ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ತೆಯಾಗದ ಶವ: ಕುಟುಂಬದ ಆತಂಕ

ಕೊಲೆ ಆರೋಪಿಗಳು ಜೈಲಿನಿಂದ ಪರಾರಿ
Last Updated 11 ಡಿಸೆಂಬರ್ 2013, 6:55 IST
ಅಕ್ಷರ ಗಾತ್ರ

ಹೊಸಪೇಟೆ: ಕೊಲೆಯಾದ ಪತಿಯ ಶವ 15 ತಿಂಗಳು ಕಳೆದರೂ ಪತ್ತೆಯಾಗದಿರುವುದು ಒಂದೆಡೆಯಾದರೆ, ಜೀವನ ನಿರ್ವಹಣೆಗೆ ಹೋಟೆಲ್‌ನಲ್ಲಿ ಪಾತ್ರೆ ತೊಳೆಯುವ ಕಾಯಕ ಇನ್ನೊಂದೆಡೆ. ಇದೆಲ್ಲದರ ಮಧ್ಯೆ ಪ್ರಕರಣ ವಿಚಾರಣೆ ಹಂತದಲ್ಲಿ ಇರುವಾಗಲೇ ಕೊಲೆ ಆರೋಪಿಗಳಿಬ್ಬರೂ ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದು, ಒಬ್ಬನನ್ನು ಮಾತ್ರ ಬಂಧಿಸಲಾಗಿದೆ.

ಇದು 2012ರ ಆಗಸ್ಟ್‌ 15ರಂದು ವಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗೊಂದಿಗೆ ಗ್ರಾಮದ ದುಷ್ಕರ್ಮಿಗಳಿಂದ ಕೊಲೆಗೀಡಾದ ಮೈಸೂರು ಮೂಲದ ಬಿ.ರಮೇಶನ ಕುಟುಂಬದ ದಯನೀಯ ಸ್ಥಿತಿ. ಅನಾಥ ರಮೇಶ ಮರಿಯಮ್ಮನಹಳ್ಳಿಯ ಲಲಿತಮ್ಮಾ ಅವರನ್ನು ವಿವಾಹವಾಗಿ ಅಲ್ಲಿಯೇ ವಾಸವಾಗಿದ್ದರು.

ಹೊಸಪೇಟೆಯ ಟ್ರಾವೆಲ್ಸ್‌ವೊಂದರಲ್ಲಿ ಟ್ಯಾಕ್ಸಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ವಾಹನ ಬಾಡಿಗೆ ಪಡೆದಿದ್ದ ದುಷ್ಕರ್ಮಿಗಳಿಂದಲೇ ರಮೇಶ ಹತ್ಯೆಗೀಡಾದರು. ಅಷ್ಟೇ ಅಲ್ಲ ಆರೋಪಿಗಳು ಆತನ ಶವವನ್ನು ಕೃಷ್ಣಾ ನದಿಯಲ್ಲಿ ಬಿಸಾಕಿದ್ದರು. ಘಟನೆ ನಡೆದು ಒಂದೂವರೆ ವರ್ಷವಾದರೂ ರಮೇಶ ಅವರ ಶವ ಪತ್ತೆಯಾದಿರುವುದರಿಂದ ಕುಟುಂಬ ಸದಸ್ಯರು ನಿತ್ಯವೂ ಪರಿತಪಿಸುವಂತಾಗಿದೆ.

‘ಮಗನಂತಿದ್ದ ಅಳಿಯ ಕೆಲಸಕ್ಕೆ ಹೋಗಿ ಬರ್ತೇನಿ ಅಂತ ಹೇಳಿ ಹೋದಂವಾ ಬರಲೇ ಇಲ್ಲ. ಅವ್ನ ಮಕಾ ನೋಡಾಕ ಆಗಲಿಲ್ಲ. ಕೊಲೆ ಮಾಡಿ ಆಲಮಟ್ಟಿ ಡ್ಯಾಂ ಮುಂದ ನದಿಯಾಗ ಹಾಕ್ಯಾರ ಅಂತ ಪೊಲೀಸ್ರು ಹೇಳಿದ್ರು. ಆದ್ರ, ಇಲ್ಲೀತನಾ ಅವನ ಹೆಣಾನೂ ಸಿಕ್ಕಿಲ್ಲ...’ ಎಂದು ರಮೇಶನ ಅತ್ತೆ ಸುಶೀಲಮ್ಮ ಕಣ್ಣೀರಿಟ್ಟರು.

ಪತಿಯ ಮುಖವನ್ನು ಕೊನೆಯ ಬಾರಿ ನೋಡಲು ಸಾಧ್ಯವಾಗಲಿಲ್ಲ ಎಂಬ ಕೊರಗಿನಲ್ಲಿಯೆ ಪತ್ನಿ ಲಲಿತಮ್ಮ ಕಾಲ ಕಳೆಯುತ್ತಿದ್ದಾರೆ. ಇನ್ನೊಂದೆಡೆ ಮಕ್ಕಳಾದ ಲೇಪಾಕ್ಷಿ (9ನೇ ತರಗತಿ) ಹಾಗೂ ವಾರುಣಿ (7ನೇ ತರಗತಿ) ಅಮ್ಮ, ಅಜ್ಜಿಯ ಜೊತೆ ಕಣ್ಣೀರು ಹಾಕುತ್ತಿದ್ದಾರೆ. ಶವ ಪತ್ತೆಯಾಗದ್ದರಿಂದ ಅಂತ್ಯ ಸಂಸ್ಕಾರದ ವಿಧಿ– ವಿಧಾನ ಪೂರೈಸಲು ಸಾಧ್ಯವಾಗದೇ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ.

ಹೊಸಪೇಟೆಯ ಟ್ಯಾಕ್ಸಿ ಚಾಲಕರ ಸಂಘದವರು ಸಹೃದಯತೆ ಮೆರೆದು ₨ 35000 ನೀಡಿದ್ದನ್ನು ಬಿಟ್ಟರೆ ಸರ್ಕಾರ ಅಥವಾ ರಮೇಶ ಕೆಲಸಕ್ಕಿದ್ದ ಟ್ಯಾಕ್ಸಿ ಮಾಲೀಕರಿಂದ ಯಾವುದೇ ಸಹಾಯ ದೊರಕಿಲ್ಲ ಎಂದು ರಮೇಶ ಕುಟುಂಬದ ಸದಸ್ಯರು ‘ಪ್ರಜಾವಾಣಿ’ಗೆ ತಿಳಿಸಿದರು. ಶವ ಹುಡುಕಿ ಕೊಡುವಲ್ಲಿಯೂ ಪೊಲೀಸ್‌ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಅವರು ದೂರಿದರು.

‘ನನ್ನ ಗಂಡ ಮನೆ ಮತ್ತು ಮಕ್ಕಳಿಗಾಗಿ ಹಗಲು ರಾತ್ರಿ ದುಡಿಯುತ್ತಿದ್ದರು. ಅವರು ಹೋದಾಗಿನಿಂದ ನಾನು, ಅಮ್ಮ ಹೋಟೆಲ್‌ನಲ್ಲಿ ಕೆಲಸ ಮಾಡು­ತ್ತಿದ್ದೇವೆ. ಒಂದು ದಿನ ಕೆಲಸಕ್ಕೆ ಹೋಗದಿದ್ದರೆ ಮನೆಯ ಒಲೆ ಉರಿಯುವುದಿಲ್ಲ. ಕೊನೆಯ ಬಾರಿ ಪತಿಯ ಮುಖ ನೋಡಲೂ ಆಗದಿರುವ ನೋವು ಈಗಲೂ ಕಾಡುತ್ತಿದೆ’ ಎಂದು ರಮೇಶ ಅವರ ಪತ್ನಿ ಲಲಿತಮ್ಮಾ ದುಃಖ ತೋಡಿಕೊಂಡರು. 

‘ರಮೇಶನ ಶವ ಪತ್ತೆಗಾಗಿ ನದಿಯಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಕೃಷ್ಣಾ ನದಿಯಲ್ಲಿ ಪ್ರವಾಹ ಹೆಚ್ಚಾಗಿದ್ದರಿಂದ ಸಾಧ್ಯವಾಗಲಿಲ್ಲ. ಪರಾರಿಯಾಗಿರುವ ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ನಡೆದಿದೆ’ ಎಂದು ಶಹರ ಠಾಣೆ ಸಿಪಿಐ ಶ್ರೀಧರ ದೊಡ್ಡಿ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT