ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ ಚೀಟಿ ಗೊಂದಲ

Last Updated 24 ಫೆಬ್ರುವರಿ 2011, 17:00 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಅಸಲಿ ಮತ್ತು ನಕಲಿ ಪಡಿತರ ಚೀಟಿ ಮತ್ತು ಅಕ್ರಮವಾಗಿ ಅನಿಲ ಸಿಲಿಂಡರ್ ಹೊಂದಿರುವವರನ್ನು ಪತ್ತೆ ಹಚ್ಚುವ ಕಾರ್ಯ ಜನರಿಗೆ ಕಿರಿಕಿರಿ ಅನ್ನಿಸಿದರರೂ ಇದು ಆಗಿಂದಾಗ್ಗೆ ನಡೆಯಬೇಕಿತ್ತು. ಇದರ ನಿಜವಾದ ಉದ್ದೇಶವನ್ನು ಜನಸಾಮಾನ್ಯರಿಗೆ ಸ್ಪಷ್ಟವಾಗಿ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿರುವ ಆಹಾರ ಇಲಾಖೆಯ ಕಾರ್ಯವೈಖರಿಯಿಂದ ಜನರು ಗೊಂದಲಕ್ಕೀಡಾಗಿದ್ದಾರೆ. ಇದರಿಂದ ಪಡಿತರ ಚೀಟಿ ಮತ್ತು ಅನಿಲ ಸಂಪರ್ಕ ಪಡೆದಿರುವ ಅರ್ಹರು ಮತ್ತು ಪ್ರಾಮಾಣಿಕರು ಆತಂಕಕ್ಕೀಡಾಗಿದ್ದಾರೆ. ಈ ಅವಾಂತರಕ್ಕೆಲ್ಲ ಸರ್ಕಾರವೇ ಕಾರಣವಲ್ಲದೆ ಬೇರಾರೂ ಅಲ್ಲ. ರಾಜ್ಯದಲ್ಲಿ 1.20 ಕೋಟಿ ಕುಟುಂಬಗಳಿದ್ದು, 1.60 ಕೋಟಿ ಪಡಿತರ ಚೀಟಿಗಳನ್ನು ಹಂಚಿರುವುದೇ ಈ ಎಲ್ಲ ಗೊಂದಲಗಳಿಗೆ ಕಾರಣ. ಈಗಾಗಲೇ ಆಹಾರ ಇಲಾಖೆಯ ಅಂದಾಜಿನಂತೆ 60 ಲಕ್ಷ ನಕಲಿ ಪಡಿತರ ಚೀಟಿ ಚಾಲ್ತಿಯಲ್ಲಿವೆ. ಇದು ಹೇಗಾಯಿತು ಎನ್ನುವುದೇ ಈಗಿರುವ ಸಮಸ್ಯೆಯ ಮೂಲ.

ಹೆಚ್ಚುವರಿ ಪಡಿತರ ಚೀಟಿ ಪಡೆದಿರುವವರಲ್ಲಿ ಶ್ರೀಮಂತರೂ, ರಾಜಕೀಯ ಕೃಪಾಶ್ರಯ ಪಡೆದಿರುವವರೂ ಇದ್ದಾರೆ. ಒಂದೇ ಕುಟುಂಬದಲ್ಲಿ ಎರಡು ಮೂರು ಕಾರ್ಡುಗಳನ್ನು ಹೊಂದಿರುವವರೂ ಇದ್ದಾರೆ.  ಸುಮಾರು 60 ಲಕ್ಷ ಹೆಚ್ಚುವರಿ ಕಾರ್ಡುಗಳನ್ನು ನೀಡುವಲ್ಲಿ ಸಂಬಂಧಿಸಿದ ಇಲಾಖೆಯ ನೌಕರ ಸಿಬ್ಬಂದಿ ಹಾಗೂ ಸ್ಥಳೀಯ ಪುಢಾರಿಗಳ ಮತ್ತು ಹಲವು ಶಾಸಕರ ಕೈವಾಡ ಇರುವುದು ರಹಸ್ಯವೇನಲ್ಲ. ಇಂತಹವರು ಓಟಿನ ಮೇಲೆ ಕಣ್ಣಿಟ್ಟು ಬೇಕಾಬಿಟ್ಟಿ ಪಡಿತರ ಚೀಟಿ ಕೊಡಿಸಿರುವುದು ಸೂರ್ಯನ ಬೆಳಕಿನಷ್ಟೇ ಸತ್ಯ. ಹೆಚ್ಚುವರಿಯಾಗಿ ಪಡಿತರ ಚೀಟಿಗಳನ್ನು ನೀಡಿರುವುದರಿಂದ ಆಹಾರ ಧಾನ್ಯಗಳಿಗೆ ಮತ್ತು ಅಡುಗೆ ಅನಿಲಕ್ಕೆ ನೀಡುವ ಸಬ್ಸಿಡಿ ತಿಂಗಳಿಗೆ ಸುಮಾರು ಒಂದು ನೂರು ಕೋಟಿಗೂ ಹೆಚ್ಚು ಹಣ ಅನರ್ಹರ ಪಾಲಾಗುತ್ತಿರುವುದು ಅನ್ಯಾಯದ ಪರಮಾವಧಿ. ಆದ್ದರಿಂದ ಹೆಚ್ಚುವರಿ ಕಾರ್ಡುಗಳನ್ನು ಪತ್ತೆ ಹಚ್ಚುವುದು ಮಾತ್ರವಲ್ಲ ಅವುಗಳನ್ನು ನೀಡಿದವರು ಯಾರು ಎಂಬುದನ್ನು ಕಂಡು ಹಿಡಿದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಹಾಗೆಯೇ ಈ ಶೋಧನಾ ಕಾರ್ಯದಿಂದ ಅರ್ಹರು ಮತ್ತು ಪ್ರಾಮಾಣಿಕರಿಗೆ ಅನವಶ್ಯಕವಾಗಿ ತೊಂದರೆ ಆಗದಂತೆ ಎಚ್ಚರವಹಿಸಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT