ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ನಿಯ ಜನ್ಮದಿನಕ್ಕೆ ಪತಿಯ ಸಾವಿನ ಸುದ್ದಿ!

Last Updated 3 ಡಿಸೆಂಬರ್ 2013, 8:43 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮನೆಯಲ್ಲಿ ಆರು ತಿಂಗಳ ಗರ್ಭಿಣಿ ಪತ್ನಿಯ ಜನ್ಮದಿನ. ದೂರದ ಹೈದರಾಬಾದಿನಿಂದ ಶುಭ ಹಾರೈಸಿದ್ದ ಪತಿ ದೀಪಕ್‌, ನಾನಿಲ್ಲದಿದ್ದರೂ ಪರ್ವಾಗಿಲ್ಲ, ಎಲ್ಲರೂ ಸಂಭ್ರಮದಿಂದ ಆಚರಿಸಿ ಎಂದು ರಾತ್ರಿ 12 ಗಂಟೆಯವರೆಗೂ ಮನೆಯಲ್ಲಿದ್ದ ಎಲ್ಲರ ಜೊತೆ ಖುಷಿಯಿಂದ ಮಾತನಾಡಿದ್ದ. ಆದರೆ ನೆಲೆಸಿದ್ದ ಮನೆಯ ಮೂರನೇ ಅಂತಸ್ತಿನಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುದ್ದಿ ಬೆಳಿಗ್ಗೆ ಬಂತು’  

‘ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ವಭಾವ ಅವನದಲ್ಲ. ಅವನ ಮೃತದೇಹದಲ್ಲಿ ತಲೆಭಾಗಕ್ಕೆ ಯಾವುದೇ ಗಾಯ ಆಗಿಲ್ಲ. ಕೈಯ ಮೂಳೆ ಮುರಿದಿದೆ. ಭುಜಕ್ಕೆ ಗಾಯವಾಗಿದೆ. ಈ ಗಾಯದ ಗುರುತುಗಳ ಬಗ್ಗೆಯೂ ನಮಗೆ ಸಂದೇಹವಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅಲ್ಲಿನ ಪೊಲೀಸ್‌ ಅಧಿಕಾರಿಗಳಲ್ಲಿ ವಿನಂತಿಸಿದ್ದೇವೆ’

ಹೈದರಾಬಾದಿನ ಸಿಂಗಪುರ ಟೌನ್‌ಶಿಪ್‌ ಕಟ್ಟಡದ ಮೂರನೇ ಅಂತಸ್ತಿನಿಂದ ಭಾನುವಾರ ಬೆಳಿಗ್ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ನಗರದ ಅರಳಿಕಟ್ಟೆ ಓಣಿಯ ಚೋಳಿನವರ ಓಣಿ ನಿವಾಸಿ, ಸಾಫ್ಟ್‌ವೇರ್‌ ಎಂಜಿನಿಯರ್‌ ದೀಪಕ್‌ ಹಬೀಬ್‌ (34) ಅವರ ಸಹೋದರ ಪ್ರವೀಣ್‌ ಹಬೀಬ್‌ ದುಃಖಿಸುತ್ತಲೇ ಹೇಳಿದರು.

ಹೈದರಾಬಾದಿನ ಗಾಂಧಿ ಆಸ್ಪತ್ರೆಯಿಂದ ಸಹೋದರನ ಮೃತದೇಹ ತೆಗೆದುಕೊಂಡು ಸೋಮವಾರ ಬೆಳಿಗ್ಗೆ ಹುಬ್ಬಳ್ಳಿಗೆ ಹೊರಟಿದ್ದ ಪ್ರವೀಣ್‌, ದೂರವಾಣಿಯಲ್ಲಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿ, ‘ಅಣ್ಣನ ಸಾವಿನ ಹಿಂದೆ ನಿಗೂಢತೆ ಇದೆ’ ಎಂದು ಸಂದೇಹ ವ್ಯಕ್ತಪಡಿಸಿದರು.

‘ಭಾನುವಾರ ಬೆಳಿಗ್ಗೆ ದೀಪಕ್‌ ಸಾವಿನ ಸುದ್ದಿ ಸಿಕ್ಕ ತಕ್ಷಣ ನಾನು ಮತ್ತು ಸುನೀಲ ಹೈದರಾಬಾದಿಗೆ ಹೊರಟೆವು. ಅಲ್ಲಿನ ಗಾಂಧಿ ಆಸ್ಪತ್ರೆಯಲ್ಲಿ ದೀಪಕ್‌ನ ಮೃತದೇಹ ಇರಿಸಿದ್ದರೂ ಭಾನುವಾರ ಆಗಿದ್ದರಿಂದ ಒಳಗೆ ಬಿಡಲಿಲ್ಲ. ಅವನು ತಂಗಿದ್ದ ಮನೆ ಮತ್ತು ಆತ್ಮಹತ್ಯೆ ಮಾಡಿಕೊಂಡಿದ್ದ ಜಾಗವನ್ನು ಪೊಲೀಸರು ತೋರಿಸಿದರು. ಸೋಮವಾರ ಬೆಳಿಗ್ಗೆ ಶವಪರೀಕ್ಷೆ ಬಳಿಕ ದೇಹವನ್ನು ಅಲ್ಲಿನ ಆಸ್ಪತ್ರೆ ಸಿಬ್ಬಂದಿ ಹಸ್ತಾಂತರಿಸಿದ್ದಾರೆ. ಸ್ಥಳಕ್ಕೆ ಬಂದಿದ್ದ ಹೈದರಾಬಾದಿನ ಉನ್ನತ ಪೊಲೀಸ್‌ ಅಧಿಕಾರಿಗಳು ಘಟನೆಯ ಕುರಿತು ತನಿಖೆ ನಡೆಸುವ ಭರವಸೆ ನೀಡಿದ್ದಾರೆ’ ಎಂದರು.

‘ಫಕ್ಕೀರಸಾ ಹಬೀಬ– ಶಾರದಾಬಾಯಿ ಹಬೀಬ್‌ ಅವರಿಗೆ ನಾವು ಐದು ಮಂದಿ ಗಂಡು ಮಕ್ಕಳು. ದೊಡ್ಡವನು ಶ್ರೀನಿವಾಸ.
ಎರಡನೆಯನು ದೀಪಕ್‌. ನಂತರ ನಾನು. ಬಳಿಕ ಸುನಿಲ್‌. ಕೊನೆಯವನು ಅಮೃತ್‌. ಹುಬ್ಬಳ್ಳಿಯಲ್ಲಿ ನಮಗೆ ಎರಡು ಬಟ್ಟೆ ಅಂಗಡಿ ಇದ್ದು, ನಾವು ನಾಲ್ವರು ಸಹೋದರರು ಅಪ್ಪನ ಜೊತೆ ವ್ಯವಹಾರದಲ್ಲಿ ಕೈ ಜೋಡಿಸಿದ್ದೇವೆ. ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ 1995ರಲ್ಲಿ ಬಿಇ (ಮೆಕ್ಯಾನಿಕಲ್‌ ಎಂಜಿನಿಯರಿಂಗ್‌), ಬಳಿಕ ಎಂಬಿಎ ಓದಿದ್ದ ದೀಪಕ್‌, ಕಳೆದ ಎಂಟು ವರ್ಷಗಳಿಂದ ಎಲ್‌ ಅಂಡ್‌ ಟಿ ಕಂಪೆನಿಯಲ್ಲಿ ಕೆಲಸದಲ್ಲಿದ್ದ. 2–3 ತಿಂಗಳಲ್ಲಿ ಸಂಬಳ ಹೆಚ್ಚು ಮಾಡುತ್ತೇವೆ ಎಂದು ಆ ಕಂಪೆನಿಯವರು ಭರವಸೆ ನೀಡಿದ್ದರೂ ಅದನ್ನು ಬಿಟ್ಟು  ಸಂಬಳ ಹೆಚ್ಚು ಸಿಗುತ್ತದೆ ಎಂದು ಹೈದರಾಬಾದಿನಲ್ಲಿ ಇನ್ಫೊಸಿಸ್‌ ಕಂಪೆನಿಗೆ ಸೇರಿದ್ದ’ ಎಂದು ಪ್ರವೀಣ್‌ ವಿವರಿಸಿದರು.

‘ನ. 10ರಂದು ಹೈದರಾಬಾದಿಗೆ ಹೋದ ದೀಪಕ್‌, 11ರಂದು ಅಲ್ಲಿ ಕೆಲಸಕ್ಕೆ ಸೇರಿದ್ದ. ಆರಂಭದಲ್ಲಿ ಎಂಟು ದಿನ ಕಂಪೆನಿ ಕ್ಯಾಂಪಸ್‌ನಲ್ಲಿ ಉಳಿದುಕೊಂಡಿದ್ದ. ನಂತರ ಸಿಂಗಪುರ ಟೌನ್‌ಶಿಪ್‌ ಕಟ್ಟಡದ ಮೊದಲ ಮಹಡಿಯಲ್ಲಿ (ಎ–5) ಮನೆ ಮಾಡಿದ್ದೇನೆ ಎಂದು ತಿಳಿಸಿದ್ದ. ಹೈದರಾಬಾದಿನಲ್ಲಿ ಈಗಷ್ಟೇ ಕೆಲಸಕ್ಕೆ ಸೇರಿದ್ದರಿಂದ ರಜೆ ಸಿಗುತ್ತಿಲ್ಲ. ನವಂಬರ್‌ ತಿಂಗಳ 12 ದಿನದ ಸಂಬಳ ಸಿಕ್ಕಿದೆ. ಹೊಸ ವರ್ಷಕ್ಕೆ ಮನೆಗೆ ಬರುತ್ತೇನೆ ಎಂದು ಅಪ್ಪ, ಅಮ್ಮ, ಪತ್ನಿ ಮತ್ತು ಸಹೋದರರ ಜೊತೆ ಶನಿವಾರ ರಾತ್ರಿ ಮಾತನಾಡಿದ್ದ. ಆದರೆ, ಭಾನುವಾರ ಬೆಳಿಗ್ಗೆ 9.15ಕ್ಕೆ  ಆತ್ಮಹತ್ಯೆಯ ಸುದ್ದಿ ಬಂತು. ಯಾವುದೇ ಕೆಟ್ಟ ಚಟ ಇಲ್ಲದ ಅವನು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇ ಇಲ್ಲ’ ಎಂದು ಪ್ರವೀಣ್‌ ದುಃಖಿಸಿದರು.

‘ದೀಪಕ್‌ಗೆ ಮದುವೆಯಾಗಿ ಮೂರು ವರ್ಷ ಆಗಿದೆ. ದೀಪಾವಳಿಗೆ ಮನೆಗೆ ಬಂದಿದ್ದ ದೀಪಕ್‌, ಆರು ತಿಂಗಳ ಗರ್ಭಿಣಿ ಪತ್ನಿಗೆ ಚಿಕಿತ್ಸೆ ಕೊಡಿಸಿ, ಆರಾಮವಾಗಿರು, ಹೊಸ ಮನೆ ಚೆನ್ನಾಗಿದೆ. ಸದ್ಯದಲ್ಲೇ ಹೈದರಾಬಾದಿಗೆ ಕರೆದುಕೊಂಡು ಹೋಗುತ್ತೇನೆ ಎಂದಿದ್ದ. ಎಲ್ಲ ವಿಷಯವನ್ನು ಮನೆಯವರ ಜೊತೆ ಹಂಚಿಕೊಳ್ಳುತ್ತಿದ್ದ ದೀಪಕ್‌, ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ’ ಎಂದು ಪ್ರವೀಣ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT