ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯದಲ್ಲಿ ಚದುರಂಗ

Last Updated 14 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಚೆಸ್ ಅಥವಾ ಚದುರಂಗ ಬುದ್ಧಿವಂತಿಕೆ ಬೆಳೆಸುವ ತಾಳ್ಮೆ, ಸಹನೆಯ ಆಟ. ಆದರೆ ಇಂದಿನ ಒತ್ತಡದ ಬದುಕು ಹಾಗೂ ಬಿಡುವಿಲ್ಲದ ಕೆಲಸಗಳ ನಡುವೆ ಮನಸ್ಸಿಗೆ, ಮೆದುಳಿಗೆ ಸಾಣೆ ಹಿಡಿಯುವಂತಹ ಆಟಗಳಲ್ಲಿ ಯಾರಿಗೂ ಆಸಕ್ತಿಯಿಲ್ಲ.

ಇದಕ್ಕಿಂತ ಹೆಚ್ಚಾಗಿ ಇಂದಿನ ಪೀಳಿಗೆಯೇ ಒತ್ತಡದಲ್ಲಿ ಹೂತು ಹೋಗಿದೆ. ಇದರ ನಡುವೆಯೂ ಬುದ್ಧಿಕೌಶಲ್ಯ ಹೆಚ್ಚಿಸುವ  ನೆನಪಿನ ಶಕ್ತಿಯನ್ನು ಬೆಳೆಸುವ ಚದುರಂಗವನ್ನು ತನ್ನ ಪಠ್ಯ ಚಟುವಟಿಕೆಗಳಲ್ಲಿ ಸೇರಿಸಿದೆ ಗ್ರೀನ್‌ವುಡ್ ಹೈ ಶಾಲೆ.

ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಚದುರಂಗದಾಟವನ್ನು ಅದು ಪಠ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಪರಿಚಯಿಸಿತ್ತು. ಕೋರಮಂಗಲದ ಪ್ರೈಮರಿ ಶಾಲೆಯಲ್ಲಿ ಆರಂಭದಲ್ಲಿ ಚೆಸ್ ಆಟವನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಿತ್ತು. ಆಗ ಸಿಕ್ಕ ವಿದ್ಯಾರ್ಥಿಗಳ ಪ್ರತಿಕ್ರಿಯೆ ಹಾಗೂ ಅವರ ಕೌಶಲ್ಯವೃದ್ಧಿಯ ಪ್ರಮಾಣ ಗಮನಿಸಿ ತನ್ನ ಎಲ್ಲಾ ಶಾಲೆಗಳಿಗೂ ವಿಸ್ತರಿಸಿತು. ಈಗ ನಗರದಲ್ಲಿನ ತನ್ನ ಎಲ್ಲ ಶಾಲಾ ಕೇಂದ್ರಗಳಲ್ಲೂ ಕೊಠಡಿಗಳಲ್ಲೆೀ ಕಲಿಸುತ್ತಿದೆ.

ವರ್ತೂರು ರಸ್ತೆ ಶಾಲೆಯಲ್ಲಿ 15 ಟೇಬಲ್‌ಗಳಿದ್ದು, ಒಂದೇ ಬಾರಿಗೆ 30 ವಿದ್ಯಾರ್ಥಿಗಳು ಕುಳಿತು ಚೆಸ್  ಆಡಬಹುದಾಗಿದೆ. ಆಟಕ್ಕೂ ಮುನ್ನ ವಯಸ್ಸಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ವಿಂಗಡಿಸಲಾಗುತ್ತದೆ. 8 ರಿಂದ 14 ವರ್ಷ, 15 ರಿಂದ 17 ವರ್ಷ ವಯಸ್ಸಿನವರ ಎರಡು ಗುಂಪುಗಳಿವೆ. ವಾರದ ವೇಳಾಪಟ್ಟಿಯಲ್ಲೆೀ ಚೆಸ್ ಆಟಕ್ಕೆ ಒಂದು ಗಂಟೆಯನ್ನು ನಿಗದಿಪಡಿಸಿದೆ.

ಆಟದಲ್ಲಿ ತೋರಿದ ಚಾಕಚಕ್ಯತೆಯನ್ನು ಗಮನಿಸಿ ಅಂಕಗಳನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಚೆಸ್ ಪರಿಚಯಿಸಿದ್ದರಿಂದ ಅನೇಕ ಪ್ರಯೋಜನವಾಗಿದೆ. ಗ್ರೀನ್ ವುಡ್ ಶಾಲೆಯ ಕ್ರೀಡಾ ಸಿಬ್ಬಂದಿ ಹೇಳುವ ಪ್ರಕಾರ ವಿದ್ಯಾರ್ಥಿಗಳ ಕಲಿಕೆಯ ಸಾಮರ್ಥ್ಯ ಹೆಚ್ಚಿದೆ.
 
ತಾಳ್ಮೆ, ಸಹನೆಯನ್ನು ಮೈಗೂಡಿಸಿಕೊಂಡಿದ್ದಾರೆ. ಗಣಿತ ಪಾಠಗಳು ಈ ಮುಂಚೆ ಕೇವಲ ಪೆನ್ನು ಮತ್ತು ಪೇಪರ್ ಹಿಡಿದು ವಿದ್ಯಾರ್ಥಿಗಳು ಪರದಾಡುವಂತೆ ಮಾಡುತ್ತಿದ್ದವು. ಇದೀಗ ಚೆಸ್ ಆಟದಿಂದ ವಿದ್ಯಾರ್ಥಿಗಳು ಗಣಿತವನ್ನು ಸರಾಗವಾಗಿ ಕಲಿಯುತ್ತಿದ್ದಾರೆ.

`ಮೆದುಳನ್ನು ಚುರುಕುಗೊಳಿಸುವ ಚೆಸ್ ಆಟದಿಂದ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿದ್ದ ಗಣಿತ ಈಗ ಸುಲಲಿತವಾಗಿ ಕಲಿಯುವಂತಹ ಪಠ್ಯವಾಗಿದೆ . ನಾವು ಪಠ್ಯ ಚಟುವಟಿಕೆಗಳಲ್ಲಿ ಚೆಸ್ ಸೇರಿಸಿದ್ದು, ಇದು ವಿದ್ಯಾರ್ಥಿಗಳಿಗೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಮನೋಸಾಮರ್ಥ್ಯವನ್ನು ನೀಡುತ್ತದೆ, ಏಕಾಗ್ರತೆಯನ್ನು ಹೆಚ್ಚಿಸುತ್ತಿದೆ.
ಶಾಲೆಯ ವೇಳಾಪಟ್ಟಿಯ ಪ್ರಕಾರ ವಿದ್ಯಾರ್ಥಿಗಳೆಲ್ಲಾ ವಾರಕ್ಕೆ ಒಂದು ಗಂಟೆ ಚೆಸ್ ಆಡಲೇ ಬೇಕು, ವಿದ್ಯಾರ್ಥಿಗಳ ಆಟದ ಕೌಶಲ್ಯ ಗಮನಿಸಿ ಅಂಕಗಳಲ್ಲಿ ಅಳೆದು ಗ್ರೇಡ್ ನೀಡಲಾಗುತ್ತದೆ ಎನ್ನುತ್ತಾರೆ ಶಾಲೆಯ ಮ್ಯೋನೇಜಿಂಗ್ ಟ್ರಸ್ಟಿ ಮಾನಸ್ ಮೆಹ್ರೋತ್ರ.

ಶಾಲೆಗಳಲ್ಲಿ ಕಿರು ಪರೀಕ್ಷೆಗಳು ವಿದ್ಯಾರ್ಥಿಗಳ ಏಕಾಗ್ರತೆ ಹಾಗೂ ಶಿಸ್ತನ್ನು ಅಳೆಯುವ ಮಾಪನಗಳು. ಇದೀಗ ಚದುರಂಗದಾಟದಿಂದ ಬುದ್ಧಿ ಕೌಶಲ್ಯಗಳನ್ನು ಹೆಚ್ಚಿಸಿಕೊಂಡ ವಿದ್ಯಾರ್ಥಿಗಳು ಈ ಪರೀಕ್ಷೆಗಳಲ್ಲಿ ಸರಾಗವಾಗಿ ಹೆಚ್ಚಿನ ಗ್ರೇಡ್‌ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಚೆಸ್ ಆಟ ವಿದ್ಯಾರ್ಥಿಗಳ ಆಲೋಚನ ಶಕ್ತಿಯನ್ನೇ ಬದಲಿಸಿದೆ ಎನ್ನುತ್ತಾರೆ ಅವರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT