ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಿವನದ ಶಂಭುಲಿಂಗ

Last Updated 23 ನವೆಂಬರ್ 2011, 19:30 IST
ಅಕ್ಷರ ಗಾತ್ರ

 ಗದಗ ಜಿಲ್ಲೆಯ ನರಗುಂದ ಐತಿಹಾಸಿಕ ಪಟ್ಟಣ. ಬ್ರಿಟಿಷರ ಆಡಳಿತರ ವಿರುದ್ಧ ನರಗುಂದ ಸಂಸ್ಥಾನದ ಬಾಬಾ ಸಾಹೇಬರು ಬಂಡಾಯ ಎದ್ದಿದ್ದರು. ನರಗುಂದ ರೈತ ಚಳವಳಿಯ ನೆಲೆ. ನರಗುಂದ ಬೆಟ್ಟದ ಬುಡದಲ್ಲಿ ಪುಣ್ಯಾರಣ್ಯ ಪತ್ರೀವನವಿದೆ.

ಅಲ್ಲಿರುವ ಶಂಭುಲಿಂಗ ದೇವಸ್ಥಾನ ಬಹಳ ಹಿಂದಿನಿಂದಲೂ ಪ್ರಸಿದ್ಧ. ಅದಕ್ಕೆ `ಅಜ್ಜನ ಮಠ~ ಎಂಬ  ಹೆಸರೂ ಇದೆ. ಈ ದೇವಸ್ಥಾನ ಪೂರ್ವಾಭಿಮುಖವಾಗಿದೆ. ಅದರ ಮಹಾದ್ವಾರ ಕಲ್ಲಿನಿಂದ ನಿರ್ಮಿಸಲಾಗಿದ್ದು ಅದು ಐವತ್ತು ಅಡಿಗಳಷ್ಟು ಎತ್ತರವಿದೆ. ದೇವಸ್ಥಾನದ ಸುತ್ತಲಿನ ಹಸಿರು ಪರಿಸರ ಅತ್ಯಂತ ಸುಂದರ.

ಹಲವು ಶತಮಾನಗಳಿಂದ ಸಾಧು,ಸಂತರು ಶಂಭುಲಿಂಗ ಸ್ವಾಮಿಯನ್ನು ಆರಾಧಿಸುತ್ತಾ ಬಂದಿದ್ದಾರೆ. ಅಲ್ಲಿರುವ ನೂರೊಂದು ಬಿಲ್ವ ವೃಕ್ಷಗಳಿಗೆ `ಬೇಲ ಬಾಗ್~ ಎಂಬ ಹೆಸರಿದೆ.

ನರಗುಂದ ಸಂಸ್ಥಾನದ ದೊರೆ ಬಾಬಾ ಸಾಹೇಬರ ತಾಯಿ ಯಮುನಾಬಾಯಿ, ಪತ್ನಿ ಸಾವಿತ್ರಿಬಾಯಿ ಅವರು ನಿತ್ಯ ಇಲ್ಲಿಗೆ ಬಂದು ಶಂಭುಲಿಂಗವನ್ನು ಪೂಜಿಸಿ ಬಿಲ್ವದಳಗಳನ್ನು ಅರಮನೆಗೆ ಒಯ್ಯುತ್ತಿದ್ದರು ಎನ್ನಲಾಗಿದೆ.

ಪ್ರತಿ ಅಮಾವಾಸ್ಯೆ ಸುತ್ತಲಿನ ಊರುಗಳ ಜನರು ಇಲ್ಲಿಗೆ ಆಗಮಿಸಿ ಶಂಭುಲಿಂಗವನ್ನು ಪೂಜಿಸುತ್ತಾರೆ. ಹೊಸದಾಗಿ ವಾಹನ ಖರೀದಿಸಿದವರು ಅವನ್ನು ದೇವಸ್ಥಾನಕ್ಕೆ ಪೂಜೆ ಮಾಡಿಸಿಕೊಂಡು ಹೋಗುತ್ತಾರೆ.
 
ಶಂಭುಲಿಂಗಕ್ಕೆ ವೀಳ್ಯದೆಲೆಯ ಎಲೆ ಪೂಜೆ, ಬುತ್ತಿ ಪೂಜೆ ಮಾಡಿಸುತ್ತಾರೆ. ಲೌಕಿಕದ ಜಂಜಾಟದಲ್ಲಿ ಬೇಸತ್ತವರು ದೇವಸ್ಥಾನದ ಪರಿಸರದಲ್ಲಿ ಕುಳಿತು ಅಲ್ಲಿನ ತತ್ವ ಪದಕಾರರ ಹಾಡು ಕೇಳಿ, ಹಾಡಿ ನೆಮ್ಮದಿ ಪಡೆಯುತ್ತಾರೆ.

ಪ್ರತಿ ಸೋಮವಾರ ರೈತರು ಹೆಚ್ಚಾಗಿ ದೇವಸ್ಥಾನಕ್ಕೆ ಬರುತ್ತಾರೆ. ಶಿವರಾತ್ರಿ, ನವರಾತ್ರಿ ಸೇರಿದಂತೆ ಎಲ್ಲ ಹಬ್ಬಗಳು ಮತ್ತು ಶ್ರಾವಣ, ಕಾರ್ತೀಕ ಸೋಮವಾರಗಳಲ್ಲಿ ಶಂಭುಲಿಂಗನಿಗೆ ಬೆಳ್ಳಿಯ ಕವಚ, ಕಿರೀಟ, ಆಭರಣಗಳು ರುದ್ರಾಕ್ಷಿ  ಮಾಲೆ  ತೊಡಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ.

ಶಂಕರ ಭಗವತ್ಪಾದರ ಉಪದೇಶದಂತೆ ತಮ್ಮನ್ನು ಆಧ್ಯಾತ್ಮ ಸಾಧನೆಯಲ್ಲಿ ತೊಡಗಿಸಿಕೊಂಡಿದ್ದ ವಿಶ್ವಕರ್ಮ ಸಮಾಜ ಮೂಲದ ವೀರಪ್ಪಜ್ಜೇಂದ್ರರು ಇಲ್ಲಿ ಆಶ್ರಮ ಕಟ್ಟಿಕೊಂಡು ಆತ್ಮಜ್ಞಾನದ ಸಾಧನೆ ಮಾಡಿದರು. ಬ್ರಿಟಿಶ್ ಸೈನ್ಯದ ಅಧಿಕಾರಿಯಾಗಿದ್ದ ಧೋಂಡಿಬಾ ಭೋಸಲೆಯವರು ಈ ದೇವಸ್ಥಾನ ನಿರ್ಮಿಸಿದ್ದರು.

ತ್ಯಾಗವೀರರೆಂದೇ ಹೆಸರಾಗಿದ್ದ ಸಿರಸಂಗಿ ಲಿಂಗರಾಜರು ಇಲ್ಲಿ ಗವಿಯೊಂದನ್ನು ಕಟ್ಟಿಸಿಕೊಟ್ಟಿದ್ದಾರೆ.ಶಂಭುಲಿಂಗ ದೇವಸ್ಥಾನದ ಸಮೀಪದ ಮಲ್ಲಯ್ಯನ ಕೊಳ್ಳ, ಸಿದ್ದಣ್ಣನ ಕೊಳ್ಳ, ಮರಾರಿ ವಿಠ್ಠಲ, ಗುಡ್ಡದಲ್ಲಿರುವ ಹೊಂಡಗಳು, ವಲಿ ಜಮಾಲ ಷಾ ದರ್ಗಾ, ಬಾಬಾಸಾಹೇಬರ ಪಡುವಗೊಂಡ ಜಲಾಶಯ ಹಾಗೂ ಕುಲದೇವರಾದ ಶ್ರೀ ವೆಂಕಟಪತಿಯ ದೇವಸ್ಥಾನ ಮತ್ತು ಮಹಾಬಲೇಶ್ವರ ದೇವಸ್ಥಾನಗಳು ನರಗುಂದದ ವಿಶೇಷಗಳು.

ಶಿವರಾತ್ರಿ, ಮಹಾನವಮಿ, ಕಾರ್ತಿಕ ಮಾಸ, ಶ್ರಾವಣ ಮಾಸಗಳಲ್ಲಿ ಶಂಭುಲಿಂಗನಿಗೆ ವಿಶೇಷ ಪೂಜೆ ನಡೆಯುತ್ತದೆ. ಶ್ರಾವಣ ಮಾಸದಲ್ಲಿ ರಾಜವೈಭವದೊಡನೆ ಜಾತ್ರೆ ನಡೆಯುತ್ತದೆ. ಮಹಾ ಪ್ರಸಾದ ನಡೆಯುತ್ತದೆ.

ನರಗುಂದ ಹುಬ್ಬಳ್ಳಿ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯ ಮೇಲಿದೆ. ಹುಬ್ಬಳ್ಳಿಯಿಂದ 55 ಕಿ.ಮೀ., ಗದಗದಿಂದ 98 ಕಿ.ಮೀ. ದೂರದಲ್ಲಿದೆ. ನರಗುಂದ ತಾಲ್ಲೂಕು ಕೇಂದ್ರ. ಅಲ್ಲಿಗೆ ಉತ್ತರ ಕರ್ನಾಟಕದ ಪ್ರಮುಖ ಪಟ್ಟಣಗಳಿಂದ ಬಸ್ಸುಗಳ ಅನುಕೂಲವಿದೆ.
 
ನರಗುಂದ ಬಸ್ ಸ್ಟ್ಯಾಂಡ್‌ನಿಂದ ಶಂಭುಲಿಂಗ ದೇವಸ್ಥಾನಕ್ಕೆ ಹೋಗಲು ಮಿನಿ ಬಸ್, ಆಟೊಗಳ ಅನುಕೂಲವಿದೆ.ಹೆಚ್ಚಿನ ಮಾಹಿತಿಗಳಿಗೆ ಸಂಪರ್ಕಿಸಬೇಕಾದ ದೂರವಾಣಿ ನಂ. 9632284479.

ಸೇವಾ ವಿವರ
ನಿರಂತರ ಪೂಜೆ               1111ರೂ.
ಮಹಾರುದ್ರಾಭಿಷೇಕ          251ರೂ
ಬಿಲ್ವಾರ್ಚನೆ                    201ರೂ
ರುದ್ರಾಭಿಷೇಕ                  151ರೂ
ಪಲ್ಲಕ್ಕಿ ಸೇವೆ                   111ರೂ
ಪಂಚಾಮೃತ ಅಭಿಷೇಕ          75ರೂ
ಎಲೆ ಪೂಜೆ                         501ರೂ. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT