ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಿಕೆ ಕೊಂಡು ಓದುವ ಹವ್ಯಾಸ ಬೆಳೆಯಲಿ

Last Updated 25 ಫೆಬ್ರುವರಿ 2011, 8:20 IST
ಅಕ್ಷರ ಗಾತ್ರ

ಮುಧೋಳ: ಓದುಗರೇ ಪತ್ರಿಕೆಗಳ ಪ್ರಭುಗಳು. ಓದುಗರು ಹೆಚ್ಚು ಬೆಲೆಗೆ ಪತ್ರಿಕೆಗಳನ್ನು ಕೊಂಡು ಓದಿದಾಗ ಮಾತ್ರ ಪತ್ರಿಕೆಗಳು ಜಾಹೀರಾತಿನ ಹಿಡಿತದಿಂದ ಪಾರಾಗಲು ಸಾಧ್ಯ ಎಂದು ‘ಪ್ರಜಾವಾಣಿ’ ಸಹಸಂಪಾದಕ ಪದ್ಮರಾಜ ದಂಡಾವತಿ ಇಲ್ಲಿ ಹೇಳಿದರು.‘ಪತ್ರಿಕೋದ್ಯಮ, ಸಾಹಿತ್ಯ ಹಾಗೂ ಸಮಾಜ’ ವಿಷಯ ಕುರಿತು ನಗರದ ಜಗನ್ನಾಥರಾವ್ ಟಂಕಸಾಲಿ ಸಭಾಭವನದಲ್ಲಿ ಗುರುವಾರ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

’ಸಾಮಾನ್ಯವಾಗಿ ಒಂದು ಪತ್ರಿಕೆ ತಯಾರಿಸಲು ಸುಮಾರು 8-10 ರೂಪಾಯಿ ಬೇಕು. ಆದರೆ ಪತ್ರಿಕೆಯನ್ನು 3 ರೂಪಾಯಿಗೆ ಮಾರಾಟ ಮಾಡಿ, ಉತ್ಪಾದನಾ ವೆಚ್ಚವನ್ನು ಜಾಹೀರಾತಿನ ಹಣದಿಂದ ಭರಿಸಲಾಗುತ್ತದೆ. ಓದುಗರು ಹೆಚ್ಚು ಬೆಲೆಗೆ ಪತ್ರಿಕೆ ಕೊಂಡುಕೊಂಡರೆ ಜಾಹೀರಾತಿನ ಮೇಲೆ ಅವಲಂಬಿಸುವುದು ತಪ್ಪುತ್ತದೆ. ಮಹಾರಾಷ್ಟ್ರ, ಕೇರಳ, ತಮಿಳುನಾಡಿನಲ್ಲಿ ಪತ್ರಿಕೆ ಕೊಂಡು ಓದುವವರ ಸಂಖ್ಯೆ ಕರ್ನಾಟಕಕ್ಕೆ ಹೋಲಿಸಿದರೆ ಹೆಚ್ಚು ಇದೆ’ ಎಂದರು.

‘ನೆರೆಯ ಪಾಕಿಸ್ತಾನ, ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾಕ್ಕೆ ಹೋಲಿಸಿದರೆ ಭಾರತದಲ್ಲಿ ಪತ್ರಿಕೆಗಳು ಕಡಿಮೆ ಬೆಲೆಗೆ ದೊರಕುತ್ತಿವೆ. ಆದರೂ ಕಡಿಮೆ ಬೆಲೆಗೆ ಪತ್ರಿಕೆ ದೊರಕಲಿ ಎಂದು ಓದುಗರು ಬಯಸುತ್ತಾರೆ’ ಎಂದು ಅವರು ಅಭಿಪ್ರಾಯಪಟ್ಟರು.ಓದುಗರೇ ಪತ್ರಿಕೆಯ ನಿಜವಾದ ಮಾಲೀಕರು. ಪತ್ರಿಕೆಗಳು ತಪ್ಪಿದಾಗ ಕಿವಿ ಹಿಂಡುವ ಮತ್ತು ಒಳ್ಳೆಯದನ್ನು ಮಾಡಿದಾಗ ಬೆನ್ನುಚಪ್ಪರಿಸುವ ಕೆಲಸ ಮಾಡಬೇಕಾದ ಹೊಣೆಗಾರಿಕೆಯೂ ಓದುಗರ ಮೇಲಿದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.

ಸಮಾಜದಲ್ಲಿ ಪತ್ರಿಕೆಗಳ ಪಾತ್ರ ಬಹುಮುಖ್ಯ. ಗಲಭೆ ಸಂದರ್ಭದಲ್ಲಿ ಸಮಾಜದ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ಮುದ್ರಣ ಮಾಧ್ಯಮದಲ್ಲಿ ಧರ್ಮ, ಜಾತಿಯ ಹೆಸರುಗಳನ್ನು ಪ್ರಕಟಿಸದೆ ವರದಿ ಮಾಡಲಾಗುತ್ತದೆ. ಆದರೆ ಇನ್ನೊಂದೆಡೆ ದೃಶ್ಯಮಾಧ್ಯಮ ಅವಶ್ಯವಿಲ್ಲದ್ದನ್ನು ತೋರಿಸುವುದರೊಂದಿಗೆ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ ಎಂದು ದಂಡಾವತಿ ಕಳವಳ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ ಶಂಕರಗೌಡ ಸೋಮನಾಳ ಮಾತನಾಡಿ, ಆಡಳಿತದಲ್ಲಿ ಪಾರದರ್ಶಕತೆ ರೂಢಿಸಿಕೊಂಡರೆ ಭ್ರಷ್ಟಾಚಾರ ಕಡಿಮೆಯಾಗುತ್ತದೆ. ಸಮಾಜ ಸುಧಾರಣೆಯಲ್ಲಿ ಪತ್ರಿಕೆಗಳ ಪಾತ್ರ ಬಹು ಮುಖ್ಯವಾಗಿದೆ ಎಂದು  ಹೇಳಿದರು.

ಅತಿಥಿಗಳಾಗಿ ಕಾ.ನಿ.ಪ. ಸಂಘದ ಗೌರವ ಅಧ್ಯಕ್ಷ ಅಶೋಕ ಕುಲಕರ್ಣಿ ಮಾತನಾಡಿದರು. ಕಸಾಪ ಅಧ್ಯಕ್ಷ ಎನ್.ವಿ. ತುಳಸೀಗೇರಿ ಭಾಗವಹಿಸಿದ್ದರು. ತಾಲ್ಲೂಕಿನ ‘ಪ್ರಜಾವಾಣಿ’ ಓದುಗರ ಬಳಗ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದಿಂದ, ತಾಲ್ಲೂಕು ಆಡಳಿತದಿಂದ ಪ್ರತ್ಯೇಕವಾಗಿ ಪದ್ಮರಾಜ ದಂಡಾವತಿ ಅವರಿಗೆ ಸನ್ಮಾನಿಸಲಾಯಿತು.ವಿ.ಎಸ್. ಮುನವಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಸಾಹಿತಿ ಸಂಗಮೇಶ ಕೋಟಿ ಪರಿಚಯಿಸಿದರು. ಡಾ.ಸಂಗಮೇಶ ಕಲ್ಯಾಣಿ ಕಾರ್ಯಕ್ರಮ ನಿರೂಪಿಸಿದರು. ಬಿ.ಎಚ್. ಬೀಳಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT