ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯದಲ್ಲಿ ರಂಗಕಲೆ ಅಳವಡಿಕೆ ಅಗತ್ಯ

Last Updated 19 ಡಿಸೆಂಬರ್ 2012, 9:40 IST
ಅಕ್ಷರ ಗಾತ್ರ

ಚಿತ್ರದುರ್ಗ: ಶಿಕ್ಷಣದಲ್ಲಿ ರಂಗ ಶಿಕ್ಷಣ ಅಳವಡಿಸುವುದು ಅಗತ್ಯ ಎಂದು ಚಿತ್ರನಟ, `ಗೆಜ್ಜೆ-ಹೆಜ್ಜೆ' ರಂಗ ತಂಡದ ನಿರ್ದೇಶಕ ಮೈಸೂರು ರಮಾನಂದ ಪ್ರತಿಪಾದಿಸಿದರು.

ನಗರದ ಪಿಳ್ಳೆಕೆರೇನಹಳ್ಳಿಯ ಬಾಪೂಜಿ ವಿದ್ಯಾಸಂಸ್ಧೆಯಲ್ಲಿ ರಂಗಸೌರಭ ಕಲಾಸಂಘ ಹಾಗೂ ಬೆಂಗಳೂರಿನ ಗೆಜ್ಜೆ-ಹೆಜ್ಜೆ ರಂಗ ತಂಡದ ಆಶ್ರಯದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ರಂಗ ಜಾಗೃತಿ- `ರಂಗೋತ್ಸವ' ಉದ್ಘಾಟಿಸಿ ಅವರು ಮಾತನಾಡಿದರು.

ರಂಗಕಲೆ ಮೂಲಕ ಪಾಠ ಪ್ರವಚನಗಳು ನಡೆದಾಗ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಲು ಸಾಧ್ಯ. ಶಿಕ್ಷಕರು ತಮ್ಮ ಬೋಧನೆಯಲ್ಲಿ ಅಭಿನಯ ಅಳವಡಿಸಿಕೊಳ್ಳಬೇಕು. ಇದರಿಂದ ಮಕ್ಕಳ ಕಲಿಕೆಗೆ ಅನುಕೂಲವಾಗಲಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಕೆಲವರು ರಂಗಭೂಮಿಯನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿರುವುದು ಖಂಡನೀಯ. ರಂಗಭೂಮಿ ಎಲ್ಲ ಅಭಿನಯಕ್ಕೂ ತಾಯಿ ಇದ್ದಂತೆ. ಅದನ್ನು ಕೀಳಾಗಿ ನೋಡುವುದು ಸರಿ ಅಲ್ಲ. ರಂಗಕಲೆ ಅಭ್ಯಾಸ ಮಾಡುವುದರಿಂದ ಮನುಷ್ಯನಲ್ಲಿನ ಸಂಕೋಚ ಪ್ರವೃತ್ತಿ ದೂರವಾಗುತ್ತದೆ ಎಂದು ನುಡಿದರು.

ಚಲನಚಿತ್ರ ನಟ ಹಾಗೂ ಹಿರಿಯ ರಂಗ ನಿರ್ದೇಶಕ ಅಶೋಕ ಬಾದರದಿನ್ನಿ ಮಾತನಾಡಿ, ರಂಗಕಲೆ ಶಿಕ್ಷಕರಿಗೆ ಹೆಚ್ಚಿನ ರೀತಿಯಲ್ಲಿ ಉಪಯೋಗವಾಗಲಿದೆ. ಅಭಿನಯದ ಮೂಲಕ ಮಕ್ಕಳಿಗೆ ಬೋಧನೆ ಮಾಡಬೇಕು ಎಂದರು.

ನಗರಸಭೆ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ ಮಾತನಾಡಿ, ರಂಗಭೂಮಿ ಎಲ್ಲಾ ಕಲೆಗಳಿಗೂ ತಾಯಿ ಬೇರು ಇದ್ದಂತೆ ಎಂದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ. ವೀರೇಶ್ ಮಾತನಾಡಿ, ಕಲಿಕೆಯಲ್ಲಿ ಸಾಂಸ್ಕೃತಿಕವಾದ ವಾತಾವರಣ ಇರಬೇಕು ಎಂದು ನುಡಿದರು.

ಬಾಪೂಜಿ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಂಶುಪಾಲ ಶಿವಕುಮಾರ್, ವೆಂಕಟರಾಮ ಉಪಸ್ಥಿತರಿದ್ದರು. ಸತೀಶ ಜಟ್ಟಿ ಪ್ರಾರ್ಥಿಸಿದರು. ರಂಗಸೌರಭ ಕಲಾ ಸಂಘದ ಕಾರ್ಯದರ್ಶಿ ಕೆ.ಪಿ.ಎಂ. ಗಣೇಶಯ್ಯ ಸ್ವಾಗತಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT