ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ನಿ ಪೀಡೆಯಿಂದ ಪತಿಗೆ ಮುಕ್ತಿ

ವಿಚ್ಛೇದನಕ್ಕೆ ಅನುಮತಿ ನೀಡಿದ ಹೈಕೋರ್ಟ್‌
Last Updated 5 ಜನವರಿ 2014, 20:39 IST
ಅಕ್ಷರ ಗಾತ್ರ

ಬೆಂಗಳೂರು: ‘ಮಾನಸಿಕ ಕಿರುಕುಳ ನೀಡುವ ಪತ್ನಿಯ ಜೊತೆ ಪತಿ ಸಂಸಾರ ನಡೆಸಬೇಕು ಎಂದು ನಿರೀಕ್ಷಿಸಲಾಗದು’ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿರುವ ಹೈಕೋರ್ಟ್‌, ಮದುವೆಯಾದ ದಿನ­ದಿಂದಲೇ ಪತ್ನಿ­ಯಿಂದ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದ ಪತಿಗೆ ವಿಚ್ಛೇದನ  ನೀಡಿದೆ.

‘ಪರಿಹಾರದ ರೂಪದಲ್ಲಿ ಪತಿಯ ಕಡೆಯಿಂದ ಪ್ರತ್ಯೇಕ ಮನೆ, ₨ 20 ಲಕ್ಷದ ಇಡುಗಂಟು ಮತ್ತು ಮಾಸಿಕ ₨ 20,000 ಮಾಸಾಶನ ಕೇಳಿ ಪತ್ನಿ, ಪತಿಗೆ ಮಾನಸಿಕ ಹಿಂಸೆ ನೀಡಿದ್ದಾಳೆ. ಅಲ್ಲದೆ, ಪತಿಯ ವಿರುದ್ಧ ಮತ್ತು ಅವನ ಕುಟುಂಬದವರ ವಿರುದ್ಧ ಪದೇ ಪದೇ ದೂರು ಸಲ್ಲಿಸಿ ಕಿರುಕುಳವನ್ನೂ ನೀಡಿದ್ದಾಳೆ’ ಎಂದು ಹೈಕೋರ್ಟ್‌ ಇತ್ತೀಚೆಗೆ ನೀಡಿರುವ ಆದೇಶದಲ್ಲಿ ಹೇಳಿದೆ.

ಪತಿಯ ಜೊತೆ ದೈಹಿಕ ಸಂಪರ್ಕ ಹೊಂದಲು ನಿರಾಕರಿಸಿ, ‘ನಿಮಗೆ ಏಡ್ಸ್‌ ರೋಗ ಇಲ್ಲ ಎಂಬ ಪ್ರಮಾಣಪತ್ರ ತನ್ನಿ’ ಎಂದು ಕೇಳಿದ ಪತ್ನಿಯ ಕತೆ ಇದು! ಇದೊಂದೇ ಅಲ್ಲ, ‘ಮಧುಮೇಹ, ರಕ್ತ­ದೊತ್ತಡ ಸೇರಿದಂತೆ ನಿಮಗೆ ಯಾವುದೇ ಕಾಯಿಲೆ ಇಲ್ಲ ಎಂಬ ಬಗ್ಗೆ ಪ್ರಮಾಣಪತ್ರ ತನ್ನಿ’ ಎಂಬ ಬೇಡಿಕೆ­ಯನ್ನೂ ಅವರು ಪತಿಯ ಮುಂದೆ ಇಟ್ಟಿದ್ದರು. ನಂತರ , ‘ನನ್ನ ತಂದೆಯವರಿಗೆ ಆರ್ಥಿಕ ತೊಂದರೆ ಇದೆ. ಅವರಿಗೆ ₨ 5 ಲಕ್ಷ ಕೊಟ್ಟು ಸಹಾಯ ಮಾಡಿ’ ಎಂದೂ ಪತಿಯನ್ನು ಒತ್ತಾಯಿಸಿದ್ದರು!

ನಂತರ ಅವರ ಕುಟುಂಬದ ಸದಸ್ಯರ ವಿರುದ್ಧ ಪೊಲೀಸರಲ್ಲಿ ಪದೇ ಪದೇ ದೂರು ದಾಖಲಿಸಿದರು. ಒಂದಲ್ಲ ಒಂದು ಕಾರಣ ಮುಂದಿಟ್ಟು, ಪತಿಯ ಜೊತೆ ದೈಹಿಕ ಸಂಬಂಧ ಹೊಂದಲು ನಿರಾಕ ರಿಸಿದರು. ಇದರಿಂದ ಬೇಸತ್ತ ಪತಿ, ವಿವಾಹ ವಿಚ್ಛೇ­ದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ಅಲ್ಲಿ ಅವರ ಅರ್ಜಿಯನ್ನು ತಿರಸ್ಕರಿಸಲಾಯಿತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಇದರ ವಿಚಾ­ರಣೆ­ಯನ್ನು ನ್ಯಾಯಮೂರ್ತಿಗಳಾದ ಕೆ.ಎಲ್‌. ಮಂಜುನಾಥ್‌ ಮತ್ತು ಎ.ವಿ. ಚಂದ್ರಶೇಖರ ಅವರಿದ್ದ ವಿಭಾಗೀಯ ಪೀಠ ನಡೆಸಿತ್ತು.

ಕೌಟುಂಬಿಕ ದೌರ್ಜನ್ಯ ಕಾಯ್ದೆಯ ಅಡಿ ಅಧೀನ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದ ಪತ್ನಿ, ತನಗೆ ವಾಸಕ್ಕೆ ಪ್ರತ್ಯೇಕ ಮನೆ ಬೇಕು, ₨ 20 ಲಕ್ಷದ ಠೇವಣಿ ಬೇಕು. ಜೊತೆಗೆ ಮಾಸಿಕ ₨ 20 ಸಾವಿರ ಪರಿಹಾರ ಬೇಕು ಎಂದು ಕೋರಿದ್ದರು.

‘ಪರಿಹಾರ ಪಡೆಯುವಲ್ಲಿ ಪತ್ನಿಗೆ ನಿಜವಾದ ಕಳಕಳಿ ಇದ್ದಿದ್ದರೆ, ಪತಿಯ ವಿರುದ್ಧ ಮಾತ್ರ ದೂರು ಸಲ್ಲಿಸುತ್ತಿದ್ದರು. ಆದರೆ, ಪತಿಯ ಸಂಬಂಧಿಕರ ವಿರುದ್ಧವೂ ಅವರು ದೂರು ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ತೀರಾ ದೊಡ್ಡ ಮೊತ್ತದ ಪರಿಹಾರವನ್ನೂ ಕೋರಿದ್ದಾರೆ’ ಎಂದು ಹೈಕೋರ್ಟ್‌ ಆದೇಶದಲ್ಲಿ ಉಲ್ಲೇಖಿಸಿದೆ.

‘ಏಡ್ಸ್‌ ಕುರಿತು ಪ್ರಮಾಣಪತ್ರ ಮತ್ತು ತಂದೆಗೆ ಆರ್ಥಿಕ ಸಹಾಯ ಮಾಡಬೇಕು ಎಂದು ಪತ್ನಿ ಕೇಳಿದ್ದರ ಕುರಿತು ಒಪ್ಪಿಕೊಳ್ಳಬಹುದಾದ ಸಾಕ್ಷ್ಯ ಇಲ್ಲ’ ಎಂದು ಆದೇಶದಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT