ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ನಿ ಶ್ವೇತಾ ನನಗೆ ಸ್ಫೂರ್ತಿ: ಇಜುಮಿ

ಫುಟ್‌ಬಾಲ್: ಭಾರತ ತಂಡದಲ್ಲಿ ಸ್ಥಾನ ಪಡೆದ ವಿದೇಶದ ಮೊದಲ ಆಟಗಾರನ ಮನದ ಮಾತು
Last Updated 3 ಫೆಬ್ರುವರಿ 2013, 20:21 IST
ಅಕ್ಷರ ಗಾತ್ರ

ಬೆಂಗಳೂರು: `2009ರಲ್ಲಿ ಪುಣೆಯಲ್ಲಿ ನಾನು ಶ್ವೇತಾಳನ್ನು ಮೊದಲ ಬಾರಿ ಭೇಟಿಯಾಗಿದ್ದೆ. ಆಕೆ ಫಿಜಿಯೊ ಆಗಿ ಕೆಲಸ ಮಾಡುತ್ತಿದ್ದಳು. ಆಗ ನಾನು ತೀವ್ರ ಗಾಯಕ್ಕೆ ಒಳಗಾಗಿದ್ದೆ. ಆದರೆ ಅವಳ ಆ ಸ್ಪರ್ಶದ ಜಾದೂವಿನಿಂದ ನಾನು ಬೇಗನೇ ಸುಧಾರಿಸಿಕೊಂಡೆ. ಮತ್ತೆ ಎಂದಿನಂತೆ ಆಡಲು ಶುರು ಮಾಡಿದೆ. ಶ್ವೇತಾ ನನ್ನ ಪಾಲಿನ ಸ್ಫೂರ್ತಿ. ಆಕೆ ನನ್ನನ್ನು ಭೇಟಿ ಮಾಡದಿದ್ದರೆ ಮತ್ತೆ ನಾನು ಆಡುತ್ತಿರಲಿಲ್ಲವೇನೊ? ಆಕೆಯನ್ನೇ ನಾನೀಗ ಮದುವೆಯಾಗಿದ್ದೇನೆ'

-ಭಾರತ ಫುಟ್‌ಬಾಲ್ ತಂಡದಲ್ಲಿ ಸ್ಥಾನ ಪಡೆದ ವಿದೇಶದ ಮೊದಲ ಆಟಗಾರ ಎನಿಸಿರುವ ಜಪಾನ್‌ನ ಅರಾಟಾ ಇಜುಮಿ `ಪ್ರಜಾವಾಣಿ'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ವಿಷಯ ತಿಳಿಸಿದ್ದಾರೆ.

ಪ್ಯಾಲೆಸ್ಟೇನ್ ವಿರುದ್ಧ ಫೆಬ್ರುವರಿ 6ರಂದು ಕೊಚ್ಚಿಯಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯಕ್ಕೆ 30 ವರ್ಷ ವಯಸ್ಸಿನ ಇಜುಮಿ ಸ್ಥಾನ ಪಡೆದಿದ್ದಾರೆ. ಮಿಡ್‌ಫೀಲ್ಡರ್ ಇಜುಮಿ ಈಗ ಭಾರತದ ಪಾಸ್‌ಪೋರ್ಟ್ ಹೊಂದಿದ್ದಾರೆ. ಕ್ರೀಡಾ ಸಚಿವಾಲಯದ ನಿಯಮಗಳನ್ನು ಪೂರೈಸಿದ ಮೇಲೆ ರಾಷ್ಟ್ರೀಯ ತಂಡದಲ್ಲಿ ಆಡಲು ಅರ್ಹತೆ ಲಭಿಸಿದೆ. ಭಾರತದ ಪಾಸ್‌ಪೋರ್ಟ್ ಹೊಂದಿದವರು ರಾಷ್ಟ್ರೀಯ ತಂಡ ಪ್ರತಿನಿಧಿಸಬಹುದು ಎಂಬ ನಿಯಮವದು.

ಇವರು ಭಾರತದ ಜನ್ಮ ಪ್ರಮಾಣ ಪತ್ರ ಹೊಂದಿದ್ದಾರೆ. ಆದರೆ ತಂದೆ-ತಾಯಿ ಬೇರೆಯಾದ ಮೇಲೆ ಇಜುಮಿ ಜಪಾನ್ ಪೌರತ್ವ ಪಡೆದರು. ಬಳಿಕ ಜಪಾನ್ ಪೌರತ್ವ ತೊರೆದು ಭಾರತಕ್ಕೆ ಬಂದು ಇಲ್ಲಿನ ಪೌರತ್ವ ಪಡೆದಿದ್ದಾರೆ.

ಇಜುಮಿ ಈಗ ಪುಣೆ ಫುಟ್‌ಬಾಲ್ ಕ್ಲಬ್ ಪರ ಆಡುತ್ತಿದ್ದಾರೆ. ಹಿಂದಿ ಮಾತನಾಡಲು ಕಲಿತಿದ್ದಾರೆ. ಜಪಾನ್ ಮೂಲದ ಈ ಆಟಗಾರ ಪತ್ರಿಕೆಯೊಂದಿಗೆ ತಮ್ಮ ಪೋಷಕರು, ಜಪಾನ್ ದೇಶ, ಪತ್ನಿ ಶ್ವೇತಾ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ನಿಮ್ಮ ಪೋಷಕರ ಬಗ್ಗೆ ಹೇಳಿ?
ನನ್ನ ತಾಯಿ ಜಪಾನ್ ದೇಶದವರು. ಅವರು ಯಮಗುಚಿಯಲ್ಲಿ ನೆಲೆಸಿದ್ದಾರೆ. ನನ್ನ ತಂದೆ ಭಾರತದವರು. ಇವರಿಬ್ಬರು ಪ್ರೀತಿಸಿ ಮದುವೆಯಾದರು. ಆದರೆ ಈಗ ಬೇರೆಯಾಗಿದ್ದಾರೆ. ನಾನು ಕೂಡ ಈಗ ತಂದೆಯ ಸಂಪರ್ಕ ಇಟ್ಟುಕೊಂಡಿಲ್ಲ. ಅವರ ಬಗ್ಗೆ ಹೆಚ್ಚಿನ ಮಾಹಿತಿ ಕೇಳಬೇಡಿ.

ಫುಟ್‌ಬಾಲ್ ಕ್ರೀಡೆ ಮೇಲೆ ಆಸಕ್ತಿ ಬಂದಿದ್ದು ಹೇಗೆ?
ನಾನು 9ನೇ ವಯಸ್ಸಿನಲ್ಲೇ ಫುಟ್‌ಬಾಲ್ ಆಡಲು ಶುರು ಮಾಡಿದೆ. ಅಣ್ಣ ಪ್ರಸಿದ್ಧ ಫುಟ್‌ಬಾಲ್ ಆಟಗಾರ. ಆತ ಅಭ್ಯಾಸ ನಡೆಸುತ್ತಿದ್ದಾಗ    ನಾನು ನೋಡುತ್ತಿದ್ದೆ. ಇದರಿಂದ ನನ್ನಲ್ಲೂ ಫುಟ್‌ಬಾಲ್ ಆಸಕ್ತಿ ಬಂತು. ಅಭ್ಯಾಸ ಪಂದ್ಯದಲ್ಲಿ   ಚೆಂಡನ್ನು ಒದೆಯಲು ಮೊದಲ ಬಾರಿಗೆ ಅವಕಾಶ ಸಿಕ್ಕಿತು. ಆ ಅವಕಾಶದಲ್ಲಿ ನಾನು ಗೋಲು       ಗಳಿಸಿದೆ. ಆಗ ನನ್ನ ಸುತ್ತಮುತ್ತ ಇದ್ದವರು  ಫುಟ್‌ಬಾಲ್‌ನಲ್ಲಿ ಮುಂದುವರಿಯಲು ಹುರಿದುಂಬಿಸಿದರು.

ಪುಣೆ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದೀರಿ. ಇದು ಹೇಗಾಯಿತು?
ಶ್ವೇತಾ ಪುಣೆಯಲ್ಲಿ ಫಿಜಿಯೊ ಆಗಿ ಕಾರ್ಯನಿರ್ವಹಿಸುತ್ತಿದ್ದಳು. 2009ರಲ್ಲಿ ನಾನು ತೀವ್ರ ಗಾಯಕ್ಕೆ ಒಳಗಾಗಿದ್ದೆ. ಆರು ತಿಂಗಳು ಫುಟ್‌ಬಾಲ್ ಆಡಲು ಸಾಧ್ಯವಾಗಿರಲಿಲ್ಲ. ಆ ಸಂದರ್ಭದಲ್ಲಿ ನನಗೆ ಚಿಕಿತ್ಸೆ ನೀಡಿದ್ದು ಶ್ವೇತಾ. ಆಗ ನಿಧಾನವಾಗಿ ನಮ್ಮ ಂಬಂಧ ಬೆಳೆಯಿತು. ನಾನು ಮದುವೆಯ ಪ್ರಸ್ತಾಪ ಇಟ್ಟೆ. ಆಕೆ ಅದಕ್ಕೆ ಒಪ್ಪಿದಳು. ನನಗೆ ಭಾರತದ ಪೌರತ್ವ ದೊರಕಿಸಿಕೊಡಲು ಆಕೆ ತನ್ನ ಹುದ್ದೆ ತೊರೆದು ಪ್ರಯತ್ನಿಸಿದಳು.

ನಿಮ್ಮ ಹಿನ್ನೆಲೆ ಬಗ್ಗೆ ಪರಿಚಯ ಮಾಡಿಕೊಡಿ?
ನಾನು ಮೊದಲು ಜಪಾನ್‌ನ ಪ್ರಸಿದ್ಧ ಜಪಾನ್ ಸಾಕರ್ ಕ್ಲಬ್ ಸೇರಿದೆ. ವೃತ್ತಿಪರ ಆಟಗಾರರೊಂದಿಗೆ ಅಭ್ಯಾಸ ನಡೆಸಲು ಅವಕಾಶ ಲಭಿಸಿತು. 2005ರಲ್ಲಿ ನಾನು ವೃತ್ತಿಪರ ಆಟಗಾರನಾಗಬೇಕು ಎಂಬ ಕನಸು ಹೊಂದಿದ್ದೆ. ಸಿಂಗಪುರಕ್ಕೆ ತೆರಳಿ ಅಲ್ಲಿನ ಕ್ಲಬ್‌ವೊಂದರ ಪರ ಆಡಲು ಶುರು ಮಾಡಿದೆ. ಮತ್ತೆ ಜಪಾನ್‌ಗೆ ತೆರಳಿ ಮಿಟ್ಸುಬಿಶಿ ಮಿಜುಶಿಮ ಫುಟ್‌ಬಾಲ್ ಕ್ಲಬ್‌ನಲ್ಲಿ ಆಡಿದೆ. ಜೀವನದ ನಿರ್ವಹಣೆಗಾಗಿ ನಾನು ಮಿಟ್ಸುಬಿಶಿ ಕಾರು ಕಂಪೆನಿಯಲ್ಲಿ ಕೆಲಸ ಮಾಡಿದೆ. ಆ ಬಳಿಕ ಭಾರತಕ್ಕೆ ಆಗಮಿಸಿದೆ. 2006ರಿಂದ ನಾನು ಇಲ್ಲಿಯೇ ವಿವಿಧ ಕ್ಲಬ್‌ಗಳಲ್ಲಿ ಆಡುತ್ತಿದ್ದೇನೆ. ಮೊದಲು ಈಸ್ಟ್ ಬೆಂಗಾಲ್, ನಂತರ ಮಹೀಂದ್ರಾ ಯುನೈಟೆಡ್ ಹಾಗೂ 2009ರಿಂದ ಪುಣೆ ಫುಟ್‌ಬಾಲ್ ಕ್ಲಬ್ ತಂಡ ಪ್ರತಿನಿಧಿಸುತ್ತಿದ್ದೇನೆ.

ಭಾರತ ತಂಡದಲ್ಲಿಆಡಬೇಕು ಎನಿಸಿದ್ದು ಏಕೆ?
ಫುಟ್‌ಬಾಲ್ ಆಡಲೆಂದು ಭಾರತಕ್ಕೆ ಕಾಲಿರಿಸಿದಾಗಲೇ ಆ ಕನಸು ಶುರುವಾಗಿತ್ತು. ಕ್ಲಬ್‌ಗಳಲ್ಲಿ ತೋರಿದ ಉತ್ತಮ ಪ್ರದರ್ಶನ ನನ್ನ ಆ ಕನಸು ಸಾಕಾರಗೊಳ್ಳಲು ನೆರವಾಯಿತು. ಜೊತೆಗೆ ಇಲ್ಲಿ ನನಗೆ ಹೆಚ್ಚಿನ ಅವಕಾಶ ದೊರೆಯಿತು.

ನಿಮ್ಮ ದೇಶ ಜಪಾನ್ ತಂಡ ಭಾರತಕ್ಕಿಂತ ಬಲಿಷ್ಠವಾಗಿದೆ. ಅಲ್ಲಿಯೇ ಹೆಚ್ಚು ಅವಕಾಶಗಳಿವೆ. ಆದರೂ ಭಾರತ ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣ?
ಜಪಾನ್‌ನಲ್ಲಿ ಅತ್ಯುತ್ತಮ ಆಟಗಾರರಿದ್ದಾರೆ. ಈ ತಂಡ ಕೂಡ ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿದೆ. ರಾಷ್ಟ್ರೀಯ ತಂಡದಲ್ಲಿ ನನಗೆ ಅವಕಾಶ ಸಿಗಲಿಲ್ಲ. ಹಾಗಾಗಿ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಭಾರತ ತಂಡಕ್ಕೆ ಆಡಲು ನನಗೆ ಹೆಮ್ಮೆ ಎನಿಸುತ್ತಿದೆ.

ಭಾರತದ ಪೌರತ್ವ ಪಡೆಯಲು ಕಾರಣ?
ಹಲವು ಕಾರಣಗಳಿವೆ. ಅದರಲ್ಲಿ ಪ್ರಮುಖ ಕಾರಣ ಭಾರತದ ಹುಡುಗಿಯನ್ನು ಮದುವೆಯಾಗಿದ್ದು. ಆಗಲೇ ನಾನು ಇಲ್ಲಿ ನೆಲೆಸಬೇಕೆಂದು ತೀರ್ಮಾನಿಸಿದೆ. ಈ ದೇಶವನ್ನು ನಾನು ಪ್ರೀತಿಸುತ್ತೇನೆ. ಇಲ್ಲಿನ ಜೀವನ ಪದ್ಧತಿ ನನಗೆ ಹಿಡಿಸಿದೆ. 2012ರ ಆಗಸ್ಟ್‌ನಲ್ಲಿ ನಾನು ಭಾರತದ ಪಾಸ್‌ಪೋರ್ಟ್ ಪಡೆದೆ. ಇದೊಂದು ನನ್ನ ಜೀವನದ ಅತ್ಯುತ್ತಮ ನಿರ್ಧಾರ ಎಂದು ಭಾವಿಸಿದ್ದೇನೆ.  ನೀಲಕಾಂತ್ ಎಂದು ಭಾರತದ ಹೆಸರನ್ನು ಕೂಡ ಹೊಂದಿದ್ದೇನೆ.

ಭಾರತ ತಂಡ ಫುಟ್‌ಬಾಲ್‌ನಲ್ಲಿ ಬಲಿಷ್ಠವಾಗಲು ನಿಮ್ಮ ಸೂತ್ರವೇನು?
ಫುಟ್‌ಬಾಲ್‌ನಲ್ಲಿ ತುಂಬಾ ಎತ್ತರದಲ್ಲಿರುವ ದೇಶಗಳಂತೆ ಇಲ್ಲಿನ ಜನರು ಕೂಡ ಫುಟ್‌ಬಾಲ್‌ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಅಲ್ಲಿರುವಂತೆ ಇಲ್ಲೂ ಸೌಲಭ್ಯಗಳಿವೆ. ಆದರೆ ದೈಹಿಕವಾಗಿ ಇಲ್ಲಿನ ಆಟಗಾರರು ಸುಧಾರಿಸಬೇಕು. ಸಂಘಟನೆ, ನಿರ್ವಹಣೆ ವೃತ್ತಿಪರವಾಗಿರಬೇಕು ಅಷ್ಟೆ. ಜಪಾನ್ 15 ವರ್ಷಗಳ ಹಿಂದೆ ಹೇಗಿತ್ತು ಆ ರೀತಿ ಈಗ ಭಾರತದ ಫುಟ್‌ಬಾಲ್ ಇದೆ. ಇದಕ್ಕೆ ತುಂಬಾ ದಿನಗಳು ಬೇಕಾಗುತ್ತದೆ. ಆದರೆ ಉತ್ತಮ ತಂಡವಾಗುವ ಸಾಮರ್ಥ್ಯ ಭಾರತಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT