ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವಿ ಕಾಲೇಜಿಗೆ ಸೌಲಭ್ಯ ಒದಗಿಸಲು ಶಾಸಕರ ಆಗ್ರಹ

Last Updated 6 ಡಿಸೆಂಬರ್ 2012, 6:56 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲಾ ಕೇಂದ್ರದ ಸರ್ಕಾರಿ  ಪದವಿ ಕಾಲೇಜು ಹಾಗೂ ಸ್ನಾತ್ತಕೋತ್ತರ ಕೇಂದ್ರಕ್ಕೆ ತಕ್ಷಣವೇ ಅಗತ್ಯ ಮೂಲಸೌಲಭ್ಯ ಒದಗಿಸಿ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಸೃಷ್ಟಿ ಮಾಡಬೇಕು ಎಂದು ಶಾಸಕ ಡಾ. ಎ. ಬಿ. ಮಾಲಕರಡ್ಡಿ ಸರ್ಕಾರವನ್ನು ಆಗ್ರಹಿಸಿದರು.

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ತಮ್ಮ ಪ್ರಶ್ನೆಗೆ ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ನೀಡಿದ ಉತ್ತರಕ್ಕೆ ಪ್ರತಿಕ್ರಿಯಿಸಿದ ಅವರು, ಉನ್ನತ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವಾಗ ಅದಕ್ಕೆ ತಕ್ಕಂತೆ ಮೂಲಸೌಲಭ್ಯಗಳನ್ನು ಪೂರೈಸಿ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ದೊರೆಯುವಂತೆ ಸರ್ಕಾರ ನಿಗಾ ವಹಿಸಬೇಕಾದ ಅಗತ್ಯವಿದೆ ಎಂದರು.
ಯಾದಗಿರಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಅಗತ್ಯ ಸಂಖ್ಯೆಯ ಉಪನ್ಯಾಸಕರು, ಪ್ರಯೋಗಾಲಯ, ವಾಚನಾಲಯ, ಕೊಠಡಿಗಳ

ಸೌಲಭ್ಯವಿಲ್ಲದೆ ತೊಂದರೆಯಾಗಿರುವುದನ್ನು ವಿವರಿಸಿದ ಅವರು, ಜಿಲ್ಲಾ ಕೇಂದ್ರದ ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ಅದಕ್ಕೆ ತಕ್ಕಂತೆ ಕೊಠಡಿಗಳೂ ಇಲ್ಲ ಎಂದರು.

ಕಾಲೇಜಿನಲ್ಲಿ ಹಲವಾರು ಕೊರತೆಗಳಿರುವುದನ್ನು ಒಪ್ಪಿಕೊಂಡ ಸಚಿವ ಸಿ.ಟಿ. ರವಿ, ಉಪನ್ಯಾಸಕರ ಕೊರತೆ ನೀಗಿಸಲು ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲು ಪ್ರಾಚಾರ್ಯರಿಗೆ ಈಗಾಗಲೇ ಸೂಚಿಸಲಾಗಿದೆ ಎಂದರು.

ತಾವು ಈ ಹಿಂದೆಯೂ ಕಾಲೇಜಿಗೆ ಮೂಲ ಸೌಲಭ್ಯ ಒದಗಿಸಬೇಕೆಂದು ಕೋರಿದ್ದು, ತಮ್ಮ ಗಮನದಲ್ಲಿದೆ. ತಮ್ಮ ಮನವಿಗೆ ಪೂರಕವಾಗಿ ನೀರು, ದೂರವಾಣಿ ಇನ್ನಿತರೆ ಸೌಲಭ್ಯಗಳಿಗಾಗಿ ರೂ. 41,800, ಗ್ರಂಥಾಲಯ ಪುಸ್ತಕ ಖರೀದಿಗಾಗಿ ರೂ. 1,51,500 ಅನುದಾನವನ್ನು 2013-14ನೇ ಸಾಲಿನಲ್ಲಿ ಮೊದಲ ಕಂತಾಗಿ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಕೊಠಡಿಗಳ ಕೊರತೆ ನೀಗಿಸಲು 2012-13ನೇ ಸಾಲಿನಲ್ಲಿ ರೂ.75 ಲಕ್ಷ, ಪ್ರಯೋಗಾಲಯ ಕೊಠಡಿಗಳ ನಿರ್ಮಾಣಕ್ಕೆ ರೂ. 60 ಲಕ್ಷ, ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ವಿಶ್ರಾಂತಿ ಗೃಹ ಹಾಗೂ ಶೌಚಾಲಯ ನಿರ್ಮಿಸಲು ರೂ. 5 ಲಕ್ಷದಲ್ಲಿ ಲೋಕೋಪಯೋಗಿ ಇಲಾಖೆಗೆ ಆದೇಶಿಸಲಾಗಿದೆ ಎಂದು ಸಚಿವ ರವಿ ತಿಳಿಸಿದರು.    
                  
ಕಾಲೇಜಿನಲ್ಲಿ ಸದ್ಯ 16 ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದು, ಸದ್ಯದಲ್ಲಿ ಉಪನ್ಯಾಸಕರ ಕೊರತೆ ನೀಗಿಸಲು ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗಿದೆ ಎಂದರು. ಸ್ನಾತಕೋತ್ತರ ಕೇಂದ್ರದಂತಹ ಉನ್ನತ ಶಿಕ್ಷಣ ಸಂಸ್ಥೆ ಆರಂಭಿಸುವಾಗ ಇಂತಹ ಮೂಲ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಹೆಚ್ಚಿನ ಗಮನ ಹರಿಸಬೇಕು. ಕೊರತೆಗಳ ಮಧ್ಯೆ ಇಂತಹ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಮುಂದೆ ಹೇಗೆ ಉತ್ತಮ ಉಪನ್ಯಾಸಕರಾಗಲು ಸಾಧ್ಯ ಎಂದು ಡಾ. ಮಾಲಕರಡ್ಡಿ ಪ್ರಶ್ನಿಸಿದರು. ತಕ್ಷಣವೇ ಕಾಲೇಜಿಗೆ ಅಗತ್ಯ ಸಂಖ್ಯೆಯ ಉಪನ್ಯಾಸಕರನ್ನು ನೇಮಿಸಬೇಕು. ಕೊಠಡಿಗಳನ್ನು ನಿರ್ಮಿಸಬೇಕು. ಅಗತ್ಯ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಆಗ್ರಹಿಸಿದರು.

ಡಾ. ಮಾಲಕರೆಡ್ಡಿಯವರ ಆಗ್ರಹಕ್ಕೆ ದನಿಗೂಡಿಸಿದ ಅನೇಕ ಸದಸ್ಯರು, ಉತ್ತಮ ಶಿಕ್ಷಕರು, ಉತ್ತಮ ವಾತಾವರಣವಿಲ್ಲದ ಕಡೆ ಕಲಿತವರು ಮುಂದೆ ಹೇಗೆ ಉತ್ತಮ ಶಿಕ್ಷಕರಾಗಲು ಸಾಧ್ಯ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT