ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ನಿಯರ ಹೆಸರಲ್ಲಿ ಗಂಡಂದಿರ ಕಾಳಗ

Last Updated 27 ಜನವರಿ 2012, 19:30 IST
ಅಕ್ಷರ ಗಾತ್ರ

ಮೋಗ (ಪಂಜಾಬ್): ಪಂಜಾಬ್ ವಿಧಾನಸಭೆ ಚುನಾವಣೆ ರಾಜಕಾರಣಿಗಳ `ಹೋರಾಟ~ಕ್ಕಷ್ಟೇ ಸೀಮಿತವಲ್ಲ. ನಿವೃತ್ತ ಐಎಎಸ್-ಐಪಿಎಸ್ ಅಧಿಕಾರಿಗಳು ಮತ್ತು ಅವರ ಪತ್ನಿಯರ `ಸಮರ~ಕ್ಕೂ ವೇದಿಕೆಯಾಗಿದೆ. ನಿವೃತ್ತ ಪೊಲೀಸ್ ಮಹಾನಿರ್ದೇಶಕ ಪಿ.ಎಸ್.ಗಿಲ್, ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ದರ್ಬಾರ್‌ಸಿಂಗ್ ಗುರು, ಮಾನವ ಹಕ್ಕುಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮಹಮದ್ ಮುಸ್ತಾಫ ಪತ್ನಿ ರಜಿಯಾ ಸುಲ್ತಾನ, ಬಂದೀಖಾನೆ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಇಜಾರ್ ಆಲಂ ಪತ್ನಿ ಫರ್ಜಾನ ಆಲಂ ವಿವಿಧ `ಬ್ಯಾನರ್~ನಡಿ ಕಣಕ್ಕೆ ಇಳಿದಿದ್ದಾರೆ.

ಮೋಗದಿಂದ ಗಿಲ್, ಭಡೋರದಿಂದ ದರ್ಬಾರ್‌ಸಿಂಗ್, ಮುಸ್ಲಿಂ ಅಲ್ಪ ಸಂಖ್ಯಾತರ ಪ್ರಾಬಲ್ಯವಿರುವ ಮಲೇರ್‌ಕೋಟ್ಲಾದಿಂದ ರಜಿಯಾ ಸುಲ್ತಾನ ಹಾಗೂ ಫರ್ಜಾನ ಆಲಂ ಆಯ್ಕೆ ಬಯಸಿದ್ದಾರೆ. ಮುಸ್ಲಿಮ್ ಮಹಿಳೆಯರಿಬ್ಬರ `ಮಖಾಮುಖಿ~ಯಿಂದಾಗಿ ಮಲೇರ್‌ಕೋಟ್ಲ ರಾಜ್ಯದ ಗಮನ ಸೆಳೆದಿದೆ. ಇದನ್ನು `ಗಂಡಂದಿರ ಕಾಳಗ~ ಎಂದೇ ಮತದಾರರು ವ್ಯಾಖ್ಯಾನಿಸುತ್ತಿದ್ದಾರೆ.

ಈಚೆಗಷ್ಟೇ ಪೊಲೀಸ್ ಮಹಾನಿರೀಕ್ಷಕ ಮತ್ತು ನಿರ್ದೇಶಕ ಹುದ್ದೆಯಿಂದ ನಿವೃತ್ತಿಯಾದ ಗಿಲ್ ಅಕಾಲಿದಳದ ಅಭ್ಯರ್ಥಿ. 11 ವರ್ಷಗಳ ಹಿಂದೆ ಸಿಖ್ ಉಗ್ರಗಾಮಿಗಳ ಗುಂಡಿಗೆ ಬಲಿಯಾದ ಇವರ ತಂದೆ ನಚತ್ತರ್‌ಸಿಂಗ್ ಎರಡು ಸಲ ಕಾಂಗ್ರೆಸ್ ಶಾಸಕರಾಗಿದ್ದರು. ಜನತಾದಳ ಅಭ್ಯರ್ಥಿ ಸಾಥಿ ರೂಪಲಾಲ್ ವಿರುದ್ಧ ಗೆದ್ದಿದ್ದರು.

ರೂಪಲಾಲ್ ಪುತ್ರ ವಿಜಯ್‌ಸಾಥಿ ಕಾಂಗ್ರೆಸ್ ಟಿಕೆಟ್‌ಗೆ ಪ್ರಯತ್ನಿಸಿ ವಿಫಲರಾಗಿದ್ದಾರೆ. ಹಾಲಿ ಶಾಸಕ ಜೋಂಗಿದರ್ ಪಾಲ್ ಜೈನ್ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ. ಡಾ. ರವೀಂದರ್‌ಸಿಂಗ್ ಧಾರಿವಾಲ್ `ಪಿಪಿಪಿ ಅಭ್ಯರ್ಥಿ.

ಗಿಲ್ ರಾಜಕೀಯಕ್ಕೆ ಹೊಸಬರಾದರೂ ಅವರ ಮನೆತನ ಹಳೆಯದು. ಮೂಲ ಕಾಂಗ್ರೆಸಿಗರ ಕುಟುಂಬ. ಹೆಸರು ಕೆಡಿಸಿಕೊಂಡಿಲ್ಲ. ಒಳ್ಳೆಯ ಮನುಷ್ಯ. ತಂದೆ ಹೆಸರು- ಜನಪ್ರಿಯತೆ ಇವರಿಗೆ ಬಂಡವಾಳ. ಅಕಾಲಿಗಳ ಬೆಂಬಲದ ಜತೆ ಹಳೇ ಕಾಂಗ್ರೆಸ್ ಸಂಬಂಧಗಳನ್ನು ಬೆಸೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಜೋಗಿಂದರ್ ಪಾಲ್ ಹಾಲಿ ಶಾಸಕ. ಕ್ಷೇತ್ರಕ್ಕೆ ಏನೂ ಕೆಲಸ ಮಾಡಲು ಅವರಿಗೆ ಸಾಧ್ಯವಾಗಿಲ್ಲ.

`ಅಕಾಲಿ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕ ಕೆಲಸ ಮಾಡಬೇಕೆಂದು ನಿರೀಕ್ಷಿಸುವುದೇ ಸರಿಯಲ್ಲ. ಅವರ ಮಾತಿಗೆ ಎಲ್ಲಿ ಬೆಲೆ ಇರುತ್ತದೆ. ಆದರೆ, ಪಾಲ್ ಕೂಡಾ ಹೆಸರು ಕೆಡಿಸಿಕೊಂಡಿಲ್ಲ~ ಎಂದು ಮೋಗದ ಹಳೇ ಮಂಡಿ ಅಕ್ಕಿ ಮತ್ತು ಧಾನ್ಯಗಳ ಸಗಟು ವ್ಯಾಪಾರಿ ರಮೇಶ್ ಚಂದರ್ (ಕುಕ್ಕು) ಹೇಳುತ್ತಾರೆ.

ಪ್ರತಿ ದಿನ ಸಂಜೆ ಕುಕ್ಕು ಅಂಗಡಿಯಲ್ಲಿ ರಾಜಕೀಯ ಪಕ್ಷಗಳ ಸ್ಥಳೀಯ ಮುಖಂಡರು ಸೇರುತ್ತಾರೆ. ಬಿಸಿ ಬಿಸಿ ಚರ್ಚೆಗಳು ನಡೆಯುತ್ತದೆ. ಸೋಲು-ಗೆಲುವಿನ ಲೆಕ್ಕಾಚಾರ ಸಾಗುತ್ತದೆ. ಕೆಲವೊಮ್ಮೆ ಮೂರೂ ಪಕ್ಷಗಳ ಅಭ್ಯರ್ಥಿಗಳು ಬಂದು ಹರಟೆ ಹೊಡೆದು, ಚಹಾ ಕುಡಿದು ಹೋಗುತ್ತಾರೆ.

ರವೀಂದರ್‌ಸಿಂಗ್ ಧಾರಿವಾಲ್ ಹಾಲಿನಪುಡಿ, ಚಾಕಲೇಟ್ ತಯಾರಿಕೆ ಕಂಪೆನಿಯೊಂದರ ಮಾಜಿ ಅಧಿಕಾರಿ. ಮೋಗ ಜಿಲ್ಲೆಯಲ್ಲಿ ಸುಮಾರು 500ಹಾಲು ಉತ್ಪಾದಕರ ಸಂಘ ಸ್ಥಾಪನೆ ಮಾಡಿದ್ದಾರೆ. 50ಸಾವಿರಕ್ಕೂ ಹೆಚ್ಚು ಸದಸ್ಯರನ್ನು ನೋಂದಣಿ ಮಾಡಿದ್ದಾರೆ. ಮೋಗ ಕ್ಷೇತ್ರದಲ್ಲೇ ಸುಮಾರು 100ಕ್ಕೂ ಹೆಚ್ಚು ಇಂಥ ಸಂಘಗಳಿವೆ. ಹತ್ತು ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ. ಇವರೆಲ್ಲ ಖಂಡಿತಾ ಪಿಪಿಪಿ ಅಭ್ಯರ್ಥಿ ಬೆಂಬಲಕ್ಕೆ ನಿಲ್ಲುತ್ತಾರೆಂಬ ಮಾತುಗಳು ಕೇಳಿಬರುತ್ತವೆ.

`ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಮಾನ ಪೈಪೋಟಿ ಇದೆ. ಎರಡೂ ಪಕ್ಷಗಳ `ಮತ ಬ್ಯಾಂಕ್~ಗೆ ಪಿಪಿಪಿ ಲಗ್ಗೆ ಹಾಕಿದರೂ ಅಕಾಲಿಗಳಿಗೆ ಹೆಚ್ಚು ಅಡ್ಡಿ ಮಾಡಲಿದೆ~ ಎಂಬುದು ಮೋಗ ಜಿಲ್ಲೆ ಕಾಂಗ್ರೆಸ್ ಚುನಾವಣಾ ವೀಕ್ಷಕ ಮಹಾರಾಷ್ಟ್ರದ ಶ್ರೀಕೃಷ್ಣ ಸಾಂಗಳೆ ವಿಶ್ವಾಸ. `ಈ ಸಲ ಜಿಲ್ಲೆಯಲ್ಲಿ ಕಾಂಗ್ರೆಸ್ ಅಕಾಲಿದಳಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎನ್ನುವ ವಿಶ್ವಾಸ ಅವರದು.

`ಮೋಗದಲ್ಲಿ ಮೂಲಸೌಲಭ್ಯಗಳ ಕೊರತೆಯಿದೆ. ಅಂತರ್ಜಲ ಕಲುಷಿತಗೊಂಡಿದ್ದು ಕುಡಿಯಲು ಯೋಗ್ಯವಾಗಿಲ್ಲ. ನೀರಿನಲ್ಲಿ ಪರಮಾಣು ಅಂಶ ಪತ್ತೆಯಾಗಿದೆ~ ಎಂದು ಸಾಮಾಜಿಕ ಕಾರ್ಯಕರ್ತ ಬಲ್ವಿಂದರ್ ಸಮಸ್ಯೆಗಳನ್ನು ಬಿಡಿಸಿಡುತ್ತಾರೆ. ಈ ಕ್ಷೇತ್ರದಲ್ಲಿ ಸುತ್ತಾಡಿದರೆ ಅವರ ಮಾತು ಉತ್ಪ್ರೇಕ್ಷೆಯಲ್ಲ ಎಂದನಿಸುತ್ತದೆ.

ಭಡೋರದಲ್ಲಿ ದರ್ಬಾರ್‌ಸಿಂಗ್ ಅವರಿಗೆ ಸವಾಲು ಹಾಕಿರುವುದು ಜಾನಪದ ಗಾಯಕ ಮೊಹಮದ್ ಸಾದಿಕ್. ಇದೊಂದು ಅಪರೂಪದ  ಸ್ಪರ್ಧೆ. ಅಧಿಕಾರದಲ್ಲಿ ಇರುವವರೆಗೂ ಜನರ ಸಂಪರ್ಕದಿಂದ ದೂರವೇ ಉಳಿದಿದ್ದ ಈ `ವೈಟ್ ಕಾಲರ್~ ರಾಜಕಾರಣಿಗೀಗ ಜನರು ಬೇಕು. ಅವರ ಬೆಂಬಲ ಬೇಕು. ಇದನ್ನು ಸಾಧಿಸಲು ಸಾಧ್ಯವಾದ ಎಲ್ಲ ಕಸರತ್ತುಗಳನ್ನು ಮಾಡುತ್ತಿದ್ದಾರೆ.

`ನಾನೊಬ್ಬ ಸಾಮಾನ್ಯ ರೈತನ ಮಗ. ನನ್ನ ಬಳಿಯೂ ರಾಸುಗಳಿವೆ. ಕೆಳಮಟ್ಟದಲ್ಲೂ ಜನರ ಸಂಪರ್ಕವಿದೆ. ಸಮಸ್ಯೆಗಳ ಅರಿವೂ ಇದೆ. ಅಧಿಕಾರಿಯಾಗಿ ಪಡೆದುಕೊಂಡಿರುವ ಅನುಭವವನ್ನು ಜನರ ಕಲ್ಯಾಣಕ್ಕೆ ಬಳಸುತ್ತೇನೆ~ ಎಂದು ಜನರನ್ನು ಭಾವನಾತ್ಮಕವಾಗಿ ಮೋಡಿ ಮಾಡಲು ಪ್ರಯತ್ನಿಸುತ್ತಾರೆ. ಅಧಿಕಾರಿಯಾಗಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು `ಬಂಡವಾಳ~ ಮಾಡಿಕೊಳ್ಳಲು ಹವಣಿಸುತ್ತಿದ್ದಾರೆ.

ಜನಪದ ಗಾಯಕ ಮೊಹಮದ್ ಸಿದ್ದಿಕ್ ರಾಜಕೀಯಕ್ಕೆ ಹೊಸಬರಾದರೂ ತಮ್ಮ ಹಾಡುಗಳ ಮೂಲಕ ಜನರಿಗೆ ಪರಿಚಯವಾಗಿದ್ದಾರೆ. ಜನರ ಜತೆಗಿನ ಉತ್ತಮ ಸಂಬಂಧವೇ ಅವರಿಗೆ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಟ್ಟಿದೆ.
 
ಕಳೆದ ಕೆಲವು ದಶಕಗಳಿಂದ ಹಾಡುತ್ತಿರುವ ಸಾದಿಕ್ ಸಾರ್ವಜನಿಕ ಸಭೆಗಳಲ್ಲಿ ದರ್ಬಾರ್‌ಸಿಂಗ್ ಅವರ `ವೈಟ್ ಕಾಲರ್~ ನಡವಳಿಕೆಯನ್ನು ಜನರಿಗೆ ನೆನಪು ಮಾಡುತ್ತಿದ್ದಾರೆ. ಅಧಿಕಾರದಲ್ಲಿ ಇರುವವರೆಗೂ ನಿಮ್ಮನ್ನು ಕಡೆಗಣಿಸಿದ ಗುರು ಗೆದ್ದು ಹೋದ ಬಳಿಕ ಅದನ್ನೇ ಮಾಡುತ್ತಾರೆ ಎಂದು ಎಚ್ಚರಿಸುತ್ತಿದ್ದಾರೆ.

ಹಾಲಿ- ಮಾಜಿಗಳ `ಜಟಾಪಟಿ~
ಮಲೇರಕೋಟ್ಲದಲ್ಲಿ ರಜನಿ ಸುಲ್ತಾನ ಹಾಗೂ ಫರ್ಜಾನ ಸುಲ್ತಾನ ಸ್ಪರ್ಧೆ ನೆಪಕ್ಕೆ ಮಾತ್ರ. ಮುಸ್ಲಿಂ ಮತದಾರರ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ನಿಜವಾದ `ಜಟಾಪಟಿ~ ನಡೆದಿರುವುದು ಇವರಿಬ್ಬರ ಗಂಡಂದಿರ ನಡುವೆ. ರಜಿಯಾ ಪತಿ ಮಹಮದ್ ಮುಸ್ತಾಫ ಸದ್ಯ ಮಾನವ ಹಕ್ಕುಗಳ ವಿಭಾಗದ `ಎಡಿಜಿಪಿ~. ಎರಡು ಸಲ ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ರಜಿಯಾಗೆ ಇದು ಮೂರನೇ ಟೆಸ್ಟ್. ಬಂದೀಖಾನೆ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಇಜಾರ್ ಆಲಂ ಪತ್ನಿ ಫರ್ಜಾನ ಆಲಂಗೆ ಇದು ಚೊಚ್ಚಲ ಟೆಸ್ಟ್.

ಹೆಂಡತಿಯರ ಪರ ಇಬ್ಬರೂ ಬಹಿರಂಗ ಪ್ರಚಾರಕ್ಕೆ ಇಳಿದಿದ್ದಾರೆ. ಮುಸ್ತಾಫ ಇದರಿಂದ ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗದ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ವೈದ್ಯಕೀಯ ರಜೆ ಪಡೆದಿರುವ ಎಡಿಜಿಪಿ ಪತ್ನಿ ಪರ ಪ್ರಚಾರ ನಡೆಸುತ್ತಿದ್ದಾರೆಂದು ಅಕಾಲಿದಳದ ಮುಖಂಡರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ದೂರು ಪರಿಶೀಲಿಸಿದ ಆಯೋಗ ಪೊಲೀಸ್ ಅಧಿಕಾರಿ ಮನೆ ಮುಂದೆ ಬಿಗಿ ಕಾವಲು ಹಾಕಿದೆ.  ಈ ಅಧಿಕಾರಿ ಮನೆ ಬಿಟ್ಟು ಹೊರ ಬರದಂತೆ ನಿಗಾ ವಹಿಸಿದೆ.

ಮಲೇರ್‌ಕೋಟ್ಲ ಹೊರ ವಲಯದಲ್ಲಿರುವ ಪೊಲೀಸ್ ಅಧಿಕಾರಿ ಮನೆ ಬಳಿ ಹೋದರೆ ಹೊರ ರಾಜ್ಯಗಳ ಪೊಲೀಸರು ಪಾಳಿ ಮೇಲೆ ಕಾವಲು ಕಾಯುತ್ತಿರುವುದು ಕಣ್ಣಿಗೆ ಬೀಳುತ್ತದೆ. ರಾಜ್ಯ ಸರ್ಕಾರ ಇವರನ್ನು ವೈದ್ಯಕೀಯ ತಜ್ಞರನ್ನು ಒಳಗೊಂಡ ಮಂಡಳಿ ತಪಾಸಣೆಗೆ ಒಳಪಡಿಸಿದ್ದು ಇನ್ನು ವರದಿ ಬಂದಿಲ್ಲ ಎಂದು ಅಕಾಲಿದಳದ ಮುಖಂಡರು ಹೇಳುತ್ತಾರೆ.

ರಜಿಯಾ ತನ್ನ ಎದುರಾಳಿ ಹೊರಗಿನವರು ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಎರಡು ಅವಧಿಗೆ ಶಾಸಕರಾಗಿ ತಾವು ಮಾಡಿರುವ ಕೆಲಸ ಪರಿಗಣಿಸಿ ಮತ ಕೊಡುವಂತೆ ಮನವಿ ಮಾಡುತ್ತಿದ್ದಾರೆ. ಪ್ರತಿಯಾಗಿ ಫರ್ಜಾನಾ ಈಚೆಗೆ ನಾವು ಮಲೇರ್ ಕೋಟ್ಲಾಕ್ಕೆ ಬಂದಿರಬಹುದು. `ಮತದಾರರು ನಮ್ಮನ್ನು ಒಪ್ಪಿಕೊಳ್ಳುತ್ತಿದ್ದಾರೆ. ಪತಿ ವಕ್ಫ್  ಮಂಡಳಿ ಅಧ್ಯಕ್ಷರಾಗಿದ್ದಾಗ ತೆರೆದಿರುವ ಶಾಲೆ, ಆಸ್ಪತ್ರೆ ಬಗೆಗೆ ವಿವರಿಸುತ್ತಾರೆ.

ಒಟ್ಟಿನಲ್ಲಿ ಮಲೇರ್‌ಕೋಟ್ಲದಲ್ಲಿ ಮಹಿಳೆಯರ ಹೆಸರಿನಲ್ಲಿ ಹಾಲಿ-ಮಾಜಿ ಪೊಲೀಸ್ ಅಧಿಕಾರಿಗಳಿಬ್ಬರ `ಕಾದಾಟ~ ನಡೆದಿದೆ. ಇದು ಮತದಾರಿರಿಗೆ ಮನರಂಜನೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT