ಲಿ ಭಕ್ತರು ಹಜಾರದಲ್ಲಿ ಚೌಕಾಕಾರದ ಚಾಪೆಯಲ್ಲಿ ಗರ್ಭಗುಡಿಗೆ ಅಭಿಮುಖವಾಗಿ ಕುಳಿತು ತಮ್ಮ ಯೋಜಿತ ಕಾರ್ಯಗಳನ್ನೋ, ಸಂಕಷ್ಟಗಳನ್ನೋ ಮನಸ್ಸಿನಲ್ಲೇ ಹೇಳಿಕೊಂಡು ಅರೆಕ್ಷಣ ಕಾದರೆ ದೇವಿಯ ವಿಗ್ರಹದಿಂದ ಹೂ ಬೀಳುತ್ತದೆ. ಬಲಗಡೆಯಿಂದ ಬಿದ್ದರೆ ಯಶಸ್ಸು, ಎಡಗಡೆಯಿಂದ ಆದರೆ ವಿಳಂಬ ಎಂಬ ಸಂಕೇತ. ಹೀಗೆ ಎಡಭಾಗದಲ್ಲಿ ಹೂ ಬಿದ್ದರೆ ಅರ್ಚಕರೂ, ದೇವಸ್ಥಾನ ಸಮಿತಿಯವರೂ, ನೆರೆದವರೂ ಆ ವ್ಯಕ್ತಿಗಾಗಿ ಪ್ರಾರ್ಥಿಸುತ್ತಾರೆ!

ಗಿಡದಕೆಂಚನಹಳ್ಳಿ ಕ್ಷೇತ್ರದಲ್ಲಿ ಕೆಲವರ್ಷದಿಂದೀಚೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಕಲ್ಯಾಣ ಮಂಟಪ, ಅತಿಥಿ ಗೃಹ, ಭೋಜನ ಶಾಲೆ ನಿರ್ಮಾಣ ಂತದಲ್ಲಿದೆ (ಇಲ್ಲಿ ನಿತ್ಯ ಅನ್ನದಾನ ನಡೆಯುತ್ತಿದೆ).

ಶ್ರೀ ಪಟ್ಲದಮ್ಮ ಕೊಲ್ಲಾಪುರದಮ್ಮನ ಕ್ಷೇತ್ರದಲ್ಲಿ ಪ್ರತಿವರ್ಷ ಏಪ್ರಿಲ್ ಎರಡನೇ ವಾರದಲ್ಲಿ ಜಾತ್ರಾ ಮಹೋತ್ಸವದ ಸಂಭ್ರಮ. ಅಗ್ನಿಕೊಂಡೋತ್ಸವ ಈ ಉತ್ಸವದ ವಿಶೇಷ.

ಈ ಬಾರಿಯ ಜಾತ್ರಾ ಮಹೋತ್ಸವ ಈಗಾಗಲೇ ಆರಂಭವಾಗಿದ್ದು, ಚೈತ್ರ ಶುದ್ಧ ಷಷ್ಠಿಯಂದು (ಇದೇ 16) ದೇವಿಯರಿಗೆ ಸರ್ವಾಲಂಕಾರ, ಅಷ್ಟಾವಧಾನ ಸೇವೆ, ಕುಂಡದ ಸೌದೆ ತರುವ ಕಾರ್ಯಕ್ರಮ, ಮಡೆ, ಬಾಯಿಬೀಗ, ಮೂಲಜ್ಯೋತಿಯನ್ನು ಬಸವೇಶ್ವರ ದೇವಸ್ಥಾನದಿಂದ ಉತ್ಸವದಲ್ಲಿ ತಂದು ಕುಂಡಕ್ಕೆ ಅಗ್ನಿಸ್ಪರ್ಶ ಮಾಡುವ ಕಾರ್ಯಕ್ರಮಗಳು ನಡೆಯಲಿವೆ.

ಅಂದು ಬೆಳಗಿನ ಜಾವ 5ಕ್ಕೆ ಅಗ್ನಿಪ್ರವೇಶ ಮಾಡಲಾಗುವುದು. ರಾತ್ರಿ ಯಕ್ಷಗಾನ ಪ್ರದರ್ಶನ, 17ರಂದು ಸಂಜೆ ಮುತ್ತಿನ ಪಲ್ಲಕಿ ಉತ್ಸವ ನಡೆಯಲಿದೆ. ಇದಕ್ಕೆ ಪ್ರತಿವರ್ಷ ಬೆಂಗಳೂರು ಮತ್ತಿತರ ಕಡೆಯಿಂದ ಕಾಲ್ನಡಿಗೆಯಿಂದ ಭಕ್ತರು ಬರುತ್ತಾರೆ.

ಹೀಗೆ ಬನ್ನಿ
ಬೆಂಗಳೂರು- ಹುಲಿಯೂರುದುರ್ಗ ಮಾರ್ಗದಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳಿವೆ. ಚೌಡನಕುಪ್ಪೆಯಲ್ಲಿ ಇಳಿದು ಎರಡೂವರೆ ಕಿ.ಮೀ. ನಡೆದು ಹೋಗಬಹುದು. ದೇವಸ್ಥಾನದ ಆವರಣದವರೆಗೂ ರಸ್ತೆ ಸೌಕರ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT