ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿ

Last Updated 9 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಪತ್ರಿಕೆಗಳ ಪ್ರಸಾರಕ್ಕೆ ತಡೆ ಒಡ್ಡುವುದು ಅಭಿವ್ಯಕ್ತಿ ಸ್ವಾತಂತ್ರ್ಯ ದಮನದ ಪ್ರಯತ್ನ. ಪತ್ರಿಕೆಗಳಲ್ಲಿ ತಮಗೆ ಹಿಡಿಸದ ಸುದ್ದಿಗಳು ಇರುತ್ತವೆ ಎಂಬ ಕಾರಣಕ್ಕೆ ಅವುಗಳ ಪ್ರಸರಣಕ್ಕೆ ತಡೆ ಒಡ್ಡುವುದು ಜನರಿಗೆ ಸಿಗಬೇಕಾದ ಮಾಹಿತಿಗಳನ್ನು ತಪ್ಪಿಸುವ ಯತ್ನ.

ಇದು ಜನರ ಹಕ್ಕನ್ನು ಕಿತ್ತುಕೊಳ್ಳುವ ದುಷ್ಟತನ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿಗೆ ಬುಧವಾರದ ಯಾವ ಪತ್ರಿಕೆಗಳೂ ಬರದಂತೆ, ಕೆಲವು ಪುಂಡರು ಅಡ್ಡಿಪಡಿಸುವ ಮೂಲಕ ಪಾಳೇಗಾರಿಕೆ ವರ್ತನೆಯನ್ನು ಪ್ರದರ್ಶಿಸಿದ್ದಾರೆ. ವಾಹನಗಳನ್ನು ದರೋಡೆಕೋರರಂತೆ ತಡೆದು ಪತ್ರಿಕೆಗಳನ್ನು ಲೂಟಿ ಮಾಡಿದ್ದಾರೆ.

ಇದು ರಾಜಕೀಯ ವ್ಯಕ್ತಿಗಳ ಪ್ರಚೋದನೆ, ಬೆಂಬಲ ಇಲ್ಲದೆ  ನಡೆಯುವ ಕೃತ್ಯವಲ್ಲ. ಪತ್ರಿಕೆಗಳನ್ನಲ್ಲದೆ, ಆ ಭಾಗದ ಚಾನೆಲ್‌ಗಳಿಗೆ ಅಡ್ಡಿಯಾಗುವಂತೆ ವಿದ್ಯುತ್ ಪೂರೈಕೆ ನಿಲ್ಲಿಸಿ ಕೇಬಲ್ ಪ್ರಸಾರಕ್ಕೂ ಅಡ್ಡಿಪಡಿಸಿರುವುದರಿಂದ ಇದರಲ್ಲಿ, ರಾಜಕೀಯವಾಗಿ ಪ್ರಬಲರಾಗಿದ್ದು ಆಡಳಿತಯಂತ್ರವನ್ನು ನಿಯಂತ್ರಿಸಬಲ್ಲ ಪ್ರಭಾವಿಗಳ ಕೈವಾಡ ಇರುವುದು ಸ್ಪಷ್ಟ. ಇದು ರಾಜಕೀಯ ಅಧಿಕಾರದ ದುರುಪಯೋಗ.
 
ಜನತೆಯ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ ಜನಪ್ರತಿನಿಧಿ ಇದ್ದರೂ ಇಂಥ ಘಟನೆ ನಡೆದಿರುವುದು ತುಂಬ ಗಂಭೀರವಾದ ಸಂಗತಿ. ಇಂಥ ಪುಂಡಾಟಿಕೆ, ಬೆದರಿಕೆಗಳಿಂದ ಪತ್ರಿಕೆ ಮತ್ತು ಮಾಧ್ಯಮಗಳು ತಮ್ಮ ಕರ್ತವ್ಯ ನಿರ್ವಹಿಸಲು ಅಡ್ಡಿಯಾಗಿದೆ.
 
ಈ ಗೂಂಡಾ ಪ್ರವೃತ್ತಿ ರಾಜ್ಯವನ್ನು ಅರಾಜಕತೆಯತ್ತ ದೂಡುತ್ತದೆ ಎಂಬುದನ್ನು ರಾಜ್ಯ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಈ ಪುಂಡಾಟಿಕೆಯನ್ನು ರಾಜ್ಯ ಸರ್ಕಾರ ಲಘುವಾಗಿ ಪರಿಗಣಿಸಿರುವುದು ಖಂಡನೀಯ.

ಪತ್ರಿಕೆಗಳನ್ನು ದರೋಡೆ ಮಾಡಿದ ವ್ಯಕ್ತಿಗಳು ಮತ್ತು ಅವರಿಗೆ ಪ್ರೇರಣೆ ನೀಡಿದವರು ಯಾರು ಎಂಬುದನ್ನು ಪೊಲೀಸರು ಪತ್ತೆ ಹಚ್ಚಿ ಮೊಕದ್ದಮೆ ಹೂಡಿ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ರಾಜ್ಯದ ಬಿಜೆಪಿ ಸರ್ಕಾರದ ಬದ್ಧತೆಯ ಬಗ್ಗೆಯೇ ಸಂಶಯ ಮೂಡುತ್ತದೆ.   

ವಿಧಾನಸಭೆಯಲ್ಲಿ ಅಶ್ಲೀಲ ದೃಶ್ಯಾವಳಿ ವೀಕ್ಷಿಸಿ ಸಿಕ್ಕಿಬಿದ್ದ ಸುದ್ದಿ ಮತ್ತು ಅದಕ್ಕೆ ಸಂಬಂಧಪಟ್ಟ ವರದಿಗಳು ಅಥಣಿ ವಿಧಾನಸಭಾ ಕ್ಷೇತ್ರದ ಮತದಾರರಿಗೆ ತಿಳಿಯಬಾರದು ಎಂಬ ಕಾರಣದಿಂದಲೇ ಹೀಗೆ ಅನಧಿಕೃತ `ಸೆನ್ಸಾರ್‌ಶಿಪ್~ ಜಾರಿಯಾಗಿದ್ದನ್ನು ಗಮನಿಸಿದರೆ, ಇದರಲ್ಲಿ ಸಂಬಂಧಪಟ್ಟ ಜನಪ್ರತಿನಿಧಿಯ ಕೈವಾಡ ಇರುವ ಶಂಕೆ ಮೂಡುತ್ತದೆ.
 
ಪತ್ರಿಕೆಗಳ ಪ್ರಸಾರಕ್ಕೆ ಹೀಗೆ ಅಡ್ಡಿಪಡಿಸುವುದು 1975ರ ಅವಧಿಯ ತುರ್ತು ಪರಿಸ್ಥಿತಿಯನ್ನು ನೆನಪಿಸುವ ಸರ್ವಾಧಿಕಾರ ಧೋರಣೆ. ಸಂವಿಧಾನದ ಆಶಯವೇ ಆದ ಪತ್ರಿಕಾ ಸ್ವಾತಂತ್ರ್ಯ ರಕ್ಷಣೆಗೆ ಬಿಜೆಪಿ ನಿಜಕ್ಕೂ ಪ್ರಾಮಾಣಿಕ ಬದ್ಧತೆ ಹೊಂದಿದ್ದರೆ, ಮಾಧ್ಯಮಗಳನ್ನು ನಿಯಂತ್ರಿಸಲು ಹೊರಟ ಇಂಥ ಪುಂಡರ ವಿರುದ್ಧ ತುರ್ತಾಗಿ ತನಿಖೆ ಆರಂಭಿಸಬೇಕು.
 
ಅವರು ತಮ್ಮ ಪಕ್ಷದವರೇ ಆಗಿದ್ದರೆ, ಸಂಸದೀಯ ಪ್ರಜಾಸತ್ತೆಯಲ್ಲಿ ಪಾಳೇಗಾರಿಕೆ ಪ್ರವೃತ್ತಿಗಾಗಲೀ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡುವ ನಿರಂಕುಶ ಧೋರಣೆಗಾಗಲೀ ಅವಕಾಶ ಇಲ್ಲ ಎಂಬುದನ್ನು ಮನವರಿಕೆ ಮಾಡಿಕೊಡುವಂತೆ, ಅವರನ್ನು ಪಕ್ಷದಿಂದಲೇ ಉಚ್ಚಾಟಿಸಬೇಕು. ಅವರಿಗೆ ಜೊತೆ ನೀಡಿದ ಬೆಂಬಲಿಗರನ್ನು ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಿಸಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT