ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ ಪದ್ಧತಿಯ ಅವ್ಯವಸ್ಥೆ

Last Updated 21 ಜನವರಿ 2012, 19:30 IST
ಅಕ್ಷರ ಗಾತ್ರ

ನಮ್ಮ ದೇಶದ ಜನಸಂಖ್ಯೆಯ ಐದನೇ ಒಂದು ಭಾಗ (ಐವರಲ್ಲಿ ಒಬ್ಬರು) ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ, ಐದು ವರ್ಷದ ಒಳಗಿನ ಪ್ರತೀ ಐದು ಮಕ್ಕಳ ಪೈಕಿ ಇಬ್ಬರು ಸಾಮಾನ್ಯಕ್ಕಿಂತ ಕಡಿಮೆ ತೂಕ ಹೊಂದಿದವರು (ಸದೃಢರಲ್ಲ). ಹೀಗಾಗಿ ಇವರಲ್ಲಿ ಮೂಳೆ, ಎಲುಬುಗಳು ಗಟ್ಟಿಮುಟ್ಟಾಗಿ ಬೆಳೆದಿಲ್ಲ.
 
ಬಾಲ್ಯದಲ್ಲಿ ಅಗತ್ಯವಾದ ಪೌಷ್ಟಿಕ ಆಹಾರ ದೊರೆಯದ ಕಾರಣ ಮಿದುಳಿನ ಬೆಳವಣಿಗೆ, ಗ್ರಹಣ ಶಕ್ತಿ ಕುಂಠಿತಗೊಂಡು ಲೆಕ್ಕವಿಲ್ಲದಷ್ಟು ಮಕ್ಕಳು ಓದಿನಲ್ಲಿ ಹಿಂದೆ ಬೀಳುತ್ತಿದ್ದಾರೆ. ಎಲ್ಲಕ್ಕಿಂತ ಗಂಭೀರ ಎಂದರೆ, ಪ್ರತೀ 14 ಮಕ್ಕಳ ಪೈಕಿ ಒಂದು ಮಗು 5ನೇ ವರ್ಷಕ್ಕೆ ಬರುವುದರ ಒಳಗೇ ಸಾವನ್ನಪ್ಪುತ್ತಿದೆ.

ಈ ಅಂಕಿ ಅಂಶಗಳೆಲ್ಲ ಹೊಸದೇನಲ್ಲ. ಕಳೆದ 50 ವರ್ಷಕ್ಕೂ ಹೆಚ್ಚು ಕಾಲ ಪತ್ರಕರ್ತನಾಗಿ ನನ್ನ ಅನುಭವದಲ್ಲಿ ಇದಕ್ಕಿಂತಲೂ ಆತಂಕಕಾರಿ ಸಂಗತಿಗಳು, ಮಾಹಿತಿಗಳನ್ನು ಕಂಡಿದ್ದೇನೆ.

ಆದರೆ ಈ ಅಂಕಿ ಸಂಖ್ಯೆಗಳೇಕೆ ಎಷ್ಟೋ ಕಾಲದಿಂದ ಬದಲಾಗದೆ ಹೀಗೇ ಉಳಿದಿವೆ, ಸುಧಾರಣೆ ಏಕಾಗಿಲ್ಲ ಎನ್ನುವುದು ನನ್ನನ್ನು ಈಗಲೂ ಕಾಡುತ್ತಿದೆ. ಇದೇನು ಅಪಪ್ರಚಾರವೇ ಅಥವಾ ಭಾರತವನ್ನು ವಿದೇಶಗಳ ಕಣ್ಣಲ್ಲಿ ಕೆಟ್ಟದಾಗಿ ಚಿತ್ರಿಸುವ ಒಳಸಂಚೇನಾದರೂ ಇದೆಯೇ?

ಆದರೆ ಅಪೌಷ್ಟಿಕತೆ ವಿಷಯಕ್ಕೆ ಬಂದರೆ ನಮ್ಮನ್ನು ಆಳಿದ ಸರ್ಕಾರಗಳು ಬಡವರ ಬದುಕನ್ನು ಹಸನು ಮಾಡಲು ಸಮರ್ಪಕ ಹೆಜ್ಜೆ ಇಡಲಿಲ್ಲ ಎಂದೇ ಹೇಳಬೇಕಾಗುತ್ತದೆ. ಏಕೆಂದರೆ ನಮ್ಮದು ವಿಶ್ವದಲ್ಲಿಯೇ ಅತಿ ದೊಡ್ಡ ಸಾರ್ವಜನಿಕ ಆಹಾರ ಖರೀದಿ ವ್ಯವಸ್ಥೆ.
10.4 ಕೋಟಿ ಕುಟುಂಬಗಳಿಗೆ ಕಿಲೋಗೆ 2 ರೂಪಾಯಿ ದರದಲ್ಲಿ (ಮಾರುಕಟ್ಟೆ ದರದ ಶೇ 15ರಷ್ಟು) ತಿಂಗಳಿಗೆ 35 ಕಿಲೋ ಆಹಾರಧಾನ್ಯ ಪೂರೈಸಲಾಗುತ್ತಿದೆ. ವರ್ಷಕ್ಕೆ 100 ದಿನ ಖಾತರಿಯಾಗಿ ಉದ್ಯೋಗ ನೀಡುವ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ನಮ್ಮಲ್ಲಿದೆ.
 
ಶಾಲೆಗಳಲ್ಲಿ ಹಾಜರಾತಿ ಹೆಚ್ಚಿಸಲು ನೆರವಾಗಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೊಳಿಸಿದ್ದೇವೆ. ಕಳೆದ 20 ವರ್ಷಗಳಿಂದ ನಮ್ಮ ನಿವ್ವಳ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಏರಿಕೆ ಸರಾಸರಿ ಶೇ 7ರಷ್ಟಿದೆ. ಇದರಿಂದ ಜಿಡಿಪಿ ಈ ಅವಧಿಯಲ್ಲಿ ನಾಲ್ಕು ಪಟ್ಟು ಹೆಚ್ಚಿದೆ.

ಇದನ್ನೆಲ್ಲ ನೋಡಿದ ಮೇಲೆ ಈ ಪ್ರಗತಿಯ ಕೆಲ ಅಂಶವಾದರೂ ನಮ್ಮ ಜನಸಂಖ್ಯೆಯ ಕಡುಬಡ ಕುಟುಂಬಗಳಿಗೆ ತಲುಪಿರಲೇಬೇಕು ಅಲ್ಲವೇ? ಹೀಗಿದ್ದರೂ ನಾನು ಆರಂಭದಲ್ಲಿ ಹೇಳಿದ ಅಂಕಿಸಂಖ್ಯೆಗಳು ಕಡಿಮೆಯಾಗದೆ ಸ್ಥಿರವಾಗಿಯೇ ಮುಂದುವರಿಯಲು ಕಾರಣವೇನು?

ಇದಕ್ಕೆ ಒಂದೇ ಒಂದು ಉತ್ತರ ಎಂದರೆ `ನಮ್ಮ ದೇಶದ ಸಾರ್ವಜನಿಕ ಆಹಾರ ಸಂಗ್ರಹಣೆ ಮತ್ತು ವಿತರಣಾ ನೀತಿ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಅಥವಾ ನಮ್ಮ ಬಡ ಕುಟುಂಬಗಳನ್ನು ಹೊಟ್ಟೆತುಂಬ ಆಹಾರದಿಂದ ವಂಚಿತ ಮಾಡುತ್ತಿವೆ~.
 
ಇದೇಕೆ ಹೀಗೆ? ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ಅನುಸರಿಸುತ್ತಿರುವ ನೀತಿಗಳು ಏಕೆ ನಮ್ಮ ಉದ್ದೇಶವನ್ನೇ ತಲೆಕೆಳಗು ಮಾಡಿ ಪ್ರತಿಕೂಲ ಪರಿಣಾಮ ಬೀರುತ್ತಿವೆ? ಇದೆಲ್ಲಕ್ಕೂ `ರಾಜಕೀಯ~ ಕಾರಣ ಎಂದು ಒಂದೇ ಶಬ್ದದಲ್ಲಿ ವ್ಯಾಖ್ಯಾನಿಸಬಹುದು.

ದ್ವಿತೀಯ ಮಹಾಯುದ್ಧದ ನಂತರ ನಮ್ಮನ್ನಾಳಿದ ಬ್ರಿಟಿಷರು ಮತ್ತು ಸ್ವಾತಂತ್ರ್ಯಾ ನಂತರ ಅಧಿಕಾರ ನಡೆಸಿದ ಸರ್ಕಾರಗಳು ಜನ ಸಾಮಾನ್ಯರ ಹಿತ ಬಲಿಕೊಟ್ಟು ಕೆಲ ನಿರ್ದಿಷ್ಟ ಜನವರ್ಗಗಳ ಹಿತಾಸಕ್ತಿ ಕಾಪಾಡುವ ಆಹಾರ ನೀತಿ ಅನುಸರಿಸುತ್ತ ಬಂದವು. ಇಡೀ ನೀತಿ ಮತ್ತು ಅದರ ಫಲಾನುಭವಿಗಳ ಪಟ್ಟಿಯಲ್ಲಿ ಗ್ರಾಮೀಣ ಬಡವರು ಕಟ್ಟಕಡೆಯ ಸ್ಥಾನಕ್ಕೆ ಇಳಿದರು. ಈ ಲೋಪ ಸರಿಪಡಿಸುವ ಕೆಲಸ ನಮ್ಮ ಸರ್ಕಾರಗಳಿಂದ ಆಗಲೇ ಇಲ್ಲ.

ಈಗ ಮೊದಲನೆಯದಾಗಿ ಆಹಾರ ಸಂಗ್ರಹಣಾ ನೀತಿಯನ್ನು ನೋಡೋಣ. ಬರದ ಹಿನ್ನೆಲೆಯಲ್ಲಿ ನಗರವಾಸಿಗಳು ಆಹಾರದ ಕೊರತೆಯಿಂದ ಬಳಲಬಾರದು ಎಂಬ ಉದ್ದೇಶ ಇಟ್ಟುಕೊಂಡೇ ಬ್ರಿಟಿಷರು ಆಹಾರ ಖರೀದಿ ವ್ಯವಸ್ಥೆ ರೂಪಿಸಿದ್ದರು. ಆಗ ರೈತರು ತಾವು ಬೆಳೆದ ಆಹಾರ ಧಾನ್ಯದ ನಿರ್ದಿಷ್ಟ ಭಾಗವನ್ನು ಮಾರುಕಟ್ಟೆಗಿಂತ ಬಹಳಷ್ಟು ಕಡಿಮೆ ದರದಲ್ಲಿ ಸರ್ಕಾರಕ್ಕೆ ಕಡ್ಡಾಯವಾಗಿ ತಂದೊಪ್ಪಿಸಬೇಕಿತ್ತು.

ಇದನ್ನೇ `ಲೆವಿ~ ಎಂದು ಕರೆಯಲಾಗುತ್ತಿತ್ತು. ಇದರಿಂದ ಹೊಡೆತ ತಿಂದವರು ರೈತರು ಮತ್ತು ಗ್ರಾಮೀಣ ಬಡವರು. ಆದರೆ ಆರಂಭದ ವರ್ಷಗಳಲ್ಲಿ ಇದರ ಅನಾನುಕೂಲಕ್ಕೆ ಹೋಲಿಸಿದರೆ ಸ್ವಲ್ಪ ಅನುಕೂಲವೂ ಇತ್ತು.
 
ರೈತರು ಬೆಳೆದ ಒಂದಿಷ್ಟು ಬೆಳೆಯನ್ನು ಖಚಿತವಾಗಿ ಸರ್ಕಾರವೇ ಖರೀದಿಸುವ ವ್ಯವಸ್ಥೆಯಾದರೂ ಇತ್ತು. ದ್ವಿತೀಯ ಮಹಾಯುದ್ಧದ ನಂತರ ಬ್ರಿಟಿಷ್ ಆಡಳಿತದ ಮುಂದಾಲೋಚನೆ ಕೊರತೆಯಿಂದ ಈ ಪದ್ಧತಿ ಏರುಪೇರಾಯಿತು. ಇದರ ಪರಿಣಾಮವೇ ಲಕ್ಷಾಂತರ ಜೀವಗಳನ್ನು ಆಹುತಿ ತೆಗೆದುಕೊಂಡ ಬಂಗಾಳದ ಭೀಕರ ಬರಗಾಲ.
 
50ರ ದಶಕದ ಮಧ್ಯಭಾಗದಲ್ಲಿ ಬಹುತೇಕ ರಾಜ್ಯ ಸರ್ಕಾರಗಳು `ಕಡ್ಡಾಯ ಲೆವಿ~ ಕೈಬಿಟ್ಟು `ಸ್ವಪ್ರೇರಿತ ಲೆವಿ~ ಜಾರಿಗೆ ತಂದವು (ಆದರೆ ಕರ್ನಾಟಕದಲ್ಲಿ 80ರ ದಶಕದ ವರೆಗೂ ಕಡ್ಡಾಯ ಲೆವಿ ಇತ್ತು. ಸರ್ಕಾರ ನಿಗದಿಪಡಿಸಿದ `ಕಡಿಮೆ~ ದರದಲ್ಲಿ ರೈತರು ಎಕರೆಗೆ ಇಂತಿಷ್ಟು ಕ್ವಿಂಟಲ್ ಎಂದು ಲೆವಿ ಧಾನ್ಯ ಪೂರೈಸಬೇಕಿತ್ತು.

ಮುಂದೆ ಇದನ್ನು `ಮಿಲ್ ಪಾಯಿಂಟ್ ಲೆವಿ~ ಎಂದು ಬದಲಿಸಿದರೂ ಅಂತಿಮವಾಗಿ ನಷ್ಟವನ್ನು ರೈತನೇ ಅನುಭವಿಸಬೇಕಾಗಿತ್ತು). ಆದರೂ ಇದರಲ್ಲಿ ರೈತ ಮತ್ತು ಪಟ್ಟಣ ಪ್ರದೇಶದ ಗ್ರಾಹಕ ಇಬ್ಬರ ಹಿತವೂ ಅಡಗಿತ್ತು.

ರೈತರಿಗೆ ಖಚಿತ ವರಮಾನ ಮತ್ತು ಮಾರುಕಟ್ಟೆ, ಗ್ರಾಹಕರಿಗೆ ನಿಗದಿತ ದರದಲ್ಲಿ ನಿರಂತರ ಆಹಾರ ದೊರೆಯುತ್ತಿತ್ತು. ಮುಂದೆ 70ರ ದಶಕದ ಮಧ್ಯಭಾಗದಲ್ಲಿ ಹಸಿರು ಕ್ರಾಂತಿಯ ಪರಿಣಾಮವಾಗಿ ಆಹಾರ ಉತ್ಪಾದನೆ ಭಾರೀ ಪ್ರಮಾಣದಲ್ಲಿ ಹೆಚ್ಚುವುದರೊಂದಿಗೆ ಈ ಸಮತೋಲನ ಮುರಿದು ಬಿತ್ತು.

ಹೆಚ್ಚು ಇಳುವರಿಯ ಲಾಭ ರೈತರಿಗೆ ಸಿಗಲೇ ಇಲ್ಲ. ಏಕೆಂದರೆ ಆಹಾರ ಧಾನ್ಯಗಳು ಪ್ರವಾಹೋಪಾದಿಯಲ್ಲಿ ಮಾರುಕಟ್ಟೆಗೆ ಬಂದು ಬೆಲೆ ಉತ್ಪಾದನಾ ವೆಚ್ಚಕ್ಕಿಂತ ಬಹಳಷ್ಟು ಕುಸಿಯಿತು.

`ರಾಜಕೀಯ ನಿರ್ಧಾರ~ ಇಣುಕಿದ್ದು ಈ ಹಂತದಲ್ಲಿಯೇ. 70ರ ದಶಕದ ಮಧ್ಯಭಾಗದ ನಂತರ ರಾಜ್ಯ ಸರ್ಕಾರಗಳು ಕೃಷಿ ಬೆಲೆ ಆಯೋಗದ (ನಷ್ಟದಿಂದ ರೈತರನ್ನು ಪಾರು ಮಾಡುವುದಷ್ಟೇ ಆಯೋಗದ ಉದ್ದೇಶವಾಗಿತ್ತು) ಶಿಫಾರಸ್ಸಿಗೆ ಕವಡೆ ಕಾಸಿನ ಬೆಲೆಯನ್ನೂ ಕೊಡಲಿಲ್ಲ. ಮನಬಂದಂತೆ ಬೆಂಬಲ ಬೆಲೆ ಏರಿಸಿದವು. ಕೇಂದ್ರ ಸರ್ಕಾರ ನಿಗದಿಪಡಿಸಿದ ದರ ಮತ್ತು ತಾವು ಹೆಚ್ಚಿಸಿದ ದರದ ನಡುವಿನ ಅಂತರವನ್ನು ತಾವೇ (ರಾಜ್ಯ ಸರ್ಕಾರಗಳು) ಭರಿಸಿದವು.

ಈ ಬೆಲೆ ಎಷ್ಟೊಂದು ಆಕರ್ಷಕವಾಗಿತ್ತು ಎನ್ನಲು ಪಂಜಾಬ್, ಹರಿಯಾಣಗಳು ಉತ್ತಮ ಉದಾಹರಣೆ. ಒಳ್ಳೆಯ ಫಸಲು ಬಂದ ವರ್ಷದಲ್ಲಿ ಈ ಎರಡೂ ರಾಜ್ಯಗಳಲ್ಲಿ ಶೇ 90ರಷ್ಟು ಗೋಧಿ ಮತ್ತು ಶೇ 75ರಷ್ಟು ಭತ್ತವನ್ನು ರೈತರು ಸರ್ಕಾರಿ ಗೋದಾಮುಗಳಿಗೇ ಮಾರುತ್ತಿದ್ದಾರೆ.

ಇನ್ನೊಂದು ಕಡೆ ನಮ್ಮ ಪಡಿತರ ವಿತರಣಾ ವ್ಯವಸ್ಥೆ ಕೂಡ ಅನೇಕ ಲೋಪಗಳಿಂದ ಕೂಡಿದೆ. ರೇಷನ್ ಅಂಗಡಿಗಳಿಗೆ ಪೂರೈಸುವ ಆಹಾರ ಧಾನ್ಯಗಳನ್ನು ಅಂಗಡಿಗಳ ಮಾಲೀಕರು ಮುಕ್ತ ಮಾರುಕಟ್ಟೆಯಲ್ಲಿ ಮಾರಿ ಲಾಭ ಕೊಳ್ಳೆಹೊಡೆಯುತ್ತಿದ್ದಾರೆ. ಅದಕ್ಕೆ ಸ್ವಲ್ಪ ಮಟ್ಟಿಗೆ ಸರ್ಕಾರದ ನೀತಿಯೂ ಕಾರಣ.

ಉದಾಹರಣೆಗೆ ರಾಜ್ಯ ಸರ್ಕಾರಗಳು ಕಡು ಬಡ ಕುಟುಂಬಗಳಿಗೆ (ಬಿಪಿಎಲ್) ಕಿಲೋಗೆ 2 ರೂ ದರದಲ್ಲಿ  ತಿಂಗಳಿಗೆ 35 ಕಿಲೊ ಧಾನ್ಯ ನೀಡುತ್ತವೆ. ಇದನ್ನು ಫಲಾನುಭವಿಗಳು ಒಂದೇ ಕಂತಿನಲ್ಲಿಯೇ ಕೊಳ್ಳಬೇಕು. ಆದರೆ ಎಷ್ಟೋ ಕುಟುಂಬಗಳಿಗೆ ಒಂದೇ ಗಂಟಿನಲ್ಲಿ 70 ರೂಪಾಯಿ ಕೊಡುವುದೂ ದೊಡ್ಡ ಹೊರೆಯೇ.
 
ರೇಷನ್ ಅಂಗಡಿ ಮಾಲೀಕರು ಇವರ ಈ ಅಸಹಾಯಕತೆ ಲಾಭ ಪಡೆಯುತ್ತಾರೆ. ತಿಂಗಳಿಗೆ 15- 20 ಕಿಲೋ ಧಾನ್ಯವನ್ನು ಪುಕ್ಕಟೆಯಾಗಿ ಕೊಟ್ಟು ಉಳಿದದ್ದನ್ನು ತಾವೇ ಇಟ್ಟುಕೊಳ್ಳುತ್ತಾರೆ.

ಒಂದಕ್ಕೆ ನಾಲ್ಕರಷ್ಟು ದರಕ್ಕೆ ಹೊರಗೆ ಮಾರಿಕೊಳ್ಳುತ್ತಾರೆ. ಹೀಗೆ ಒಂದೊಂದು ಬಿಪಿಎಲ್ ಕುಟುಂಬದಿಂದಲೂ ಇವರಿಗೆ ತಿಂಗಳಿಗೆ ನೂರಾರು ರೂಪಾಯಿ ಲಾಭ. ಬಹುಶಃ ವಿಶ್ವದಲ್ಲೆಲ್ಲೂ ಇಷ್ಟು ಸುಲಭ ಲಾಭದ ವ್ಯವಸ್ಥೆ ಇರಲಿಕ್ಕಿಲ್ಲ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಹಾರದ ಮುಕ್ತ ಮಾರುಕಟ್ಟೆ ಬೆಳೆಯಲು ಅವಕಾಶ ಕೊಡದೇ ಇರುವುದೇ ಈ ಎಲ್ಲ ಲೋಪಕ್ಕೆ ಮುಖ್ಯ ಕಾರಣ. ಏಕೆಂದರೆ ಕೇಂದ್ರ ಸರ್ಕಾರ ಆಹಾರ ಧಾನ್ಯದ ಖರೀದಿಯನ್ನು ಬರ ಮತ್ತಿತರ ಸಂದರ್ಭದಲ್ಲಿ ಬಳಸಲು ಇಡಬೇಕಾದ ಮೀಸಲು ದಾಸ್ತಾನಿಗೆ ಮಾತ್ರ ಸೀಮಿತಗೊಳಿಸಿದ್ದರೆ ಸನ್ನಿವೇಶವೇ ಬೇರೆ ಆಗುತ್ತಿತ್ತು. ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಕುಸಿಯುವುದರಿಂದ ರೈತರು ಸ್ವಾಭಾವಿಕವಾಗಿಯೇ ಹೆಚ್ಚು ಬೆಲೆ, ಲಾಭ ತರುವ ತೋಟಗಾರಿಕೆ, ವಾಣಿಜ್ಯ ಬೆಳೆಗಳತ್ತ ಹೊರಳುತ್ತಿದ್ದರು.

ಒಂದನ್ನು ಸರಿ ಮಾಡುವ ಭರದಲ್ಲಿ ಮತ್ತಷ್ಟು ಕೆಡಿಸುವುದೇ ಸರ್ಕಾರದ ನೀತಿಯಾದಂತಿದೆ. ಏಕೆಂದರೆ ಪಡಿತರ ವ್ಯವಸ್ಥೆಯಿಂದ ಕಡು ಬಡವರಿಗೆ ಸಾಕಷ್ಟು ಧಾನ್ಯ ದೊರೆಯುತ್ತಿಲ್ಲ ಎಂದು ಅದು ಬಿಪಿಎಲ್ ಎಂಬ ಮತ್ತೊಂದು ವರ್ಗ ಸೃಷ್ಟಿಸಿತು.

ಆದರೆ ಇದರಲ್ಲಿಯೂ ನಿಗದಿತ ಧಾನ್ಯದ ಅರ್ಧದಷ್ಟು ಕೂಡ ಅರ್ಹ ಕುಟುಂಬಗಳಿಗೆ ತಲುಪುತ್ತಿಲ್ಲ. ಈ ಅವ್ಯವಸ್ಥೆ ನಡುವೆಯೇ ಈಗ ಆಹಾರ ಖಾತರಿ ಮಸೂದೆಯನ್ನು ಜಾರಿಗೊಳಿಸಿದೆ. ಹಾಲಿ ಬಿಪಿಎಲ್ ಕಾರ್ಡುದಾರರ ಜತೆ ಇನ್ನೂ 6 ಕೋಟಿ ಕುಟುಂಬಗಳಿಗೆ ವಿಸ್ತರಿಸಲು ಹೊರಟಿದೆ.

ಇದು ತನ್ನದೇ ಸಾಧನೆ ಎಂಬಂತೆ ಬಿಂಬಿಸುತ್ತ ತನ್ನ ಬೆನ್ನು ತಾನೇ ಚಪ್ಪರಿಸಿಕೊಳ್ಳುತ್ತ ಉತ್ತರ ಪ್ರದೇಶ ಚುನಾವಣೆ ಗೆಲ್ಲುವ ಕನಸಿನಲ್ಲಿದೆ ಕಾಂಗ್ರೆಸ್ ಪಕ್ಷ. ಆದರೆ ಅತ್ಯಂತ ಅವಶ್ಯವಾದ ಸುಧಾರಣೆ ಬಗ್ಗೆ ಅದರ ಯಾರೊಬ್ಬ ಮುಖಂಡರೂ ಚಕಾರ ಎತ್ತುತ್ತಿಲ್ಲ.
 
ಈಗ ತುರ್ತಾಗಿ ಬೇಕಿರುವುದು ಸರ್ಕಾರಿ ಆಹಾರಧಾನ್ಯ ಖರೀದಿ ಮತ್ತು ವಿತರಣೆ ವ್ಯವಸ್ಥೆ ರದ್ದು, ರೇಷನ್  ಕಾರ್ಡ್‌ಗಳ ಬದಲು ಫಲಾನುಭವಿಗಳಿಗೆ ನೇರವಾಗಿ ತಲುಪುವ ಆಹಾರ ಕೂಪನ್ ಜಾರಿಗೆ ತರುವುದು (ಈ ಕೂಪನ್‌ಗಳನ್ನು ಅಂಗಡಿಗಳಲ್ಲಿ ಕೊಟ್ಟು ಬೇಕಾದ ಧಾನ್ಯ ಪಡೆಯಬಹುದು).

ಆದರೆ ಇದ್ಯಾವುದನ್ನು ಸರ್ಕಾರ ಜಾರಿಗೆ ತರುತ್ತದೆ ಎಂಬ ನಂಬಿಕೆ ನನಗಿಲ್ಲ. ಹೀಗಾಗಿ ಇನ್ನು ಐದು ವರ್ಷದ ನಂತರವೂ ನಾವು ವಿಶ್ವದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ದೇಶಗಳ ಪಟ್ಟಿಯಲ್ಲಿ ಈಗಿನಂತೆ 67ನೇ ಸ್ಥಾನದಲ್ಲಿಯೇ ಮುಂದುವರಿದರೆ ಆಶ್ಚರ್ಯಪಡಬೇಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT