ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವಿಪೂರ್ವ ಶಿಕ್ಷಣ ಮಂಡಳಿಗೆ ತಾಕೀತು

ಗಣಿತ ಪರೀಕ್ಷೆ ಪುನಃ ನಡೆಸುವ ವಿವಾದ
Last Updated 22 ಏಪ್ರಿಲ್ 2013, 19:52 IST
ಅಕ್ಷರ ಗಾತ್ರ

ಬೆಂಗಳೂರು:ಬದ್ವಿತೀಯ ಪಿಯುಸಿ ಗಣಿತ ಪರೀಕ್ಷೆಯನ್ನು ಪುನಃ ನಡೆಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಗೆ ಬುಧವಾರ ಆಕ್ಷೇಪಣೆಗಳನ್ನು ಸಲ್ಲಿಸಬೇಕು ಎಂದು ಪದವಿಪೂರ್ವ ಶಿಕ್ಷಣ ಮಂಡಳಿಗೆ ಹೈಕೋರ್ಟ್ ಬುಧವಾರ ತಾಕೀತು ಮಾಡಿದೆ. ಪ್ರಕರಣ ಕುರಿತು ಸರ್ಕಾರ ಗಂಭೀರವಾಗಿ ವರ್ತಿಸುತ್ತಿಲ್ಲ. ಈ ವ್ಯವಸ್ಥೆ ಬೇಸರ ತರಿಸುತ್ತಿದೆ ಎಂದು ಹೇಳಿದೆ.

`ಮಾರ್ಚ್ 18ರಂದು ನಡೆದ ಗಣಿತ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಸರಿಯಾಗಿ ಸಿದ್ಧಪಡಿಸಿಲ್ಲ. ಆರು ಪ್ರಶ್ನೆಗಳು ಸರಿಯಾಗಿ ಮುದ್ರಿತವಾಗಿಲ್ಲ. ಐದು ಪ್ರಶ್ನೆಗಳಿಗೆ ತಲಾ ಎರಡು ಅಂಕ ನೀಡಬೇಕಿತ್ತು, ಆದರೆ ಅವುಗಳಿಗೆ ತಲಾ ಒಂದು ಅಂಕ ನಿಗದಿ ಮಾಡಲಾಗಿದೆ. ಒಂದು ಪ್ರಶ್ನೆಯನ್ನು ತಪ್ಪಾಗಿ ಮುದ್ರಿಸಲಾಗಿದೆ' ಎಂದು ಎಚ್.ಎಂ. ಕೌಶಿಕ್ ಎಂಬುವರು ಸಲ್ಲಿಸಿರುವ ಅರ್ಜಿಯಲ್ಲಿ ದೂರಲಾಗಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಸ್. ಪಾಟೀಲ, ಆಕ್ಷೇಪಣೆ ಸಲ್ಲಿಸುವಂತೆ ಮಂಡಳಿಗೆ ಈ ಹಿಂದೆಯೇ ನಿರ್ದೇಶನ ನೀಡಿದ್ದರು. ಆದರೆ ಮಂಡಳಿ ನಿರ್ದೇಶನವನ್ನು ಪಾಲಿಸಲಿಲ್ಲ. ಇದರಿಂದ ಅಸಮಾಧಾನಗೊಂಡ ನ್ಯಾಯಮೂರ್ತಿಗಳು, `ನೀವು ಪ್ರತಿಬಾರಿಯೂ ನ್ಯಾಯಾಲಯದ ಸಮಯ ವ್ಯರ್ಥ ಮಾಡುತ್ತಿದ್ದೀರಿ. ಪರೀಕ್ಷೆಯ ಒಂದೊಂದು ಅಂಕ ಸಹ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುತ್ತದೆ. ಈ ರೀತಿ ಆಗದಂತೆ ನೀವು ನಿಗಾ ವಹಿಸಬೇಕು' ಎಂದು ಮೌಖಿಕವಾಗಿ ಹೇಳಿದರು. ವಿಚಾರಣೆ ಮುಂದೂಡಲಾಗಿದೆ.

ರಥೋತ್ಸವದಲ್ಲಿ ಅನ್ನಸಂತರ್ಪಣೆಗೆ ಅನುಮತಿ
ಭಾರತಿನಗರದ ಮುತ್ಯಾಲಮ್ಮ ದೇವಿಯ ರಥೋತ್ಸವದಲ್ಲಿ ಅನ್ನಸಂತರ್ಪಣೆ ನಡೆಸಲು ಹೈಕೋರ್ಟ್ ಸೋಮವಾರ ಅನುಮತಿ ನೀಡಿದೆ. ಪಿ. ಲೋಕೇಶ್ ಸಿಯಾಲ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಈ ಆದೇಶ ನಿಡಿದ್ದಾರೆ.

ಲೋಕೇಶ್ ಅವರು ತಮ್ಮ ತಂದೆ ದಿವಂಗತ ಬಿ.ಪಿ. ಸಿಯಾಲ್ ಅವರ ಹೆಸರಿನಲ್ಲಿ ಮುತ್ಯಾಲಮ್ಮ ದೇವಿಯ ರಥೋತ್ಸವದಲ್ಲಿ ಅನ್ನಸಂತರ್ಪಣೆ ನಡೆಸುತ್ತಾರೆ. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ, ಈ ಬಾರಿ ಅನ್ನಸಂತರ್ಪಣೆ ನಡೆಸಲು ಚುನಾವಣಾ ಆಯೋಗ ಅನುಮತಿ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದೇ 24ರಂದು ರಥೋತ್ಸವ ನಡೆಯಲಿದೆ. ಸಿಯಾಲ್ ಅವರು ಉತ್ಸವದ ದಿನ ಮಧ್ಯಾಹ್ನ 12ರಿಂದ 3 ಗಂಟೆಯ ನಡುವೆ ಅನ್ನಸಂತರ್ಪಣೆ ಕಾರ್ಯ ನಡೆಸಬಹುದು ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.

ಏಕಸದಸ್ಯ ಪೀಠದ ಆದೇಶಕ್ಕೆ ತಡೆ
ಭಾರತ ಅನಿಲ ಪ್ರಾಧಿಕಾರಕ್ಕೆ (ಗೇಲ್ ಲಿಮಿಟೆಡ್) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿ.ಡಿ.ಎ) ನೀಡಿದ್ದ ನಾಗರಿಕ ಉದ್ದೇಶದ (ಸಿ.ಎ) ನಿವೇಶನವನ್ನು ರದ್ದು ಮಾಡಿದ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ನೇತೃತ್ವದ ವಿಭಾಗೀಯ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಗೇಲ್ ಲಿಮಿಟೆಡ್‌ಗೆ ಬೆಂಗಳೂರಿನ ರಾಚೇನಹಳ್ಳಿಯ `ಮಾನ್ಯತಾ ನಗರ ವಸತಿ ಬಡಾವಣೆ'ಯಲ್ಲಿ ಸಿ.ಎ ನಿವೇಶನ ಹಂಚಿಕೆ ಮಾಡಿದ್ದನ್ನು ಪ್ರಶ್ನಿಸಿ `ಮಾನ್ಯತಾ ನಿವಾಸಿಗಳ ಸಂಘ' ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿಯ ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ, `ಕಾರ್ಪೊರೇಟ್ ಸಂಸ್ಥೆಗಳಿಗೆ ಸಿ.ಎ ನಿವೇಶನ ನೀಡುವುದರಿಂದ ನಾಗರಿಕರಿಗೆ ಯಾವುದೇ ಲಾಭ ಇಲ್ಲ' ಎಂದು ಆದೇಶಿಸಿ, ನಿವೇಶನ ಹಂಚಿಕೆ ರದ್ದು ಮಾಡಿತ್ತು.

ಇದನ್ನು ಪ್ರಶ್ನಿಸಿ ಗೇಲ್ ಲಿಮಿಟೆಡ್ ಸಂಸ್ಥೆ ಮೇಲ್ಮನವಿ ಸಲ್ಲಿಸಿದೆ. ಅರ್ಜಿ ವಿಚಾರಣೆಯನ್ನು ಸೋಮವಾರ ನಡೆಸಿದ ವಿಭಾಗೀಯ ಪೀಠ, ಮಧ್ಯಂತರ ತಡೆಯಾಜ್ಞೆ ನೀಡಿದೆ. ಆದರೆ ಈ ತಡೆಯಾಜ್ಞೆಯು ಮೇಲ್ಮನವಿ ಅರ್ಜಿ ಕುರಿತ ಅಂತಿಮ ಆದೇಶಕ್ಕೆ ಬದ್ಧವಾಗಿರುತ್ತದೆ ಎಂದು ನ್ಯಾಯಪೀಠ ಹೇಳಿದೆ. ವಿಚಾರಣೆ ಮುಂದೂಡಲಾಗಿದೆ.

ವಸಂತನಗರ: 4 ತಿಂಗಳಲ್ಲಿ ಅಂಚೆ
ಕಚೇರಿ ಪುನರಾರಂಭಕ್ಕೆ ಆದೇಶ

ವಸಂತ ನಗರ ಪ್ರದೇಶದಲ್ಲಿ ಇನ್ನು ನಾಲ್ಕು ತಿಂಗಳಲ್ಲಿ ಅಂಚೆ ಕಚೇರಿಯನ್ನು ಪುನರಾರಂಭಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸೋಮವಾರ ಆದೇಶ ನೀಡಿದೆ.

ಸತಿಂದರ್‌ಪಾಲ್ ಚೋಪ್ರಾ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ವಿಭಾಗೀಯ ಪೀಠ, ವಸಂತ ನಗರದಲ್ಲಿ ಅಂಚೆ ಕಚೇರಿ ಪುನರಾರಂಭಿಸಬೇಕು ಎಂದು ಜನವರಿ 8ರಂದು ಆದೇಶಿಸಿತ್ತು. ಕಚೇರಿ ಪುನರಾರಂಭಕ್ಕೆ ಎರಡು ತಿಂಗಳ ಕಾಲಾವಕಾಶ ನೀಡಿತ್ತು.

ಆದರೆ ಎರಡು ತಿಂಗಳು ಕಳೆದರೂ ಆದೇಶದ ಪಾಲನೆ ಆಗಿಲ್ಲ ಎಂದು ದೂರಿ ಚೋಪ್ರಾ ಅವರು ಮತ್ತೆ ಹೈಕೋರ್ಟ್ ಮೆಟ್ಟಿಲೇರಿದರು. ಇದರ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸಿತು.

`ಅಂಚೆ ಕಚೇರಿ ಪುನರಾರಂಭಕ್ಕೆ ಕೇಂದ್ರ ಸರ್ಕಾರಕ್ಕೆ ಇನ್ನೂ ನಾಲ್ಕು ತಿಂಗಳ ಕಾಲಾವಕಾಶ ನೀಡಲಾಗುವುದು. ಈ ಅವಧಿಯಲ್ಲಿ ಪುನರಾರಂಭ ಮಾಡದಿದ್ದರೆ, ಕೇಂದ್ರ ಸರ್ಕಾರದ ವಿರುದ್ಧ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲು ಮಾಡಿಕೊಳ್ಳಬೇಕಾಗುತ್ತದೆ' ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ. ಅರ್ಜಿಯನ್ನು ಇತ್ಯರ್ಥಪಡಿಸಲಾಗಿದೆ.

ಹಿಂದಿನ ಆದೇಶ ಪಾಲನೆಯ ವಿಚಾರದಲ್ಲಿ ಕೇಂದ್ರ ಸರ್ಕಾರ ಹಟಮಾರಿ ಧೋರಣೆ ಅನುಸರಿಸುತ್ತಿರುವಂತೆ ಭಾಸವಾಗುತ್ತಿದೆ ಎಂದು ನ್ಯಾಯಪೀಠ ಹೇಳಿದೆ. ವಸಂತ ನಗರ ಪ್ರದೇಶದಲ್ಲಿ 1973ರಿಂದಲೂ ಅಂಚೆ ಕಚೇರಿ ಇತ್ತು. ಆದರೆ ಅದನ್ನು 2003ರಲ್ಲಿ ಮುಚ್ಚಿ, ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಯ ಜೊತೆ ವಿಲೀನಗೊಳಿಸಲಾಯಿತು. ವಸಂತ ನಗರದ ನಿವಾಸಿಗಳು ಅಂಚೆ ಕಚೇರಿಯ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ದೂರಿ ಚೋಪ್ರಾ ಅರ್ಜಿ ಸಲ್ಲಿಸಿದ್ದರು.

ಮಾಹಿತಿ ನಿರಾಕರಣೆ: ಸ್ಪೀಕರ್ ಕಚೇರಿಗೆ ನೋಟಿಸ್
ವಿಧಾನಸಭೆಯ ಸ್ಪೀಕರ್ ಕೆ.ಜಿ. ಬೋಪಯ್ಯ ಅವರು ಜನವರಿ ತಿಂಗಳಲ್ಲಿ ಎಲ್ಲಿದ್ದರು, ಎಲ್ಲೆಲ್ಲಿಗೆ ತೆರಳಿದ್ದರು ಎಂಬ ಬಗ್ಗೆ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆಯ (ಆರ್‌ಟಿಐ) ಅಡಿ ನೀಡಲು ನಿರಾಕರಿಸಿದ ಸ್ಪೀಕರ್ ಕಚೇರಿಯ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.

ಅರ್ಜಿಗೆ ಪ್ರತಿಹೇಳಿಕೆ ಸಲ್ಲಿಸುವಂತೆ ನಿರ್ದೇಶನ ನೀಡಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಸ್ಪೀಕರ್ ಅವರ ಕಾರ್ಯದರ್ಶಿಗೆ ನೋಟಿಸ್ ಜಾರಿಗೆ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಸೋಮವಾರ ಆದೇಶಿಸಿದ್ದಾರೆ. ವಕೀಲ ಎನ್.ಪಿ. ಅಮೃತೇಶ ಸಲ್ಲಿಸಿರುವ ಅರ್ಜಿ ಇದು.

ಸಚಿವರಾಗಿದ್ದ ಸಿ.ಎಂ. ಉದಾಸಿ ಮತ್ತು ಇತರರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸ್ಪೀಕರ್ ಕಚೇರಿಗೆ ತೆರಳಿದಾಗ (ಜನವರಿ 21ರಿಂದ 28ರ ನಡುವೆ) ಬೋಪಯ್ಯ ಅವರು ಕಚೇರಿಯಲ್ಲಿ ಲಭ್ಯರಿರಲಿಲ್ಲ. ಜನವರಿಯಲ್ಲಿ ಬೋಪಯ್ಯ ಅವರು ಎಲ್ಲಿದ್ದರು ಎಂಬ ಬಗ್ಗೆ ಮಾಹಿತಿ ನೀಡುವಂತೆ ಅಮೃತೇಶ ಅವರು ಆರ್‌ಟಿಐ ಅಡಿ ಕೋರಿದ್ದರು. ಈ ಮನವಿಯನ್ನು ಸ್ಪೀಕರ್ ಕಚೇರಿ ಪುರಸ್ಕರಿಸಲಿಲ್ಲ.

ಸಾಂವಿಧಾನಿಕ ಹುದ್ದೆಯಲ್ಲಿರುವವರ (ಸ್ಪೀಕರ್) ದೈನಂದಿನ ವಿವರಗಳನ್ನು ಆರ್‌ಟಿಐ ಅಡಿ ನೀಡಲು ಸಾಧ್ಯವಿಲ್ಲ ಎಂದು ಅದು ಉತ್ತರ ನೀಡಿತ್ತು. ಅರ್ಜಿಯಲ್ಲಿ ಇದನ್ನು ಪ್ರಶ್ನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT