ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯದಲ್ಲಿ ಕೇಸರೀಕರಣ ತಡೆ ಆಯೋಗ ರಚನೆಗೆ ಆಗ್ರಹ

Last Updated 7 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಶಾಲಾ ಪಠ್ಯಪುಸ್ತಕಗಳು ಕೇಸರೀಕರಣ ಆಗದಂತೆ ತಡೆಯಲು ರಾಷ್ಟ್ರೀಯ ಆಯೋಗವೊಂದನ್ನು ರಚಿಸಬೇಕು. ಈ ಆಯೋಗ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಲ್ಲೇ (ಎನ್‌ಸಿಎಫ್) ಕೆಲಸ ಮಾಡುವಂತೆ ಆಗಬೇಕು' ಎಂದು ಇತಿಹಾಸ ತಜ್ಞೆ ರೋಮಿಲಾ ಥಾಪರ್ ಸೇರಿದಂತೆ 24 ಜನ ವಿದ್ವಾಂಸರು ಆಗ್ರಹಿಸಿದ್ದಾರೆ.

ಆಯೋಗವು ಸಮಾಜ ವಿಜ್ಞಾನ ಮತ್ತು ಮಾನವಿಕ ವಿಷಯಗಳ ಪಠ್ಯವನ್ನು ಪರಿಶೀಲನೆಗೆ ಒಳಪಡಿಸಬೇಕು. ಆಯೋಗದಲ್ಲಿ ಮೂವರು ಸದಸ್ಯರಿರಬೇಕು. ಎನ್‌ಸಿಎಫ್ 2005ರಲ್ಲಿ ರೂಪಿಸಿರುವ ನಿಯಮಗಳಿಗೆ ವಿರುದ್ಧವಾಗಿರುವ ಅಂಶಗಳನ್ನು ಪಠ್ಯದಿಂದ ತೆಗೆಯಲು ಶಿಫಾರಸು ಮಾಡಬೇಕು ಎಂದು ಥಾಪರ್ ಮತ್ತು ಇತರರು ನವದೆಹಲಿಯಲ್ಲಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಆಗ್ರಹಿಸಲಾಗಿದೆ.

ಈ ಹೇಳಿಕೆಗೆ ಲೋಕಸಭೆಯ ಮಾಜಿ ಸ್ಪೀಕರ್ ಸೋಮನಾಥ ಚಟರ್ಜಿ, ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಯು.ಆರ್. ಅನಂತಮೂರ್ತಿ, ಗಿರೀಶ ಕಾರ್ನಾಡ, ಚಂದ್ರಶೇಖರ ಕಂಬಾರ, ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ. ಚಂದ್ರಶೇಖರ್ ಮತ್ತಿತರರು ಸಹಿ ಮಾಡಿದ್ದಾರೆ.

`ಪುಸ್ತಕ ಹಿಂಪಡೆಯಿರಿ': 2012ರಲ್ಲಿ ಪ್ರಕಟವಾದ 8ನೇ ತರಗತಿಯ ಹಿಂದಿ, ಕನ್ನಡ, ಸಮಾಜ ವಿಜ್ಞಾನ, ವಿಜ್ಞಾನ, 5ನೇ ತರಗತಿಯ ವಿಜ್ಞಾನ ಮತ್ತು ಸಮಾಜ ವಿಜ್ಞಾನ, ಈ ವರ್ಷದ 9ನೇ ತರಗತಿಯ ಸಮಾಜ ವಿಜ್ಞಾನ (ಇತಿಹಾಸ), ವಿಜ್ಞಾನ ಮತ್ತು 6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಹಿಂದುತ್ವದ ಸಿದ್ಧಾಂತ ಇದೆ. ಹಾಗಾಗಿ ಈ ಪಠ್ಯಪುಸ್ತಕಗಳನ್ನು ಸರ್ಕಾರ ಹಿಂಪಡೆಯಬೇಕು ಎಂದು ಚಂದ್ರಶೇಖರ್ ಆಗ್ರಹಿಸಿದ್ದಾರೆ.

ರಾಜ್ಯದ ಪಠ್ಯಪುಸ್ತಕ ಸಮಿತಿಯ ಮುಖ್ಯ ಸಂಯೋಜಕ ಪ್ರೊ. ಮುಡಂಬಡಿತ್ತಾಯ ಮತ್ತು ಅವರ ತಂಡವನ್ನು ವಜಾಗೊಳಿಸಿ, ಹೊಸ ಸಮಿತಿ ರಚಿಸಬೇಕು ಎಂದೂ ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT