ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯ ಓದಲಾರದೆ ಸೋತ; ಪುಸ್ತಕ ಪ್ರಕಟಿಸಿ ಗೆದ್ದ!

Last Updated 10 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಫೇಲ್ ಶಬ್ದ ಕೇಳಿದಾಗ ಜೀವವೇ ಬಾಯಿಗೆ ಬಂದಂತಾಗಿ ಸಣ್ಣಗೆ ನಡುಕ ಶುರುವಾಗಿ ಮೈ ಬೆವರತೊಡಗಿತು. ಕುಟುಂಬವೇ ಕಣ್ಣಮುಂದೆ ಬಂದಂತಾಗಿ ಮುಂದೇನು ಎಂಬ ಪ್ರಶ್ನೆ ಕಾಡತೊಡಗಿತು...

ಪಠ್ಯಪುಸ್ತಕ ಸರಿಯಾಗಿ ವ್ಯಾಸಂಗ ಮಾಡಲಾಗದೆ ತರಗತಿಯಲ್ಲಿ ಅನುತ್ತೀರ್ಣ. ಪ್ರೌಢಶಾಲೆಯಲ್ಲಿ ಡುಮ್ಕಿ ಹೊಡೆದು ಮನೆಯಲ್ಲಿ ಎಲ್ಲರಿಂದ ಬೈಗುಳ ತಿಂದಿದ್ದ ಆ ಹುಡುಗ ಬಳಿಕ ಪುಸ್ತಕ ಪ್ರಕಾಶನದ ವೃತ್ತಿ ಬದುಕಿನಲ್ಲಿ ಪಾಸ್‌ ಆಗಿದ್ದ!

ಅವರೇ ಬಸವರಾಜ ಕೊನೇಕರ್‌. ಗುಲ್ಬರ್ಗ­ದಲ್ಲಿದ್ದ ಸಣ್ಣ ಪುಸ್ತಕದ ಅಂಗಡಿಯಿಂದ ಆರಂಭಿಸಿ, ಈಗ ಪುಸ್ತಕ ಪ್ರಿಯರ ಮುಂದೆ ‘ಬುಕ್‌ ಮಾಲ್‌’ ಎಂಬ ಹೊಸ ನಮೂನೆಯ ಗ್ರಂಥಲೋಕ ಪರಿಚಯಿಸುತ್ತಿರುವ ಯಶಸ್ವಿ ಉದ್ಯಮಿ ಇವರು.

ಮೊದಲೇ ಮನೆಯಲ್ಲಿ ಬಡತನ. ಅಪ್ಪ-, ಅಮ್ಮ, ನಾವು ಐದು ಜನ ಮಕ್ಕಳು. ಅಪ್ಪ ದುಡೀಬೇಕು ನಮ್ಮ ಬದುಕು ಸಾಗಬೇಕು. ನನಗೆ ಓದುವ ಹಂಬಲ.  ನನ್ನ ಮನಸ್ಸನ್ನು ಅರಿತ ಅಪ್ಪ ಎಂತಹ ಕಷ್ಟದಲ್ಲಿಯೂ ಎದೆಗುಂದದೆ ನನ್ನನ್ನು ಓದಿಸಲು ನಿರ್ಧರಿಸಿ ಅಳಂದ ತಾಲ್ಲೂಕಿನ ಮಾಡ್ಯಾಳದಲ್ಲಿ 7ನೇ ತರಗತಿ ಮುಗಿಯುತ್ತಿದ್ದಂತೆ ಗುಲ್ಬರ್ಗದಲ್ಲಿರುವ ಅತ್ತೆ ಮನೆಗೆ ಕಳುಹಿಸಿದ್ದರು. ವಿಜ್ಞಾನದಲ್ಲಿ ಹೆಚ್ಚಿನ ಆಸಕ್ತಿ ಇದ್ದುದರಿಂದ ವಿಜ್ಞಾನ ವಿಷಯವನ್ನೇ ಆರಿಸಿಕೊಂಡೆ. ಅದರಲ್ಲಿ ಒಂದು ವಿಷಯ ಕಲೆಗೆ ಸಂಬಂಧಿಸಿದ್ದು ಆರಿಸಿಕೊಳ್ಳಬೇಕಾದ ಅನಿವಾರ್ಯ ಇದ್ದುದರಿಂದ ಸಮಾಜಶಾಸ್ತ್ರ ನನ್ನ ಬದುಕಿನ ಗತಿಯನ್ನೇ ಬದಲಿಸಿಬಿಟ್ಟಿತು.

ನಾನು ಫೇಲಾದೆ ಎಂಬ ಸುದ್ದಿ ಅಪ್ಪನ ಕಿವಿಗೆ ಬಿತ್ತು. ಎಲ್ಲ ಅಪ್ಪಂದಿರಂತೆ ಅವರೂ ತುಂಬಾ ಬೈದರು. ‘ಇಂದಿನಿಂದ ನನ್ನ ಪಾಲಿಗೆ ನೀನು ಸತ್ತೆ, ನಿನ್ನ ಪಾಲಿಗೆ ನಾನೂ ಇಲ್ಲ’ ಎಂದು ಗುಡುಗಿ ಹೊರಟು ಹೋದರು. ಹೇಗಾದರೂ ಮಾಡಿ ಈ ಬಾರಿ ತೇರ್ಗಡೆ ಹೊಂದಬೇಕು ಎಂದು ನಿರ್ಧರಿಸಿದೆ. ಪರೀಕ್ಷೆ ಶುಲ್ಕ ಕಟ್ಟಲು ಬೇಕಾದ ₨13.50ವನ್ನು ಪುಸ್ತಕದ ಅಂಗಡಿ ಮಾಲೀಕ ಬಿ.ಎಸ್.ಭಾವಿಕಟ್ಟಿ ಅವರು ಕೊಟ್ಟು ನೆರವಾದರು. ಅದಕ್ಕೆ ಬದಲಾಗಿ ನಾನು ಅವರ ಅಂಗಡಿಯಲ್ಲಿ ಆರು ತಿಂಗಳು ದುಡಿದೆ.

ಅಪ್ಪ ನನ್ನನ್ನು ಬೈದು ಹೋಗಿ ಮೂರು ತಿಂಗ­ಳಾಗಿತ್ತು.  ಬಳಿಕ ನನ್ನನ್ನು ನೋಡಲು ಬರಲೇ ಇಲ್ಲ. ನಾನೂ ಅಲ್ಲಿಗೆ ಹೋಗುವ ಧೈರ್ಯ ಮಾಡಲಿಲ್ಲ.
ಒಂದು ದಿನ ಮನೆಯಿಂದ ಸುದ್ದಿ ಬಂತು, ‘ನಿಮ್ಮ ಅಪ್ಪ ತೀರಿಹೋದ್ರು’. ಹಿರಿಯ ಮಗನಾಗಿದ್ದರಿಂದ ಸಂಸಾರದ ಭಾರ ನನ್ನ ಹೆಗಲ ಮೇಲೆ ಬಿತ್ತು. ಹಾಗೂ ಹೀಗೂ ಮಾಡಿ ಆರು ತಿಂಗಳು ಭಾವಿಕಟ್ಟಿ ಅವರ ಅಂಗಡಿಯಲ್ಲಿ ಕೆಲಸ ಮಾಡಿದೆ. ಒಳ್ಳೆಯ ಕೆಲಸಗಾರ ಎನಿಸಿಕೊಂಡಿದ್ದರಿಂದ ನನ್ನ ಕಷ್ಟ ಕಂಡು ಧರ್ಮಪಾಲ ಆರ್ಯ ಎಂಬವರು ತಮ್ಮ ಅಂಗಡಿಯಲ್ಲಿ ಕೆಲಸಕೊಟ್ಟರು. ಅಲ್ಲಿ ನನ್ನ ಸಂಬಳ ₨40. ಆದರೆ  ದಿನವೂ ಒಂದೇ ಬಟ್ಟೆ ಹಾಕುತ್ತಿದ್ದನ್ನು ನೋಡಿದ ಧರ್ಮಪಾಲ ಅವರು ಎರಡು ಜೊತೆ ಬಟ್ಟೆ ಕೊಡಿಸಿದರು. ಅದರಲ್ಲಿ ಒಂದು ಉಚಿತ. ಮತ್ತೊಂದಕ್ಕೆ ಪ್ರತಿ ತಿಂಗಳು ಸಂಬಳದಲ್ಲಿ ₨5 ಹಿಡಿದುಕೊಂಡರು.

1972ರಲ್ಲಿ ಭೀಕರ ಬರಗಾಲ ಬಿತ್ತು. ತುಂಬಾ ಸಂಕಷ್ಟಕ್ಕೆ ಸಿಲುಕಬೇಕಾಯಿತು. ಆಗ ಮತ್ತೆ ಭಾವಿಕಟ್ಟಿಯವರ ಅಂಗಡಿಗೆ ಬರಬೇಕಾಯಿತು. ನನ್ನ ಕೆಲಸ ನೋಡಿ ಅವರು ₨200 ಸಂಬಳದೊಂದಿಗೆ ನನ್ನನ್ನು ಮತ್ತೆ ಕೆಲಸಕ್ಕೆ ತೆಗೆದುಕೊಂಡರು.

ಸಂಸಾರದ ಭಾರ ಹೆಚ್ಚಿದಂತೆಲ್ಲ ಸಂಬಳ ಯಾವುದಕ್ಕೂ ಸಾಲದಾಯಿತು. ಎದೆಗುಂದದೆ ಕರ್ನಾಟಕದಾದ್ಯಂತ ಪುಸ್ತಕಗಳನ್ನು ಹೊತ್ತು ಮಾರಾಟ ಮಾಡಿದೆ. ಆರೇಳು ವರ್ಷಗಳ ಅನುಭವದ ನಂತರ ನಾನೇ ಏಕೆ ಸ್ವಂತದ ಪುಸ್ತಕ ಅಂಗಡಿ ತೆಗೆಯಬಾರದು ಎಂಬ ಆಲೋಚನೆ ಬಂತು. ಅದಕ್ಕಾಗಿ ಎಲ್ಲ ಬಂಧುಗಳಲ್ಲಿ ದುಡ್ಡಿನ ಸಹಾಯ ಕೇಳಿದೆ. ಆದರೆ ಯಾರೂ ನೆರವಾಗಲಿಲ್ಲ.

₨3000ಕ್ಕೆ ಸ್ವಂತದ ಅಂಗಡಿ
ಆಗ ದೇವರಂತೆ ಬಂದವರೇ ಕಾರ್ಪೂರೇಷನ್ ಬ್ಯಾಂಕ್ ಅಧಿಕಾರಿ. ₨3 ಸಾವಿರ ಸಾಲ ನೀಡಿದರು. 1977ರಲ್ಲಿ ಸಣ್ಣದೊಂದು ಗೂಡಂಗಡಿ ಆರಂಭಿಸಿದೆ.
ಆರಂಭದ ದಿನಗಳಲ್ಲಿ ಸಾಕಷ್ಟು ಎಡರು–ತೊಡರುಗಳನ್ನು ಅನುಭವಿಸಿದೆ. ನಂತರ ಸಾಕಷ್ಟು ಶ್ರಮ ವಹಿಸಿದ್ದರಿಂದ ಮೆಲ್ಲಗೆ ಬೆಳ­ವಣಿಗೆ ಕಾಣಲಾರಂ­ಭಿಸಿತು. ಅದೇ ವೇಳೆ ಪತ್ನಿಯೂ ದುಡಿಮೆಗೆ ಹೆಗಲು­ಕೊಟ್ಟಳು. ನಾನು ಹೊರಗೆ ಪುಸ್ತಕ ಮಾರಾಟಕ್ಕೆ ಹೋದರೆ, ಅಂಗಡಿಯನ್ನು ಪತ್ನಿ ಸಂಬಾಳಿಸುತ್ತಿದ್ದಳು.

ಹೈದರಾಬಾದ್ ಕರ್ನಾಟಕ ಪ್ರದೇಶವನ್ನು ಬಹು ಕಾಲ ನಿಜಾಮರು ಆಳಿದ್ದರಿಂದ ಉರ್ದು ಇಲ್ಲಿನ ಜನರ ಬದುಕಿನ ಭಾಷೆ­ಯಾಗಿತ್ತು. ನಿಜಾಮರಿಂದ ಸ್ವಾತಂತ್ರ್ಯಗೊಂಡ ನಂತರವೂ ಉರ್ದು ಛಾಯೆ ಹಾಗೇ ಉಳಿದಿತ್ತು. ನಂತರ ಅಲ್ಲೊಂದು ಇಲ್ಲೊಂದು ಕನ್ನಡ ಶಾಲೆಗಳು ಆರಂಭವಾದವು. ಇಂತಹ ಸಂದರ್ಭದಲ್ಲಿ ಕನ್ನಡ ಕೃತಿಗಳನ್ನು ರಚಿಸುವುದು, ಪ್ರಕಾಶನ ಮಾಡುವುದು ದುಸ್ತರವಾಗಿತ್ತು. ಅದಕ್ಕಾಗಿ ಸತತ ಶ್ರಮ ವಹಿಸಿ ಪುಸ್ತಕಗಳ ಷೋರೂಂ ಆರಂಭಿಸಿದೆ.

ಒಂದು ಕಾಲಕ್ಕೆ ಪಠ್ಯ ಪುಸ್ತಕಗಳಿಲ್ಲದೆ ಇಲ್ಲಿನ ವಿದ್ಯಾರ್ಥಿ­ಗಳು ಮತ್ತು ಅಧ್ಯಾಪಕರು ಪರದಾಡುವಂತಹ ಸ್ಥಿತಿ ಇತ್ತು. ಬೆಂಗಳೂರು, ಮಂಗಳೂರು, ಧಾರವಾಡ

, ಗದಗದಿಂದ ಪಠ್ಯ ಪುಸ್ತಕಗಳ ಬರುವಿಕೆಗಾಗಿ ದಾರಿ ನೋಡಬೇಕಾಗಿತ್ತು. ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕು ಎನ್ನುವ ಬಯಕೆ ಮನದಲ್ಲಿ ಕಾಡತೊಡಗಿತು. ಆಗಲೇ ‘ಶ್ರೀ ಸಿದ್ಧಲಿಂಗೇಶ್ವರ ಸಂಸ್ಥೆ’ ಹುಟ್ಟುಹಾಕಿದೆ. ಪಠ್ಯ ಪುಸ್ತಕಗಳ ಜತೆ ಕಥೆ ಕಾದಂಬರಿಗಳನ್ನು ಮುದ್ರಿಸಲು ಆರಂಭಿಸಿದೆ.
ಮೊದಲ ಪ್ರಯೋಗದಲ್ಲಿ ಹಿಂದಿ ಕಾದಂಬರಿ ‘ವಿಭೂತಿಂಯಾ’ ನಮ್ಮ  ಬಸವ ಪ್ರಕಾಶನದಿಂದ ಹೊರ ಬಂತು. ನಂತರದಲ್ಲಿ ಗೀತಾ ನಾಗಭೂಷಣ ಅವರ ‘ಅವ್ವ’, ಶಾಶ್ವತಸ್ವಾಮಿ ಮುಕ್ಕುಂದಿಮಠ ಅವರ ಮೋಹನ ತರಂಗಿಣಿ ಕಾವ್ಯದಿಂದ ಆಯ್ದ ‘ಶೃಂಗಾರ ತರಂಗಿಣಿ’, ಡಾ. ಶಕುಂತಲಾ ಸಿ.ದುರಗಿ ಅವರ ‘ವೀರರತ್ನ ಕುಮಾರರಾಮ ಸಂಗ್ರಹ’ ಕೃತಿಗಳನ್ನು ಒಂದೇ ಬಾರಿಗೆ ಪ್ರಕಟಿಸಲಾಯಿತು.

ಇಕ್ಕಟ್ಟಿಗೆ ಸಿಲುಕಿಸಿದ್ದ ವಿವಾದ!
‘ಶೃಂಗಾರ ತರಂಗಿಣಿ’ ಪದವಿ ವಿದ್ಯಾರ್ಥಿಗಳ ಪಠ್ಯವಾಗಿದ್ದರಿಂದ ಈ ಪುಸ್ತಕ ವಿವಾದಕ್ಕೆ ಸಿಲುಕಿತು. ಕೃಷ್ಣ ಗೋಪಿಕಾ ಸ್ತ್ರೀಯರ ಕುರಿತು ಇರುವುದರಿಂದ ಇಂತಹ ಪುಸ್ತಕವನ್ನು ಪ್ರಕಟಿಸಿದ ಬಸವ ಪ್ರಕಾಶನವನ್ನೇ ಮುಚ್ಚಿ­ಸಬೇಕು ಎಂದು ಕೆಲವರು ಹಠ ಹಿಡಿದರು. ಸಾಲ ಮಾಡಿ ಪ್ರಕಾ­ಶನ ಕಾರ್ಯ ಆರಂಭಿಸಿದ್ದ ನನಗೆ ಆಘಾತ ಉಂಟಾ­ಯಿತು. ಎಷ್ಟೆಲ್ಲ ಸಮಸ್ಯೆಗಳನ್ನು ಎದುರಿಸಿದ್ದ ನಾನು, ಅದನ್ನೂ ಸವಾಲಾಗಿ ಸ್ವೀಕರಿಸಿದೆ. ಸಾಹಿತಿಗಳ ಚರ್ಚಾ­ಗೋಷ್ಠಿ ಏರ್ಪಡಿಸಿದೆ. ಕೆಲ ಸಾಹಿತಿಗಳು ಪ್ರಕಾಶನ ಮುಚ್ಚ­ಬೇಕು ಎಂದರೆ, ಕೆಲವರು ಬೇಡ ಎಂದರು. ಹಾಗಿದ್ದರೆ ‘ಮತದಾನವಾಗಲಿ’ ಎಂದು ಕೆಲ ಸಾಹಿತಿಗಳು ನುಡಿದರು. ಆದರೂ ಮನದಲ್ಲಿ ಏನೋ ತಳಮಳ ಶುರುವಾಗಿತ್ತು. ‘ಎಲ್ಲರ ಮತ ನನ್ನ ಪರವಾದರೇನೋ  ಸರಿ, ಇಲ್ಲವಾದರೆ’.. ಎನ್ನುವ ಭೀತಿ ಕಾಡತೊಡಗಿತ್ತು. ಏನಾ­ದರೂ ಆಗಲಿ ಎಲ್ಲದಕ್ಕೂ ಸಿದ್ಧವಾಗಿರೋಣ ಎಂದು­ಕೊಂಡು ಮನಸ್ಸು ಗಟ್ಟಿ ಮಾಡಿದೆ. ಮತದಾನವಾಗಿ ಫಲಿತಾಂಶ ಬಂದಾಗ ನಾಲ್ಕು ಮತ ಬೇಡ ಎಂದು, 20 ಮತಗಳು ಪ್ರಕಾಶನ ಕಾರ್ಯ ಮುಂದುವರಿಯಲಿ ಎಂದೂ ಇತ್ತು. ಈ ಬೆಳವಣಿಗೆ ನನ್ನಲ್ಲಿ ಪ್ರಕಾಶನ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೊಯ್ಯಬೇಕು ಎಂಬ ದೃಢ ನಿಲುವು ಮೂಡಿಸಿತು. ಬಳಿಕ ಬಸವ ಪ್ರಕಾಶನ ಹಿಂದಿರುಗಿ ನೋಡಿಲ್ಲ.

ಸದ್ಯ ನಮ್ಮ ಸಂಸ್ಥೆ 37ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ. ಪುಸ್ತಕ ಮಳಿಗೆಯಲ್ಲಿ 22 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತಿದೆ. ಇಷ್ಟರಲ್ಲೇ ಗುಲ್ಬರ್ಗದ ಸರಸ್ವತಿ ಗೋದಾಮಿನಲ್ಲಿ ನಾಲ್ಕು ಅಂತಸ್ತಿನ ‘ಶ್ರೀ ಸಿದ್ಧಲಿಂಗೇಶ್ವರ ಬುಕ್ ಮಾಲ್' ಉದ್ಘಾಟನೆ­ಗೊಳ್ಳಲಿದೆ.  ಬೆಳಗಾವಿ­ಯಿಂದ ಬೀದರ್‌ವರೆಗಿನ 16 ಜಿಲ್ಲೆ­ಗಳಲ್ಲೇ ಇಂತಹ ದೊಡ್ಡ ಪುಸ್ತಕ ಮಳಿಗೆ ಇಲ್ಲ ಎನ್ನಬಹುದು.

ಏರಿಳಿತ ಹಾದಿ
* ಮೊದಲ ದುಡಿಮೆ ₨40
*ಎರಡನೇ ಕೆಲಸಕ್ಕೆ ₨200
*1977ರಲ್ಲಿ ಸ್ವಂತ ಪುಸ್ತಕ ಅಂಗಡಿ
*₨3000 ಬಂಡವಾಳ
*ಈಗ ಕೋಟಿಗಟ್ಟಲೆ ವಹಿವಾಟು
*2013ರಲ್ಲಿ ಬುಕ್‌ ಮಾಲ್‌
*22 ಮಂದಿಗೆ ಉದ್ಯೋಗ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT