ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತರಿಗೆ ಪ್ರಶಸ್ತಿ ಸಲ್ಲ: ಮದನಮೋಹನ್

Last Updated 19 ಜನವರಿ 2012, 5:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ರಾಜ್ಯದ ಯಾವುದೇ ಪತ್ರಿಕೆಗಳ ಮುಖ್ಯವಾಹಿನಿಯ ಪತ್ರ ಕರ್ತರು ಕಳಂಕರಹಿತರಾಗಿಲ್ಲ. ಹಾಗಿದ್ದರೂ ಮಾಧ್ಯಮ ಅಕಾಡೆಮಿ ಅಥವಾ ಸರ್ಕಾರ ಯಾವ ಮಾನ ದಂಡದ ಮೇಲೆ ಅವರಿಗೆ ಪ್ರಶಸ್ತಿಗಳನ್ನು ನೀಡುತ್ತಿದೆ~ ಎಂದು ಹಿರಿಯ ಪತ್ರಕರ್ತ ಎಂ.ಮದನ ಮೋಹನ ಪ್ರಶ್ನಿಸಿದರು.

ಉತ್ತರ ಕರ್ನಾಟಕ ಮಾಧ್ಯಮ ಪ್ರತಿಷ್ಠಾನ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾಧ್ಯಮ ಕುರಿತ ವಿಶೇಷ ಉಪನ್ಯಾಸ ಹಾಗೂ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

`ಕಳಂಕಿತರಿಗೆ ಪ್ರಶಸ್ತಿ ಕೊಟ್ಟರೆ ಅವರ ಕೆಲಸಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ. ಪತ್ರಕರ್ತ ಮಾಡಿದ ಕೆಲಸದ ಮೌಲ್ಯಮಾಪನ ಮಾಡದೆ ಪ್ರಶಸ್ತಿ ಕೊಡುವುದರಿಂದ ಯಾವುದೇ ಉಪಯೋಗವಿಲ್ಲ. ಪ್ರಶಸ್ತಿಯನ್ನು ಯಾವ ಮಾನದಂಡದ ಮೇಲೆ ನೀಡಲಾಗಿದೆ. ಪ್ರಶಸ್ತಿ ಪುರಸ್ಕೃತರು ಏನು ಕೆಲಸ ಮಾಡಿದ್ದಾರೆ~ ಎಂಬುದನ್ನು ಮಾಧ್ಯಮ ಅಕಾಡೆಮಿ ಪ್ರತೀ ವರ್ಷ ಸಾರ್ವಜನಿಕವಾಗಿ ಸ್ಪಷ್ಟಪಡಿಸಲಿ ಎಂದರು.

`ಮಾಧ್ಯಮಗಳಿಗೆ ಪ್ರಶಸ್ತಿ ಕೊಡುವ ಪರಿಪಾಠವೇ ಸರಿಯಲ್ಲ. ಅದು ನಾಚಿಕೆಗೇಡಿನ ಸಂಗತಿ. ಸರ್ಕಾರ ಪತ್ರಕರ್ತರಿಗೆ ಶ್ರೇಷ್ಠತೆಯ ಮುದ್ರೆ ಹಾಕುವ ಕೆಲಸ ಏಕೆ ಮಾಡಬೇಕು ಎಂದು ಪ್ರಶ್ನಿಸಿದ ಅವರು, ಮಾಧ್ಯಮ ಸಂಸ್ಥೆ ಹಾಗೂ ಪತ್ರಕರ್ತ ತನ್ನ ಹೊಣೆ ಗಾರಿಕೆಯನ್ನು ಸರಿಯಾಗಿ ನಿರ್ವಹಿಸಿ ದಾಗ ಜನರು ನೀಡುವ ಪ್ರಶಂಸೆಯೇ ಪ್ರಶಸ್ತಿಯಾಗಬೇಕಿದೆ.
 
ಅನರ್ಹರಿಗೆ ಟಿ.ಎಸ್.ಆರ್ ಪ್ರಶಸ್ತಿ ನೀಡುವ ಮೂಲಕ ಹಾಗೂ ಇತ್ತೀಚೆಗೆ ಮೊಹರೆ ಹಣಮಂತರಾಯ ಹೆಸರಿನಲ್ಲಿ ಪ್ರಶಸ್ತಿ ನೀಡಲು ಸರ್ಕಾರ ಮುಂದಾಗುವ ಮೂಲಕ ಅಂತಹ ಮಹನೀಯರ ಹೆಸರಿಗೆ ಕಳಂಕ ಹಚ್ಚುವ ಕೆಲಸ ನಡೆಯುತ್ತಿದೆ~ ಎಂದು ಬೇಸರ ವ್ಯಕ್ತ  ಪಡಿಸಿದರು.`ಕಳೆದ ಮೂರು ವರ್ಷಗಳಿಂದ ಅರ್ಹರು ಪ್ರಶಸ್ತಿ ಪಡೆದರೂ ಅವಮಾನ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಧ್ಯಮಗಳಿಗೆ ಮಾಡಲು ಸಾಕಷ್ಟು ಕೆಲಸವಿದೆ. ಸರ್ಕಾರ ಯಾವ ಪುರುಷಾರ್ಥಕ್ಕೆ ಪ್ರಶಸ್ತಿಗಳ ಹೆಸರಲ್ಲಿ ಮಾಧ್ಯಮ ಮಂದಿಯನ್ನು ಓಲೈಸುವ ಕೆಲಸ ಮಾಡುತ್ತಿದೆ~ ಎಂದರು.

ಪತ್ರಕರ್ತರಿಗೆ ಅಹಂಕಾರ ಸಲ್ಲ. ತಾವು ಬರೆದದ್ದೇ ದೊಡ್ಡದರು ಎಂಬ ಭಾವನೆ ತಲೆಗೇರಿದಾಗ ವಾಸ್ತವಿಕತೆಯ ಪ್ರಜ್ಞೆ ಕಳೆದುಕೊಳ್ಳುತ್ತೇವೆ. ಪತ್ರಕರ್ತ ಸದಾ ಅಧ್ಯಯನಶೀಲನಾಗಬೇಕು. ತಾನು ಯಾವಾಗಲೂ ವಿದ್ಯಾರ್ಥಿ ಎಂಬ ಭಾವನೆ ಅವನಲ್ಲಿ ಇರಬೇಕು. ವೃತ್ತಿಯ ಸ್ಪರ್ಧಾತ್ಮಕತೆ ಎದುರಿಸುವ ಛಾತಿ ಬೆಳೆಸಿಕೊಳ್ಳುವಂತೆ ಹೊಸದಾಗಿ ಪತ್ರಿಕೋದ್ಯಮಕ್ಕೆ ಬರುವವರಿಗೆ ಸಲಹೆ ನೀಡಿದರು.

ಪತ್ರಿಕೋದ್ಯಮ ಸಮಾಜ ಸೇವೆ ಅಲ್ಲ. ಪತ್ರಕರ್ತರಿಗೆ ಹೊಟ್ಟೆ ಹೊರೆಯಲು ಒಂದು ಕೆಲಸ ಮಾತ್ರ. ಸಂಸ್ಥೆ ಸಂಬಳ ನೀಡುತ್ತದೆ. ನಾವು ಕೆಲಸ ಮಾಡುತ್ತೇವೆ ಅನಗತ್ಯ ಹೆಚ್ಚುಗಾರಿಕೆ ಬೆಳೆಸಿಕೊಳ್ಳುವ ಅಗತ್ಯವಿಲ್ಲ. ವೈಚಿತ್ರ್ಯವೆಂದರೆ ಪತ್ರಿಕೋದ್ಯಮ ವಿಭಾಗಗಳ ಅಧ್ಯಾಪಕರು ನಿತ್ಯ ಪತ್ರಿಕೆ ಓದದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಎನ್.ಮಂಜುನಾಥ ಭಟ್,  ಹಿರಿಯ ಪತ್ರಕರ್ತ ಕೆ.ಬಿ.ಪಾಟೀಲ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.

ಆರೂರು ಲಕ್ಷ್ಮಣ್‌ಶೇಟ್, ಡಾ.ಪಾಂಡುರಂಗ ಪಾಟೀಲ, ಲಿಂಗರಾಜ ಕೆ.ಪಾಟೀಲ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT