ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ನಿ ನೇಣು ಹಾಕಿಕೊಂಡು ಆತ್ಮಹತ್ಯೆ

Last Updated 11 ಅಕ್ಟೋಬರ್ 2011, 19:35 IST
ಅಕ್ಷರ ಗಾತ್ರ

ಬೆಂಗಳೂರು: ಪತಿ ಅನೈತಿಕ ಸಂಬಂಧ ಹೊಂದಿದ್ದ ಶಂಕೆಯಿಂದ ಪತ್ನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರದ ಮಾರೇನಹಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ಖಾಸಗಿ ಕಂಪೆನಿ ಉದ್ಯೋಗಿ ಶಿವಕುಮಾರ್ ಎಂಬುವರ ಪತ್ನಿ ಮಮತಾ (26) ಆತ್ಮಹತ್ಯೆ ಮಾಡಿಕೊಂಡವರು.

ಅವರ ವಿವಾಹವಾಗಿ ಎರಡು ವರ್ಷವಾಗಿತ್ತು. ದಂಪತಿ ಮಾರೇನಹಳ್ಳಿಯಲ್ಲಿ ನೆಲೆಸಿದ್ದರು. ಪತಿ ಅನೈತಿಕ ಸಂಬಂಧ ಹೊಂದಿದ್ದ ಬಗ್ಗೆ ಅವರಿಗೆ ಅನುಮಾನವಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಶಿವಕುಮಾರ್ ಪತ್ನಿ ಮೇಲೆ ಹಲವು ಬಾರಿ ಹಲ್ಲೆ ನಡೆಸಿದ್ದರು. ಇದೇ ವಿಷಯವಾಗಿ ದಂಪತಿ ಮಧ್ಯೆ ಆಗಾಗ್ಗೆ ಜಗಳವಾಗುತ್ತಿತ್ತು. ಹಿರಿಯರ ಸಮ್ಮುಖದಲ್ಲಿ ರಾಜಿ- ಪಂಚಾಯಿತಿಯೂ ಆಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮಮತಾ ಅವರು ರಾತ್ರಿ ನೇಣು ಹಾಕಿಕೊಂಡಿದ್ದಾರೆ. ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ವರದಕ್ಷಿಣೆ ಕಿರುಕುಳದ ಬಗ್ಗೆ ಮಮತಾ ಪೋಷಕರು ದೂರು ನೀಡಿದರೆ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ.

ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್‌ಸ್ಪೆಕ್ಟರ್ ಚಂದ್ರಶೇಖರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದರೋಡೆ
ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ ಹಣ ಮತ್ತು ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಕೆಂಗೇರಿ ಸಮೀಪದ ಎಂಟಿಎಸ್ ಲೇಔಟ್‌ನಲ್ಲಿ ಸೋಮವಾರ ರಾತ್ರಿ ನಡೆದಿದೆ.

ಹೌಸ್‌ಸೋರ್ಸ್ ಫೈನಾನ್ಸ್ ಕಂಪೆನಿ ಉದ್ಯೋಗಿಗಳಾದ ಉಮೇಶ್ ಮತ್ತು ಮಹಾಲಕ್ಷ್ಮಿ ದರೋಡೆಗೊಳಗಾದವರು.

ಸರ್ಜಾಪುರದಲ್ಲಿ ಅವರ ಕಚೇರಿ ಇದ್ದು ರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದರು. ಮಹಾಲಕ್ಷ್ಮಿ ಅವರನ್ನು ಡ್ರಾಪ್ ಮಾಡಲು ಎಂಟಿಎಸ್ ಲೇಔಟ್ ಸಮೀಪ ಹೋಗುತ್ತಿದ್ದ ವೇಳೆ ಹಿಂದಿನಿಂದ ಎರಡು ಬೈಕ್‌ಗಳಲ್ಲಿ ಬಂದ ನಾಲ್ಕು ಮಂದಿ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿದ್ದಾರೆ. ಮಾರಕಾಸ್ತ್ರಗಳಿಂದ ಬೆದರಿಸಿ ಎರಡೂವರೆ ಸಾವಿರ ನಗದು, ಕೈಗಡಿಯಾರ ಮತ್ತು 35 ಗ್ರಾಂ ತೂಕದ ಸರ ದರೋಡೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪ ಮತ್ತು ಇನ್‌ಸ್ಪೆಕ್ಟರ್ ವಾಸುದೇವ ನಾರಾಯಣ ನಾಯಕ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ: ಸಾವು
ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸೆಕ್ಯುರಿಟಿ ಗಾರ್ಡ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೈಕೊಲೇಔಟ್ ಸಂಚಾರ ಠಾಣೆ ವ್ಯಾಪ್ತಿಯ ಅರಕೆರೆಯ ಬಿಜಿಎಸ್ ಲೇಔಟ್‌ನಲ್ಲಿ ಸೋಮವಾರ ನಡೆದಿದೆ.

ಕನಕಪುರ ರಸ್ತೆ ನಿವಾಸಿ ರಾಮ್ ಬಹದ್ದೂರ್ (50) ಮೃತಪಟ್ಟವರು. ಖಾಸಗಿ ಕಂಪೆನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ಅವರು ಅರಕೆರೆಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು. ಅಲ್ಲಿಂದ ಮನೆಗೆ ಮರಳುತ್ತಿದ್ದ ವೇಳೆ ಹಿಂದಿನಿಂದ ಬಂದ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ಅವರು ಸ್ಥಳದ್ಲ್ಲಲೇ ಸಾವನ್ನಪ್ಪಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಬೈಕ್ ಸವಾರನನ್ನು ಬಂಧಿಸಲಾಗಿದೆ ಎಂದು ಮೈಕೊಲೇಔಟ್ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಕಲಬೆರಕೆ ತುಪ್ಪ ಮಾರಾಟ: ಬಂಧನ
ಬ್ಯಾಟರಾಯನಪುರದ ದೀಪಾಂಜಲಿ ನಗರದಲ್ಲಿರುವ ಕಲಬೆರಕೆ ತುಪ್ಪ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಮಹೇಶ್ (27) ಎಂಬಾತನನ್ನು ಬಂಧಿಸಿದ್ದಾರೆ.

ಆರೋಪಿಯಿಂದ ಎರಡು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಪಾಮ್‌ಆಯಿಲ್, ವನಸ್ಪತಿ ಮುಂತಾದವುಗಳನ್ನು ಬಳಸಿ ನಕಲಿ ತುಪ್ಪ ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿ ಮಹೇಶ್ ಅವರನ್ನು ಬಂಧಿಸಲಾಯಿತು. ಕಳಪೆ ಗುಣಮಟ್ಟದ ತುಪ್ಪ ತಯಾರಿಸಿ ಮಾರಾಟ ಮಾಡಿ ಗ್ರಾಹಕರಿಗೆ ವಂಚಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಡ್ಡಿ ದಂದೆ: ಬಂಧನ
ಸಾರ್ವಜನಿಕರಿಗೆ ಸಾಲ ನೀಡಿ ಅಧಿಕ ಬಡ್ಡಿ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಗಂಗಾನಗರದ ಟೆಂಪಲ್‌ಸ್ಟ್ರೀಟ್ ನಿವಾಸಿ ಚಂಗಮನಾಯ್ಡು (47) ಎಂಬುವರನ್ನು ಬಂಧಿಸಿರುವ ಪೊಲೀಸರು ಖಾಲಿ ಚೆಕ್, ಛಾಪಾ ಕಾಗದ, ಕರಾರು ಪತ್ರಗಳು ಮತ್ತು 41 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.

ಜನರು, ಸಣ್ಣ ಉದ್ಯಮಿಗಳಿಗೆ ಸಾಲ ನೀಡುತ್ತಿದ್ದ ಚಂಗಮನಾಯ್ಡು ಶೇ 10ರಿಂದ 15ರಷ್ಟು ಬಡ್ಡಿ ಪಡೆಯುತ್ತಿದ್ದರು. ಕಾನೂನು ಬಾಹಿರವಾಗಿ ಚೀಟಿ ವ್ಯವಹಾರ ನಡೆಸುತ್ತಿದ್ದರು. ಸುಮಾರು ರೂ 2 ಕೋಟಿ  ವ್ಯವಹಾರ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT