ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಿ ಮೇಲೆ ದೌರ್ಜನ್ಯ: ಪತ್ನಿ ಅಳಲು

Last Updated 19 ಜುಲೈ 2012, 8:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಇಡೀ ಊರಲ್ಲಿ ನನ್ನವರ ಬಗ್ಗೆ ಯಾರಿಗೂ ಸಿಟ್ಟಿಲ್ಲ. ಆದರೆ ಸ್ಥಳೀಯ ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಸಹೋದರರು ನಮ್ಮ ಕುಟುಂಬದ ನೆಮ್ಮದಿಯನ್ನೇ ಕೆಡಿಸಿದ್ದಾರೆ. ಸೋಮವಾರ (ಜು.16) ಬೆಳಿಗ್ಗೆ ವಾಕಿಂಗ್ ಹೋದ ಪತಿಯನ್ನು ಬಲವಂತವಾಗಿ ಕರೆದೊಯ್ದು ದೌರ್ಜನ್ಯ ನಡೆಸಿದ್ದಾರೆ.

ನನ್ನವರ ಜೀವಕ್ಕೆ ಅಪಾಯವೇನಾದರೂ ಸಂಭವಿಸಿದರೆ ಅವರೇ ಹೊಣೆ...~ ಎಂದು ಕುಂದಗೋಳ ತಾಲ್ಲೂಕಿನ ಯರಗುಪ್ಪಿ ಗ್ರಾಮದ ಕಸ್ತೂರಿ ವೀರಭದ್ರಪ್ಪ ಸೀಮಿಕೇರಿ ಕಣ್ಣೀರಿಟ್ಟರು. ಪಕ್ಕದ್ಲ್ಲಲೆ ವೀರಭದ್ರಪ್ಪ ಇದ್ದರು.

ನಗರದ ಕಿಮ್ಸನಲ್ಲಿ ದಾಖಲಾಗಿರುವ ವೀರಭದ್ರಪ್ಪ ಅವರ ಬಲಗೈಗೆ ಬ್ಯಾಂಡೇಜ್ ಹಾಕಲಾಗಿದೆ. ತಮ್ಮ ಮೇಲೆ ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಸಹೋದರರು ಹಲ್ಲೆ ನಡೆಸಿದ್ದಾರೆ ಎಂದು ವೀರಭದ್ರಪ್ಪ ಅವರು ಕುಂದಗೋಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

`ನಾನು ಮತ್ತು ಮಲ್ಲಿಕಾರ್ಜುನ ಅಕ್ಕಿ ಸಹೋದರ ಸುರೇಶ್ ಅಕ್ಕಿ ಹುಬ್ಬಳ್ಳಿಯ ಪಿ.ವಿ. ಜಿಗಜಿನ್ನಿ ಎಂಬವರ ಜೊತೆ ಎರಡು ವರ್ಷದಿಂದ ಹತ್ತಿ ವ್ಯವಹಾರ ಮಾಡುತ್ತಿದ್ದೆವು. ಈ ವ್ಯವಹಾರದಲ್ಲಿ ಜಿಗಜಿನ್ನಿ ಭಾರಿ ನಷ್ಟ ಅನುಭವಿಸಿದ್ದು, ಸುರೇಶ್ ಮತ್ತು ನನಗೆ ಹಣ ನೀಡಲು ಬಾಕಿ ಇದೆ. ನಮ್ಮಿಬ್ಬರ ಮಧ್ಯೆ ಯಾವುದೇ ಹಣಕಾಸು ವ್ಯವಹಾರ ಇಲ್ಲ. ಆದರೂ ಶಾಸಕರ ಸಹೋದರರಾದ ಸುರೇಶ ಅಕ್ಕಿ, ವೀರಪ್ಪ ಅಕ್ಕಿ, ಶಾಂತಪ್ಪ ಅಕ್ಕಿ ಮತ್ತು ರಾಮಣ್ಣ ಶಲವಡಿ ರೊಕ್ಕ ನೀಡುವಂತೆ ಕಳೆದ ಆರು ತಿಂಗಳಿನಿಂದ ನನ್ನನ್ನು ಸತಾಯಿಸುತ್ತಿದ್ದಾರೆ. ಇದೀಗ ಮೂರನೇ ಬಾರಿ ಹಲ್ಲೆ ನಡೆದಿದೆ. ಈ ಹಿಂದೆ ಫೆಬ್ರುವರಿಯಲ್ಲಿ ಮಾಜಿ ಶಾಸಕರ ಎದುರಿನಲ್ಲಿ ಹುಬ್ಬಳ್ಳಿಯ ಕೆಒಎಫ್ ವಸತಿಗೃಹದಲ್ಲಿ ಹಲ್ಲೆ ನಡೆದಿತ್ತು. ಮಾ. 27ರಂದು ಮತ್ತೊಮ್ಮೆ ಹಲ್ಲೆ ನಡೆಯಿತು. ಸೋಮವಾರ ಬೆಳಿಗ್ಗೆ 7.30ರ ವೇಳೆ ಯರಗುಪ್ಪಿ ಪ್ರೌಢಶಾಲೆಯ ಆವರಣದಲ್ಲಿ ವಾಯುವಿಹಾರದಲ್ಲಿದ್ದಾಗ ಒಟ್ಟು ಆರು ಮಂದಿ ಹಲ್ಲೆ ಮಾಡಿದರು~ ಎಂದು ವೀರಭದ್ರಪ್ಪ ತಿಳಿಸಿದರು.
`ವಿಷಯ ತಿಳಿದ ಪತ್ನಿ ಮತ್ತು ಮಕ್ಕಳು ನನ್ನನ್ನು ಬಿಡುಗಡೆ ಮಾಡುವಂತೆ ಅಂಗಲಾಚಿದರೂ ಕೇಳಲಿಲ್ಲ.

ರೊಕ್ಕ ತಂದುಕೊಟ್ಟರೆ ಬಿಡುಗಡೆ ಮಾಡುವುದಾಗಿ ತಿಳಿಸಿದರು. ಕುಂದಗೋಳ ಠಾಣೆಗೆ ತೆರಳಿ ದೂರು ನೀಡಲು ಮುಂದಾದರೂ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಉತ್ಸಾಹ ತೋರಲಿಲ್ಲ. ಕೊನೆಗೆ ಒಬ್ಬ ಪೊಲೀಸ್ ಬಂದು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದ. ಅಲ್ಲಿಂದ ಕಿಮ್ಸಗೆ ಕಳುಹಿಸಿಕೊಟ್ಟರು. ಪೊಲೀಸರು ಮಂಗಳವಾರ ನನ್ನ ಹೇಳಿಕೆ ಪಡೆದಿದ್ದಾರೆ. ಆರೋಪಿಗಳ ಕುರಿತು ಸ್ಪಷ್ಟ ಮಾಹಿತಿ ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ~ ಎಂದು ಅಲವತ್ತುಕೊಂಡರು.

ಈ ಬಗ್ಗೆ `ಪ್ರಜಾವಾಣಿ~ಗೆ ಪ್ರತಿಕ್ರಿಯೆ ನೀಡಿದ ಕುಂದಗೋಳ ಠಾಣೆಯ ಪಿಎಸ್‌ಐ ಎಂ.ಎನ್. ದೇಸನೂರ, `ಪ್ರಕರಣದ ಕುರಿತು ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಬಂಧಿಸಿ ಬಳಿಕ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿದೆ. ಹೆಚ್ಚಿನ ತನಿಖೆ ಮುಂದುವರಿದಿದೆ~ ಎಂದರು.

`ದುರುದ್ದೇಶದಿಂದ ಆರೋಪ~
: `ನನಗೂ ಈ ಘಟನೆಗೂ ಯಾವುದೇ ಸಂಬಂಧ ಇಲ್ಲ. ದುರುದ್ದೇಶದಿಂದ, ನನ್ನ ಹೆಸರು ಕೆಡಿಸುವ ಉದ್ದೇಶದಿಂದ ಈ ಆರೋಪ ಮಾಡಲಾಗಿದೆ. ವೀರಭದ್ರಪ್ಪ ಮತ್ತು ಸಹೋದರ ಸುರೇಶ್ ಅಕ್ಕಿ ಮಧ್ಯೆ ಹತ್ತಿ ವ್ಯವಹಾರವಿದೆ. ಈ ವ್ಯವಹಾರಕ್ಕೆ ಸಂಬಂಧಿಸಿ ಸುಮಾರು 7 ಲಕ್ಷ ಹಣವನ್ನು ಸುರೇಶ್ ಅಕ್ಕಿಗೆ ವೀರಭದ್ರಪ್ಪ ನೀಡಬೇಕಿತ್ತು. ಈ ಕುರಿತು ಗ್ರಾ.ಪಂ. ಅಧ್ಯಕ್ಷರಾದ ವೀರಪ್ಪ ಅಕ್ಕಿ ಅವರ ಮಧ್ಯಸ್ಥಿಕೆಯಲ್ಲಿ 2-3 ಬಾರಿ ಮಾತುಕತೆ ನಡೆದಿದೆ. ಆದರೆ ಹಲ್ಲೆ ಮಾಡುವಂತಹದ್ದೇನೂ ಆಗಿಲ್ಲ. ವೀರಭದ್ರಪ್ಪನ ಮೇಲೆ ಹಲ್ಲೆ ಯತ್ನವೂ ನಡೆದಿಲ್ಲ. ಆತ ಬಿದ್ದು ಗಾಯಗೊಂಡಿರಬೇಕು~ ಎಂದು ಮಲ್ಲಿಕಾರ್ಜುನ ಅಕ್ಕಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT