ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ ಅಕ್ಕಿ ಕಳ್ಳಸಾಗಣೆಯಾದರೆ ಅಮಾನತು

Last Updated 9 ಜುಲೈ 2013, 9:57 IST
ಅಕ್ಷರ ಗಾತ್ರ

ವಿಜಾಪುರ: `ಪಡಿತರ ಅಕ್ಕಿ-ಸೀಮೆ ಎಣ್ಣೆ ಕಳ್ಳ ಸಾಗಾಣಿಕೆಯ ಮಾಫಿಯಾ ಮಟ್ಟಹಾಕಿ. ಒಂದು ಕೆ.ಜಿ. ಅಕ್ಕಿ ಕಳ್ಳ ಸಾಗಾಣಿಕೆಯಾದರೂ ಅಮಾನತು ಗ್ಯಾರಂಟಿ. ಬಿಪಿಎಲ್ ಪಡಿತರ ಚೀಟಿಯಿಂದ ಒಬ್ಬ ಬಡವನೂ ವಂಚಿತನಾಗಬಾರದು. ಆಶ್ರಯ ಮನೆ ವಿತರಣೆಯಲ್ಲಿಯ ಆಟಾಟೋಪ ನಿಲ್ಲಿಸಿ. ನಾವು ಬದಲಾವಣೆ ಬಯಸಿದ್ದು, ಅದನ್ನು ಅರಿತುಕೊಂಡು ಕೆಲಸ ಮಾಡಿ. ಬಡವರೊಂದಿಗೆ ಆಟ ಆಡಿದರೆ ನಾನು ಸುಮ್ಮನಿರುವುದಿಲ್ಲ'.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಜಿಲ್ಲೆಯ ಅಧಿಕಾರಿಗಳಿಗೆ ನೀಡಿದ ಖಡಕ್ ಎಚ್ಚರಿಕೆ ಇದು.

ಸಚಿವರಾದ ನಂತರ ಇದೇ ಪ್ರಥಮ ಬಾರಿಗೆ ಕೆಡಿಪಿ ಸಭೆ ನಡೆಸಿದ ಎಂ.ಬಿ. ಪಾಟೀಲ, `46 ಎಕರೆ ಜಮೀನು ಇದ್ದವರಿಗೆ, ಲಕ್ಷ ಲಕ್ಷ ವೇತನ ಪಡೆಯುವ ಆರು ಜನ ಉಪನ್ಯಾಸಕರಿಗೆ ಆಶ್ರಯ ಮನೆ-ಬಿಪಿಎಲ್ ಪಡಿತರ ಚೀಟಿ ಹಂಚಿಕೆ ಮಾಡಿದ ಉದಾಹರಣೆ ಇದೆ. ಹಿಂದಿನಂತೆ ಮಾಡಿದರೆ ನಡೆಯುವುದಿಲ್ಲ' ಎಂದು ತಾಕೀತು ಮಾಡಿದರು.

`ಯಾವೊಬ್ಬ ಬಡವರೂ ಬಿಪಿಎಲ್ ಪಡಿತರ ಚೀಟಿಯಿಂದ ವಂಚಿತಗೊಳ್ಳಬಾರದು. ಕಂದಾಯ-ಆಹಾರ- ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಜಂಟಿ ಸಮಿತಿ ರಚಿಸಿ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಬೇಕು. ಅಗತ್ಯ ಬಿದ್ದರೆ ಶಿಕ್ಷಕರ ಸೇವೆ ಪಡೆದುಕೊಳ್ಳಬೇಕು. ನಿಜ ಫಲಾನುಭವಿಗಳಿಗೆ ಚೀಟಿ ನೀಡಬೇಕು. ಶ್ರೀಮಂತರಿದ್ದರೆ ತೆಗೆದುಹಾಕಬೇಕು' ಎಂದು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಅವರಿಗೆ ಸೂಚಿಸಿದರು. ಇದರಲ್ಲಿ ವ್ಯತ್ಯಾಸವಾದರೆ ಜಿಲ್ಲಾಧಿಕಾರಿಗಳನ್ನೇ ಹೊಣೆ ಮಾಡುವುದಾಗಿ ತಿಳಿಸಿದರು.

ಮಹಾರಾಷ್ಟ್ರದಲ್ಲಿ ಪಡಿತರ ಅಕ್ಕಿ ವಿತರಿಸುವ ವ್ಯವಸ್ಥೆ ಇಲ್ಲ. ಹೀಗಾಗಿ ನಾವು ಅಕ್ಕಿಯ ಕಳ್ಳ ಸಾಗಾಣಿಕೆ ತಡೆಗೆ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

`ಆಹಾರ ಇಲಾಖೆಯ ಅಧಿಕಾರಿಗಳ ಸಹಕಾರದಿಂದಲೇ ಅಕ್ಕಿ-ಸೀಮೆ ಎಣ್ಣೆಯ ಕಳ್ಳ ಸಾಗಾಣಿಕೆ ನಡೆಯುತ್ತದೆ. ಅದರಲ್ಲಿ ಅವರೂ ಶಾಮೀಲಾಗಿದ್ದಾರೆ. ಕಳ್ಳ ಸಾಗಾಣಿಕೆದಾರರನ್ನು ಜನ ಹಿಡಿದು ಕೊಟ್ಟರೂ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ' ಎಂದು ಶಾಸಕರಾದ ಯಶವಂತರಾಯಗೌಡ ಪಾಟೀಲ, ಎ.ಎಸ್. ಪಾಟೀಲ ನಡಹಳ್ಳಿ. ಸಿ.ಎಸ್. ನಾಡಗೌಡ, ಅರುಣ ಶಹಾಪೂರ ಅವರು ಆಹಾರ ಇಲಾಖೆಯ ಉಪ ನಿರ್ದೇಶಕ ಸಿ.ಶ್ರೀಧರ ಅವರನ್ನು ತರಾಟೆಗೆ ತೆಗೆದುಕೊಂಡರು. ಒಂದು ಕೆ.ಜಿ. ಅಕ್ಕಿ ಕಳ್ಳಸಾಗಾಣಿಕೆಯಾದರೂ ಅಮಾನತುಗೊಳಿಸುವುದಾಗಿ ಸಚಿವರು ಶ್ರೀಧರ ಅವರಿಗೆ ಎಚ್ಚರಿಕೆ ನೀಡಿದರು.

`ಕಳ್ಳ ಸಾಗಾಣಿಕೆಯ ಬಗ್ಗೆ ಸ್ವಲ್ಪ ಮಾಹಿತಿ ಇದೆ' ಎಂದು ಆ ಅಧಿಕಾರಿ ಒಪ್ಪಿಕೊಂಡರಾದರೂ, ಅದರ ತಡೆಗೆ ಏನು ಕ್ರಮ ಕೈಗೊಂಡಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಲಿಲ್ಲ.

ಅವ್ಯವಹಾರಕ್ಕೆ ಕಡಿವಾಣ ಹಾಕಲು ಪಡಿತರ ವಿತರಣೆಯಲ್ಲಿ ಬಯೊಮೆಟ್ರಿಕ್ ಅಳವಡಿಸುವುದೊಂದೇ ಪರಿಹಾರ ಎಂದು ಸಿ.ಎಸ್. ನಾಡಗೌಡ ಹೇಳಿದರೆ, `ಪಡಿತರ ವಿತರಣಾ ಪದ್ಧತಿ ವಿಕೇಂದ್ರಿಕರಣಗೊಳ್ಳಬೇಕು. ಗ್ರಾಹಕರ ಆಯ್ಕೆಯ ಮೇರೆಗೆ ನ್ಯಾಯಬೆಲೆ ಅಂಗಡಿಗಳ ಬದಲಿಗೆ ಬೇಕಾದ ಅಂಗಡಿಗಳಲ್ಲಿ ಪಡಿತರ ಪದಾರ್ಥ ಪಡೆಯುವ ವ್ಯವಸ್ಥೆಯನ್ನು ಜಾರಿಗೆ ತರಬೇಕು' ಎಂದು ಕಳಸದ ಹೇಳಿದರು.

ನೀರು ಪೂರೈಕೆ
ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ಬೇಡಿಕೆ ಬಂದ ಮೂರು ದಿನಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ ವಾಸ್ತವಾಂಶ ತಿಳಿಯಬೇಕು. ಒಂದು ವಾರದಲ್ಲಿ ಅಲ್ಲಿಗೆ ಟ್ಯಾಂಕರ್ ನೀರು ಪೂರೈಸಬೇಕು. ಶಾಸಕರು ಹೇಳಿದ ತಕ್ಷಣ ಕೊಳವೆಬಾವಿ ಕೊರೆಯಬೇಕು ಮತ್ತು ಅವುಗಳಿಗೆ ತ್ವರಿತವಾಗಿ ಪಂಪ್‌ಸೆಟ್ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಸಂಬಂಧಿಸಿದ ಅಧಿಕಾರಿಗಳು ಮುತುವರ್ಜಿ ವಹಿಸಿ ಕೆಲಸ ಮಾಡಬೇಕು ಎಂದು ಸಚಿವರು ಸೂಚಿಸಿದರು.

ಒಂದು ಟ್ರ್ಯಾಕ್ಟರ್‌ನಿಂದ ನಿತ್ಯ ಎರಡೇ ಟ್ರಿಪ್ ನೀರು ಹಾಕಬೇಕು ಎಂಬ ನಿಯಮ ತೆಗೆದು ಹಾಕಬೇಕು ಮತ್ತು ಅಂತರಕ್ಕೆ ಅನುಗುಣವಾಗಿ ಬಾಡಿಗೆ ಹೆಚ್ಚಿಸಲು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರು ನೀಡಿದ ಸಲಹೆಯನ್ನು ಮಾನ್ಯ ಮಾಡಲಾಯಿತು.

ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಬೇಕು. ಜಿಲ್ಲೆಯಲ್ಲಿ ಮಳೆ ಕೊರತೆಯಾಗಿದ್ದು, ಮೋಡ ಬಿತ್ತನೆ ಮಾಡಬೇಕು ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಸಲಹೆ ನೀಡಿದರು.

385 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳಿಗೆ ಎದುರಾಗಿರುವ ತಾಂತ್ರಿಕ ಸಮಸ್ಯೆ ನಿವಾರಣೆಗೆ ಅಧಿವೇಶನದ ಅವಧಿಯಲ್ಲಿ ಬೆಂಗಳೂರಿನಲ್ಲಿ ಶಾಸಕರ ಸಭೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.

ಅರ್ಹರಿಗೆ ಮನೆ
ವಸತಿ ಯೋಜನೆಗಳು ಶೇ.80ರಷ್ಟು ಶ್ರಿಮಂತರಿಗೆ ದೊರೆತಿವೆ ಹೊರತು, ಬಡವರಿಗೆ ದೊರೆತಿಲ್ಲ. ವ್ಯಾಪಕ ಅಕ್ರಮ ನಡೆದಿವೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

`ಗ್ರಾಮ ಸಭೆಯಲ್ಲಿಯೇ ವಸತಿ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ತಾಲ್ಲೂಕು ಮಟ್ಟದ ನೋಡಲ್ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಿ, ಸಮಗ್ರವಾದ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಶಾಸಕರ ಅಧ್ಯಕ್ಷತೆಯ ಜಾಗೃತಿ ಸಮಿತಿ ಎದರು ಮಂಡಿಸಬೇಕು. ಈ ಪ್ರಕ್ರಿಯೆಯಲ್ಲಿ ಲೋಪವಾದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು' ಎಂದು ಎಚ್ಚರಿಸಿದರು.

ಮಜರೆ ಹಳ್ಳಿ, ತೋಟದ ವಸತಿ ಹಾಗೂ ಬೆಂಕಿಯಿಂದ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣ ಮಾಡಲು ಅವಕಾಶ ಇದ್ದು, ಅದನ್ನು ಕಾರ್ಯರೂಪಕ್ಕೆ ತರಬೇಕು ಎಂದು ತಾಕೀತು ಮಾಡಿದರು.

ವಸತಿ ಯೋಜನೆಗೆ ಹಾಗೂ ಸ್ಮಶಾನ ಭೂಮಿಗೆ ಬಹಳಷ್ಟು ಗ್ರಾಮಗಳಲ್ಲಿ ಜಮೀನಿನ ಕೊರತೆ ಇದ್ದು, ಆಸರೆ ಮಾದರಿಯಲ್ಲಿ ಜಮೀನು ಖರೀದಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಆಸ್ಪತ್ರೆ ಮತ್ತು ಹಾಸ್ಟೆಲ್‌ಗಳನ್ನು ಸ್ವಚ್ಛಗೊಳಿಸಬೇಕು. ತಾಲ್ಲೂಕು ಪಂಚಾಯತಿಗಳಲ್ಲಿ ನಡೆದಿರುವ ಅಕ್ರಮಗಳ ಕುರಿತಂತೆ ತನಿಖೆ ನಡೆಸಿ ವರದಿ ಸಲ್ಲಿಸಬೇಕು. ಅನಧಿಕೃತ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಬೇಕು. ಅನಧಿಕೃತ ಮದ್ಯದ ಮಾರಾಟ, ಅಕ್ರಮ ಸಾರಾಯಿ ನಿಯಂತ್ರಣ ಮಾಡಲು ಅಬಕಾರಿ ಇಲಾಖೆ ಸಂಪೂರ್ಣ ವಿಫಲವಾಗಿದೆ. ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಚಿವರು ಎಚ್ಚರಿಸಿದರು.

ಜಿ.ಪಂ. ಅಧ್ಯಕ್ಷೆ ಕಾವ್ಯಾ ದೇಸಾಯಿ, ಉಪಾಧ್ಯಕ್ಷ ಟಿ.ಕೆ. ಹಂಗರಗಿ, ಶಾಸಕರಾದ ಮಕ್ಬೂಲ್ ಬಾಗವಾನ, ರಮೇಶ ಭೂಸನೂರ,  ಮಹಾಂತೇಶ ಕೌಜಲಗಿ, ಜಿ.ಎಸ್.ನ್ಯಾಮಗೌಡ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಪಿಲ್ ಮೋಹನ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT