ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ ಚೀಟಿ: ಗ್ರಾಮಸ್ಥರ ಧರಣಿ

Last Updated 13 ಜುಲೈ 2013, 9:20 IST
ಅಕ್ಷರ ಗಾತ್ರ

ಕೆಂಭಾವಿ: ಪಡಿತರ ಚೀಟಿ ಭಾವಚಿತ್ರ ಕ್ಕಾಗಿ ಕಳೆದ ನಾಲ್ಕೈದು ದಿನಗಳಿಂದ ಮುದನೂರ ಗ್ರಾಮ ಪಂಚಾಯಿತಿ ಕಚೇರಿಗೆ ಅಲೆದಾಡುತ್ತಿರುವ ಸಮೀಪದ ಯಡಿಯಾಪುರ ಗ್ರಾಮಸ್ಥರು, ಗುರುವಾರ ಅಹೋರಾತ್ರಿ ಧರಣಿ ಆರಂಭಿಸಿ ಕೊನೆಗೆ ಶುಕ್ರವಾರ ಧರಣಿ ಅಂತ್ಯಗೊಳಿಸಿದ್ದಾರೆ.

ಮಹಿಳೆಯರು, ಮಕ್ಕಳು, ಯುವಕರು, ವೃದ್ಧರು  ಮಳೆಯನ್ನು ಲೆಕ್ಕಿಸದೇ ಗುರುವಾರ ರಾತ್ರಿಯಿಂದ ಶುಕ್ರವಾರದ ಬೆಳಿಗ್ಗೆವರೆಗೆ ಪಂಚಾಯಿತಿ ಎದುರೇ ಕುಳಿತಿದ್ದರು.

ಆದರೆ ಯಾವ ಅಧಿಕಾರಿಗಳಾಗಲಿ, ಕಂಪ್ಯೂಟರ್ ಆಪರೇಟರ್‌ಗಳಾಗಲಿ ಇರಲಿಲ್ಲ. ಈ ಮೊದಲು ಇದ್ದ ಪಡಿತರ ಚೀಟಿ ರದ್ದಾಗಿದ್ದು, ಹೊಸ ಪಡಿತರ ಚೀಟಿಗಾಗಿ ಭಾವಚಿತ್ರ ತೆಗೆಸಿಕೊಳ್ಳಲು ಸರ್ಕಾರ ಸೂಚಿಸಿದೆ. ಹಳೇ ಪಡಿತರ ಚೀಟಿಯಿಂದ ಅಕ್ಕಿ, ಗೋಧಿ ಸಿಗುತ್ತಿಲ್ಲ. ಹೀಗಾಗಿ ಬಡಜನರು ತೊಂದರೆ ಅನುಭವಿಸುವಂತಾಗಿದೆ.

`ಪಂಚಾಯಿತಿ ಸಿಬ್ಬಂದಿ ಒಂದು ಫೋಟೋ ತೆಗಿಲಾಕ್ ನೂರು ರುಪಾಯಿ ತಗೊಂತಾರ. ಒಂದು ಕಾರ್ಡ ಮಾಡಿಕೊಟ್ಟರ, ಅದನ್ನು ಮತ್ತೊಬ್ರ ಹೆಸರಿಗೆ ಮಾಡಿಕೊಡ್ತಾರ' ಎಂದು ಶರಣಪ್ಪ ನೆಗ್ಗಿನಾಳ ದೂರುತ್ತಾರೆ.
ಪಂಚಾಯಿತಿ ಬಿಲ್ ಕಲೆಕ್ಟರ್ ಬೈಲಪ್ಪ ಶಾಖಾಪುರ, ಆಶ್ರಯ ಮನೆಯ ಚೆಕ್ ನೀಡುವುದಕ್ಕೂ ಹಣ ಕೇಳುತ್ತಾರೆ. ಆಸ್ತಿ ವರ್ಗಾವಣೆ ಮಾಡಿಸಲು ಹಣ ಕೊಡಬೇಕು.

ಕೇಳಿದರೆ ವಿದ್ಯುತ್ ಸಮಸ್ಯೆ ಎನ್ನುತ್ತಾರೆ. ಗ್ರಾಮ ಪಂಚಾಯಿತಿ ಸಿಬ್ಬಂದಿ ಹಣ ಮಾಡುವುದಕ್ಕೆ ಕುಳಿತಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.

`ನನ್ನ ಗಂಡ, ಮಕ್ಕಳ ಜೋಡಿ ಬೆಂಗಳೂರ, ಮುಂಬೈಕ್ ದುಡಿಲಾಕ್ ಹೋಗಿದ್ವಿ. ರೇಶನ್ ಕಾರ್ಡಿನ ಫೋಟೋ ತೆಗಿತಾರಂತ ಇಲ್ಲಿಗಿ ಬಂದೀವ್ರಿ. ಆದ್ರ ಹಗಲ ರಾತ್ರಿ ಕುಂತರೂ ಫೋಟೊ ತೆಗಾಲ್ಯಾಗರಿ' ಎಂದು ಗ್ರಾಮದ ಬಸಮ್ಮ ಜಹಾಗೀರದಾರ ಹೇಳುತ್ತಾರೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕ್ಯೆಗೊಂಡು ಬಡಜನರಿಗೆ ನ್ಯಾಯ ಒದಗಿಸಬೇಕು.

ಇಲ್ಲದಿದ್ದರೆ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ರಕ್ಷಣಾ ವೇದಿಕೆಯ ವಿದ್ಯಾರ್ಥಿ ವಿಭಾಗದ ತಾಲ್ಲೂಕು ಘಟಕದ ಕಾರ್ಯದರ್ಶಿ ಮಲ್ಲಿಕಾರ್ಜುನ ಕುಂಬಾರ ಎಚ್ಚರಿಸಿದ್ದಾರೆ.

ವಿದ್ಯುತ್ ಸಮಸ್ಯೆ ಹಿನ್ನೆಲೆಯಲ್ಲಿ ಜನರೇಟರ್ ಬಳಸಿ ಭಾವಚಿತ್ರ ನೀಡಲು ಪ್ರಾರಂಭಿಸಿದ್ದರಿಂದ ಶುಕ್ರವಾರ ಸಂಜೆ ಧರಣಿ ಹಿಂತೆಗೆದುಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT