ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯದಲ್ಲಿ ಚೆಸ್: ಸರ್ಕಾರ ಒಪ್ಪುತ್ತಾ...?

Last Updated 1 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಹೀಗೊಮ್ಮೆ ಕಲ್ಪಿಸಿಕೊಳ್ಳಿ.. ಶಾಲೆಗಳಲ್ಲಿ ತರಗತಿಯ ಎಲ್ಲಾ ಬೆಂಚುಗಳಲ್ಲೂ ಚೆಸ್‌ಬೋರ್ಡ್.. ಪಕ್ಕದಲ್ಲಿ ಕಾಯಿಗಳ ರಾಶಿ.. ಏಕಾಗ್ರತೆಯಿಂದ ಗಂಭೀರವಾಗಿ ವಿದ್ಯಾರ್ಥಿಗಳು ಚೆಸ್ ಆಡುತ್ತಿದ್ದರೆ ಶಾಲೆಯಿಡೀ ನಿಶ್ಶಬ್ದ. ಪೋಷಕರ ಒತ್ತಾಯವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದೇ ಆದಲ್ಲಿ ಈ ವಾತಾವರಣ ಸದ್ಯದಲ್ಲೇ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮೂಡಲಿದೆ.

ತಮಿಳುನಾಡು, ಗುಜರಾತ್ ರಾಜ್ಯಗಳ ಪಠ್ಯಕ್ರಮ ಹಾಗೂ ಕೇಂದ್ರೀಯ ಪಠ್ಯಕ್ರಮದ ಮಾದರಿಯಲ್ಲಿ ಚೆಸ್ ಅನ್ನು ದೈಹಿಕ ಶಿಕ್ಷಣ ಪಠ್ಯದ ಭಾಗವಾಗಿ ಮಾಡುವ ಬಗ್ಗೆ ಹಲವು ವರ್ಷಗಳಿಂದ ಮಾತುಗಳು ಕೇಳಿ ಬರುತ್ತಿವೆ. ದಾವಣಗೆರೆಯಲ್ಲಿ ಆ.28ರಿಂದ ಸೆ.1ರವರೆಗೆ ಆಯೋಜನೆಗೊಂಡ ರಾಜ್ಯಮಟ್ಟದ ಶಾಲಾ ಚೆಸ್ ಟೂರ್ನಿಯ ಸಂದರ್ಭದಲ್ಲಿ, ಪಠ್ಯಕ್ರಮದಲ್ಲಿ ಯೋಗದ ರೀತಿಯಲ್ಲೇ ಚದುರಂಗದಾಟ ಸೇರಿಸಬೇಕು ಎಂಬ ಒತ್ತಾಯ ಬಲವಾಗಿ ಕೇಳಿಬಂತು.

`ಮಕ್ಕಳು ಚೆಸ್ ಆಡುವುದರಿಂದ ಅವರಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಮಕ್ಕಳು ಅಧ್ಯಯನ ಮಾಡುವ ರೀತಿ ಬದಲಾಗುತ್ತದೆ. ಮುಖ್ಯವಾಗಿ ಗಣಿತದಲ್ಲಿರುವ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಸಹಕಾರಿಯಾಗುತ್ತದೆ. ಮುಂದೆ ಜೀವನದಲ್ಲಿ ಸೋಲು, ಗೆಲುವು ಎರಡನ್ನೂ ಸಮನಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳುತ್ತಾರೆ' ಎನ್ನುವುದು ಪೋಷಕ ಪಾಂಗಾಳ ದೇವದಾಸ ನಾಯಕ್ ಅವರ ಅನಿಸಿಕೆ.

ಶಿಕ್ಷಕ ಸಂಜಯ್‌ಕುಮಾರ್ ಅವರು, `ಯೋಗವನ್ನು ತರಗತಿಗಳಲ್ಲಿ ಬೋಧಿಸಲು ಆರಂಭಿಸಿದ ಮೇಲೆ ಮಕ್ಕಳ ದೈಹಿಕ ಕ್ಷಮತೆ ಉತ್ತಮವಾಗಿದೆ. ಇದೇ ರೀತಿ, ಚೆಸ್ ಕಲಿಕೆಯನ್ನು ಪಠ್ಯದಲ್ಲಿ ಸೇರಿಸಿದರೆ ಅವರ ಬೌದ್ಧಿಕ ಮಟ್ಟ ಹೆಚ್ಚಿಸಲು ಅನುಕೂಲವಾಗಲಿದೆ. ಏಕಾಗ್ರತೆ, ತಾಳ್ಮೆ ಹೆಚ್ಚುವ ಕಾರಣದಿಂದಾಗಿ ಅವರು ಇತರ ಪಠ್ಯ ವಿಷಯಗಳನ್ನು ಗಮನವಿಟ್ಟು ಅಧ್ಯಯನ ಮಾಡುತ್ತಾರೆ.

ಅಲ್ಲದೇ, ಈ ಕ್ರೀಡೆಗೆ ಕಡಿಮೆ ಹಣ ಅಗತ್ಯವಿರುವ ಕಾರಣ, ಹೆಚ್ಚಿನ ಮಕ್ಕಳು ಕಲಿಯಲು ಅನುಕೂಲವಾಗುತ್ತದೆ. ಹೀಗಾಗಿ ಮುಂದೊಂದು ದಿನ ರಾಜ್ಯದಿಂದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಮತ್ತಷ್ಟು ಚೆಸ್ ಆಟಗಾರರು ಹೊರಹೊಮ್ಮಲು ಸಾಧ್ಯತೆಯಿದೆ' ಎನ್ನುತ್ತಾರೆ.

ಪೋಷಕರಾದ ಕರುಣಾಕರ ಅವರು, `ಖಾಸಗಿ ಸಂಸ್ಥೆಗಳಲ್ಲಿ ಮಕ್ಕಳನ್ನು ತರಬೇತಿಗೆ ಸೇರಿಸಿದರೆ ಸಾಕಷ್ಟು ಹಣ ಖರ್ಚಾಗುತ್ತದೆ. ಇದರಿಂದಾಗಿ ಬಡವರ ಮಕ್ಕಳಿಗೆ ತರಬೇತಿ ಸಿಗುವುದಿಲ್ಲ. ಸರ್ಕಾರಿ ಶಾಲೆಗಳಲ್ಲಿ ಪಠ್ಯವಾಗಿ ಬೋಧಿಸಿದರೆ ಎಲ್ಲ ಮಕ್ಕಳಿಗೂ ಚೆಸ್ ಆಡುವ ಅವಕಾಶ ದೊರೆಯುತ್ತದೆ' ಎನ್ನುತ್ತಾರೆ.

ಏಕಲವ್ಯ ಪ್ರಶಸ್ತಿ ಪುರಸ್ಕೃತ ಚೆಸ್ ಆಟಗಾರ, 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಸ್ಪರ್ಧಿಸಿದ ಸಾತ್ವಿಕ್, `ನಾನು 11 ವರ್ಷಗಳಿಂದ ಚೆಸ್ ಆಡುತ್ತಿದ್ದೇನೆ. ಇದರಿಂದಾಗಿ ತಾಳ್ಮೆ, ಏಕಾಗ್ರತೆ ವೃದ್ಧಿಯಾಗಿ ಬೇರೆ ವಿಷಯಗಳ ಓದಿನಲ್ಲಿ ಅನುಕೂಲವಾಗಿದೆ. ಸರ್ವಾಂಗೀಣ ಅಭಿವೃದ್ಧಿಗೆ ಚೆಸ್ ಪೂರಕವಾಗಿದೆ. ಪಠ್ಯಪುಸ್ತಕದಲ್ಲಿ ಅಳವಡಿಸಿದರೆ ಎಲ್ಲರಿಗೂ ಅವಕಾಶ ಸಿಕ್ಕಂತಾಗುತ್ತದೆ.

ಪರಿಣಾಮಕಾರಿಯಾಗಿ ಜಾರಿ ಮಾಡಲು ಪ್ರಾಥಮಿಕ ಹಂತದಿಂದಲೇ ತರಬೇತಿ ಅಗತ್ಯ' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. `ಚೆಸ್ ಹಾಗೂ ಗಣಿತ ಎರಡೂ ತಾರ್ಕಿಕ ವಿಷಯಗಳು. ಆದ್ದರಿಂದ ಗಣಿತವನ್ನು ಪಳಗಿಸಲು ಚೆಸ್ ಸಹಕಾರಿಯಾಗುತ್ತದೆ. ಸಮಸ್ಯೆಗೆ ಮತ್ತೊಂದು ರೀತಿಯಲ್ಲಿ ಉತ್ತರ ಕಂಡುಹಿಡಿಯಲು ಪ್ರೇರೇಪಿಸುತ್ತದೆ' ಎನ್ನುವುದು 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಸ್ಪರ್ಧಿಸಿದ್ದ ಮತ್ತೊಬ್ಬ ಶ್ರೇಯಾಂಕಿತ ಆಟಗಾರ ಗೋಪಾಲಕೃಷ್ಣ ನಾಯಕ್ ಅಭಿಪ್ರಾಯ.

ಚದುರಂಗದಾಟ ಕೇವಲ ಬುದ್ಧಿವಂತರಿಗಾಗಿ ಇರದೇ ಬುದ್ಧಿವಂತರನ್ನಾಗಿ ಮಾಡುವ ಕ್ರೀಡೆ. ಪಠ್ಯಪುಸ್ತಕದ ಭಾಗವಾಗಿ ಬಂದಿದ್ದೇ ಆದಲ್ಲಿ ಭವಿಷ್ಯದಲ್ಲಿ ರಾಜ್ಯದಿಂದಲೂ ಗ್ರ್ಯಾಂಡ್ ಮಾಸ್ಟರ್‌ಗಳು ಮೂಡಿಬರುವ ನಿರೀಕ್ಷೆ ಹಲವರದ್ದು.

ಮ್ಮ ರಾಜ್ಯದಲ್ಲಿ ಚೆಸ್ ಅನ್ನು ಎಷ್ಟನೇ ತರಗತಿಯಿಂದ ಮತ್ತು ಎಷ್ಟು ಅವಧಿಗೆ ಬೋಧಿಸಬೇಕು ಎಂಬ ಕುರಿತು ವಿಚಾರ ವಿಮರ್ಶೆ ಆಗಬೇಕಿದೆ. ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಐದು ವರ್ಷದೊಳಗಿನವರಿಗೂ ಸ್ಪರ್ಧೆ ಏರ್ಪಡಿಸ ಲಾಗುತ್ತಿದೆ. ತಮಿಳುನಾಡಿನಲ್ಲಿ ಸಾವಿರಾರು ಶಾಲಾ ಶಿಕ್ಷಕರಿಗೆ ಸೂಕ್ತ ತರಬೇತಿ ನೀಡಿದ ಬಳಿಕವೇ ಪಠ್ಯಪುಸ್ತಕದಲ್ಲಿ ಜಾರಿ ಮಾಡಲಾಯಿತು.

ಇದೇ ರೀತಿ, ಇಲ್ಲೂ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರಗಳ ವ್ಯವಸ್ಥೆ ಆಗಬೇಕು. ಚೆಸ್ ಅನ್ನು ಕಡ್ಡಾಯ ವಿಷಯವನ್ನಾಗಿ ಮಾಡಿ ಅಂಕ ನಿಗದಿ ಪಡಿಸಿದರೆ ಮಾತ್ರ ಹೆಚ್ಚಿನ ಆಸಕ್ತಿಯಿಂದ ಮಕ್ಕಳು ತೊಡಗಿಸಿಕೊಳ್ಳುತ್ತಾರೆ.
- ಕೆ.ಪ್ರಾಣೇಶ್ ಯಾದವ್, ಮುಖ್ಯ ಆರ್ಬಿಟರ್.

ದುರಂಗದಾಟವನ್ನು ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಪಠ್ಯದಲ್ಲಿ ಒಳಾಂಗಣ ಕ್ರೀಡೆಯಾಗಿ ಸೇರಿಸಬೇಕು ಎಂಬ ಚಿಂತನೆಯಿದೆ. ವಿದ್ಯಾರ್ಥಿಗಳಿಗೆ ಗ್ರೇಡ್ ನೀಡಿ, ಅಂಕಪಟ್ಟಿಯಲ್ಲಿ ನಮೂದಿಸುವ ಬಗ್ಗೆ ಯೋಚನೆಯಿದೆ. ಈ ಕ್ರೀಡೆಯಲ್ಲಿ ಮಗು ಯಾವ ರೀತಿ ಪಾಲ್ಗೊಳ್ಳುತ್ತದೆ, ಮಗುವಿನ ವರ್ತನೆ ಹೇಗೆ ಬದಲಾಗುತ್ತದೆ ಎಂಬುದನ್ನೂ ನಿರಂತರ ಮೌಲ್ಯಮಾಪನದ ಮೂಲಕ ತಿಳಿದುಕೊಳ್ಳಲು ಇದು ಸಹಕಾರಿಯಾಗಲಿದೆ.
- ಎಚ್.ಎಂ.ಪ್ರೇಮಾ, ಡಯಟ್ ಪ್ರಾಂಶುಪಾಲರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT